ಕರೋನಾ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಂಗಳವಾರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಹಲವಾರು ವಿಚಾರಗಳ ಬಗ್ಗೆ ಮಾತನಾಡಿರುವ ಹೆಚ್.ಡಿ ದೇವೇಗೌಡ, ಮೋದಿಯನ್ನು ಬೆಂಬಲಿಸೋಣ ಎಂದಿದ್ದಾರೆ. ಆದರೆ, ಭೂ ಸುಧಾರಣಾ ಕಾಯ್ದೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿಗೂ ಹೆಚ್.ಡಿ ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಕೈಗಾರಿಕಾ ನೀತಿ, ಮತ್ತಿತರ ತಿದ್ದುಪಡಿಗೂ ಕಿಡಿಕಾರಿದ್ದಾರೆ. ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನ ಜಾರಿ ತಂದಿದ್ದಾರೆ. ರೈತರನ್ನ, ಕಾರ್ಮಿಕರನ್ನ ಬೀದಿ ಪಾಲು ಮಾಡಿದ್ದಾರೆ. ಈಗಾಗಲೇ ಮೂರು ಬಾರಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ ಎಂದಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಸುಗ್ರೀವಾಜ್ಞೆಗಳನ್ನ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961, ಸೆಕ್ಷನ್ 79A,, 79B, ಹಾಗೂ 79C ರದ್ದು ಮಾಡಿರುವುದು ರೈತ ವಿರೋಧಿ ನಡೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯೂ ಮಾರಕವಾಗಿದೆ. ಕೈಗಾರಿಕೆ ವಿವಾದ ಮತ್ತಿತರ ನಿಯಮಗಳ ತಿದ್ದುಪಡಿ ಮಾಡಲಾಗಿದೆ. ಸರ್ಕಾರ ರೈತ ವಿರೋಧಿ ತೀರ್ಮಾನ ತೆಗೆದುಕೊಂಡಿದೆ. ಕರೋನಾ ಕಾರಣ ಈ ಬಗ್ಗೆ ನಾನು ಮಾತನಾಡಲು ಆಗಿಲ್ಲ. ಸರ್ಕಾರದ ನಿಯಮ ಉಲ್ಲಂಘಿಸಬಾರದು ಎಂದು ಹಿಂದೆ ಸರಿದಿದ್ದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆ ಪರಿಣಾಮ ಏನಾಗಲಿದೆ ಎಂಬುದರ ಬಗ್ಗೆ ಸರ್ಕಾರ ಮಾಹಿತಿ ನೀಡದೆ ಕಾಯ್ದೆ ಜಾರಿ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲ ಆಗಲಿದೆ. ಸಣ್ಣ ಸಣ್ಣ ರೈತರಿಗೆ ತೊಂದರೆ ಆಗುತ್ತದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲೂ ಮಾಫಿಯಾ ಶುರುವಾಗಲಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲ ಮಾಡಿಕೊಡುತ್ತದೆ. ಇದು ಅತ್ಯಂತ ಕೆಟ್ಟ ತಿದ್ದುಪಡಿ ಕಾಯ್ದೆ, ಯಾರೋ ಕೈಗಾರಿಕೋದ್ಯಮಿ ಬಂದು ಭೂಮಿ ಪಡೆಯುತ್ತಾನೆ. ಕೈಗಾರಿಕೆಯ ಉದ್ದೇಶಕ್ಕಾಗಿ ಪಡೆದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. 7 ವರ್ಷಗಳ ನಂತರ ಅದೇ ಭೂಮಿಯನ್ನ ಪರಾಭಾರೆ ಮಾಡಬಹುದು. ಆದರೆ 7 ವರ್ಷಗಳ ನಂತರ ಅಂದಿನ ಬೆಲೆಗೆ ಮಾರಾಟ ಮಾಡುತ್ತಾನೆ. ಬಹುಮತ ಇದೆ ಎನ್ನುವ ಅಹಂನಿಂದ ಇಂತಹ ಕಾನೂನು ತರುತ್ತಿದ್ದಾರೆ ಎಂದು ಹೆಚ್.ಡಿ ದೇವೇಗೌಡ ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೆ ಇವರಿಗೆ ವೇದವಾಕ್ಯ ಆಗಿದೆ. ಯಾವುದೇ ವಿರೋಧ ಪಕ್ಷಗಳನ್ನು ವಿಶ್ವಾಸ ಪಡೆಯುತ್ತಿಲ್ಲ. ನಾನು ರಾಜ್ಯಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ದಲ್ಲಾಳಿಗೆ ಪೂರ್ಣ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ನಾನು ಇದನ್ನು ಖಡತುಂಡವಾಗಿ ವಿರೋಧಿಸುತ್ತೇನೆ. ಇದನ್ನ ವಿರೋಧಿಸುವ ಪಕ್ಷಗಳು ತಮ್ಮ ಅನಿಸಿಕೆ ಹೇಳಿದ್ದಾರೆ. ಕಾಂಗ್ರೆಸ್, ಸಿಪಿಐಎಂ ಸೇರಿ ಅನೇಕರು ವಿರೋಧಿಸಿದ್ದಾರೆ. ರಾಜ್ಯಾದ್ಯಂತ ಹೋರಾಟ ಮಾಡಬೇಕೆಂದರೆ ಕರೋನಾ ವ್ಯಾಪಿಸುತ್ತಿದೆ. ರಾಜ್ಯದಲ್ಲಿ ಹದಿನೈದು ದಿನಗಳಲ್ಲಿ ಲಕ್ಷಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ದೇಶದ ವಿಚಾರ ಬಂದರೆ, ಮೋದಿ ಹೇಳಿದ್ದು ಸರಿ ಅವರನ್ನ ಬೆಂಬಲಿಸೋಣ. ಆದರೆ ಈ ರೀತಿಯ ವಿಚಾರದಲ್ಲಿ ಅಲ್ಲ ಎಂದಿದ್ದಾರೆ.
ನಮ್ಮದು ಒಂದು ಪ್ರಾದೇಶಿಕ ಪಕ್ಷ. ಈ ವಿಚಾರವನ್ನು ನಾವು ಕೊನೆ ಹಂತದವರೆಗೂ ತೆಗೆದುಕೊಂಡು ಹೋಗ್ತೇನೆ. ಆಗಸ್ಟ್ ಒಂದರಂದು ಜೆಪಿ ಭವನದ ನೆಲಮಹಡಿಯಲ್ಲಿ ಪ್ರತಿ ತಾಲೂಕಿನ ಒಬ್ಬೊಬ್ಬ ರೈತರ ಜೊತೆ ಸಭೆ ಮಾಡುತ್ತೇವೆ. ಪ್ರತಿ ವಿಧಾನಸಭಾ ಕ್ಷೇತ್ರದ ರೈತರ ಜೊತೆ ಸಭೆ ಆಯೋಜಿಸಲಾಗಿದೆ. ನಮ್ಮ ಮುಂದಿನ ಹೋರಾಟಕ್ಕೆ ರೂಪುರೇಷೆ ರೂಪಿಸುತ್ತೇವೆ. ಈ ಕಾಯಿದೆಗಳನ್ನು ಹಿಂಪಡೆಯಲು ಒತ್ತಾಯಿಸಿ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ಒಂದಿಬ್ಬರು ರೈತರನ್ನು ಕರೆದುಕೊಂಡು ಹೋಗಿ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಮತ್ತೆ ಯಾವಾಗ ಅಧಿವೇಶನ ಕರೆಯುತ್ತಾರೋ ಗೊತ್ತಿಲ್ಲ. ಅದಕ್ಕಾಗಿ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ಅವಕಾಶ ಕೊಡುತ್ತೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಮುಂದಾಳತ್ವ ನಾನೇ ವಹಿಸುತ್ತೇನೆ ಎಂದಿದ್ದಾರೆ.

ಮಧ್ಯಪ್ರದೇಶದಲ್ಲಿ ಸರ್ಕಾರ ತೆಗೆದಿದ್ದು ಯಾರು?
ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ತೆಗೆಯಲು ಹೊರಟಿದ್ದು ಯಾರು..? ಎಂದು ಪ್ರಶ್ನಿಸಿರುವ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು, ಜನತೆಯ ತೀರ್ಪನ್ನು ಗೌರವಿಸಲ್ಲ. ಜನತೆಯ ತೀರ್ಪಿನ ವಿರುದ್ಧ ಹೋಗಿ ಅಧಿಕಾರ ಕಬಳಿಕೆ ಮಾಡುತ್ತಿದ್ದಾರೆ. ಇಂತಹ ಘಟನೆಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗುತ್ತಿದೆ ಎಂದಿದ್ದಾರೆ. ಸ್ಪೀಕರ್ ಕುರ್ಚಿಯನ್ನ ದುರ್ಬಳಕೆ ಮಾಡಿಕೊಂಡಿರುವುದು ನೋಡಿದ್ದೇನೆ. ಕರೊನಾ ಪ್ಯಾಕೇಜ್ ಸಹಾಯಧನ ಫಲಾನುಭವಿಗಳಿಗೆ ಸಿಕ್ಕಿದೆಯಾ..? ಎಷ್ಟು ಹಣ ಪೋಲಾಗಿದೆ ಎಂಬುದು ಜಗಜ್ಜಾಹೀರಾಗಿದೆ. ಕುಮಾರಸ್ವಾಮಿ ಕೂಡ ಎರಡು ಪಕ್ಷಗಳ ಬಗ್ಗೆ ಅನಿಸಿಕೆ ಹೇಳಿದ್ದಾರೆ. 2 ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಬಿಜೆಪಿ ನಕಾರಾತ್ಮಕ ಉತ್ತರ ನೀಡಿದೆ. ದಾಖಲೆ ಸಮೇತ ಉತ್ತರ ಹೇಳುವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರಕ್ಕೆ ಒಳಗಾದವರಿಗೆ ಹೆಚ್ಚು ಶಕ್ತಿ ಬರುತ್ತದೆ ಎಂದು ಟೀಕಿಸಿದ್ದಾರೆ.
ದೇವರಾಜ ಅರಸು ಅವರ ಭ್ರಷ್ಟಾಚಾರದ ವಿರುದ್ಧ ನಾನು ವಿಪಕ್ಷ ನಾಯಕನಾಗಿ ಹೋರಾಟ ಮಾಡಿದ್ದೆ. ಆದರೆ ಅವರೇ ಮತ್ತೆ ಅಧಿಕಾರಕ್ಕೆ ಬಂದರು. ಹಾಗಂದ ಮಾತ್ರಕ್ಕೆ ಕೊಳ್ಳೆ ಹೊಡೆಯಿರಿ ಎಂದು ಹೇಳುವುದಿಲ್ಲ ಎನ್ನುವ ಮೂಲಕ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರ ಹೋರಾಟ ವ್ಯರ್ಥವೆಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಕುಮಾರಸ್ವಾಮಿ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ. ಈ ಸರ್ಕಾರ ಬರೋಕೆ ಯಾರು ಕಾರಣ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‌ನಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದ್ದಾರೆ.
ಕಾಂಗ್ರೆಸ್ ಕೂಡ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಹೋಗಿದ್ದು ತಪ್ಪಾಯ್ತು ಎಂದಿದ್ದರು. ಹೀಗಾಗಿ ಮನಸ್ಸಿಗೆ ನಮಗೆ ನೋವಾಗಿತ್ತು. ನಾನಂತೂ ಆ ಬಗ್ಗೆ ಮಾತನಾಡುವುದಿಲ್ಲ. ಕುಮಾರಸ್ವಾಮಿಯವರು ಕೂಡ ಇದನ್ನ ಮರೆತುಬಿಡಬೇಕು. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ವಿಭಾಗ, ದೇಶದ ಐಕ್ಯತೆಗೆ ಭಂಗ ತರುವ ಕೆಲವು ಪಠ್ಯಗಳನ್ನು ತೆಗೆದುಹಾಕಿದೆ. ರಾಜ್ಯ ಸರ್ಕಾರ ಏನು ತೀರ್ಮಾನ ಮಾಡಿದೆಯೋ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತಾಡಲ್ಲ. ಟಿಪ್ಪು ವಿಚಾರವನ್ನು ಪಠ್ಯ ದಿಂದ ತೆಗೆಯಲು ರಾಜ್ಯ ಸರ್ಕಾರ ತೀರ್ಮಾನ ಮಾಡಿರುವ ವಿಚಾರದ ಬಗ್ಗೆ ದೇವೇಗೌಡರು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಸಿದ್ದರಾಮಯ್ಯ ಈಗಾಗಲೇ ರೈತರ ಸಭೆ ನಡೆಸಿದ್ದು, ಹೋರಾಟ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ಕಾಯ್ದೆ ಜಾರಿಯಾದರೂ ಜೆಡಿಎಸ್ ವರಿಷ್ಠರು ಮಾತ್ರ ತಟಸ್ಥವಾಗಿದ್ದರು. ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹೋರಾಟ ರೂಪಿಸುತ್ತಿರುವಾಗ ಜೆಡಿಎಸ್ ಸುಮ್ಮನಿದೆ ಎನ್ನುವ ಕಾರಣಕ್ಕೆ ದೇವೇಗೌಡರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ತಡವಾಗಿಯಾದರೂ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಮಣ್ಣಿನ ಮಗ ದೇವೇಗೌಡರು ಅಖಾಡಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟ ಯಾವ ರೀತಿ ಸಾಗಲಿದೆ ಎನ್ನುವುದನ್ನ ಕಾದು ನೋಡಬೇಕು.













