ಜೂನ್ 25ರಂದು ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೊಚ್ಚಿಹೋಗಿದ್ದ ದುಬಾಸಿ ಪಾಳ್ಯ ಬಳಿಯ ವೃಷಾಭಾವತಿ ತಡೆ ಗೋಡೆ ಕಳೆದ ಎರಡು ದಿನಗಳ ಮಳೆಯಿಂದಾಗಿ ಮತ್ತಷ್ಟು ಕುಸಿದಿದೆ. ಕಾಂಕ್ರಿಟ್ ಕಾಮಗಾರಿ ಬಹುತೇಕ ಪೂರ್ಣಗೊಂಡ ಸಮಯದಲ್ಲಿ, ಬೆಂಗಳೂರಿನಾದ್ಯಂತ ಸುರಿದ ಭಾರೀ ಮಳೆಯಿಂದಾಗಿ, ತಡೆಗೋಡೆ ಮರು ನಿರ್ಮಾಣ ಕಾರ್ಯ ಮತ್ತಷ್ಟು ತೊಂದರೆ ಅನುಭವಿಸುತ್ತಿದೆ.
ಎರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಸಂಪೂರ್ಣ ಬೆಂಗಳೂರು ನಲುಗಿ ಹೋಗಿತ್ತು. ಇದಕ್ಕೆ ವೃಷಾಭಾವತಿಗೆ ನಿರ್ಮಿಸಲಾಗಿದ್ದ ತಡೆಗೋಡೆ ನಿರ್ಮಾಣ ಕಾರ್ಯ ಕೂಡಾ ಹೊರತಾಗಿಲ್ಲ. ತಡೆಗೋಡೆ ಮರು ನಿರ್ಮಿಸಲು ಕಲ್ಲುಗಳನ್ನು ಪುಡಿಗಟ್ಟಿ ಮಣ್ಣು ಹಾಕಿ ನಿರ್ಮಿಸಲಾಗಿದ್ದ ಒಡ್ಡು ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಹೊಸದಾಗಿ ಹಾಕಿದ್ದ ಕಾಂಕ್ರಿಟ್ ಗೋಡೆ ಕೂಡಾ ನೀರುಪಾಲಾಗಿದೆ.
ಹೊಸದಾಗಿ ನಿರ್ಮಿಸಲಾದ ರಸ್ತೆಯು ಸಂಪೂರ್ಣವಾಗಿ ಕುಸಿಯುವ ಸೂಚನೆಯಿದ್ದು, ಅಲ್ಲಲ್ಲಿ ಬಿರುಕು ಮೂಡಿದೆ. ಬಿರುಕು ಮೂಡಿರುವ ಭಾಗದಿಂದ ಪಕ್ಕದಲ್ಲಿರುವ ಮೆಟ್ರೋ ಕಂಭಗಳ ನಡುವೆ ಕೇವಲ ಎಂಟರಿಂದ ಹತ್ತು ಮೀಟರ್‌ಗಳಷ್ಟು ಮಾತ್ರ ವ್ಯತ್ಯಾಸವಿದ್ದು, ಮೆಟ್ರೋ ಕಂಭಗಳಿಗೂ ಕೂಡಾ ಹಾನಿಯಾಗುವ ಸಂಭವವನ್ನು ಅಲ್ಲಗೆಳೆಯುವಂತಿಲ್ಲ.
ಈ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿದ ಸತೀಶ್ ಎಂಬುವವರು, ತಡೆಗೋಡೆಯನ್ನು ಕಟ್ಟುವ ಕೆಲಸ ಕ್ಷಿಪ್ರಗತಿಯಲ್ಲಿ ನಡೆದರೂ, ಮಳೆ ಎಲ್ಲಾ ಕೆಲಸಗಳಿಗೂ ಅಡ್ಡಿಪಡಿಸುತ್ತಿದೆ ಎಂದು ಹೇಳಿದ್ದಾರೆ. ಗುತ್ತಿಗಾದಾರರಿಗೆ ಸಂಪೂರ್ಣ ನಷ್ಟವಾಗುತ್ತಿದ್ದು, ದಿನಾ ಸುರಿಯುವ ಮಳೆ ತಂದಿಡುವ ಕಸಗಡ್ಡಿಗಳನ್ನು ತೆರವುಗೊಳಿಸುವುದೇ ನಿತ್ಯಕೆಲಸವಾಗಿದೆ. ಅದಕ್ಕಾಗಿಯೇ ಎರಡು ಹಿಟಾಚಿ ಯಂತ್ರಗಳನ್ನು ಇರಿಸಲಾಗಿದೆ, ಕಾಲುವೆಯಲ್ಲಿ ನಿಂತ ಕಸಗಡ್ಡಿಗಳಿಂದಾಗಿ ನೀರು ಸುಸೂತ್ರವಾಗಿ ಹರಿಯದೆ, ಕೊಳಚೆ ನೀರು ರಸ್ತೆಯ ಮೇಲೆ ಬರುತ್ತದೆ, ಅದನ್ನು ಈ ಯಂತ್ರಗಳು ತೆರವುಗೊಳಿಸಿ, ಸರಾಗ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರತೀ ಬಾರಿ ಮಳೆ ಬಂದಾಗಲೂ, ತಡೆಗೋಡೆ ಕುಸಿದು ಉಳಿದಿರುವ ಅವಶೇಷಗಳು ವೃಷಾಭಾವತಿಯ ಒಡಲು ಸೇರಿ, ಮತ್ತೆ ನೀರಿಯ ಹರಿವನ್ನು ತಡೆಯುತ್ತಿದೆ. ಇದನ್ನು ತೆರವುಗೊಳಿಸುವಷ್ಟರಲ್ಲಿ, ಮತ್ತೆ ಸುರಿವ ಮಳೆಯು, ತಡೆಗೋಡೆ ನಿರ್ಮಾಣ ಕಾರ್ಮಿಕರನ್ನು ಹೈರಾಣಾಗಿಸಿದೆ. ಒಟ್ಟಿನಲ್ಲಿ, ಬೆಂಗಳೂರಿನ ಮಳೆಯ ಅಬ್ಬರಕ್ಕೆ, ವೃಷಾಭಾವತಿ ತಡೆಗೋಡೆ ನಿರ್ಮಾಣ ಕಾರ್ಯ ಸುಸೂತ್ರವಾಗಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ತಡೆಗೋಡೆ ನಿರ್ಮಾಣವಾಗುವವರೆಗೂ, ವಾಹನಗಳು ರಸ್ತೆಯ ಒಂದು ಭಾಗದಲ್ಲಿ ಮಾತ್ರ ಚಲಿಸಬೇಕಾಗಿದೆ. ಹಾಗಾಗಿ ಸವಾಲುಗಳನ್ನು ನಿವಾರಿಸಿ ತಡೆಗೋಡೆ ನಿರ್ಮಾಣ ಕಾರ್ಯ ಆದಷ್ಟು ಶೀಘ್ರದಲ್ಲಿ ಮುಗಿಸುವತ್ತ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ.
 
			
 
                                 
                                 
                                
