ಮುಂದಿನ ದಿನಗಳಲ್ಲಿ ಜಿಡಿಪಿಗೆ ಗ್ರಾಮ ಭಾರತದ ಕೊಡುಗೆ ಪ್ರಮಾಣ ಹೆಚ್ಚಾಗಲಿದೆ. ಹಳ್ಳಿಗೆ ತೆರಳಿರುವ ಮಂದಿ ಸ್ವಸಹಾಯ ಗುಂಪುಗಳನ್ನು ಮಾಡಿ ಸ್ವ ಉದ್ಯೋಗ ಮಾಡಿ ಸೆಲ್ಕೋ ವೆಬಿನಾರ್ ನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಚೇರ್ಮನ್ ಗೋಪಿಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ನಮ್ಮ ಜಿಡಿಪಿ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಮೇಲೆ ಹೆಚ್ಚು ಆಧರಿತಗೊಂಡಿಲ್ಲ. ಜಿಡಿಪಿಗೆ ಇವುಗಳ ಕೊಡುಗೆ ಶೇ.20ಕ್ಕಿಂತಲೂ ಕಡಿಮೆ. ಆದರೆ ಮುಂದಿನ ದಿನಗಳಲ್ಲಿ ಇದರಲ್ಲಿ ಮಹತ್ತರ ಬೆಳವಣಿಗೆಗಳು ಆಗಲಿವೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಜಿಡಿಪಿಗೆ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಕೊಡುಗೆ ಶೇ.60ರಷ್ಟಿತ್ತು. ಕೋವಿಡ್ 19 ನಂತರ ಮತ್ತೆ ಅಂಥಾ ಸ್ಥಿತಿ ಬರಲಿದೆ. ಶೇ.60ರಷ್ಟಲ್ಲದಿದ್ದರೂ ಜಿಡಿಪಿಗೆ ಕೃಷಿ ಕೊಡುಗೆ ಪ್ರಮಾಣ ಗಣನೀಯವಾಗಿ ಹೆಚ್ಚಾಗಲಿದೆ.
ಮರಳಿ ಹಳ್ಳಿ ಸೇರಿರುವವರು ಸೇರಿಕೊಂಡು ಸ್ವಸಹಾಯ ಗಂಪುಗಳನ್ನು ಮಾಡಿಕೊಂಡರೆ ಬ್ಯಾಂಕುಗಳು ಸಾಲ ನೀಡುತ್ತವೆ. ಅದರಿಂದ ಕೌಶಲ್ಯ ತರಬೇತಿ ಪಡೆದು ಸ್ವ ಉದ್ಯೋಗ ಮಾಡಬಹುದು. ಅವರಿಗೆ ಬೇಕಾದ ಅವಶ್ಯ ಜೀವನೋಪಾಯ ಯಂತ್ರಗಳನ್ನು ಸೆಲ್ಕೋ ಒದಗಿಸಬಹುದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಚೇರ್ಮನ್ ಗೋಪಿಕೃಷ್ಣ ಹೇಳಿದರು.
ಸೆಲ್ಕೋ ಇಂಡಿಯಾ ಸಂಸ್ಥೆ ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಗೆ ಗ್ರಾಮೀಣ ಬ್ಯಾಂಕುಗಳ ಕೊಡುಗೆ ಮತ್ತು ಗ್ರಾಮೀಣ ಜನರ ಜೀವನೋಪಾಯಕ್ಕೆ ಹಣ ಹೂಡಿಕೆ ವಿಚಾರದ ಕುರಿತಾಗಿ ಆಯೋಜಿಸಿದ್ದ ವೆಬಿನಾರ್ ನಲ್ಲಿ ಅವರು ಈ ಮೇಲಿನ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.
ನಗರಗಳಿಂದ ಈಗಾಗಲೇ ಬಹುತೇಕರು ತಮ್ಮ ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ನಗರಗಳಲ್ಲಿ ಆಹಾರೋದ್ಯಮ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳು ಕುಸಿತ ಕಂಡಿರುವುದರಿಂದ ಮತ್ತೆ ಅದೇ ಪ್ರಮಾಣದಲ್ಲಿ ಕೆಲಸ ಸೃಷ್ಟಿ ಸಾಧ್ಯತೆ ಕಡಿಮೆ. ಹಾಗಾಗಿ ಬಹುತೇಕರು ಹಳ್ಳಿಗಳಲ್ಲೇ ಉಳಿಯುವ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲೇ ಜೀವನೋಪಾಯಕ್ಕೆ ದಾರಿ ಹುಡುಕುತ್ತಿದ್ದಾರೆ. ಅವರು ಹಳ್ಳಿಗಳಲ್ಲೇ ಉಳಿದು ಕೌಶಲ್ಯ ತರಬೇತಿ ಪಡೆದು ಸ್ವಉದ್ಯೋಗ ಆರಂಭಿಸುವ ಅವಕಾಶ ಹೆಚ್ಚಿದೆ. ಎನ್ಜಿಓಗಳನ್ನು ಅವರನ್ನು ಒಟ್ಟು ಸೇರಿಸಿ ಸ್ವಸಹಾಯ ಸಂಘಗಳನ್ನು ರೂಪಿಸಬೇಕು ಎಂದು ಅವರು ಹೇಳಿದರು.
ನಾವು ಈಗ ವಿಭಿನ್ನ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಹಾಗಂತ ಅದನ್ನು ನಾವು ಕಷ್ಟಕರ ಪರಿಸ್ಥಿತಿ ಎಂದು ಭಾವಿಸಿಕೊಳ್ಳಬೇಕಿಲ್ಲ. ಕಷ್ಟಕರ ಎಂದುಕೊಂಡರೆ ಅದನ್ನು ದಾಟಿ ಬರುವುದು ಕಷ್ಟ. ವಿಭಿನ್ನ ಪರಿಸ್ಥಿತಿ ಎಂದುಕೊಂಡರೆ ದಾಟುವುದು ಸುಲಭ. ಮನುಷ್ಯರು ನೂರಾರು ವರ್ಷಗಳಿಂದ ಹಲವಾರು ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿಕೊಂಡು ಬಂದಿದ್ದಾರೆ. ಇದೂ ಕೂಡ ಅಂಥದ್ದೇ ಒಂದು ಪರಿಸ್ಥಿತಿ. ಸದ್ಯ ಕರ್ನಾಟಕ, ಮಹಾರಾಷ್ಟ್ರದ ಉದಾಹರಣೆಗಳನ್ನು ತೆಗೆದುಕೊಂಡರೆ ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಿಗಿಂತ ಹೆಚ್ಚು ಕಷ್ಟ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಅರ್ಥವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಆರರಿಂದ 8 ಶೇಕಡ ಕೇಸುಗಳಷ್ಟೇ ದಾಖಲಾಗಿವೆ ಎಂದು ಅವರು ಅಭಿಪ್ರಾಯ ಪಟ್ಟರು.