ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯ ನಾಗ್ಪುರ ಪದವೀಧರ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಕಾಂಗ್ರೆಸ್ ವಿರುದ್ಧ ಸೋತಿರುವುದು ಬಿಜೆಪಿಗೆ ದೊಡ್ಡ ಆಘಾತವನ್ನು ನೀಡಿದೆ. ಐದು ಸುತ್ತುಗಳ ಮತ ಎಣಿಕೆ ಪೂರ್ಣಗೊಂಡ ನಂತರ ತಡರಾತ್ರಿ ಕಾಂಗ್ರೆಸ್ ಗೆಲುವೆಂದು ಘೋಷಿಸಲಾಯಿತು.
ಒಟ್ಟು 1.33 ಲಕ್ಷ ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ವಂಜಾರಿ 55,947 ಮತಗಳನ್ನು ಗಳಿಸಿದರು, ಅವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಸಂದೀಪ್ ಜೋಶಿ ಅವರನ್ನು ಸುಮಾರು 15,000 ಮತಗಳಿಂದ ಸೋಲಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಾಗ್ಪುರ ಮಾಜಿ ಮೇಯರ್ ಆಗಿರುವ ಸಂದೀಪ್ ಜೋಶಿ ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರ ಆಪ್ತರಾಗಿದ್ದಾರೆ. ಅಲ್ಲದೆ ನಾಗಪುರ ಬಿಜೆಪಿಯ ಭದ್ರಕೋಟೆಯಾಗಿತ್ತು. ಹಾಗಾಗಿ ಇಲ್ಲಿನ ಸೋಲು ಬಿಜೆಪಿಗೆ ಮರ್ಮಾಘಾತವಾಗಿದೆ.
ಈ ಕ್ಷೇತ್ರವು ಬಿಜೆಪಿಯ ಎರಡು ಅಗ್ರ ನಾಯಕರಾದ ನಿತಿನ್ ಗಡ್ಕರಿ ಹಾಗೂ ದೇವೇಂದ್ರ ಫಡ್ನವೀಸ್ ಅವರ ತವರು, ಮಾತ್ರವಲ್ಲದೆ ಈ ಇಬ್ಬರು ನಾಯಕರು ಇಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರವನ್ನೂ ನಡೆಸಿದ್ದರು. ಅದಾಗ್ಯೂ ಫಲಿತಾಂಶ ಬಿಜೆಪಿಗೆ ನಕರಾತ್ಮಕವಾಗಿ ಬಂದಿರುವುದು ಬಿಜೆಪಿಗೆ ಮುಜುಗರವನ್ನು ತಂದಿಟ್ಟಿದೆ.