ಭಾರತದ ಸಮಕಾಲೀನ ರಾಜಕಾರಣದಲ್ಲಿ ನರೇಂದ್ರ ಮೋದಿಗೆ ಸಮರ್ಥ ಎದುರಾಳಿ ಎಂದು ಗುರುತಿಸಿಕೊಂಡಿದ್ದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ರಾಜಕೀಯ ಪತನ ಆರಂಭವಾಗಿದೆಯೇ? ಎಂಬ ಚರ್ಚೆ ವ್ಯಾಪಕವಾಗಿದೆ.
2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆ ಡಿ ಜೊತೆಗೂಡಿ ಮಹಾಮೈತ್ರಿ ರಚಿಸಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಬಿಹಾರಿ-ಬಾಹರಿ ಆಟದಲ್ಲಿ ಮೋದಿ-ಶಾ ಜೋಡಿಗೆ ಅದರದೇ ಆಟದಲ್ಲಿ ಮಣ್ಣುಮುಕ್ಕಿಸಿದ್ದವರು ನಿತೀಶ್. ಈ ಗೆಲುವಿಗೆ ಅಗತ್ಯವಾದ ತಂತ್ರ ಹೆಣೆದವರು ಪ್ರಾದೇಶಿಕ ರಾಜಕಾರಣದ ಅಗ್ರಜರಲ್ಲೊಬ್ಬರಾದ, ಆರ್ ಜೆಡಿ ಮುಖ್ಯಸ್ಥ, ಮೇವು ಹಗರಣದಲ್ಲಿ ಜೈಲು ಸೇರಿ, ಸಾವು-ಬದುಕಿನ ನಡುವೆ ಸೆಣಸುತ್ತಿರುವ ನಿತೀಶ್ ಒಂದು ಕಾಲದ ಗುರು ಹಾಗೂ ಗೆಳೆಯ ಲಾಲೂ ಪ್ರಸಾದ್ ಯಾದವ್.
ಈಗ ಬಿಜೆಪಿ ಹೆಣೆದಿರುವ ಬಲೆಯಲ್ಲಿ ಸಿಲುಕಿ ನಿತೀಶ್ ವಿಲವಿಲ ಒದ್ದಾಡುತ್ತಾ, ಬಿಹಾರ ರಾಜಕಾರಣದ ಮುಖ್ಯಭೂಮಿಕೆಯಿಂದ ಬದಿಗೆ ಸರಿಯಲಾರಂಭಿಸಿದ್ದಾರೆ. ಈ ಸ್ಥಾನವನ್ನು ಬಿಜೆಪಿ ಕಬಳಿಸುತ್ತಿದೆ ಎನ್ನಲಾಗುತ್ತಿದೆ. ಇಂಥ ಅನುಮಾನ ನಿಕ್ಕಿಯಾಗಿರುವುದು ಇತ್ತೀಚೆಗೆ ಬಿಹಾರದ ವಿವಿಧೆಡೆ ಸಂಭವಿಸಿದ ಭಾರಿ ಪ್ರವಾಹ. ಶತಮಾನದಲ್ಲೇ ಕಂಡುಕೇಳರಿಯದ ಪ್ರವಾಹದಲ್ಲಿ ರಾಜ್ಯ ರಾಜಧಾನಿ ಪಟ್ನಾ ಒಂದರಲ್ಲೇ 50ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಇದನ್ನು ಸಮರ್ಥವಾಗಿ ನಿಭಾಯಿಸಲು ನಿತೀಶ್ ವಿಫಲರಾಗಿದ್ದಾರೆ.
ಪ್ರವಾಹಪೀಡಿತ ರಾಜ್ಯಕ್ಕೆ ಅಗತ್ಯವಾದಷ್ಟು ಅನುದಾನ ನೀಡುವಲ್ಲಿಯೂ ಬಿಜೆಪಿ ಮೀನಮೇಷ ಎಣಿಸುವ ಮೂಲಕ ರಾಜ್ಯದ ಜನತೆಯನ್ನು ಹಿಂಸಿಸುತ್ತಿದೆ. ಇದರ ನೇರ ಆರೋಪವನ್ನು ಮುಖ್ಯಮಂತ್ರಿ ನಿತೀಶ್ ಗೆ ವರ್ಗಾಯಿಸಲಾಗಿದೆ. ವಾಸ್ತವದಲ್ಲಿ ನಗರಾಭಿವೃದ್ಧಿಯಂಥ ಮಹತ್ತರವಾದ ಖಾತೆಯು ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರದಲ್ಲಿ ಬಿಜೆಪಿಯ ಕೈಯಲ್ಲಿದ್ದರೂ ವಿಫಲತೆಯನ್ನು ನಿತೀಶ್ ಗೆ ವರ್ಗಾಯಿಸುವ ಮೂಲಕ ಕಮಲಪಾಳೆಯ ಕೈಕಟ್ಟಿ ನಿಂತಿದೆ.
ಇತ್ತೀಚೆಗೆ ಪ್ರವಾಹದ ಕುರಿತು ಪ್ರಶ್ನಿಸಿದ ಪತ್ರಕರ್ತರೊಂದಿಗೂ ನಿತೀಶ್ ಸಿಡಿಮಿಡಿಗೊಂಡಿದ್ದಾರೆ. ಇದರರ್ಥ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲೂ ನಿತೀಶ್ ಗೆ ಪೂರಕ ಸ್ಪಂದನೆ ದೊರೆಯುತ್ತಿಲ್ಲ. ಇದರಿಂದ ಕುಪಿತರಾಗುತ್ತಿರುವ ನಿತೀಶ್, ಅಸಹಾಯಕರಾಗಿ ಪರಿಸ್ಥಿತಿಯನ್ನು ಹಿಡಿಯಲು ಪರಿತಪಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ದೇಶವೇ ತಲೆತಗ್ಗಿಸುವಂಥ ಮುಜಾಫರ್ ನಗರ ಶೆಲ್ಟರ್ ಅತ್ಯಾಚಾರ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುವಲ್ಲಿಯೂ ನಿತೀಶ್ ವಿಫಲವಾಗಿದ್ದರು. ಈ ಸಂದರ್ಭದಲ್ಲಿಯೂ ಬಿಹಾರ ಬಿಜೆಪಿ ನಿತೀಶ್ ಬೆಂಬಲಕ್ಕೆ ನಿಲ್ಲಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಸಮಾನ ಸ್ಥಾನಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದರೂ ಜೆಡಿಯುಗೆ ಪ್ರಮುಖ ಸಚಿವ ಸ್ಥಾನಗಳನ್ನು ಮೋದಿ-ಶಾ ಜೋಡಿ ನೀಡಲಿಲ್ಲ. ಇದರಿಂದ ಭಾರಿ ಹಿನ್ನಡೆ ಅನುಭವಿಸಿದ ನಿತೀಶ್ ಅವರು ಜೆಡಿಯುನ ಯಾರೊಬ್ಬರೂ ಮೋದಿ ಸಂಪುಟ ಸೇರುವುದಿಲ್ಲ ಎನ್ನುವ ಮೂಲಕ ಪ್ರತಿಭಟನೆ ದಾಖಲಿಸಿದ್ದರು. ಆದರೆ, ಅದ್ಯಾವುದಕ್ಕೂ ಮೋದಿ-ಶಾ ಜೋಡಿ ತಲೆಕೆಡಿಸಿಕೊಂಡಿಲ್ಲ. ಒಂದು ಕಾಲದಲ್ಲಿ ಬಿಹಾರದಲ್ಲಿ ಜೂನಿಯರ್ ಆಗಿ ಸರ್ಕಾರದ ಭಾಗವಾಗಿದ್ದ ಬಿಜೆಪಿಯು ನಿತೀಶ್ ಅವರನ್ನು ಹಿಂದಿಕ್ಕಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ವರ್ಷ ನಡೆಯಲಿರುವ ಬಿಹಾರ ಚುನಾವಣೆಯ ವೇಳೆಗೆ ನಿತೀಶ್ ಕುಮಾರ್ ಸ್ಥಾನಮಾನಗಳು ಮತ್ತಷ್ಟು ಸ್ಪಷ್ಟವಾಗಲಿವೆ.