ನೇಪಾಳ ಸರ್ಕಾರ ಭಾರತದ ಮೇಲೆ ಮುಗಿಬೀಳುತ್ತಿದೆ. ಭಾರತ ಮತ್ತು ನೇಪಾಳ 1,800 ಕಿಲೋ ಮೀಟರ್ ಮುಕ್ತ ಗಡಿಯನ್ನು ಹಂಚಿಕೊಂಡಿವೆ. 1816ರ ಸುಗಾಲಿ ಒಪ್ಪಂದದ ಆಧಾರದ ಮೇಲೆ ಲಿಪುಲೇಖ್ ಪಾಸ್ ಮೇಲೆ ನೇಪಾಳ ಸರ್ಕಾರ ಹಕ್ಕಿದೆ ಎಂದು ಹೇಳಿಕೊಂಡಿದೆ. ಇದೀಗ ಭಾರತದ ಭೂಪ್ರದೇಶದ ಕೆಲವು ಭಾಗಗಳನ್ನು ತನ್ನದು ಎಂದು ಹೇಳಿಕೊಂಡು “ಹೊಸ ನಕ್ಷೆ”ಯನ್ನು ಸಂಸತ್‌ನಲ್ಲಿ ಅಂಗೀಕರಿಸಿದೆ. ಲಿಂಪಿಯಾಡುರಾ, ಲಿಪುಲೇಖ್ ಮತ್ತು ಕಾಲಾಪಾನಿಯನ್ನು ಒಳಗೊಂಡ ಹೊಸ ನಕ್ಷೆಯನ್ನು ಅನುಮೋದಿಸಿದೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಈ ರಸ್ತೆಯನ್ನು ಬಳಸುತ್ತಿದ್ದರು. ನೇಪಾಳದ ಪ್ರಧಾನಮಂತ್ರಿ ಕೆ ಪಿ ಶರ್ಮಾ ಓಲಿ ಭಾರತದಲ್ಲಿ ಭೂಪ್ರದೇಶವನ್ನು ನೇಪಾಳದ ನಕ್ಷೆಯನ್ನು ಬದಲಿಸುವ ಸಾಂವಿಧಾನಿಕ ತಿದ್ದುಪಡಿ ತರಲು ಮುಂದಾಗಿದ್ದಾರೆ. ಭಾರತದ ವಿರುದ್ಧ ಸಂಸತ್‌ನಲ್ಲಿ ನೇಪಾಳ ಪ್ರಧಾನಿ ಕೆ ಪಿ ಓಲಿ ಘರ್ಜಿಸಿದ್ದಾರೆ. ನೇಪಾಳ ಪುಟ್ಟ ದೇಶ ಭಾರತದಂತಹ ದೇಶದ ವಿರುದ್ಧ ಘರ್ಜಿಸಲು ಕಾರಣ ಏನು ಎನ್ನುವುದೇ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಚೀನಾ ದೇಶ ಕೂಡ ಭಾರತದ ಮೇಲೆ ಹಗೆ ಸಾಧಿಸುತ್ತಿದೆ..!
ಭಾರತ – ಚೀನಾ ನಡುವೆ ಇತ್ತೀಚಿಗೆ ಶಾಂತಿ ಮಾತುಕತೆ ನಡೆದಿತ್ತು. ಎರಡು ಕಡೆಯ ಸೇನಾ ಅಧಿಕಾರಿಗಳು ಮಾತುಕತೆ ನಡೆಸಿ, ಬಿಕ್ಕಟ್ಟು ಶಮನವಾಗಿದೆ ಎಂದು ಘೋಷಿಸಿದ್ದರು. ಆದರೆ 1975ರ ನಂತರ ಭಾರತ ಹಾಗೂ ಚೀನಾ ನಡುವೆ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಭಾರತೀಯ ಸೇನಾಧಿಕಾರಿ ಹಾಗೂ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ, ಹಲವಾರು ಸೈನಿಕರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ವಿವಾದಿತ ಅಕ್ಸಾಯ್ ಚಿನ್-ಲಡಾಖ್ ಪ್ರದೇಶದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚಕಮಕಿ ನಡೆದಿದೆ. ಎರಡೂ ದೇಶಗಳ ಕಡೆಯೂ ಸಾವು ಸಂಭವಿಸಿದೆ ಎಂದು ಭಾರತ ಸರ್ಕಾರ ತಿಳಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಭಾರತದ ಹಿರಿಯ ಸೇನಾ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ವಿದೇಶಾಂಗ ಸಚಿವರು ಕೂಡ ಸಭೆಯಲ್ಲಿ ಉಪಸ್ಥಿತರಿದ್ದು, ಪರಿಸ್ಥಿತಿ ತಿಳಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನಿ ನರೇಂದ್ರ ಮೋದಿಗೆ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್, ಬಿಪಿನ್ ರಾವತ್ ಸೇರಿದಂತೆ ಸೇನಾ ಮುಖ್ಯಸ್ಥರುಗಳು ಹಾಜರಿದ್ದು, ಸದ್ಯದ ಗಡಿ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದರು. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಚೀನಾ ದಾಳಿ ಬಗ್ಗೆ ಆಕ್ರೋಶ ಹೊರ ಹಾಕಿದ್ದು, ಚೀನಾ ದೇಶ ಪದೇ ಪದೇ ಇದೇ ರೀತಿ ಗಡಿ ವಿಚಾರದಲ್ಲಿ ಭಾರತವನ್ನು ಕೆಣಕುತ್ತಲೇ ಇದೆ. ಭಾರತಕ್ಕೆ ಇದು ಸೂಕ್ತ ಸಮಯವಾಗಿದ್ದು ಕಠಿಣ ನಿರ್ಧಾರ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಭಾರತಕ್ಕೆ ಪಾಕಿಸ್ತಾನ ಮಾತ್ರವೇ ಶತ್ರು ರಾಷ್ಟ್ರನಾ..?
ಪಾಕಿಸ್ತಾನ ಭಾರತದಿಂದ ಸಿಡಿದು ಸೃಷ್ಟಿಯಾದ ಹೊಸ ರಾಷ್ಟ್ರ. ಅಂದರೆ ಭಾರತದ ಸಹೋದರ ದೇಶ ಪಾಕಿಸ್ತಾನ. ಭಾರತ ಮತ್ತು ಪಾಕಿಸ್ತಾನ ದಾಯಾದಿಗಳು ಹಾಗಾಗಿ ಗಡಿ ವಿಚಾರದಲ್ಲಿ ಅಣ್ಣತಮ್ಮಂದಿರಂತೆ ಕಿತ್ತಾಡುವುದು ಸಹಜ. ಆದರೆ ನೇಪಾಳ ಭಾರತದ ಸ್ನೇಹಿತ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ನೇಪಾಳಕ್ಕೂ ಭೇಟಿ ನೀಡಿ ಅಲ್ಲಿನ ಸಂಸತ್‌ನಲ್ಲಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಆದರೀಗ ನೇಪಾಳವೂ ಭಾರತದ ವಿರುದ್ಧ ತಿರುಗಿ ಬಿದ್ದಿದೆ. ಇದಕ್ಕೆ ಕಾರಣ ನಮ್ಮ ಭಾರತದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವೇ ಕಾರಣವಾಯ್ತಾ ಎನ್ನುವ ಅನುಮಾನ ದಟ್ಟವಾಗ್ತಿದೆ.
ನೇಪಾಳ ಕಮ್ಯುನಿಸ್ಟ್ ಪಕ್ಷದಿಂದ ಪ್ರಧಾನಿ ಆಗಿರುವ ಕೆ ಪಿ ಶರ್ಮಾ ಓಲಿ, ಭಾರತದ ಮೇಲಿನ ದ್ವೇಷಮಯ ವಾತಾವರಣ ಅಧಿಕಾರದ ಗದ್ದುಗೆ ಭದ್ರ ಮಾಡಿಕೊಳ್ಳಲು ಅನುಕೂಲವಾಗಿದೆ ಎನ್ನಲಾಗಿದೆ. ಇತ್ತೀಚಿಗಷ್ಟೇ ಕೆ ಪಿ ಓಲಿ ಶರ್ಮಾ ವಿರುದ್ಧ ಬಂಡಾಯ ಎದ್ದಿತ್ತು. ಪ್ರಧಾನಿ ಹುದ್ದೆಯಿಂದ ಕೆಳಕ್ಕೆ ಇಳಿಯುವಂತೆ ಆಗ್ರಹ ಮಾಡಲಾಗಿತ್ತು. ಇದೇ ಸಮಯವನ್ನು ಬಳಸಿಕೊಂಡ ಪ್ರಧಾನಿ ಓಲಿ ಶರ್ಮಾ, ಭಾರತದ ವಿರುದ್ಧ ಜನರ ಗಮನ ಸೆಳೆಯುವಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಇದೀಗ ಪಕ್ಷದಲ್ಲೂ ಕೆ ಪಿ ಓಲಿ ಶರ್ಮಾ ಪ್ರಬಲ ನಾಯಕನಾಗಿದ್ದಾರೆ.

ನೇಪಾಳದ ಮಾಜಿ ಭಾರತೀಯ ರಾಯಭಾರಿ ರಂಜಿತ್ ರೇ ʼದಿ ಪ್ರಿಂಟ್ʼ ವೆಬ್ ಪತ್ರಿಕೆ ಜೊತೆಗೆ ಮಾತನಾಡಿದ್ದು, ನೇಪಾಳದ ಪ್ರಧಾನಿ ಕೆ ಪಿ ಶರ್ಮಾ ಓಲಿ, ಭಾರತದೊಂದಿಗೆ ವಿವಾದಿತ ಪ್ರದೇಶಗಳನ್ನು ಒಳಗೊಂಡ ಹೊಸ ನಕ್ಷೆ ಅಂಗೀಕರಿಸಿದ್ದು ಅವರಿಗೆ ದೇವರು ಕೊಟ್ಟ ವರ ಎಂದಿದ್ದಾರೆ. ನೇಪಾಳ ಕಮ್ಯುನಿಸ್ಟ್ ಪಕ್ಷದಲ್ಲಿ ತಮ್ಮದೇ ಆದ ಸ್ಥಾನವನ್ನು ಗಟ್ಟಿಗೊಳಿಸಲು ಭಾರತದ ವಿರೋಧಿ ನಿಲುವು ಸೃಷ್ಟಿಸಲು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ನೇಪಾಳಿ ಕಮ್ಯುನಿಸ್ಟರು ನೇಪಾಳದಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಭಾರತೀಯ ವಿರೋಧಿ ರಾಷ್ಟ್ರೀಯತೆಯನ್ನು ಬಳಸುತ್ತಾರೆ. ಪಿಎಂ ಓಲಿ ತಮ್ಮದೇ ಪಕ್ಷದೊಳಗೆ ದುರ್ಬಲರಾದ್ದರು. ಇದೀಗ ಭಾರತ ವಿರೋಧಿ ನಿರ್ಧಾರ ರಾಷ್ಟ್ರೀಯತಾವಾದಿ ಭಾವನೆಯನ್ನು ಹುಟ್ಟುಹಾಕಲು ಸಮರ್ಥವಾಗಿದೆ. ಅವರು ಅಧಿಕಾರಕ್ಕೆ ಬರಲು ಇದನ್ನೇ ಬಳಸಿದ್ದಾರೆ ಎಂದಿದ್ದಾರೆ.
ಚೀನಾ ಕೂಡ ಭಾರತದ ಮೇಲೆ ಸದಾ ಕಾಲ ತನ್ನ ಸೇನೆಯನ್ನು ಗಡಿಯಲ್ಲಿ ಜಮಾವಣೆ ಮಾಡುತ್ತಲೇ ಬೆದರಿಕೆ ಒಡ್ಡುತ್ತದೆ. ಒಮ್ಮೊಮ್ಮೆ ಚೀನಾ ಗಡಿಯಲ್ಲಿ ಸೈನಿಕರನ್ನು ಒಳಗೆ ನುಗ್ಗಿಸಿ ಭಾರತದ ಮೇಲೆ ಕಾಲು ಕೆರೆದು ಜಗಳ ಮಾಡುತ್ತದೆ. ಇದು ಚೀನಾ ಸೇನಾ ಶಕ್ತಿಗೆ ವಿಶ್ವ ಮಟ್ಟದಲ್ಲಿ ಭಾರೀ ಪ್ರಚಾರ ತಂದು ಕೊಡುತ್ತದೆ. ಚೀನಾ ದೇಶದ ಸೇನಾ ಶಕ್ತಿ ಬಲಾಢ್ಯವಾಗಿದ್ದು, ಭಾರತದ ಮೇಲೆ ಶಕ್ತಿ ಪ್ರದರ್ಶನ ಮಾಡುತ್ತ ವಿಶ್ವದ ಗಮನ ಸೆಳೆಯುವುದು ಅದರ ತಂತ್ರಗಾರಿಕೆ. ಅದರ ಜೊತೆಗೆ ಚೀನಾ ದೇಶದ ವಿರುದ್ಧ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಬೈಕಾಟ್ ಚೀನಾ ಎನ್ನುವುದನ್ನು ಪರೋಕ್ಷವಾಗಿ ಲೋಕಲ್ ವೋಕಲ್ ಘೋಷಣೆ ಮಾಡಿದ್ದರು. ಆ ಕೋಪವನ್ನು ಭಾರತದ ಮೇಲೆ ಈ ರೀತಿ ವ್ಯಕ್ತಪಡಿಸಿದೆ ಎನ್ನಬಹುದು.
ಭಾರತವೂ ಇದೇ ರೀತಿ ಮಾಡುತ್ತಾ..?
ಒಂದು ದೇಶದಲ್ಲಿ ಚುನಾವಣೆ ಗೆಲ್ಲಲ್ಲು ಅಥವಾ ದೇಶದ ಜನರಲ್ಲಿ ಒಂದೇ ಭಾವನೆ ಮೂಡುವಂತೆ ಮಾಡಲು ಇರುವ ಸರಳ ಉಪಾಯ ಎಂದರೆ ದೇಶಪ್ರೇಮ. ನಮ್ಮ ದೇಶ ಎಂದರೆ ಎಲ್ಲರೂ ಉಘೇ ಎನ್ನುತ್ತಾರೆ. ನಮ್ಮ ದೇಶದ ಮೇಲೆ ಮತ್ತೊಂದು ದೇಶ ಆಕ್ರಮಣ ಮಾಡುತ್ತಿದೆ ಎಂದರೆ ಎಲ್ಲರ ಎದೆಯಲ್ಲೂ ಆಕ್ರೋಶದ ಕಟ್ಟೆ ಹೊಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಲೋಕಸಭಾ ಚುನಾವಣೆ ವೇಳೆ ಕಾಲು ಕೆರೆದು ಬಂದ ಪಾಕಿಸ್ತಾನದ ಮೇಲೆ ಬಾಲಾಕೋಟ್ ವಾಯು ದಾಳಿ ನಡೆಸುವ ಮೂಲಕ ಪ್ರಚಂಡ ಗೆಲುವು ಸಾಧಿಸಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೆಲುವು ಸಿಗಲಿದೆ ಎನ್ನುವುದರನ್ನೂ ಯಾವ ರಾಜಕೀಯ ಪಂಡಿತರೂ ಊಹೆ ಮಾಡಿರಲಿಲ್ಲ. ಆದರೆ ಪಾಕಿಸ್ತಾನದ ಮೇಲೆ ನಡೆಸಿದ ಏರ್‌ಸ್ಟ್ರೈಕ್ ಲೋಕಸಭಾ ಚುನಾವಣೆಯ ದಿಕ್ಕನ್ನೇ ಬದಲಿಸಿತು. ವಿರೋಧ ಪಕ್ಷಗಳು ಏನನ್ನೂ ಮಾತನಾಡಿದರೂ ತಪ್ಪು ಸಂದೇಶ ಹೋಗುವಂತಾಯ್ತು. ರಾಜಕೀಯ ವಿರೋಧಿಗಳು ಎನ್ನುವ ಕಾರಣಕ್ಕೆ ದೇಶದ ವಿಚಾರದಲ್ಲಿ ವಿರೋಧಿಸುವಂತೆಯೂ ಇರಲಿಲ್ಲ, ಪರವಾಗಿ ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಬಳಸಿದ ಅಸ್ತ್ರವನ್ನೇ ವಿವಿಧ ದೇಶಗಳಲ್ಲಿ ಪ್ರಯೋಗಿಸಲಾಗುತ್ತಿದೆ. ವಿಶ್ವದ ದೊಡ್ಡ್ಣ ಎನ್ನುವ ಅಮೆರಿಕದಲ್ಲೂ ಜಾರ್ಜ್ ಫ್ಲಾಯ್ಡ್ ಸಾವಿನ ಹೋರಾಟವನ್ನು ರಾಜಕೀಯ ಲಾಭಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಸುತ್ತಿದ್ದಾರೆ ಎನ್ನುವ ವರದಿಗಳು ಬರುತ್ತಿವೆ. ಇತ್ತ ನೇಪಾಳದಲ್ಲಿ ಕೂಡ ಭಾರತದ ವಿರುದ್ಧದ ನಿರ್ಧಾರ ಪ್ರಧಾನಿಯ ಪಟ್ಟ ಉಳಿಸಿದೆ. ಒಟ್ಟಾರೆ, ಭಾರತದಲ್ಲಿ ಮಾಡಿದ್ದನ್ನೇ ವಿಶ್ವದ ಬೇರೆ ನಾಯಕರು ಪಾಲಿಸುತ್ತಾ, ಜನರ ಭಾವನೆಗಳನ್ನೇ ಬಳಸಿಕೊಂಡು ರಾಜಕೀಯ ಲಾಭ ಗಳಿಸುವ ಸಂಚು ಯಶಸ್ವಿಯಾಗುತ್ತಿದೆ ಎನ್ನಲಾಗುತ್ತಿದೆ.









