ಸದನದದಲ್ಲಿ ಚರ್ಚೆಗೆ ಕೈಗೆತ್ತಿಕೊಂಡಿದ್ದ ಭೂಸ್ವಾಧೀನ ಮಸೂದೆಯ ಕಾಗದಗಳನ್ನು ವಿಪಕ್ಷ ನಾಯಕ ಸಿದ್ಧರಾಮಯ್ಯ ಹರಿದುಹಾಕಿ ವಿಧಾನಸಭೆಯಿಂದ ಹೊರನಡೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ಪ್ರಸ್ತಾವಿತ ತಿದ್ದುಪಡಿಗಳನ್ನು ಬಲವಾಗಿ ವಿರೋಧಿಸಿದ್ದು, ಆಡಳಿತರೂಢ ಬಿಜೆಪಿ ಸರ್ಕಾರ ರೈತರನ್ನು ಗುಲಾಮರನ್ನಾಗಿ ಇರಿಸಲು ಬಯಸುತ್ತದೆ ಎಂದಿದ್ದಾರೆ. ಕಾಂಗ್ರೆಸ್ ಶಾಸಕರು ಸದನದಿಂದ ಪ್ರತಿಭಟನಾತ್ಮಕವಾಗಿ ತೆರಳಿದ ಬಳಿಕ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಗಳನ್ನು ಸದನದಲ್ಲಿ ಅಂಗೀಕರಿಸಲಾಯಿತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಇದು ಸಂಪೂರ್ಣ ರೈತರ ಜಮೀನುಗಳನ್ನು ಕಿತ್ತುಕೊಳ್ಳಲು ಅವರು ತಂದ ಅತ್ಯಂತ ಕೆಟ್ಟ ತಿದ್ದುಪಡಿಯಾಗಿದೆ. ಅವರು ರೈತರಿಂದ ಭೂಮಿಯನ್ನು ಖರೀದಿಸಲು ತಿದ್ದುಪಡಿ ತಂದಿದ್ದಾರೆ. ಅವರು ರೈತರನ್ನು ಗುಲಾಮರನ್ನಾಗಿ ಉಳಿಸಿಕೊಳ್ಳಲು ಬಯಸುತ್ತಾರೆ ಎಂದು ವಿಧಾನಸಭೆಯಿಂದ ತೆರಳಿದ ನಂತರ ಶಿವಕುಮಾರ್ ತಿಳಿಸಿದ್ದಾರೆ.
Also Read: ಹೋರಾಟ ಸದನಕ್ಕೆ ಸೀಮಿತವಲ್ಲ, ಬೀದಿಗಿಳಿದು ಹೋರಾಟ ಮಾಡುತ್ತೇವೆ- ಸಿದ್ದರಾಮಯ್ಯ ಎಚ್ಚರಿಕೆ
“ನಾವು ಈ ದೇಶದ ರೈತರನ್ನು ರಕ್ಷಿಸಲು ಬಯಸುತ್ತೇವೆ. ಕಾಂಗ್ರೆಸ್ ಪಕ್ಷವು ಯಾವಾಗಲೂ ರೈತರ ಹಿತದೃಷ್ಟಿಯಿಂದ ನಿಂತಿದೆ. ರೈತರಿಗೆ ಭೂಮಿಯನ್ನು ರೈತರಿಗೇ ನೀಡಲು ನಾವು ವಿವಿಧ ಕಾನೂನುಗಳನ್ನು ತಂದಿದ್ದೇವೆ. ರಾಜ್ಯಪಾಲರು ಈ ಸುಗ್ರೀವಾಜ್ಞೆಯನ್ನು ಸ್ವೀಕರಿಸಬಾರದು ಎಂದು ನಾವು ಬಯಸುತ್ತೇವೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಭೂಸ್ವಾಧೀನ ಕಾಯ್ದೆ ಮತ್ತು ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಯ ತಿದ್ದುಪಡಿಗಳ ವಿರುದ್ಧ ರೈತ ಗುಂಪುಗಳು ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನಾಕಾರರು ಸೋಮವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಸದನದ ಹೊರಗೆ ಹಾಗೂ ಒಳಗಿನ ತೀವ್ರ ವಿರೋಧಗಳ ಬಳಿಕವೂ ಸದನದಲ್ಲಿ ತಿದ್ದುಪಡಿಗೆ ಅಂಗೀಕಾರ ದೊರೆತಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ಕರ್ನಾಟಕ ವಿಧಾನಸಭೆ ಶನಿವಾರ ಅಂಗೀಕರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
“ಇಂದು ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ನಮ್ಮ ರೈತರಿಗೆ ಮತ್ತಷ್ಟು ಅಧಿಕಾರ ನೀಡುತ್ತದೆ ಮತ್ತು ಅವರ ಹಕ್ಕುಗಳನ್ನು ಬಲಪಡಿಸುತ್ತದೆ” ಎಂದು ಯಡಿಯೂರಪ್ಪ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕವು ಇಂದು ವಿಧಾನಸಭೆಯಲ್ಲಿ ಚರ್ಚೆ ನಂತರ ಅಂಗೀಕೃತಗೊಂಡಿದೆ. ಭೂ ಸುಧಾರಣಾ ಕಾಯ್ದೆಯಿಂದ ಯಾವುದೇ ಕೃಷಿಕರಿಗೆ ಯಾವ ರೀತಿಯ ಸಮಸ್ಯೆಯೂ ಉಂಟಾಗುವುದಿಲ್ಲ, ರೈತರು ಆತಂಕ ಪಡುವ ಅಗತ್ಯವಿಲ್ಲ. ಈ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ರಾಜ್ಯಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಪ್ರಸಕ್ತ ಭೂಸುಧಾರಣಾ ತಿದ್ದುಪಡಿ ಮಸೂದೆಯು ಕರ್ನಾಟಕದ ರೈತರ ಪಾಲಿಗೆ ಆಶಾದಾಯಕ ಮಸೂದೆಯಾಗಿದೆ. ಇದು ಸುಧಾರಣಾ ಪರವಾಗಿ, ಕಾಲಕ್ಕನುಗುಣವಾಗಿದ್ದು, ರೈತರ ಹಿತದೃಷ್ಟಿಯನ್ನೇ ಆದ್ಯತೆಯನ್ನಾಗಿಸಿಕೊಂಡಿದೆ. ರೈತರ ಅನಾನುಕೂಲಗಳನ್ನು ಪರಿಹರಿಸಿ, ತಂತ್ರಜ್ಞಾನದ ನೆರವು, ಉತ್ತಮ ಸೌಕರ್ಯಗಳ ಅನುಕೂಲತೆ ಒದಗಿಸುವ ಉದ್ದೇಶ ಹೊಂದಿದೆ ಎಂದೂ ಅವರು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸುಧಾರಣೆಗಳು “ನನ್ನ ಉತ್ಪಾದನೆ, ನನ್ನ ಹಕ್ಕನ್ನು” ಖಾತರಿಪಡಿಸಿದರೆ, ಭೂ ಸುಧಾರಣೆಗಳು ನಮ್ಮ ಎಲ್ಲ ಅನ್ನದಾಟರಿಗೆ “ನನ್ನ ಭೂಮಿ, ನನ್ನ ಹಕ್ಕನ್ನು “ಖಾತ್ರಿಪಡಿಸುತ್ತದೆ ಎಂದಿದ್ದಾರೆ.