ಬೇಸಿಗೆ ಅವಧಿಯಲ್ಲಿ ಕರೋನಾ ಸೋಂಕಿನಿಂದಾಗಿ ಬಳಲಿರುವ ಭಾರತ ಮುಂದಿನ ಕೆಲವೇ ದಿನಗಳಲ್ಲಿ ಮಳೆಗಾಲಕ್ಕೆ ಕಾಲಿಡಲಿದೆ. ಈ ಬಾರಿಯ ಬೇಸಿಗೆಯ ಬಿಸಿಗಿಂತಲೂ ಕರೋನಾ ಸಾಂಕ್ರಾಮಿಕ ರೋಗ ತಂದಿಟ್ಟ ಆತಂಕ ಅಷ್ಟಿಷ್ಟಲ್ಲ. ಇದರ ನಡುವೆ ಮತ್ತೆ ಮಳೆಗಾಲಕ್ಕೆ ದೇಶ ತೆರೆದುಕೊಳ್ಳಲಿದ್ದು, ಮತ್ತೆ ಪ್ರವಾಹದ ಭೀತಿಯೂ ಜೊತೆಗಿದೆ. ಕಳೆದ ಬಾರಿ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ಭೀಕರ ಪ್ರವಾಹಕ್ಕೆ ತುತ್ತಾಗಿತ್ತು. ಕರ್ನಾಟಕವೊಂದರಲ್ಲೇ 38 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿ ತೀವ್ರ ಆರ್ಥಿಕ ಹಿನ್ನಡೆಗೂ ಕಾರಣವಾಗಿತ್ತು. ಕಳೆದೆರಡು ಮಳೆಗಾಲ ಋತುವಿನಲ್ಲಿ ಕರ್ನಾಟಕವಂತೂ ತೀವ್ರ ಸಂಕಷ್ಟ ಅನುಭವಿಸಿದೆ. ಇದೀಗ ಮತ್ತೆ ಮಳೆಗಾಲ ಎದುರಾಗುತ್ತಿದ್ದು, ಸಹಜವಾಗಿಯೇ ಆತಂಕ ಇಮ್ಮಡಿಯಾಗಿದೆ. ಕಾರಣ , ಬೇಸಿಗೆಯುದ್ದಕ್ಕೂ ಕಾಡಿದ ಕರೋನಾ ಮಳೆಗಾಲದಲ್ಲೂ ಮುಂದುವರೆಯುವ ಸಾಧ್ಯತೆ ಜೊತೆಗೆ ಪ್ರವಾಹ ಭೀತಿಯೂ ಜೊತೆಯಾಗಿದೆ.
ಅದೆಲ್ಲಕ್ಕೂ ಜಾಸ್ತಿ, ಬೇಸಿಗೆಯಲ್ಲಿ ಕೆಲಸ ಕಳೆದುಕೊಂಡ ಕೂಲಿ ಕಾರ್ಮಿಕರು ಬಹುತೇಕ ಮಂದಿ ಮಳೆಗಾಲದಲ್ಲಿ ಕೆಲಸವಿಲ್ಲದೇ ಮನೆಯಲ್ಲಿ ಇರೋದೆ ಜಾಸ್ತಿ. ಆದರೆ ಈ ಬಾರಿಯ ಬೇಸಿಗೆಯಲ್ಲೇ ಕೆಲಸ ಕಳೆದುಕೊಂಡು, ಅದರಲ್ಲೂ ವಲಸೆ ಕಾರ್ಮಿಕರಂತೂ ಈಗಾಗಲೇ ತಮ್ಮ ತವರು ರಾಜ್ಯ, ಜಿಲ್ಲೆಗಳನ್ನ ತಲುಪಿ ಆಗಿದೆ. ಆದ್ದರಿಂದ ಇವರೆಲ್ಲರ ಹಸಿವನ್ನು ತಣಿಸುವ ಕೆಲಸವೊಂದು ಮಾನ್ಸೂನ್ ತಿಂಗಳಲ್ಲಿ ಆಗಬೇಕಿದೆ. ಇಲ್ಲೇನಾದರೂ ಸರಕಾರ ಎಡವಿದರೆ ಕಾರ್ಮಿಕರ ಬದುಕು ದುಸ್ತರವಾಗುವುದರಲ್ಲಿ ಸಂಶಯವಿಲ್ಲ.
ಆದರೆ ಸದ್ಯ ಭಾರತೀಯ ಹವಾಮಾನ ಇಲಾಖೆ ಈ ಬಾರಿ ಸಾಧಾರಣ ಮಳೆಯಾಗುವುದಾಗಿ ಘೋಷಿಸಿದೆ. ಆದರೂ ಕಳೆದ ವರುಷವೂ ಇಂತಹದ್ದೇ ಘೋಷಣೆ ಇತ್ತಾದರೂ ವ್ಯಾಪಕ ನಷ್ಟ ಉಂಟಾಗಿತ್ತು. ಈಗಾಗಲೇ ಜನರು ಮೂರು ಹಂತಗಳ (ಸದ್ಯದ ಮಟ್ಟಿಗೆ) ಲಾಕ್‌ಡೌನ್ ನಿಂದಾಗಿ ನಿರಾಸೆ ಹಾಗೂ ಕಂಗಾಲಾಗಿದ್ದಾರೆ.
ಇತ್ತೀಚೆಗಿನ ಜಾಗತಿಕ ಸಲಹಾ ಸಮಿತಿ KPMG ವರದಿ ಪ್ರಕಾರ, ಭಾರತದಲ್ಲಿ ಲಾಕ್‌ಡೌನ್ ನಿಂದಾಗಿ ಆರ್ಥಿಕ ಚಟುವಟಿಕೆ ಮೇಲೆ ಅಗಾಧ ಪರಿಣಾಮ ಬೀರಿದೆ. ಜವಳಿ ಹಾಗೂ ಉಡುಪು ಕ್ಷೇತ್ರಗಳು ಶೇಕಡಾ 10 ರಿಂದ 12 ರಷ್ಟು ಉತ್ಪಾದನೆ ಕಡಿಮೆಗೊಳಿಸಿದೆ. ಅಟೋಮೊಬೈಲ್ ಕ್ಷೇತ್ರವಂತೂ ಸ್ತಬ್ಧವಾಗಿದೆ. ನಿರ್ಮಾಣ ಕಾಮಗಾರಿಗಳು ನಿಂತು ಹೋಗಿದ್ದು, ಯಾರೂ ಬಂಡವಾಳ ಹೂಡುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇನ್ನು ಭಾರತದ ಪ್ರವಾಸೋದ್ಯಮ ಅನ್ನೋದು ಎಷ್ಟರ ಮಟ್ಟಿಗೆ ಕುಸಿದು ಹೋಗಿದೆ ಅಂದರೆ ಜಗತ್ತು ಕಂಡ ಮಹಾದುರಂತಗಳಾದ 2001 ರ 9/11 ದಾಳಿ ಹಾಗೂ 2008 ಆರ್ಥಿಕ ಹಿಂಜರಿತಕ್ಕಿಂತಲೂ ಕಡಿಮೆ ಪ್ರಮಾಣಕ್ಕೆ ಕುಸಿದಿದೆ.
ಇನ್ನು 130 ಕೋಟಿಗೂ ಅಧಿಕ ಜನಸಂಖ್ಯೆಯ ಭಾರತದಲ್ಲಿ ಕೇಂದ್ರ ಸರಕಾರ ಒಂದು ಹೇಳಿದರೆ, ರಾಜ್ಯ ಸರಕಾರ ಇನ್ನೊಂದು ನಿಯಮ ಅನುಸರಿಸುತ್ತದೆ. ಪ್ರಧಾನಿ ಹೇಳುವುದಕ್ಕೂ ಮುನ್ನವೇ ಕೆಲ ರಾಜ್ಯಗಳು ಎರಡನೇ ಹಂತದ ಲಾಕ್‌ಡೌನ್ ಘೋಷಣೆ ಮಾಡಿದ್ದೇ ಅದಕ್ಕೊಂದು ಉದಾಹರಣೆ. ಇನ್ನು ಕರೋನಾ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನಬಹುದು. ಕಾರಣ, ರಾಜ್ಯ ಸರಕಾರಗಳು ಇಟ್ಟಷ್ಟು ಬೇಡಿಕೆ ಹಣವಾಗಲೀ, ಆರೋಗ್ಯ ಕಿಟ್‌ಗಳಾಗಲೀ ಕೇಂದ್ರ ಪೂರೈಸಿಲ್ಲ ಅನ್ನೋ ಅಸಮಾಧಾನ ಇದೆಲ್ಲಕ್ಕೂ ಕಾರಣವಿರಬಹುದು. ಆದ್ದರಿಂದ ಆಯಾಯ ರಾಜ್ಯಗಳ ಸಿಎಂ ಗಳ ಮಾತೇ ಪ್ರಧಾನಿ ಮಾತಿಗಿಂತಲೂ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಸಡಿಲಿಕೆ, ಕಠಿಣ ಇವುಗಳೆಲ್ಲವನ್ನೂ ರಾಜ್ಯದ ಮುಖ್ಯಮಂತ್ರಿಗಳೇ ಹೆಚ್ಚಾಗಿ ನಿರ್ಧಾರ ಮಾಡತೊಡಗಿದ್ದಾರೆ. ಅದರಲ್ಲೂ ಕೇರಳ ರಾಜ್ಯವಂತೂ ತೆಗೆದುಕೊಳ್ಳುತ್ತಿರುವ ನಿರ್ಧಾರ ಕೇಂದ್ರ ಮಾತ್ರವಲ್ಲದೇ ಇನ್ನಿತರ ರಾಜ್ಯಗಳನ್ನೂ ಹುಬ್ಬೇರಿಸುವಂತೆ ಮಾಡುತ್ತಿದೆ. ಕಾರಣ, 2018ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ನಿಫಾ ವೈರಸ್ ನ್ನು ತಡೆಗಟ್ಟುವಲ್ಲಿ ಕಲಿತ ಪಾಠವೇ ಅವರಿಗೆ ಕರೋನಾ ವಿರುದ್ಧದ ಹೋರಾಟಕ್ಕೆ ಅನುಕೂಲವಾಯಿತು. ಕೇಂದ್ರ ಸರಕಾರವನ್ನು ಎಲ್ಲೂ ಹೆಚ್ಚಾಗಿ ಅವಲಂಬಿಸದ ಸರಕಾರವೊಂದರ ನಿಲುವು ಕೂಡಾ ಕೇರಳ ರಾಜ್ಯದಿಂದಲೇ ಕಾಣುವಂತಾಯಿತು.
ಸದ್ಯ ಮೇ 17ರ ವರೆಗೆ ಮೂರನೇ ಹಂತದ ಲಾಕ್‌ಡೌನ್ ಇರಲಿದ್ದು, ಕರೋನಾ ಸೋಂಕು ಸಹಜ ಸ್ಥಿತಿಗೆ ಬರುವವರೆಗೂ ಇದು ಅನಿವಾರ್ಯವೆನಿಸಲಿದೆ. ಆದರೆ ದೇಶದ ಆರ್ಥಿಕ ಸ್ಥಿತಿ ಅಷ್ಟು ಸುಲಭವಾಗಿ ಹಳಿಗೆ ಬರಲು ಸಾಧ್ಯವಾಗದು. ಯಾಕೆಂದರೆ ಭಾರತ ಕರೋನಾ ಪೂರ್ವದಲ್ಲೇ ಆರ್ಥಿಕ ಕುಸಿತದಲ್ಲೇ ಬದುಕುತ್ತಿತ್ತು ಅನ್ನೋದನ್ನ ಯಾರೂ ಮರೆಯುವಂತಿಲ್ಲ.
ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಯು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅಭಿವೃದ್ಧಿಗಾಗಿ ಮೂರು ವಿಭಾಗಗಳನ್ನಾಗಿ ಆಡಳಿತವನ್ನ ವಿಂಗಡಿಸಲಾಗಿದೆ. ಆ ಮೂಲಕ ರಾಜ್ಯ ಹಾಗೂ ಕೇಂದ್ರ ಈ ವಿಭಾಗಗಳ ಅಭಿವೃದ್ಧಿಗೆ ಕಾರ್ಯಯೋಜನೆಯನ್ನ ರೂಪಿಸಬೇಕಿರುತ್ತದೆ. ಈ ಮೂಲಕ ದೇಶದ ಪ್ರತಿಯೊಂದು ಪ್ರದೇಶಗಳ ಅಭಿವೃದ್ಧಿಯೂ ಸರಕಾರದ ಹೊಣೆಗಾರಿಕೆಯಾಗಿರುತ್ತದೆ.
ಇನ್ನು ಎಪ್ರಿಲ್ 24ರ ಪಂಚಾಯತ್ ರಾಜ್ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಚಾಯತ್ ಮುಖ್ಯಸ್ಥರ ಜೊತೆ ಸಂವರಹನ ನಡೆಸುವ ಸಂದರ್ಭದಲ್ಲಿ, ಸ್ವಾವಲಂಬನೆ ಬಗ್ಗೆ ಹೆಚ್ಚು ಒತ್ತು ನೀಡಿದ್ದರು. “ಕರೋನಾ ಸೋಂಕು ನಿವಾರಣೆಗೆ ದೇಶದ ಹೊರಗೆ ಪರಿಹಾರ ಹುಡುಕುವ ಬದಲು ಪ್ರತೀ ಹಳ್ಳಿ, ಜಿಲ್ಲೆ ಸ್ವಾವಲಂಬಿಯಾಬೇಕು. ಜೊತೆಗೆ ರಾಜ್ಯವೂ ಸ್ವಾವಲಂಬಿಯಾಗಬೇಕಿದೆ. ಏಕೆಂದರೆ ಈ ಕರೋನಾ ನಮಗೆ ಸ್ವಾವಲಂಬಿ ಆಗುವುದನ್ನ ಕಲಿಸಿದೆ” ಎಂದಿದ್ದರು.
ಇನ್ನು ದೇಶದಲ್ಲಿ ಕರೋನಾ ಲಾಕ್‌ಡೌನ್ ಘೋಷಣೆ ಆಗುತ್ತಲೇ ವಲಸೆ ಕಾರ್ಮಿಕರ ಸಮಸ್ಯೆ ಅನ್ನೋದು ದೇಶದ ಕಣ್ಣಿಗೆ ಕಾಣುವಂತೆ ಇತ್ತು. ಈ ರೀತಿ ಲಕ್ಷ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನಗರವನ್ನ ಅರಸಿ ಹೋಗಲು ಎರಡು ಕಾರಣಗಳಿವೆ. ಒಂದನೆಯದಾಗಿ ದೇಶದಲ್ಲಿ ಕೃಷಿ ಚಟುವಟಿಕೆಗೆ ಪೂರಕವಾದ ಬೆಂಬಲ ಸಿಗುತ್ತಿಲ್ಲ. ಆದ್ದರಿಂದ ತಮ್ಮದೇ ಊರಲ್ಲಿ ಜಮೀನಿದ್ದರೂ ನಗರದಲ್ಲಿರುವ ಕೈಗಾರಿಕೆಗಳನ್ನ ಅರಸಿ ಹೋಗುವಂತಾಗಿದೆ. ಇನ್ನು ಎರಡನೆಯದಾಗಿ ನಗರದಲ್ಲಿ ಹೆಚ್ಚಿನ ಆದಾಯ ಗಳಿಸಬಹುದು ಅನ್ನೋ ಲೆಕ್ಕಾಚಾರ ಕೂಡಾ ವಲಸೆ ಕಾರ್ಮಿಕರ ಸಂಖ್ಯೆಯನ್ನ ಹೆಚ್ಚಿಸಿದೆ.
ಆದ್ದರಿಂದ ಆಡಳಿತ ವ್ಯವಸ್ಥೆ ಕೃಷಿಕರ ಬೆನ್ನಿಗೆ ನಿಲ್ಲಬೇಕಿದೆ. ರೈತರ ಉತ್ಪಾದನೆಗೆ ತಕ್ಕ ಪ್ರತಿಫಲ ಸಿಕ್ಕರೆ ಯಾವ ರೈತನೂ ನಗರದತ್ತ ಮುಖ ಮಾಡಲಾರ ಅನ್ನೋದಕ್ಕೆ ಚೆನ್ನೈ ಹೊರವಲಯದ ತಿರುವಳ್ಳುರ್ ನಲ್ಲಿ ವಾಸಿಸುತ್ತಿರುವ ರೈತರೇ ಹೆಚ್ಚು ಉದಾಹರಣೆಯಾಗಬಲ್ಲರು. ಇಲ್ಲಿ ತರಕಾರಿ ಬೆಳೆಯುವ ರೈತರು ತಾವೇ ಕೊಯಾಂಬೆಡು ಮಾರುಕಟ್ಟೆಯಲ್ಲಿ ಮಾರಾಟ ನಡೆಸಿ ಲಾಭ ಪಡೆಯುತ್ತಿದ್ದಾರೆ. ಆದರೆ ಇದು ಎರಡನೇ ವರ್ಗವನ್ನ ಅಷ್ಟು ಸುಲಭವಾಗಿ ಆಕರ್ಷಿಸದು. ಕಾರಣ, ನಗರದ ಬಗೆಗೆ ಇರುವ ಒಲವು, ತಂತ್ರಜ್ಞಾನ ಬೆಳವಣಿಗೆ ಇದೂ ಕೂಡಾ ಒಂದು ವರ್ಗವನ್ನ ನಗರದತ್ತ ಮುಖ ಮಾಡುವಂತೆ ಮಾಡುತ್ತದೆ.
ಇದೆಲ್ಲದರ ಹೊರತಾಗಿಯೂ ಮುಂದಿನ ಮಾನ್ಸೂನ್ ಅನ್ನೋದು ಸರಕಾರದ ಪಾಲಿಗೆ ಹೆಚ್ಚಿನ ಸವಾಲಾಗಲಿದೆ. ವಲಸೆ, ದಿನಗೂಲಿ ನೌಕರರ ಹಸಿವು ನೀಗಿಸೋದು ಹೆಚ್ಚು ಪ್ರಯಾಸವಾಗಲಿದೆ. ಜೊತೆಗೆ ಲಾಕ್‌ಡೌನ್, ಕರೋನಾ ಮುಗಿದರೂ ಆರ್ಥಿಕ ಸ್ಥಿತಿ ಸುಧಾರಿಸದು, ಉದ್ಯೋಗಗಳು ಫಲಿಸದು. ಇದರಿಂದ ಸಹಜವಾಗಿಯೇ ಸರಕಾರ ಮುಂದಿನ ಸವಾಲನ್ನು ಸ್ವೀಕರಿಸಲು ಮುಂದಾಗಬೇಕಿದೆ. ಶ್ರೀಮಂತ ವರ್ಗಗಳ ಓಲೈಕೆ ಬದಲಾಗಿ ಒಂದು ಹೊತ್ತಿನ ತುತ್ತಿಗೆ ಪರದಾಡುವವರತ್ತ ಗಮನಕೊಡಬೇಕಿದೆ.