ರಾಜ್ಯ ಸಭೆಗೆ ಕರ್ನಾಟಕ ರಾಜ್ಯದಿಂದ ಕೇಳಿ ಬಂದಿದ್ದ ನಾಲ್ಕೈದು ಪ್ರಭಾವಿ ಹೆಸರುಗಳ ಮಧ್ಯೆಯೇ ಇದೀಗ ಅಚ್ಚರಿ ಎಂಬಂತೆ ರೇಸ್ ನಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದೇ ಇದ್ದ ಇಬ್ಬರು ಅಭ್ಯರ್ಥಿಗಳ ಹೆಸರನ್ನ ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಘೋಷಿಸಿದೆ. ತನ್ನ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್‌ಗಾಗಿ ನೀಡಬೇಕೆಂದು ಭಾರೀ ಪೈಪೋಟಿ ನಡೆಸಿದ್ದ ಶಾಸಕ ಉಮೇಶ್ ಕತ್ತಿಗೆ ಇದರಿಂದ ತೀವ್ರ ಹಿನ್ನಡೆಯಾಗಿದೆ. ಮಾತ್ರವಲ್ಲದೇ ಈ ಮೂಲಕ ಬಿಜೆಪಿ ಹೈಕಮಾಂಡ್ ಕೂಡಾ ಸಿಎಂ ಬಿಎಸ್ ವೈ ಆಂಡ್ ಟೀಮ್ ಗೆ ಶಾಕ್ ನೀಡಿದೆ. ಇದುವರೆಗೂ ಕೇಳಿ ಬಾರದೇ ಇದ್ದ ಇಬ್ಬರು ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸುವ ಮೂಲಕ ಅಚ್ಚರಿಪಡಿಸಿದೆ.
ಸದ್ಯ ಬಿಜೆಪಿ ಹೈಕಮಾಂಡ್ ಘೋಷಿಸಿರುವ ಇಬ್ಬರು ಅಭ್ಯರ್ಥಿಗಳು, ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ. ಬಿಜೆಪಿ ಪಾಳಯದಲ್ಲಿ ಅಷ್ಟಾಗಿ ಚಿರಪರಿಚಿತವಲ್ಲದ ಮುಖಕ್ಕೆ ಬಿಜೆಪಿ ಮಣೆ ಹಾಕುವ ಮೂಲಕ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ ಆದ್ಯತೆ ನೀಡಿದೆ. ಬೆಳಗಾವಿ ಜಿಲ್ಲೆ ವಿಭಾಗೀಯ ಪ್ರಭಾರಿ ಆಗಿರುವ ಈರಣ್ಣ ಕಡಾಡಿ ಹಾಗೂ ರಾಯಚೂರು ಜಿಲ್ಲೆಯವರಾದ ಅಶೋಕ್ ಗಸ್ತಿ ಪಕ್ಷದ ಕಲ್ಯಾಣ ಕರ್ನಾಟಕ ವಿಭಾಗೀಯ ಉಸ್ತುವಾರಿಯಾಗಿದ್ದಾರೆ.
ಈ ಹಿಂದೆ ರಾಜ್ಯಸಭೆ ಟಿಕೆಟ್ ಗಾಗಿ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ತಂಡ ಸಭೆ ನಡೆಸಿ ರಮೇಶ್ ಕತ್ತಿಗೆ ಟಿಕೆಟ್ ನೀಡುವಂತೆ ಸರಕಾರಕ್ಕೆ ಒತ್ತಡವೇರಿದ್ದರು. ಕೊನೆಯದಾಗಿ ಸಿಎಂ ಬಿಎಸ್‌ವೈ ಅವರೇ ರಮೇಶ್ ಕತ್ತಿ ಹೆಸರನ್ನೂ ಹೈಕಮಾಂಡ್‌ಗೆ ಶಿಫಾರಸ್ಸು ಮಾಡಿದ್ದರು. ಆದರೆ ಇದೀಗ ಬಿಜೆಪಿ ಹೈಕಮಾಂಡ್ ಅಚ್ಚರಿಯೆಂಬಂತೆ ರೇಸ್‌ನಲ್ಲಿ ಅಷ್ಟಾಗಿ ಕೇಳಿ ಬರದ ನಾಯಕರಿಗೆ ಮಣೆ ಹಾಕುವ ಮೂಲಕ ಸ್ವತಃ ಬಿಎಸ್‌ವೈ ಗೆ ಶಾಕ್ ನೀಡಿದೆ.
ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ್ ಕೋರೆ, ಶಾಸಕ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ, ಉದ್ಯಮಿ ಪ್ರಕಾಶ್ ಶೆಟ್ಟಿ, ತೇಜಸ್ವಿನಿ ಅನಂತ್‌ಕುಮಾರ್ ಮುಂತಾದವರ ಹೆಸರು ಕೇಳಿ ಬಂದಿತ್ತು. ಆದರೆ ಇದೀಗ ಅಶೋಕ್ ಗಸ್ತಿ ಹಾಗೂ ಈರಣ್ಣ ಕಡಾಡಿಗೆ ರಾಜ್ಯದಿಂದ ರಾಜ್ಯಸಭೆಗೆ ಟಿಕೆಟ್ ಘೋಷಣೆ ಆಗಿದೆ. ಇದು ಮುಂದಿನ ರಾಜಕೀಯ ನಾಟಕೀಯ ಬೆಳವಣಿಗೆಗೆ ಕಾರಣವಾದರೂ ಅಚ್ಚರಿಪಡುವಂತಿಲ್ಲ.