ತಮ್ಮ ಬೆಳೆ ಹಾನಿಯನ್ನು ತಪ್ಪಿಸಲು ಅಣೆಕಟ್ಟಿನ ನೀರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮಹಾರಾಷ್ಟ್ರದ ನಾಗ್ಪುರದ ರೈತರು ಕೆರೆಯಲ್ಲಿ ನಿಂತು ಪ್ರತಿಭಟನೆ ಸಲ್ಲಿಸಿದ್ದಾರೆ.
ಸುಮಾರು 50 ಕೃಷಿಕರು ತಮ್ಮ ಬೇಡಿಕೆಗಾಗಿ ಒತ್ತಡ ಹೇರಲು ಸೋಮವಾರ ಸುಮಾರು ಮೂರು ಗಂಟೆಗಳ ಕಾಲ ಖಿಂಡ್ಸಿ ಸರೋವರದ ನೀರಿನಲ್ಲಿ ನಿಂತಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸರೋವರದ ಜಲಾಶಯ ಸಮೀಪದ ಪ್ರದೇಶದಲ್ಲಿ ಕೃಷಿಗಾಗಿ ರೈತರು ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡಿದ್ದರು, ಆದರೆ ಕಳೆದ ತಿಂಗಳು ಭಾರಿ ಮಳೆಯ ನಂತರ ಈ ಪ್ರದೇಶವು ಪ್ರವಾಹಕ್ಕೆ ಸಿಲುಕಿದೆ.
ಅಕ್ಟೋಬರ್ 30 ರಂದು ರೈತರು ತಮ್ಮ ಬೆಳೆಗಳನ್ನು ಉಳಿಸಲು ಸರೋವರದಿಂದ ನೀರನ್ನು ಬಿಡುಗಡೆ ಮಾಡುವಂತೆ ಉಪವಿಭಾಗಾಧಿಕಾರಿಗೆ ಮನವಿ ಮಾಡಿದ್ದಾರೆ. ಆದರೆ ನೀರು ಬಿಡುಗಡೆಗೊಳಿಸದೆ ಇರುವುದರಿಂದ ನೊಂದ ರೈತರು ಸರೋವರದಲ್ಲಿ ನಿಂತು ತಮ್ಮ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾ ನಿರತ ರೈತರನ್ನು ಸಮಾಧಾನಪಡಿಸಲು ತಹಶೀಲ್ದಾರ್ ಬಾಲಾಸಾಹೇಬ್ ಮಾಸ್ಕೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಮಂಗಳವಾರ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ತಮ್ಮ ಪ್ರತಿನಿಧಿಗಳ ಸಭೆ ಏರ್ಪಡಿಸುವುದಾಗಿ ಬಾಲಾಸಾಹೇಬ್ ಮಾಸ್ಕೆ ರೈತರಿಗೆ ಭರವಸೆ ನೀಡಿದ ಬಳಿಕ ರೈತರು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದ್ದಾರೆ.