ಕರೋನಾ ಕಾರಣಕ್ಕೆ ಇಡೀ ಭಾರತದಲ್ಲಿ ಮೂರು ಹಂತಗಳಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಕಳೆದ 48 ದಿನಗಳನ್ನು ಭಾರತ ಲಾಕ್‌ಡೌನ್ ನಲ್ಲೇ ಕಳೆದಿದೆ. ಆದರೆ, ಇಂತಹ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಕಥೆ ಏನು? ಭಾರತದ ನಾನಾ ಭಾಗದಲ್ಲಿ ನಾನಾ ರಾಜ್ಯದ ಜನ ಕೆಲಸ ಮಾಡುತ್ತಿದ್ದಾರೆ. ಇವರ ಬದುಕು ಹೇಗೆ? ಇವರನ್ನು ಮನೆಗೆ ತಲುಪಿಸುವುದು ಹೇಗೆ? ಎಂಬ ಯಾವ ಪ್ರಶ್ನೆಗೂ ಉತ್ತರ ಇಲ್ಲದಂತೆ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು.
ಒಂದು ಅಂದಾಜಿನ ಪ್ರಕಾರ ಭಾರತದ ಪ್ರತಿಯೊಂದು ರಾಜ್ಯದಲ್ಲೂ ಕನಿಷ್ಟ 10 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರಿದ್ದಾರೆ, ಜೀವನೋಪಾಯಕ್ಕಾಗಿ ತಮ್ಮ ರಾಜ್ಯ ಬಿಟ್ಟು ಬೇರೆ ರಾಜ್ಯಗಳಿಗೆ ಪ್ರಯಾಣಿಸುವ ಕಾರ್ಮಿಕರು ಅಲ್ಲಿನ ಹತ್ತಾರು ಸ್ಲಂಗಳಲ್ಲಿ ಹರಡಿಕೊಂಡಿದ್ದಾರೆ ಎನ್ನುತ್ತದೆ ಅಂಕಿಸಂಖ್ಯೆ.
ಇಂತಹ ಪರಿಸ್ಥಿತಿಯಲ್ಲಿ ಅದೊಂದು ದಿನ ರಾತ್ರಿ ಟಿವಿ ಪರದೆಯಲ್ಲಿ ಕಾಣಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪೂರ್ವ ಸಿದ್ದತೆ ಇಲ್ಲದೆ, ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿಕೊಡುವ ಕನಿಷ್ಟ ಜವಾಬ್ದಾರಿಯೂ ವಹಿಸದೆ ಏಕಾಏಕಿ ರಾತ್ರೋರಾತ್ರಿ ಲಾಕ್ಡೌನ್ ಘೋಷಿಸಿಬಿಟ್ಟರು. ಮರು ದಿನದಿಂದ ಈ ಕಾರ್ಮಿಕ ವರ್ಗದ ಜನರಿಗೆ ಕೆಲಸ ಇಲ್ಲ, ಕೂಲಿ ಇಲ್ಲ, ಅತ್ತ ಊಟವೂ ಇಲ್ಲ. ಹೀಗೆ ಇಲ್ಲಗಳ ನಡುವೆಯೇ ಕಳೆದು ಹೋಯ್ತು ಬರೋಬ್ಬರಿ 45 ದಿನ.
ಕಳೆದ 45 ದಿನಗಳಲ್ಲಿ ಮಹಾ ನಗರಗಳಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರು ತಿನ್ನಲು ಅನ್ನವೂ ಇಲ್ಲದ ಸಂಕಷ್ಟದ ನಡುವೆ ದಿನದೂಡಿದ್ದಾರೆ. ಹಲವಾರು ಕಾರ್ಮಿಕರು ಬಸ್ಸು ರೈಲು ವ್ಯವಸ್ಥೆ ಇಲ್ಲದೆ ತಮ್ಮ ಊರಿಗೆ ನೂರಾರು ಕಿಮೀ ನಡೆದೇ ತೆರಳಲು ಮುಂದಾಗಿದ್ದಾರೆ. ಈ ವೇಳೆ ಹಲವಾರು ಮಾರ್ಗ ಮಧ್ಯೆಯೇ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದ ಪ್ರಕರಣಗಳೂ ಸಾಕಷ್ಟು ವರದಿಯಾಗಿವೆ. ಇನ್ನೂ ದೆಹಲಿಯಿಂದ ಸಾಗರೋಪಾದಿಯಲ್ಲಿ ಜನ ಕಾಲ್ನಡಿಗೆಯಲ್ಲೇ ಬಿಹಾರ ಮತ್ತು ಉತ್ತರಪ್ರದೇಶಕ್ಕೆ ತೆರಳಿದ್ದ ದೃಶ್ಯಗಳನ್ನು ಭಾಗಶಃ ಭಾರತೀಯರು ಮರೆತಿರಲಿಕ್ಕಿಲ್ಲ.
ಆದರೆ, ಮೇ 04 ಸೋಮವಾರದಿಂದ ಲಾಕ್‌ಡೌನ್ ಅನ್ನು ಸಡಿಲಿಸಲಾಗಿದೆ. ಅಲ್ಲದೆ, ಬೇರೆ ಬೇರೆ ರಾಜ್ಯದಲ್ಲಿ ಸಿಲುಕಿರುವ ಜನರನ್ನು ಅವರವರ ಊರಿಗೆ ಹೋಗಲು ಬಸ್ಸು ಮತ್ತು ರೈಲಿನ ವ್ಯವಸ್ಥೆ ಮಾಡುವಂತೆ ಸ್ವತಃ ಕೇಂದ್ರ ಸರ್ಕಾರ ಆದೇಶಿಸಿದೆ. ಈ ನಡುವೆ ಕರ್ನಾಟಕದ ಸಿಎಂ ಬಿ.ಎಸ್. ಯಡಿಯೂರಪ್ಪ ಅನ್ಯ ರಾಜ್ಯದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಿಗೆ ಸ್ವಾಗತ ಎಂದು ಕರೆಯುತ್ತಿದ್ದಾರೆ. ಆದರೆ, ಅಸಲಿ ಕಥೆ ತೀರಾ ಅಮಾನವೀಯವಾಗಿದೆ. ಸ್ವಂತ ನಾಡಿನವರನ್ನೇ ಬಿಎಸ್‌ವೈ ಸರ್ಕಾರ ಅಮಾನವೀಯವಾಗಿ ನಡೆಸಿಕೊಂಡ ಕಥೆ ಇಲ್ಲಿದೆ.
ಗುಜರಾತ್-ಗೋವಾದಿಂದ ಕರ್ನಾಟಕಕ್ಕೆ ಬಂದವರ ವ್ಯಥೆ ಇದು!
ಕರೋನಾ ಲಾಕ್ಡೌನ್ನಿಂದಾಗಿ ಕರ್ನಾಟಕ ಮೂಲದ ವಲಸೆ ಕಾರ್ಮಿಕರು ಗುಜರಾತಿನಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ, ಲಾಕ್ಡೌನ್ ಸಡಿಲಿಕೆ ನಂತರ ಇವರನ್ನು ಕರ್ನಾಟಕಕ್ಕೆ ಕಳುಹಿಸಕೊಡಲಾಗಿತ್ತಾದರೂ, ಇವರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡದೆ ರಾಜ್ಯ ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿದೆ. ಈ ವಲಸೆ ಕಾರ್ಮಿಕರನ್ನು ಆಹಾರ-ನೀರಿಲ್ಲದೆ ಸುಮಾರು 72 ಗಂಟೆಗಳ ಕಾಲ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕಾಯುವಂತೆ ಮಾಡಲಾಗಿದೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಉನ್ನತ ನಾಯಕರು ಮಧ್ಯಪ್ರವೇಶಿಸಿದ ನಂತರ ಅಂತಿಮವಾಗಿ ಶುಕ್ರವಾರ ಮುಂಜಾನೆ 2 ಗಂಟೆಗೆ ಈ ವಲಸೆ ಕಾರ್ಮಿಕರನ್ನು ಕರ್ನಾಟಕ ಪ್ರವೇಶಿಸಲು ಅವಕಾಶ ನೀಡಲಾಯಿತು. ಆದರೆ, ಪೊಲೀಸರು ಮತ್ತು ಅಧಿಕಾರಿಗಳಿಂದ ವಲಸೆ ಕಾರ್ಮಿಕರು ಅನುಭವಿಸಿರುವ ಕಿರುಕುಳವು ಇದೀಗ ರಾಜ್ಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.
ಕಳೆದ 6 ವಾರಗಳಿಂದ ದೇಶದಲ್ಲಿ ಸತತವಾಗಿ ಲಾಕ್ಡೌನ್ ಘೋಷಿಸಲಾಗಿತ್ತು. ಹೀಗಾಗಿ ಗುಜರಾತ್ನ ಅಹಮದಾಬಾದ್ ನಗರದಲ್ಲಿ ಸಿಲುಕಿದ್ದ ಸುಮಾರು 30 ಜನ ಬಾಗಲಕೋಟೆಗೆ ಈ ಹಿಂದೆಯೇ ಬಂದಿದ್ದರು. ಇವರನ್ನು 20 ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಮೇ-04ರ ನಂತರ ಲಾಕ್ಡೌನ್ ಸಡಿಲಿಸಿದ ನಂತರ ಗುಜರಾತ್ ಆಡಳಿತ ಉಳಿದಿದ್ದ ವಲಸೆ ಕಾರ್ಮಿಕರನ್ನು ಕರ್ನಾಟಕಕ್ಕೆ ವಾಪಸ್ ಕಳುಹಿಸಲು ಮುಂದಾಗಿತ್ತು.
ಆದರೆ, ಹೀಗೆ ಗುಜರಾತ್ನಿಂದ ರಸ್ತೆ ಮಾರ್ಗವಾಗಿ ಹೊರಟ ಕರ್ನಾಟಕದ ವಲಸೆ ಕಾರ್ಮಿಕರನ್ನು ರಾಜ್ಯದ ನಿಪ್ಪಾಣಿ ಗಡಿಯ ಬಳಿ ತಡೆಹಿಡಿಯಲಾಗಿತ್ತು. ಕಾರ್ಮಿಕರನ್ನು ಬಲವಂತವಾಗಿ ತಡೆದಿದ್ದ ಪೊಲೀಸರು ಅವರು ರಾಜ್ಯವನ್ನು ಪ್ರವೇಶಿಸದಂತೆ ತಾಕೀತು ಮಾಡಿದ್ದಾರೆ.
ಗುಜರಾತ್ ಸರ್ಕಾರ ಹೊರಡಿಸಿದ ಎಲ್ಲಾ ದಾಖಲೆಗಳನ್ನು ತೋರಿಸಿದ ನಂತರವೂ ಯಾವುದೇ ಕಾರಣಗಳನ್ನು ನೀಡದೆ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ. ಇದಲ್ಲದೆ, ಕಾರ್ಮಿಕರು ಕರ್ನಾಟಕವನ್ನು ಪ್ರವೇಶಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲೂ ಮುಂದಾಗಿದ್ದಾರೆ. ಆದರೆ, ಈ ಅರ್ಜಿಯನ್ನೂ ಯಾವುದೇ ಕಾರಣ ನೀಡದೆ ತಡೆಯಲಾಗಿದೆ.
ಹೀಗೆ ಕರ್ನಾಟಕದ ಗಡಿಯಲ್ಲಿ ಸಿಕ್ಕುಬಿದ್ದ ಕಾರ್ಮಿಕರೆಲ್ಲರೂ “ನಮ್ಮದೇ ಪೊಲೀಸರು ನಮ್ಮನ್ನು ಅಪರಾಧಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ವಿದೇಶಿಯರನ್ನು ಅಥವಾ ನಿರಾಶ್ರಿತರನ್ನು ನಡೆಸಿಕೊಳ್ಳುವಂತೆ ನಡೆಸಿಕೊಳ್ಳುತ್ತಿದ್ದಾರೆ” ಎಂದು ಅಲವತ್ತುಕೊಂಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.
ಕೊನೆಗೆ ವಿಚಾರ ತಿಳಿದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕರಣದ ಮಧ್ಯ ಪ್ರವೇಶಿಸಿದ ನಂತರ ಪೊಲೀಸರು ಮತ್ತು ಅಧಿಕಾರಿಗಳು ಅಂತಿಮವಾಗಿ ರಾತ್ರಿ 2 ಗಂಟೆಗೆ ಕನ್ನಡ ಕಾರ್ಮಿಕರು ರಾಜ್ಯ ಪ್ರವೇಶಿಸಲು ಅನುಮತಿ ನೀಡಿದ್ದಾರೆ.
ಇದು ಗುಜರಾತ್‌ನಿಂದ ಆಗಮಿಸಿದವರ ಕಥೆಯಾದರೆ, ನೆರೆಯ ಗೋವಾದಿಂದ ಆಗಮಿಸಿದ್ದ ನೂರಾರು ಕನ್ನಡಿಗ ವಲಸೆ ಕಾರ್ಮಿಕರನ್ನೂ ಸಹ ಹೀಗೆ ನಡೆಸಿಕೊಳ್ಳಲಾಗುತ್ತಿದೆ. ಗೋವಾದಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಸಾವಿರಾರು ಜನರನ್ನು ಲಾಕ್ಡೌನ್ ಸಡಿಲಿಕೆ ನಂತರ ಸೋಮವಾರ ಮನೆಗೆ ಮರಳಲು ಅವಕಾಶ ನೀಡಲಾಯಿತು. ಆದರೆ, ಹೀಗೆ ಕರ್ನಾಟಕಕ್ಕೆ ಆಗಮಿಸಿದ್ದ ಇವರನ್ನು ಗಡಿಯಲ್ಲಿರುವ ಪೊಲೆಮ್ ಭಾಗದಲ್ಲಿ ತಡೆದು ನಿಲ್ಲಿಸಲಾಯಿತು. ಅಲ್ಲದೆ, ಮತ್ತೆ ಗೋವಾಗೆ ಹಿಂದಿರುಗುವಂತೆ ತಾಕೀತು ಮಾಡಲಾಗಿದೆ.
ಕರ್ನಾಟಕ ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವಾ ಸರ್ಕಾರದ ಮೇಲೆ ಒತ್ತಡ ಹೇರಿದ ನಂತರ, ಕಾರ್ಮಿಕ ಸಚಿವ ಎ.ಶಿವರಾಮ್ ಹೆಬ್ಬಾರ್ ಜಾಗೃತರಾದರು. ಆ ನಂತರ ಕನ್ನಡ ಕಾರ್ಮಿಕರನ್ನು ರಾಜ್ಯಕ್ಕೆ ಪ್ರವೇಶಿಸಲು ಅವಕಾಶ ನೀಡುವಂತೆ ಪೊಲೀಸರಿಗೆ ಆದೇಶಿಸಿದರು.
ಕಳೆದ ಎರಡು ದಿನಗಳಿಂದ ಇಂತಹ ಸಾಕಷ್ಟು ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಆದರೆ, ಮತ್ತೊಂದು ಕಡೆ ಏನೂ ಗೊತ್ತಿಲ್ಲ ಎಂಬಂತೆ ಕರ್ನಾಟಕ ಸರ್ಕಾರ ಮಾತ್ರ ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಮನೆಗೆ ಮರಳುವಂತೆ ಸ್ವಾಗತಿಸುತ್ತಲೇ ಇದೆ.
ಇದೇ ವೇಳೆ ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿರುವ ನಿವೇದಿತ್ ಆಳ್ವಾ, “ಜನ ಇನ್ನೂ ಸಮಸ್ಯೆಯನ್ನು ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಇದು ನಿಜಕ್ಕೂ ಅಮಾನವೀಯ. ನಮ್ಮ ಜನರು ಮನೆಗೆ ಮರಳದಂತೆ ನಾವೇ ತಡೆ ಹಿಡಿದರೆ ಹೇಗೆ? ” ಎಂದು ಪ್ರಶ್ನೆಯನ್ನು ಎತ್ತಿದ್ದಾರೆ.
ಯಾವುದೇ ದೇಶದಲ್ಲಿ ನಿರಾಶ್ರಿತರನ್ನೂ ಸಹ ಕನಿಷ್ಟ ಮನುಷ್ಯರಂತೆ ನಡೆಸಿಕೊಳ್ಳುತ್ತಾರೆ. ಊಟ-ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಾರೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ತನ್ನದೇ ಪ್ರಜೆಗಳನ್ನು, ವಲಸೆ ಕಾರ್ಮಿಕರನ್ನು ಪಶುಗಳಂತೆ ನಡೆಸಿಕೊಂಡಿದೆ. ಸತತ 72 ಗಂಟೆಗಳ ಕಾಲ ಅನ್ನ ನೀರಿಲ್ಲದೆ ಗೋವಾ ಮಹಾರಾಷ್ಟ್ರ ಗಡಿಯಲ್ಲಿ ಕಾಯಿಸಿರುವುದು ಅಮಾನವೀಯ.
ಸರ್ಕಾರದ ಇಂತಹ ಅಮಾನವೀಯ ವರ್ತನೆಗೆ ಏನು ಹೇಳುವುದು? ಇನ್ನೂ ಒಂದಡೆ ರಾಜ್ಯದ ಕಾರ್ಮಿಕರು ಕರ್ನಾಟಕಕ್ಕೆ ವಾಪಸ್ ಬನ್ನಿ ಎನ್ನುವ ಇದೇ ಸರ್ಕಾರ, ಬಂದವರನ್ನು ಒಳಬಿಟ್ಟುಕೊಳ್ಳುವುದಿಲ್ಲ ಎಂದರೆ ಈ ಇಬ್ಬಗೆ ನೀತಿಗೆ ಯಾರನ್ನು ದೂರಬೇಕು? ಈ ಕುರಿತು ಸಿಎಂ ಯಡಿಯೂರಪ್ಪ ಏನು ಹೇಳುತ್ತಾರೆ? ಕಾದು ನೋಡಬೇಕು. ಆದರೆ, ಕಾರ್ಮಿಕರ ಪರಿಸ್ಥಿತಿ ಮಾತ್ರ ಇದೀಗ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿರುವುದು ಮಾತ್ರ ವಿಪರ್ಯಾಸ.