ಭಾರತ-ಚೀನಾ ನಡುವಿನ ಮನಸ್ತಾಪ ಸದ್ಯಕೆ ಮುಗಿಯುವಂತೆ ಕಾಣುತ್ತಿಲ್ಲ. ಜೂನ್ 15 ರಂದು ಗಡಿಯಲ್ಲಿ ಚೀನಾ ಭಾರತದ ಭಾಗದೊಳಗೆ ನುಸುಳಿದ ಬಳಿಕ ಉಂಟಾದ ಉಭಯ ಸೇನೆಯ ಸಂಘರ್ಷದಲ್ಲಿ ಯೋಧರು ಮೃತಪಟ್ಟ ಮೇಲೆ ಈ ವೈಷಮ್ಯ ಹೆಚ್ಚುತ್ತಲೇ ಇದೆ.
ಈ ಹಿನ್ನಲೆಯಲ್ಲಿ ಭಾರತದ ನಾಗರಿಕರು ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದರು. ಭದ್ರತೆಯ ಕಾರಣ ಎದುರಿಟ್ಟುಕೊಂಡು ಭಾರತ ಸರ್ಕಾರ 59 ಚೀನಾ ಅಪ್ಲಿಕೇಷನ್‌ಗಳನ್ನು ನಿಷೇಧಿಸಿ ಜೂನ್ 29 ರಂದು ಆದೇಶ ಹೊರಡಿಸಿತ್ತು.
ಇದಾಕ್ಕೂ ಮೊದಲೇ ಚೀನಾ, ಭಾರತದ ನ್ಯೂಸ್ ವೆಬ್‌ಸೈಟ್‌ಗಳನ್ನು, ಪತ್ರಿಕೆಗಳನ್ನು ಚೀನಾದಲ್ಲಿ ನಿಷೇಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು ಎಂದು ಮೂಲಗಳು ತಿಳಿಸಿದೆ. ನಿಷೇಧಿತ ವೆಬ್‌ಸೈಟ್‌ಗಳನ್ನು VPN ಮುಖಾಂತರ ಬಳಸಲು ಕೂಡಾ ಚೈನಾದಲ್ಲಿ ಕಷ್ಟವಿದೆ.
ವರ್ಚುವಲ್ ಖಾಸಗಿ ನೆಟ್‌ವರ್ಕ್ (VPN) ಎನ್ನುವುದು ಸಾರ್ವಜನಿಕ ಅಂತರ್ಜಾಲ ಸಂಪರ್ಕದಿಂದ ಖಾಸಗಿ ನೆಟ್‌ವರ್ಕ್ ಅನ್ನು ರಚಿಸುವ ಮೂಲಕ ಬಳಕೆದಾರರಿಗೆ ಆನ್‌ಲೈನ್ ಗೌಪ್ಯತೆ ಮತ್ತು ಅನಾಮಧೇಯತೆಯನ್ನು ನೀಡುವ ಪ್ರಬಲ ಸಾಧನವಾಗಿದೆ. ವಿಪಿಎನ್‌ಗಳು ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ವಿಳಾಸವನ್ನು ಮರೆಮಾಚುತ್ತವೆ ಆದ್ದರಿಂದ ಬಳಕೆದಾರರ ಆನ್‌ಲೈನ್ ಕ್ರಿಯೆಗಳನ್ನು ವಾಸ್ತವಿಕವಾಗಿ ಗುರುತಿಸಲಾಗುವುದಿಲ್ಲ.
ಆದರೆ ಚೀನಾ ಅಂತಹ ತಾಂತ್ರಿಕವಾಗಿ ಸುಧಾರಿತ ಫೈರ್‌ವಾಲ್ ಅನ್ನು ರಚಿಸಿದ್ದು ಅದು ವಿಪಿಎನ್‌ಗಳನ್ನು ಕೂಡಾ ನಿರ್ಬಂಧಿಸುತ್ತದೆ.
ಸದ್ಯ ಭಾರತದಲ್ಲಿ ಈ ತಂತ್ರಜ್ಞಾನ ಅಷ್ಟೇನೂ ಮುಂದುವರಿಯದ ಕಾರಣ ಭಾರತದಲ್ಲಿ ನಿಷೇಧಿತ ವೆಬ್‌ಸೈಟ್‌ಗಳನ್ನು ಪ್ಲೇ ಸ್ಟೋರಿನಲ್ಲಿ ಉಚಿತವಾಗಿ ಲಭ್ಯವಾಗುವ VPN ಬಳಸಿ ಸುಲಭವಾಗಿ ತೆರೆಯಬಹುದು.
ಆದರೆ ಚೀನಾ ವಿಶ್ವದ ಪ್ರಬಲ ಆನ್‌ಲೈನ್ ಸೆನ್ಸಾರ್ಶಿಪ್ ಹೊಂದಿದೆ. ಇದು ದೇಶೀಯ ಅಂತರ್ಜಾಲ ಬಳಕೆಯನ್ನು ಹೆಚ್ಚು ನಿಯಂತ್ರಿಸಿ, ಸೆನ್ಸಾರ್ ಮಾಡುತ್ತದೆ ಮತ್ತು ಕಮ್ಯುನಿಸ್ಟ್ ಪಕ್ಷದ ನಿರೂಪಣೆಗೆ ವಿರುದ್ಧವಾಗಿ ಕಂಡುಬರುವ ಯಾವುದೇ ವೆಬ್‌ಸೈಟ್‌ಗಳು ಅಥವಾ ಲಿಂಕ್‌ಗಳನ್ನು ನಿರ್ಬಂಧಿಸುತ್ತದೆ.