ಪುಲಿಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಕ್ಕನ ಮಗ ನವೀನ್ ಎಂಬಾತ ಮಾಡಿದ್ದ ಫೇಸ್‌ಬುಕ್ ಪೋಸ್ಟ್ ಭಾರೀ ದೊಂಬಿಗೆ ನಾಂದಿಯಾಯಿತು. ಮಾತಿನಲ್ಲಿ ಪರಿಹರಿಸಬಹುದಾಗಿದ್ದ ಘಟನೆಯನ್ನು ಗಲಭೆಯ ಮಟ್ಟಕ್ಕೆ ತಲುಪಿಸಲಾಗಿದೆ. ಪೊಲೀಸರು ತೆಗೆದುಕೊಂಡ ನಿಧಾನಗತಿಯ ನಿರ್ಧಾರಗಳು ಭಾರೀ ಬೆಲೆ ತೆರುವಂತೆ ಮಾಡಿದೆ. ಶಾಸಕರಿಗೆ ಸೇರಿದ ಕಟ್ಟಡ, ವಾಹನಗಳು ಸೇರಿದಂತೆ ಅಪಾರ ಆಸ್ತಿಗಳು ಬೆಂಕಿಗೆ ಆಹುತಿಯಾಯಿತು. ಆದರೆ ರಾಜಕೀಯ ನಾಯಕರು ಮಾತ್ರ, ಪರ ವಿರೋಧ ಕಚ್ಚಾಟ ಶುರು ಮಾಡಿದ್ದು, ಬೆಂಕಿ ಬಿದ್ದ ಸ್ಥಳದಲ್ಲಿ ಲಾಭ ನಷ್ಟದ ಲೆಕ್ಕಾಚಾರ ಮಾಡಲು ಶುರು ಮಾಡಿದ್ದಾರೆ.
ಸಂಜೆ 6 ಗಂಟೆಗೆ ದೂರು ನೀಡಲು ಬಂದ ಕೂಡಲೇ ದೂರನ್ನು ಸ್ವೀಕರಿಸಿ, ನಾವು ಇದನ್ನು ಸೈಬರ್ ಸೆಲ್‌ಗೆ ರವಾನೆ ಮಾಡಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿ ಕಳುಹಿಸಬಹುದಿತ್ತು. ಆದರೆ ದೂರಿನ ಅರ್ಜಿಯನ್ನು ಸ್ವೀಕರಿಸಲು ಹಿಂದೆ ಮುಂದೆ ನೋಡಿದ್ದು ದೂರುದಾರರನ್ನು ಕೆರಳಿಸಿತ್ತು. ಆ ಬಳಿಕ ಅರ್ಜಿ ಸ್ವೀಕಾರ ಮಾಡಿದ್ದರಾದರೂ ನಮಗೆ ನ್ಯಾಯ ಸಿಗುವುದು ಅನುಮಾನ ಎನ್ನುವ ನಿರ್ಧಾರಕ್ಕೆ ದೂರುದಾರರು ಬಂದಂತೆ ಕಾಣುತ್ತದೆ. ತಮ್ಮ ವಾಟ್ಸಪ್ ಗ್ರೂಪ್ ಹಾಗೂ ಸ್ನೇಹಿತರ ಬಳಗದಲ್ಲಿ ಚರ್ಚೆ ಮಾಡಿದ ಬಳಿಕ ಪೊಲೀಸ್ ಠಾಣೆ ಹಾಗೂ ಶಾಸಕರ ಮನೆ ಬಳಿ ಪ್ರತಿಭಟನೆಗೆ ನಿರ್ಧಾರ ಮಾಡಿಕೊಂಡು ಬಂದಿದ್ದಾರೆ. ಪ್ರತಿಭಟನೆಗೆ ಸೇರಿರುವ ಜನರ ನಡುವೆ ನುಸುಳಿಕೊಂಡ ಕೆಲ ಕಿಡಿಗೇಡಿಗಳು ಏಕಾಏಕಿ ದೊಂಬಿ ಶುರು ಮಾಡಿದ್ದಾರೆ. ಗುಂಪಿನಲ್ಲಿ ಉನ್ಮಾದ ಹೆಚ್ಚುತ್ತದೆಯೇ ಹೊರತು ಇಳಿಯುವುದಿಲ್ಲವಾದ್ದರಿಂದ, ಉನ್ಮಾದ ಹಬ್ಬಿ ಗಲಭೆ ದೊಡ್ಡದಾಗಿದೆ.
ಮೇಲ್ನೋಟಕ್ಕೆ ಫೇಸ್‌ಬುಕ್ ಪೋಸ್ಟ್ ಗಲಭೆಗೆ ಕಾರಣವೆನ್ನಲಾಗುತ್ತಿದ್ದರೂ, ಇದರ ಹಿಂದೆ ರಾಜಕೀಯ ಶಕ್ತಿಗಳು ಕಾರ್ಯಾಚರಿಸಿರುವ ಗುಮಾನಿಯಿದೆ. ಪೋಲೀಸ್ ತನಿಖೆಯಿಂದ ಗಲಭೆಯ ಹಿಂದಿರುವ ನಿಜವಾದ ಕಾರಣ ಇನ್ನೇನು ಹೊರಬರಲಿದೆ.
ಪೊಲೀಸರು ಗಲಭೆಯನ್ನು ತಡೆಯುವ ನಿರ್ಧಾರವನ್ನು ತಡವಾಗಿ ತೆಗೆದುಕೊಂಡರು ಎನ್ನುವುದು ನಿಜ. ಮೇಲಾಧಿಕಾರಿ ಆದೇಶವಿಲ್ಲದೆ ಏನೂ ಮಾಡುವಂತೆಯೂ ಇಲ್ಲದ್ದರಿಂದ ಪೋಲಿಸರು ಆದೇಶಕ್ಕೆ ಕಾದಿದ್ದಾರೆ. ಆದರೆ ಪರಿಸ್ಥಿತಿ ಕೈಮೀರಿ ಹೋಗಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಅಧಿಕಾರ ಸ್ವೀಕಾರ ಮಾಡಿ ಇನ್ನೂ ತಿಂಗಳಾಗಿಲ್ಲ, ಶಾಂತಿಯಿಂದ ಪ್ರಯತ್ನ ಮಾಡಿ ನೋಡಿ ಎನ್ನುವ ಸಂದೇಶ ಸಿಕ್ಕಿರಬಹುದು. ಪರಿಸ್ಥಿತಿ ಕೈಮೀರುತ್ತಿದ್ದಂತೆ, ಯಡಿಯೂರಪ್ಪರಿಗೂ ಗೋಲಿಬಾರ್‌ಗೂ ಅವಿನಭಾವ ಸಂಬಂಧ ಇದೆಯೆಂಬಂತೆ ಕೊನೆಗೂ ಗೋಲಿಬಾರ್ ಮೂಲಕವೇ ಹತೋಟಿಗೆ ತರಬೇಕಾಯಿತು.
ಈಗಾಗಲೇ ಮುಸ್ಲಿಂ ಬಾಹುಳ್ಯವುಳ್ಳ ಏರಿಯಾಗಳಲ್ಲಿ ಪೋಲಿಸರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಇದೆ. ಬೈಕ್ ಸ್ಟಂಟ್, ತ್ರಿಬಲ್ ರೈಡ್, ಬೇಕಾಬಿಟ್ಟಿ ವಾಹನ ಚಲಾವಣೆ ಮೊದಲಾದವು ಪೋಲಿಸರ ಕಣ್ಣೆದುರೇ ನಡೆದರೂ ಅವರು ಯಾವ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ಪೋಲಿಸರ ಮೇಲಿದೆ. ಇದೇ ಕಾರಣಕ್ಕೆ ಅಲ್ಲಿನ ಪಡ್ಡೆ ಹುಡುಗರಿಗೆ ಪೋಲಿಸರೆಂದರೆ ತಾತ್ಸಾರ ಬಂದಿದೆಯೇ ಎಂಬುದನ್ನೂ ಗಮನಿಸಬೇಕು.
ನಷ್ಟ ವಸೂಲಿ ಮಾಡಿದರೆ ಗಲಭೆಗಳು ನಿಯಂತ್ರಣವಾಗಬಲ್ಲದೇ..!?
ಈಗ ಸುಮಾರು 50 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ, ಆ ಹಣವನ್ನು ಗಲಭೆಕೋರರಿಂದಲೇ ವಸೂಲಿ ಮಾಡುವ ಮಾತುಗಳೂ ಕೇಳಿಬರುತ್ತಿವೆ. ಇದು ಕೇವಲ ಮಾತಿಗೆ ಮಾತ್ರ ಸೀಮಿತವಾಗದೆ ಜಾರಿಗೆ ಬರಬೇಕಿದೆ. ಕಳೆದ ವರ್ಷ ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಹೋರಾಟದ ವೇಳೆ ಉತ್ತರ ಪ್ರದೇಶದ 12 ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿತ್ತು. ಪೊಲೀಸ್ ಠಾಣೆ, ವಾಹನಗಳು, ಅಂಗಡಿ ಮುಂಗಟ್ಟಿಗೆ ಪುಂಡರು ಬೆಂಕಿ ಹಚ್ಚಿದ್ದರು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದರು. ಆ ಬಳಿಕ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದವರ 67 ಅಂಗಡಿಗಳು ಜಪ್ತಿ ಮಾಡಲಾಗಿತ್ತು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದರೆ ದಂಗೆಕೋರರೇ ಹೊಣೆ. ದಂಗೆಕೋರರ ಆಸ್ತಿಪಾಸ್ತಿ ಜಪ್ತಿ ಮಾಡಿ ಸಂತ್ರಸ್ತರಿಗೆ ನೀಡಬೇಕು ಎಂದು 2018ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆ ತೀರ್ಪನ್ನೇ ಆಧಾರವಾಗಿ ಇಟ್ಟುಕೊಂಡು ಯೋಗಿ ಆದಿತ್ಯನಾಥ್ ಸರ್ಕಾರ ವಸೂಲಿ ಮಾಡಿತ್ತು. ಕರ್ನಾಟಕದಲ್ಲೂ ಒಮ್ಮೆ ಒಂದು ಪ್ರಕರಣದಲ್ಲಿ ವಸೂಲಿ ಮಾಡಿದರೆ ಮುಂದಿನ ದಿನಗಳಲ್ಲಿ ಕಂಡಕಂಡಲ್ಲಿ ದೊಂಬಿ ತಪ್ಪಬಹುದೇನೋ..
ಬಿಜೆಪಿ ನಾಯಕರು ಏನಂತಾರೆ..?
ಕೇಂದ್ರ ಸಚಿವ ಡಿವಿ ಸದಾನಂದಗೌಡ ಮಾತನಾಡಿ, ಮೇಲ್ನೋಟಕ್ಕೆ ರಾಜಕೀಯ ಪ್ರೇರಿತ ಎನ್ನುವುದು ಗೊತ್ತಾಗಿದೆ. ಗೂಂಡಾವರ್ತನೆ ತೋರಿದವರನ್ನ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ನಿಮ್ಮ ಪಕ್ಷದ ಶಾಸಕನ ಮನೆಗೆ ಬೆಂಕಿ ಇಡುವಷ್ಟು ಬೆಳೆದಿದ್ದಾರೆ. ನಿಮ್ಮ ಓಲೈಕೆ ರಾಜಕಾರಣದಿಂದಲೇ ಹೀಗೆ ಆಗುತ್ತಿದೆ ಎಂದಿದ್ದಾರೆ. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಇಂದೊಂದು ವ್ಯವಸ್ಥಿತ ಷಡ್ಯಂತ್ರ, ಉತ್ತರ ಪ್ರದೇಶದಂತೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಇನ್ನು ಮುಂದೆ ಇಂತಹ ಕೃತ್ಯಗಳು ಅಗದಂತೆ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ ಡಿಸಿಎಂ ಅಶ್ವತ್ಥ ನಾರಾಯಣ. ಕಂದಾಯ ಸಚಿವ ಆರ್. ಅಶೋಕ್, ಬೆಂಗಳೂರನ್ನ ತಲ್ಲಣಗೊಳಿಸಬೇಕು ಎಂಬ ನಿಟ್ಟಿನಲ್ಲಿ ಈ ಘಟನೆ ನಡೆದಿರಬೇಕು. ಸರ್ಕಾರ ಇಂತಹ ಘಟನೆಯನ್ನು ಮಟ್ಟ ಹಾಕುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ರಾಜಕಾರಣಿಗಳು ಏನಂದಿದ್ದಾರೆ..?
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪೊಲೀಸರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ, ನವೀನ್ ಬಿಜೆಪಿ ಹುಡುಗ ಎಂದು ಆತ ಫೇಸ್ಬುಕ್‌ನಲ್ಲಿ ಈ ಮೊದಲು ಹಾಕಿದ್ದ ಪೋಸ್ಟ್‌ಗಳನ್ನ ಸಾರ್ವಜನಿಕ ಪ್ರದರ್ಶನ ಮಾಡಿದ್ದಾರೆ. ಇನ್ನು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ಪೊಲೀಸರ ನಿರ್ಲಕ್ಷ್ಯವೇ ಗಲಾಟೆಗೆ ಕಾರಣ, ನವೀನ್ ಓರ್ವ ಮೋದಿ ಅಭಿಮಾನಿ ಎಂದಿದ್ದಾರೆ. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದು ತಪ್ಪು, ಈ ಘಟನೆ ನಡೆಯಬಾರದಿತ್ತು ಎಂದಿದ್ದಾರೆ. ಮಂಗಳೂರು ಕಾಂಗ್ರೆಸ್ ಯು.ಟಿ ಖಾದರ್ ಮಾತನಾಡಿ, ಸಮಾಜದಲ್ಲಿ ಭಯ ಹುಟ್ಟಿಸುವ ಯಾವುದೇ ಸಂಘಟನೆಯನ್ನು ರಾಜ್ಯ ಸರ್ಕಾರ ನಿಷೇಧ ಮಾಡುವುದು ಒಳಿತು ಎಂದಿದ್ದಾರೆ.
ಪೋಸ್ಟ್ ಮಾಡಿರುವ ನವೀನನದ್ದು ತಪ್ಪಿಲ್ಲವೇ..?
ಫೇಸ್ಬುಕ್‌ನಲ್ಲಿ ಪ್ರವಾದಿ ಮಹಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುವ ನವೀನ್ ಕೂಡ ಧಾರ್ಮಿಕ ನಂಬಿಕೆಗೆ ಚ್ಯುತಿ ಹಾಗೂ ಸಮಾಜದ ಸ್ವಾಸ್ತ್ಯ ಹಾಳಾಗಲು ಕಾರಣಕರ್ತನಾಗಿದ್ದಾನೆ. ಆತನ ಫೇಸ್ಬುಕ್ ಖಾತೆ ಹ್ಯಾಕ್ ಆಗಿತ್ತು ಎಂದು ಹೇಳಿಕೊಂಡಿದ್ದಾನೆ. ಆದರೆ ಬಿಬಿಎಂಪಿ ಚುನಾವಣೆಗೆ ನಿಲ್ಲುವ ವಿಚಾರವಾಗಿ ಘರ್ಷಣೆ ಶುರುವಾಗಿತ್ತು ಎನ್ನುವ ಮಾಹಿತಿಗಳೂ ಹೊರಬರುತ್ತಿವೆ. ಒಂದು ವೇಳೆ ಆತನೇ ಉದ್ದೇಶಪೂರ್ವಕವಾಗಿ ಪೋಸ್ಟ್ ಮಾಡಿದ್ದ ಎನ್ನುವುದು ಸಾಬೀತಾದರೆ ಈ ಗಲಭೆಕೋರರಿಗಿಂತಲೂ ಕಠಿಣ ಶಿಕ್ಷೆಯನ್ನೇ ನೀಡುವುದು ಸೂಕ್ತ. ಮುಂದೆಯಾದರೂ ಸಾಮಾಜಿಕ ಜಾಲತಾಣಗಳಲ್ಲಿ ಮನಸೋ ಇಚ್ಛೆ ಧ್ವೇಶ ಸಂದೇಶ ಹರಿಯಬಿಡುವುದು ತಪ್ಪಲಿದೆ.