ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆ ಮಟ್ಟದ ಕರೋನಾ ಪ್ರಕರಣ ದಾಖಲಾಗಿದ್ದು, ಒಂದೇ ದಿನದಲ್ಲಿ 9,887 ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಕೇವಲ ಒಂದೇ ದಿನದೊಳಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೋವಿಡ್-19 ಪ್ರಕರಣ ದಾಖಲಾಗಿದ್ದು ಇದೇ ಮೊದಲು.
ಭಾರತದಲ್ಲಿ ಇದುವರೆಗೂ 2 ಲಕ್ಷದ 47 ಸಾವಿರ ಮಂದಿ ಕರೋನಾ ಸೋಂಕಿಗೆ ತುತ್ತಾಗಿದ್ದಾರೆ. ದೇಶದಲ್ಲಿ ಕರೋನಾ ಸೋಂಕಿನಿಂದಾಗಿ 6,929 ಮಂದಿ ಅಸುನೀಗಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 1 ಲಕ್ಷದ 19 ಸಾವಿರ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಕರ್ನಾಟಕ ಆರೋಗ್ಯ ಇಲಾಖೆ ಜೂನ್ 07 ರಂದು ಬಿಡುಗಡೆಗೊಳಿಸಿದ ಅಂಕಿಅಂಶದ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 239 ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 5,452 ತಲುಪಿದೆ. ಅದರಲ್ಲಿ 2,132 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಕರೋನಾ ಸೋಂಕಿಗೆ ಇಂದು ಮತ್ತೆರಡು ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 61 ತಲುಪಿದೆ.
ಇಂದು ಪತ್ತೆಯಾಗಿರುವ ಪ್ರಕರಣಗಳಲ್ಲಿ 183 ಮಂದಿ ಅಂತರಾಜ್ಯ ಪ್ರಯಾಣಿಕರು ಹಾಗೂ 09 ಮಂದಿ ವಿದೇಶಿ ಪ್ರಯಾಣಿಕರು ಎಂದು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ.