ಚೀನಾ ಭಾರತ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದ ಹಿನ್ನಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜೂನ್ 19 ರ ಸಂಜೆ 5 ಗಂಟೆಗೆ ಸರ್ವಪಕ್ಷಗಳ ಸಭೆ ಕರೆದು, ಚೀನಾ-ಭಾರತ ಗಡಿ ವಿವಾದ, ಭಾರತ ಇಡಬೇಕಿರುವ ಹೆಜ್ಜೆಯ ಕುರಿತು ದೀರ್ಘವಾಗಿ ಚರ್ಚಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಪಕ್ಷಗಳು ಈ ವಿಷಯದ ಕುರಿತಂತೆ ಭಾರತದ ಸರ್ಕಾರದ ಎಲ್ಲಾ ತೀರ್ಮಾನಗಳಿಗೂ ಬೆಂಬಲ ನೀಡುವುದಾಗಿ ಘೋಷಿಸಿವೆ. ಆಂತರಿಕ ರಾಜಕೀಯದಲ್ಲಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಬಂದರೆ ಎಲ್ಲರೂ ಒಟ್ಟಾಗಿ ನಿಲ್ಲುವುದಾಗಿ ತೋರಿಸಿಕೊಟ್ಟಿವೆ. ಹಾಗಾಗಿ ಚೀನಾದ ವಿರುದ್ಧ ಭಾರತದ ಸರ್ಕಾರ ಯಾವುದೇ ನಿರ್ಣಯ ಕೈಗೊಳ್ಳುವುದಿದ್ದರೂ ಜೊತೆಗೆ ನಿಲ್ಲುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ಅಧ್ಯಕ್ಷತೆಯ ಸಭೆಯಲ್ಲಿ ಈಶಾನ್ಯ ರಾಜ್ಯದ ಎಲ್ಲಾ ಪಕ್ಷಗಳೂ ಪ್ರಧಾನಿಗೆ ಸಂಪೂರ್ಣ ಬೆಂಬಲ ಸೂಚಿಸಿವೆ.
ಸಭೆಯಲ್ಲಿ ಮಾತನಾಡಿದ ಹಿರಿಯ ರಾಜಕಾರಣಿ ಶರದ್ ಪವಾರ್, ಯೋಧರು ಶಸ್ತ್ರಾಸ್ತ್ರಗಳನ್ನು ಬಳಸಬೇಕೋ ಬೇಡವೋ ಎಂಬುದನ್ನು ಅಂತರಾಷ್ಟ್ರೀಯ ಒಪ್ಪಂದಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಇಂತಹ ಸೂಕ್ಷ್ಮ ವಿಚಾರಗಳನ್ನು ನಾವು ಗೌರವಿಸಬೇಕೆಂದು ಹೇಳಿದ್ದಾರೆ.
SKM ಪಕ್ಷದ ಪ್ರೇಮ್ ಸಿಂಗ್ ತಮಂಗ್ ಪ್ರಧಾನಿಯ ಮೇಲೆ ಸಂಪೂರ್ಣ ಭರವಸೆಯಿರುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆ ವಿಚಾರಕ್ಕೆ ಬಂದಾಗ ಪ್ರಧಾನಿ ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳುತ್ತಾರೆಂಬ ಅಚಲ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಗಾಲ್ವಾನ್ ಘರ್ಷಣೆ ಬಗ್ಗೆ ಸರ್ಕಾರ ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ, ಸರ್ಕಾರ ಪೂರ್ಣ ಮಾಹಿತಿ ಸಾರ್ವಜನಿಕವಾಗಿ ನೀಡಬೇಕು. ಹಲವು ಅಂಶಗಳನ್ನು ಕೇಂದ್ರ ಸರ್ಕಾರ ಜನರಿಂದ ಅಡಗಿಸಿಡುತ್ತಿದೆ. ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಸೋನಿಯಾ ಗಾಂಧಿ ಸಭೆಯಲ್ಲಿ ಕೋರಿದರು.
ಚೀನಾ ಹಾಗೂ ಭಾರತದ ನಡುವೆ ಮೈತ್ರಿಗೆ ಪ್ರಯತ್ನಿಸುತ್ತಿರುವ ಅಮೇರಿಕಾದ ನಡೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಡಿ, ಚೀನಾ ವಿರುದ್ಧ ಪ್ರತೀಕಾರ ತೀರಿಸಬೇಕು ಎಂದು ಆಗ್ರಹಿಸಿದೆ. ಅದಾಗ್ಯೂ ಕೇಂದ್ರ ಸರ್ಕಾರದ ಬೆಂಬಲ ನೀಡುವುದಾಗಿ ಹೇಳಿದೆ.
ಸರ್ವ ಪಕ್ಷ ಸಭೆಯಲ್ಲಿ ಡಿಎಂಕೆ ಪರವಾಗಿ ಮಾತನಾಡಿದ ಸ್ಟಾಲಿನ್ ಚೀನಾ ವಸ್ತುಗಳ ನಿರ್ಬಂಧಕ್ಕೆ ಬೆಂಬಲ ನೀಡಿದ್ದಾರೆ.
ಭಾರತ ದೇಶವು ಶಾಂತಿ ಬಯಸುತ್ತದೆ, ಹಾಗೆಂದು ನಾವು ದುರ್ಬಲರೆಂದಲ್ಲ. ದ್ರೋಹ ಬಗೆಯುವುದು ಚೀನಾದ ಸಹಜ ಗುಣ. ಭಾರತ ಈಗ ಶಕ್ತಿಯುತವಾಗಿದೆ. ಸರಕಾರಕ್ಕೆ ಸಾಮರ್ಥ್ಯವಿದೆ ಎಂದು ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಚೀನಾ ಮತ್ತು ಪಾಕಿಸ್ತಾನವನ್ನು ನಂಬಲು ಸಾಧ್ಯವಿಲ್ಲ, ಎರಡು ದೇಶಗಳ ನಿಯತ್ತು ಸರಿಯಿಲ್ಲ. ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ 300% ಆಮದು ಸುಂಕ ಹೆಚ್ಚಿಸಬೇಕು ಎಂದು ಸಮಾಜವಾದಿ ಪಾರ್ಟಿ ಮುಖಂಡ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.
ಭಾರತ ಜಾಗತಿಕ ಬೆಳೆಯುತ್ತಿರುವುದನ್ನು ಚೀನಾ ಸಹಿಸುತ್ತಿಲ್ಲ. ಹಾಗಾಗಿ ಭಾರತದ ವಿರುದ್ಧ ಕ್ಯಾತೆ ತೆಗೆಯುತ್ತಿದೆ. ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿದೆ ಎಂದು ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಪದೇ ಪದೇ ದ್ರೋಹ ಮಾಡುತ್ತಿರುವ ಚೀನಾಕ್ಕೆ ಸೂಕ್ತವಾದ ಉತ್ತರವನ್ನು ನೀಡಬೇಕು. ನಾವು ಸರ್ಕಾರದ ಜೊತೆಗೆ ಇದ್ದೇವೆ ಎಂದು ಅಕಾಲಿದಳ್ ನಾಯಕ ಸುಖಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಭಾರತದ ದೂರ ಸಂಪರ್ಕ, ರೈಲು, ವಿಮಾನಯಾನ ಕ್ಷೇತ್ರದಲ್ಲಿ ಚೀನಾ ಕಾಲಿಡಬಾರದು, ಹೀಗಾದಾಗ ಸಮಸ್ಯೆ ಎದುರಾಗುತ್ತದೆ. ಎಲ್ಲವನ್ನೂ ಎದುರಿಸೋಣ, ಭಾರತ ಒಟ್ಟಾಗಿ ಕೆಲಸ ಮಾಡಿ ಗೆಲ್ಲಬೇಕಾಗಿದೆ, ನಾವು ಧೃಢವಾಗಿ ಸರಕಾರದ ಜೊತೆ ನಿಲ್ಲುತ್ತೇವೆ ಎಂದು ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಚೀನಾದ ಉತ್ಪನ್ನಗಳು ಕಳಪೆ ಗುಣಮಟ್ಟದವು, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ವಸ್ತುಗಳು ಹೆಚ್ಚು ಭಾರತಕ್ಕೆ ಆಮದಾಗುತ್ತಿದೆ, ಇನ್ನು ಮುಂದಾದರೂ ಭಾರತದ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಚೀನಾ ವಸ್ತು ಬ್ಯಾನ್ ಮಾಡುವ ಕುರಿತ ನಿರ್ಧಾರವನ್ನು ಬೆಂಬಲಿಸಬೇಕು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.


