ನೂತನ ಬಿಬಿಎಂಪಿ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ. ಈವರೆಗೆ ಆಯುಕ್ತರಾಗಿದ್ದ ಅನಿಲ್ ಕುಮಾರ್ ಬಿ ಹೆಚ್ ಅವರನ್ನು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕರೋನಾ ಸೋಂಕು ತಡೆಗಟ್ಟುವಲ್ಲಿ ಹಾಗೂ ಲಾಕ್‌ಡೌನ್ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದ ಕಾರಣಕ್ಕೆ ಖುದ್ದು ಸಿಎಂ ಅನಿಲ್ ಕುಮಾರ್ ಮೇಲೆ ಗರಂ ಆಗಿದ್ದಾರೆ ಎನ್ನಲಾಗಿದೆ. ಶುಕ್ರವಾರ ನಡೆದ ಬೆಂಗಳೂರಿನ 8 ವಲಯದ ಉಸ್ತುವಾರಿ ಸಭೆಯಿಂದ ಕೂಡ ಅನಿಲ್ ಕುಮಾರ್ ಅವರನ್ನು ದೂರ ಇರಿಸಲಾಗಿತ್ತು.
ಹೀಗಾಗಿ, ಕರೋನಾ ಸೋಂಕು ತಡೆಗಟ್ಟುಗಟ್ಟುವಲ್ಲಿ ಆಯುಕ್ತರು ಸೋತಿದ್ದಾರೆ ಎನ್ನುವ ಕಾರಣಕ್ಕೆ ಈಗ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರ ಜಾಗಕ್ಕೆ ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿ ಸೇವೆ ಸಲ್ಲಿಸಿ ಅನುಭವ ಇರುವಂತಹ ಮಂಜುನಾಥ್ ಪ್ರಸಾದ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಹಿಂದೆ ಬಿಬಿಎಂಪಿ ಕಮಿಷನರ್ ಆಗಿದ್ದ ಸಂದರ್ಭದಲ್ಲಿ 2018ರ ವಿಧಾನಸಭಾ ಚುನಾವಣೆಗೂ ಮುನ್ನ ಅವರನ್ನು ದಿಢೀರೆಂದು ವರ್ಗಾವಣೆ ಮಾಡಲಾಗಿತ್ತು. ಅವರ ಜಾಗಕ್ಕೆ ಎಂ ಮಹೇಶ್ವರ್ ರಾವ್ ಅವರನ್ನು ಕರೆದು ತರಲಾಗಿತ್ತು. ಚುನಾವಣೆ ಮುಗಿದ ವಾರದೊಳಗೆ ಮಂಜುನಾಥ್ ಪ್ರಸಾದ್ ಅವರನ್ನು ಮತ್ತೆ ಬಿಬಿಎಂಪಿ ಆಯುಕ್ತರಾಗಿ ನೇಮಕ ಮಾಡಲಾಗಿತ್ತು.
ಪ್ರಸ್ತುತ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ಮಂಜುನಾಥ್ ಪ್ರಸಾದ್ ಅವರಿಗೆ ಕರೋನಾ ನಿಯಂತ್ರಣದ ಮಹತ್ತರದ ಜವಾಬ್ದಾರಿಯನ್ನು ವಹಿಸಿ ಮತ್ತೆ ಬಿಬಿಎಂಪಿ ಆಯುಕ್ತರಾಗಿ ನೇಮಿಸಲಾಗಿದೆ. ಇದರೊಂದಿಗೆ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದಾರೆ. ಇನ್ನೂ ಹೆಚ್ಚಿನ ಜವಾಬ್ದಾರಿಯಾಗಿ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗದ ಮುಖ್ಯ ಕಾರ್ಯದರ್ಶಿಯಾಗಿಯೂ ಮಂಜುನಾಥ್ ಪ್ರಸಾದ್ ಅವರು ನೇಮಕಗೊಂಡಿದ್ದಾರೆ.
ಇವರ ಅವಧಿಯಲ್ಲಿ ಬೆಂಗಳೂರಿನಲ್ಲಿ ಕರೋನಾ ಎಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.