ನವೆಂಬರ್ 8ಕ್ಕೆ ಮುನ್ನ ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಬೇಕಾಗಿದೆ. ನವೆಂಬರ್ 7ರಂದು ಈಗಿನ ವಿಧಾನಸಭೆಯ ಕೊನೆಯ ದಿನ. ವಿಧಾನಸಭಾ ಚುನಾವಣಾ ಫಲಿತಾಂಶ ಅಕ್ಟೋಬರ್ 24ರಂದು ಸಂಜೆ ಪ್ರಕಟವಾಗಿದೆ. ಆಡಳಿತಾರೂಢ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಕೂಟದಲ್ಲಿ ಯಾವ ಪಕ್ಷದಿಂದ ಮುಖ್ಯಮಂತ್ರಿ ಆಗಬೇಕೆಂಬ ಬಿಕ್ಕಟ್ಟು ಎಂಟು ದಿನಗಳ ನಂತರವೂ ಇತ್ಯರ್ಥ ಆಗಿಲ್ಲ.
ಮುಂದಿನ ಐದು ವರ್ಷಗಳ ಕಾಲ ತಾನೇ ಮುಖ್ಯಮಂತ್ರಿ ಎಂದಿದ್ದಾರೆ ದೇವೇಂದ್ರ ಫಡ್ನಾವಿಸ್. ಈ ಬಾರಿ ಮಖ್ಯಮಂತ್ರಿ ಸ್ಥಾನ ಶಿವಸೇನೆಗೆ ನೀಡಲೇ ಬೇಕು ಎನ್ನುತ್ತಾರೆ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಮುಖಂಡ ಸಂಜಯ್ ರಾವತ್. ಮುಖ್ಯಮಂತ್ರಿ ಹುದ್ದೆಗಾಗಿ ಶಿವಸೇನೆ ಮತ್ತು ಬಿಜೆಪಿ ನಡುವಿನ `ಕೋಳಿ ಜಗಳದ’ ನಡುವೆ ಮಹಾರಾಷ್ಟ್ರದ ರೈತನೊಬ್ಬ ಅವರ ಜಗಳ ಮುಗಿಯುವ ತನಕ ತನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ರಾಜ್ಯಪಾಲರಿಗ ಮನವಿ ಮಾಡಿದ್ದಾನೆ. ಅದರರ್ಥ, ಇವರಿಬ್ಬರ ಜಗಳ ಸಾರ್ವಜನಿಕರಿಗೂ ಅಸಹ್ಯ ಮೂಡುವಂತೆ ಮಾಡಿದೆ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಬಗ್ಗೆ, ಹಾಗೂ ಸಚಿವರ ನೇಮಕ ಸಂದರ್ಭ ಕೂಡ ಇಂತಹುದೇ ಪರಿಸ್ಥಿತಿ ಸ್ವಪಕ್ಷೀಯರಿಗೆ ಅಸಮಾಧಾನ ಉಂಟು ಮಾಡಿತ್ತು.
ಕಳೆದ ಅಕ್ಟೋಬರ್ 21 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಕಾಂಗ್ರೆಸ್ 44, ಮಿತ್ರ ಪಕ್ಷ ಎನ್ ಸಿ ಪಿ 54, ಮಿತ್ರ ಪಕ್ಷಗಳ ಒಟ್ಟು 6 ಸ್ಥಾನದೊಂದಿಗೆ ಯುಪಿಎ ಒಟ್ಟಾಗಿ 104 ಶಾಸಕರನ್ನು ಹೊಂದಿದೆ. ಯುಪಿಎ – ಶಿವಸೇನೆ ಕೈಜೋಡಿಸಿದರೆ 160 ಸ್ಥಾನಗಳು ಆಗುತ್ತವೆ ಮತ್ತು ಸುಲಭವಾಗಿ ಸರಕಾರ ರಚಿಸಬಹುದಾಗಿದೆ. ಇಂತಹ ಒಂದು ಸೂಚನೆ ಮೂರು ಪಕ್ಷಗಳೂ ನೀಡಿವೆ. ಆದರೆ, ಯಾವುದೇ ಒತ್ತಡಗಳಿಗೆ ಬಗ್ಗದೆ ಗಟ್ಟಿಯಾಗಿ ನಿಂತಿರುವ ಬಿಜೆಪಿಯ ನಡೆ ತುಂಬ ಸ್ಪಷ್ಟವಾಗಿದೆ.

ಮೈತ್ರಿಯ ಇತಿಹಾಸ:
ಶಿವಸೇನೆ ಮತ್ತು ಬಿಜೆಪಿಯ ಮೈತ್ರಿಗೆ 30 ವರ್ಷಗಳ ಇತಿಹಾಸವಿದೆ. ಎರಡೂ ರಾಜಕೀಯ ಪಕ್ಷಗಳ ರಾಜಕೀಯ ಸಿದ್ಧಾಂತ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಹಾಗೆಂದು, ಇಷ್ಟು ವರ್ಷಗಳ ಕಾಲ ಅವರಿಬ್ಬರು ತುಂಬಾ ಅನೋನ್ಯವಾಗಿ ಇರಲಿಲ್ಲ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳು ಮೈತ್ರಿ ಮುರಿದು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು. ಅದೇ ರೀತಿ, ಶಿವ ಸೇನೆಗೆ ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ ಅಸ್ಪ್ರಶ್ಯವೇನು ಅಲ್ಲ. ಈ ಹಿಂದೆ ಇವೆರಡೂ ಪಕ್ಷಗಳೊಂದಿಗೆ ಶಿವಸೇನೆ ಮೈತ್ರಿ ಹೊಂದಿತ್ತು. ಅಷ್ಟೇ ಯಾಕೆ ಮುಸ್ಲಿಂ ಲೀಗ್ ಜತೆ ಮೈತ್ರಿ ಮಾಡಿ ಚುನಾವಣೆ ಎದುರಿಸಿದ ಇತಿಹಾಸ ಶಿವಸೇನೆಗಿದೆ. 1979ರಲ್ಲಿ ಈ ಮೈತ್ರಿ ನಡೆದಿತ್ತು.
ಕಾರ್ಟೂನಿಸ್ಟ್ ಆಗಿದ್ದ ಬಾಳಾ ಠಾಕ್ರೆ ಮರಾಠಿ ಅಸ್ಮಿತೆಯ ಹೆಸರಿನಲ್ಲಿ ಆರಂಭಿಸಿದ ಸಂಘಟನೆ ಶಿವಸೇನೆ. ಇದು ಮೊದಲಿಗೆ ರಾಜಕೀಯ ಪಕ್ಷ ಆಗಿರಲಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಕೂಡ ನಡೆಸುತ್ತಿರಲಿಲ್ಲ. ಬಾಳ ಠಾಕ್ರೆ ವಿಚಿತ್ರ ವ್ಯಕ್ತಿತ್ವದ ಮುಖಂಡನಾಗಿದ್ದು, ಒಂದೆಡೆ ಮೈಕಲ್ ಜಾಕ್ಸನ್ ಶೋಗೆ ಬೆಂಬಲಿಸಿ ಭಾಗವಹಿಸಿದ್ದರೆ ಇನ್ನೊಂದೆಡೆ ಪಾಕಿಸ್ತಾನ ತಂಡ ಕ್ರಿಕೆಟ್ ಆಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅದೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದಾಗ.
ಠಾಕ್ರೆ ಅವರು ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯನ್ನು ಬೆಂಬಲಿಸಿದ್ದರು. 1971ರಲ್ಲಿ ಕಾಂಗ್ರೆಸ್ (ಓ) ಮೈತ್ರಿಯಲ್ಲಿ ಮೊದಲ ಬಾರಿ ಲೋಕಸಭೆ ಚುನಾವಣೆ ಸ್ಪರ್ಧಿಸಿತ್ತು ಶಿವಸೇನೆ. ಕೇವಲ ಮುಂಬಯಿ ಮಹಾನಗರ ಮತ್ತು ಕೊಂಕಣ್ ಪ್ರದೇಶದಲ್ಲಿ ಸ್ಪರ್ಧಿಸಿ ಸೋತಿತ್ತು. ಮುಂದಿನ ಬಾರಿ 26 ಸೀಟುಗಳಲ್ಲಿ ಸ್ಪರ್ಧಿಸಿ ಒಂದು ಸ್ಥಾನ ಗೆದ್ದುಕೊಂಡಿತು. ಬಿಜೆಪಿ ಹುಟ್ಟಿದ ನಂತರ 1984ರಲ್ಲಿ ಕಮಲ ಚಿಹ್ನೆಯಡಿ ಮುಂಬಯಿಯಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಇಬ್ಬರು ಪ್ರಮುಖ ಮುಖಂಡರು ಸೋತು ಹೋಗಿದ್ದರು. 1985ರಲ್ಲಿ ಶರದ್ ಪವಾರ್ ಅವರು ಬಿಜೆಪಿ, ಜನತಾ ಪಾರ್ಟಿ, ಎಡಪಕ್ಷಗಳನ್ನು ಸೇರಿಸಿ ಮಹಾಮೈತ್ರಿ ಮಾಡಿದಾಗ ಶಿವಸೇನೆಯನ್ನು ಜತೆ ಸೇರಿಸಿಕೊಂಡಿರಲಿಲ್ಲ.

1989 ಶಿವಸೇನೆ ಮತ್ತು ಬಿಜೆಪಿ ನಡುವೆ ದೀರ್ಘಕಾಲಿಕ ಹೊಂದಾಣಿಕೆಗೆ ನಾಂದಿಯಾಯಿತು. ಅಂದಿನ ಬಿಜೆಪಿಯ ರಾಷ್ಟ್ರೀಯ ನಾಯಕನಾಗಿದ್ದ ಪ್ರಮೋದ್ ಮಹಾಜನ್ ರಾಜಕೀಯ ಪಾತ್ರ ಈ ಮೈತ್ರಿಯಲ್ಲಿ ಮಹತ್ವದ್ದಾಗಿದೆ. ಮಾತ್ರವಲ್ಲದೆ, ಹಿಂದುತ್ವ ಕೂಡ ಪ್ರಮುಖ ಪಾತ್ರ ವಹಿಸಿತ್ತು. ಆಗ ಬಿಜೆಪಿ ಭಾರದಾತ್ಯಂತ ಬೆಳೆದಿರಲಿಲ್ಲ. ಆದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಶಿವಸೇನೆ ಬಿಟ್ಟುಕೊಡುತ್ತಿತ್ತು. ಶಿವಸೇನೆಗೆ ಮುಂಬಯಿ ಮಹಾನಗರ, ಥಾಣೆಯಂತಹ ಉಪನಗರಗಳ ಆಸುಪಾಸು, ಕೊಂಕಣ್ ಹೊರತಾಗಿ ಮಹಾರಾಷ್ಟ್ರದ ಇತರೆಡೆ ಅಂತಹ ಪ್ರಭಾವ ಇರಲಿಲ್ಲ. ಶಿವಸೇನೆ ಅನಂತರ ನಾಸಿಕ್ ಮತ್ತು ಮರಾಠವಾಡ ಪ್ರದೇಶಗಳಲ್ಲಿ ಕಾಲೂರಲು ಶ್ರಮಿಸಿತು. ಆ ಮೂಲಕ ರಾಜ್ಯ ರಾಜಕೀಯದಲ್ಲಿ ತನ್ನ ಹಿರಿತನವನ್ನು ಉಳಿಸಿಕೊಳ್ಳಲು ಮುಂದಾಗಿತ್ತು.
1990ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯಲ್ಲಿ ಶಿವಸೇನೆ 288ರಲ್ಲಿ 183 ಸ್ಥಾನಗಳಲ್ಲಿ ಸ್ಪರ್ಧಿಸಿತು. ಶಿವಸೇನೆ 52 ಮತ್ತು ಬಿಜೆಪಿ 42 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ಕಾಂಗ್ರೆಸ್ 141 ಶಾಸಕರೊಂದಿಗೆ ಸರಕಾರ ರಚಿಸಿತು. 1960ರಿಂದ 1995ರ ತನಕ ನಿರಾಂತಕವಾಗಿ ಸರಕಾರ ನಡೆಸಿದ್ದ ಕಾಂಗ್ರೆಸ್ಸಿಗೆ ಮುಂಬಯಿಯಲ್ಲಾದ ದುರ್ಘಟನೆಗಳು ಬಹುದೊಡ್ಡ ಆಘಾತ ನೀಡಿತು. ಅಯೋಧ್ಯೆಯಲ್ಲಿ ಬಾಬ್ರಿ ಧ್ವಂಸದ ಅನಂತರ 1992 ಮುಂಬಯಿ ಸ್ಪೋಟ, 1993ರ ಕೋಮುಗಲಭೆ ಇತ್ಯಾದಿಯನ್ನು ಸರಿಯಾಗಿ ನಿರ್ವಹಿಸದ ಪರಿಣಾಮ ಕೇಸರಿ ಪಡೆಗೆ ಚುನಾವಣೆಯಲ್ಲಿ ಬಹುದೊಡ್ಡ ಲಾಭವಾಯಿತು.
1995ರಲ್ಲಿ ಗೆದ್ದ ಕೆಲವು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಸಹಾಯದೊಂದಿಗೆ ಮೊದಲ ಶಿವಸೇನಾ – ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಸೇನೆಯ ಹಿರಿಯ ಮುಖಂಡ ಮನೋಹರ ಜೋಷಿ ಮುಖ್ಯಮಂತ್ರಿಯಾಗಿ, ಗೋಪಿನಾಥ ಮುಂಡೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇವಲ ಒಂದು ಅವಧಿಗೆ ಮೈತ್ರಿ ಸರಕಾರವಿದ್ದರೆ, ಮತ್ತೆ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಮೈತ್ರಿಯೇ ಗೆಲುವು ಸಾಧಿಸಿತ್ತು. ಹಲವುಬಾರಿ ಮುಖ್ಯಮಂತ್ರಿಗಳ ಬದಲಾವಣೆ, ಅತಿಯಾದ ಗುಂಪುಗಾರಿಕೆ, ಭ್ರಷ್ಟಾಚಾರದಿಂದಾಗಿ 2014ರಲ್ಲಿ ಕಾಂಗ್ರೆಸ್ ಮೈತ್ರಿ ಸೋತಿತು.

2014ರ ನಂತರದ `ಮಹಾ’ ರಾಜಕಾರಣ:
2014ರ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮುರಿದು ಬಿದ್ದಿತ್ತು. ಶಿವಸೇನೆಯ ಸಹಾಯದೊಂದಿಗೆ ಮಹಾರಾಷ್ಟ್ರದಲ್ಲಿ ತಳವೂರಿದ ಬಿಜೆಪಿಗೆ ಕೇವಲ ಲೋಕಸಭಾ ಸ್ಥಾನಗಳು ಮಾತ್ರವಲ್ಲದೆ ಮಹಾರಾಷ್ಟ್ರ ರಾಜ್ಯವನ್ನು ಆಳುವುದೂ ಬೇಕಾಗಿತ್ತು. ಪ್ರತ್ಯೇಕವಾಗಿ ಸ್ಪರ್ಧಿಸಿದರೂ ಕೂಡ ಹೆಚ್ಚು ಸೀಟುಗಳನ್ನು ಬಿಜೆಪಿ ಪಡೆದುಕೊಂಡಿತ್ತು. ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ಒಟ್ಟು 122 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಶಿವಸೇನೆ 63 ಸ್ಥಾನ ಗೆದ್ದಿತ್ತು. ಬಿಜೆಪಿ ಸರಕಾರ ರಚಿಸಲು ಎರಡು ಡಜನ್ ಶಾಸಕರ ಆವಶ್ಯವಿತ್ತು. ಕಾಂಗ್ರೆಸ್ ಮತ್ತು ಎನ್ ಸಿ ಪಿ ಅನುಕ್ರಮವಾಗಿ 42 ಮತ್ತು 41 ಸ್ಥಾನಗಳನ್ನು ಗೆದ್ದುಕೊಂಡಿದ್ದವು.
ಮೂರು ದಶಕಗಳ ಮೈತ್ರಿ ಅದೊಂದು ಅನುಕೂಲ ಸಿಂಧು ವ್ಯವಸ್ಥೆ ಆಗಿತ್ತು. ಬಹಳಷ್ಟು ಸಂದರ್ಭಗಳಲ್ಲಿ ಬಹಿರಂಗವಾಗಿ ವಿರುದ್ಧ ಹೇಳಿಕೆಗಳನ್ನು ಎರಡು ಪಕ್ಷದವರೂ ನೀಡಿದ್ದಾರೆ. 2014ರಲ್ಲಿ ಸರಕಾರ ರಚಿಸಲು ಶಿವಸೇನೆಯ ಮೈತ್ರಿ ಬಿಜೆಪಿಗೆ ಬೇಕಾಗಿತ್ತು. ಇಂದು ಶಿವಸೇನೆ ಮುಖಂಡರು ಹೇಳುತ್ತಿರುವುದು ಕೂಡ ಅದನ್ನೇ. ಅವರಿಗೆ ಬೇಕಾದಾಗೆಲ್ಲ ನಮ್ಮನ್ನು ಉಪಯೋಗಿಸಿಕೊಂಡಿದ್ದಾರೆ. ಮೈತ್ರಿಯ ನೀತಿಯನ್ನು ಅವರು ಪಾಲಿಸಲು ಸಿದ್ಧರಿಲ್ಲ. ಬಿಜೆಪಿಯ ಚಕ್ರವ್ಯೂಹದಲ್ಲಿ ಶಿವಸೇನೆ ಸಿಲುಕಿಯಾಗಿದೆ. ಹೊರಬರಲಾಗದೆ ಒದ್ದಾಡುತ್ತಿದೆ. ಚಕ್ರವ್ಯೂಹದಿಂದ ಹೊರ ಬಂದರೆ ಮಾತ್ರ ಗೆಲುವು. ಅದು ಯುದ್ಧದ ನಿಯಮ. ರಾಜಕೀಯದಲ್ಲಿ ಕೂಡ ಅಷ್ಟೇ ಶಿವಸೇನೆ ಇಂದೇ ತನ್ನ ಸ್ಥಾನವನ್ನು ಖಾತ್ರಿ ಮಾಡದೆ ಹೋದರೆ ಮಂದಿನ ಚುನಾವಣೆಯ ಫಲಿತಾಂಶ ಬಂದಾಗ ಮಹಾರಾಷ್ಟ್ರದಲ್ಲಿ ಶಿವಸೇನೆ ಧೂಳಿಪಟ ಆಗಿರುತ್ತದೆ. ಇದರ ಮುನ್ಸೂಚನೆ ತಡವಾಗಿ ಶಿವಸೇನೆ ಮುಖಂಡರಿಗೆ ಗೊತ್ತಾಗಿದೆ.
ಅಂತಹದೊಂದು ಒಪ್ಪಂದ ಆಗಿದೆಯೊ ಇಲ್ಲವೊ ಸಾರ್ವಜನಿಕರಿಗೆ ಖಚಿತವಾಗಿಲ್ಲ. ಶಿವಸೇನೆ ಹೇಳುವ ರೀತಿಯಲ್ಲಿ 50:50 ಅಧಿಕಾರ ಹಂಚಿಕೆಗೆ ಮಾತಾಗಿದೆ. ಆದುದರಿಂದ, ಮೊದಲ ಅವಧಿಯ ಮುಖ್ಯಮಂತ್ರಿ ಪದವಿ ತನಗೆ ನೀಡಿ ಎಂಬುದು ಶಿವಸೇನೆ ಪಟ್ಟು. ಇತ್ತ ಶರದ್ ಪವಾರ್ ಮತ್ತು ಕಾಂಗ್ರೆಸ್ ಕೂಡ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವುದಾದರೆ ಸರಕಾರ ರಚಿಸಲು ಹಿಂದೆ ಮುಂದೆ ನೋಡುವ ಪಕ್ಷಗಳಲ್ಲ. ಹಾಗೆಂದು, ಶಿವಸೇನೆಯೊಂದಿಗಿನ ರಾಜಕೀಯ ವ್ಯವಹಾರ ಕೂಡ ಅಷ್ಟು ಸುಲಭವಲ್ಲ.