ಹೀಗೊಂದು ಚರ್ಚೆ ಇದೀಗ ಆರಂಭವಾಗಿದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ (INC) ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇಂದಿರಾ ಗಾಂಧಿ ಅವರ ಅವತಾರ ಎನ್ನಲಾದ ಪ್ರಿಯಾಂಕಾ ಗಾಂಧಿ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿಲ್ಲ. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಎಂದಿನಂತೆ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಲಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಕೂಡ ರಾಹುಲ್ ಗಾಂಧಿ ಪಾತ್ರ ನಗಣ್ಯವಾಗಿತ್ತು. ರಾಜಕೀಯ ಹೇಳಿಕೆಗಳು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೊಸ ಆರೋಪಗಳು ಕೇಳಿಬರಲಿಲ್ಲ. ಈ ಕಾರಣಗಳಿಂದಲೇ ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳಿಗೆ ಚುನಾವಣೆಯಲ್ಲಿ ಪ್ರಯೋಜನ ಆಗಿದ್ದು, ಭಾರತೀಯ ಜನತಾ ಪಾರ್ಟಿಗೆ ನಷ್ಟವಾಗಿದೆ ಎಂಬುದು ಚರ್ಚೆಯ ಕೇಂದ್ರ ಬಿಂದು.
2017ರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಮತ್ತು ಅದಕ್ಕೆ ಮೊದಲು ಕೂಡ ರಾಹುಲ್ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿ ಭಾರತೀಯ ಜನತಾ ಪಾರ್ಟಿಗೆ ನಿರಂತರವಾಗಿ ಬಹುದೊಡ್ಡ ಪ್ರಮಾಣದಲ್ಲಿ ರಾಜಕೀಯ ಲಾಭ ಆಗುತ್ತಲೇ ಬಂದಿದೆ. ಅದಕ್ಕೆ ಉದಾಹರಣೆಗಳ ಅಗತ್ಯ ಇಲ್ಲ. ಪ್ರಧಾನಿ ನರೇಂದ್ರ ಮೋದಿ 2014 ಮತ್ತು 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗಮನಾರ್ಹ ಬಹುಮತದೊಂದಿಗೆ ವಿಜಯ ಗಳಿಸುವಲ್ಲಿ ರಾಹುಲ್ ಗಾಂಧಿ ಎಂಬ ಕಾಂಗ್ರೆಸ್ ಮುಖಂಡನ ಹೆಸರು ನಿರ್ಣಾಯಕ ಕೆಲಸ ಮಾಡಿದೆ.
ರಾಹುಲ್ ಗಾಂಧಿ ಒಳ್ಳೆಯ ಮನುಷ್ಯ, ಉತ್ತಮ ರಾಜಕೀಯ ಮುಖಂಡ, ಪ್ರಾಮಾಣಿಕ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಭಾರತದಂತಹ ರಾಜಕೀಯ ವ್ಯವಸ್ಥೆಯಲ್ಲಿ, ಕಾಂಗ್ರೆಸ್ ಪಕ್ಷದಂತಹ ರಾಜಕೀಯ ಸಂಸ್ಥೆಯಲ್ಲಿ ರಾಹುಲ್ ಗಾಂಧಿಯಂತಹವರಿಗೆ ಕೆಲಸ ಮಾಡುವುದು ಕಷ್ಟಕರ ಸವಾಲು. ರಾಹುಲ್ ಗಾಂಧಿಯವರ ಯುವ ಕಾಂಗ್ರೆಸ್ ಶೈಲಿ ಕಾರ್ಯವೈಖರಿ ಅಥವ ಕಾರ್ಪೋರೇಟ್ ಮಾದರಿ ವ್ಯವಹಾರ ಇಂದಿನ ಕಾಂಗ್ರೆಸ್ ಪಕ್ಷದ ವ್ಯವಸ್ಥೆಗೆ ಸೂಕ್ತ ಆಗುವುದಿಲ್ಲ. ಪಕ್ಷ ಸಂಘಟನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿ ಯಶಸ್ವಿಯಾಗಿರುವ ಮಮತಾ ಬ್ಯಾನರ್ಜಿ, ಕೆ.ಸಿ.ಚಂದ್ರಶೇಖರ್, ವೈ. ಎಸ್. ಜಗನ್ ರೆಡ್ಡಿ, ಶರದ್ ಪವಾರ್ ಅವರಂತಹವರಿಂದ ರಾಹುಲ್ ಗಾಂಧಿ ಕಲಿಯುವುದು ತುಂಬಾ ಇದೆ.
Also Read: ಬುದ್ಧಿ ಕಲಿಯಲು ನಿರಾಕರಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್
ಮಿತ್ರ ಪಕ್ಷದ ದಿಗ್ಗಜರಾದ ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಶರದ್ ಪವಾರ್ ಮತ್ತು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ರಾಹುಲ್ ಗಾಂಧಿ ಪಾಲಿಗೆ ರಾಜಕೀಯ ಅನುಭವದ ಚಿನ್ನದ ಗಣಿ ಆಗಿದ್ದರು. ಚಿನ್ನ ಬಿಟ್ಟು ಕಾಗೆ ಬಂಗಾರ ಅಗೆಯಲು ಕುಳಿತರೆ ಜನತಾ ಜನಾರ್ದನ ಏನು ತಾನೇ ಮಾಡಿಯಾನು.
ಇವರೆದುರು ಕುಳಿತು ಚರ್ಚಿಸಲು ರಾಹುಲ್ ಗಾಂಧಿಗೆ ಸಮಯ ಇಲ್ಲದೆ ಹೋಗಬಹುದು. ಏಕೆಂದರೆ, ಅವರು ಹಾಲಿಡೇ ವಿದೇಶ ಪ್ರವಾಸದಲ್ಲಿ ಬ್ಯುಸಿ ಆಗಿರುತ್ತಾರೆ. ಕನಿಷ್ಟ ಹಾಲಿಡೇ ಹೋಗುವ ನಡುವೆ ಕ್ಯಾಪ್ಟನ್ ಅಮರಿಂದರ್ ಸಿಂಗ್, ಭೂಪೀಂದರ್ ಸಿಂಗ್ ಹೂಡ, ಸಿದ್ದರಾಮಯ್ಯ, ಎಂ. ಕೆ. ಸ್ಟಾಲಿನ್ ಮುಂತಾದವರೊಂದಿಗೆ ಕನಿಷ್ಟ ಒಂದೆರೆಡು ಗಂಟೆ ಅವರ ಅನುಭವವನ್ನು ಆಲಿಸಬಹುದಿತ್ತು. ತಾನು ಪ್ರಧಾನ ಮಂತ್ರಿ ಆಗಲೆಂದೇ ಹುಟ್ಟಿದವನು ಎಂದು ಮನಸ್ಸಿಗೆ ಹೋದವರಿಗೆ ಕಲಿಯುವ ಮನಸ್ಸು ಕಡಿಮೆ.
ಕೆಲವು ತಿಂಗಳ ಕಾಲ ಪ್ರಧಾನಿ ಆಗಿದ್ದರೂ ಚಂದ್ರಶೇಖರ್ ದೇಶದಾದ್ಯಂತ ಪ್ರವಾಸ ಮಾಡಿದ್ದರು. ಇಂದು ಪ್ರಧಾನಿ ಆಗಿರುವ ನರೇಂದ್ರ ಮೋದಿ ಕೂಡ ದೇಶದಾದ್ಯಂತ ಒಬ್ಬ ಸಾಮಾನ್ಯನಾಗಿ ಪ್ರವಾಸ ಮಾಡಿ ಅನುಭವ ಪಡೆದುಕೊಂಡಿದ್ದರು. ಉಪಪ್ರಧಾನಿ ಆಗಿದ್ದ ಲಾಲ್ ಕೃಷ್ಣ ಆಡ್ವಾಣಿ ಜತೆ ಕೇವಲ ಮೈಕ್ ಹಿಡಿದುಕೊಳ್ಳಲು ಮೋದಿ ಬಂದಿರಲಿಲ್ಲ ಎಂಬುದು ಸ್ವತಃ ಆಡ್ವಾಣಿಗೆ ಗೊತ್ತಾಗಿದ್ದು ತೀರಾ ಇತ್ತೀಚೆಗೆ.
ನಿಮಗೆ ಗ್ರೌಂಡ್ ರಿಯಾಲಿಟಿ ಅರ್ಥ ಮಾಡಿಕೊಳ್ಳಲು ಅಸಾಧ್ಯವಾದರೆ ರಾಜಕೀಯ ಮಾಡುವುದು ಸುಲಭವಲ್ಲ. ಇಂದಿನ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚುನಾವಣಾ ತಂತ್ರಗಾರಿಕೆಗಿಂತಲೂ ಚುನಾವಣಾ ಮ್ಯಾನೇಜ್ ಮೆಂಟ್ ಕಲಿಯದಿದ್ದರೆ ನೀವು ಚುನಾವಣಾ ಪರೀಕ್ಷೆಯಲ್ಲಿ ಸೋತಂತೆಯೇ ಸರಿ. ಮಾತ್ರವಲ್ಲದೆ, ನಿಮ್ಮೊಂದಿಗೆ ಸಮಗ್ರವಾಗಿ ಸಜ್ಜಾದ ಸಂಘಟನೆ ಮತ್ತು ಸದಾ ಸನ್ನದ್ಧರಾದ ಯೋಧರು ಇಲ್ಲದೇ ಹೋದರೆ ಯಾವ ಯುದ್ಧವನ್ನೂ ಮಾಡುವುದು ಅಸಾಧ್ಯ.
Also Read: ಕಾಂಗ್ರೆಸ್ ಕಾರ್ಯಕರ್ತರಿಂದಲೇ ಮೋಸ ಹೋದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಸೋತಿದ್ದು ಇಲ್ಲೆ. ಕಾಂಗ್ರೆಸ್ ಅಧ್ಯಕ್ಷರ ಹಿಂದೆ ಸಮರ್ಥ ಸಂಘಟನೆಯೂ ಇರಲಿಲ್ಲ, ನಾಯಕ ಎತ್ತಿರುವ ವಿಚಾರಗಳನ್ನು ಸಮರ್ಥಿಸುವ ಮುಖಂಡರೂ ಇರಲಿಲ್ಲ, ತಳಮಟ್ಟದ ಜನರಿಗೆ ವಿಚಾರವನ್ನು ಮುಟ್ಟಿಸುವ ಸಂಘಟನೆಯೂ ಇರಲಿಲ್ಲ. ಕಾಂಗ್ರೆಸ್ ಪಕ್ಷದ ಸೋಶಿಯಲ್ ಮಿಡಿಯಾ ಎಂಬುದು ಸಿನಿಮಾ ಫೈಟಿನಂತೆ ಫೇಕ್ ಆಗಿತ್ತು. ಆದುದರಿಂದಲೇ, ರಫೇಲ್ ಲಂಚಾವತಾರ ವಿಚಾರ ಜನರಿಗೆ ಮನವರಿಕೆ ಆಗಲೇ ಇಲ್ಲ.
ರಾಜಕೀಯ ವಿಶ್ಲೇಷಕರ ಪ್ರಕಾರ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ವಿರೋಧಿಗಳಿಗೆ ಸುಲಭದ ಗುರಿ ಆಗುತ್ತಿದ್ದರು. ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ರಾಹುಲ್ ಗಾಂಧಿಯನ್ನು ಚುನಾವಣೆ ಸಂದರ್ಭದಲ್ಲಿ ದೂರ ಇರಿಸಿದಷ್ಟು ಪಕ್ಷಕ್ಕೆ ಒಳ್ಳೆಯದು. ಕಾಂಗ್ರೆಸ್ ಪಕ್ಷ ತನ್ನ ಪ್ರಾದೇಶಿಕ ಮುಖಂಡರ ಮೂಲಕ ಸಾಕಷ್ಟು ಮೇಲುಗೈ ಸಾಧಿಸಿದೆ. ಇತ್ತೀಚಿಗಿನ ಹರ್ಯಾಣ ಚುನಾವಣೆ ಇರಬಹುದು, ಪಂಜಾಬ್, ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶ, ಚತ್ತೀಸ್ ಗಡ ರಾಜ್ಯಗಳ ವಿಚಾರ ಇರಬಹುದು ಪ್ರಾದೇಶಿಕ ಮುಖಂಡರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇತ್ತೀಚಿಗಿನ ದಶಕಗಳಲ್ಲಿ ಗಾಂಧಿ ಕುಟುಂಬದ ಅಥವಾ ಹೆಸರಿನ ಪಾತ್ರ ಚುನಾವಣೆಯಲ್ಲಿ ಕಡಿಮೆ ಆಗುತ್ತಿದೆ. ಬಿಜೆಪಿಯಲ್ಲಿ ಕೂಡ ಗಾಂಧಿ ಸರ್ ನೇಮ್ ಹೊಂದಿದವರ ಪ್ರಭಾವ ಕಡಿಮೆ ಆಗಿದೆ.
ಬಿಜೆಪಿಯ ನರೇಂದ್ರ ಮೋದಿ ಮತ್ತು ಅಮಿತ್ ಶಾ ಎರಡು ರಾಜ್ಯಗಳ ಚುನಾವಣೆಯಲ್ಲಿ 25 ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ. ರಾಹುಲ್ ಗಾಂಧಿ ಭಾಗವಹಿಸಿರುವುದು ಕೇವಲ ಆರು ಸಮಾವೇಶಗಳಲ್ಲಿ. ಸೋನಿಯಾ ಮತ್ತು ಪ್ರಿಯಾಂಕಾ ಪ್ರಚಾರಕ್ಕೆ ಬಂದಿರಲೇ ಇಲ್ಲ. ಹಾಗಿದ್ದರೂ, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಹಿಂದಿನ ಚುನಾವಣೆಗಿಂತ ಉತ್ತಮ ಸಾಧನೆ ಮಾಡಿದ್ದಾರೆ. ಇಂತಹ ಚರ್ಚೆಯನ್ನು ಕಾಂಗ್ರೆಸ್ ವಕ್ತಾರ ಮತ್ತು ಹಿರಿಯ ಸುಪ್ರೀಂ ಕೋರ್ಟ್ ವಕೀಲರಾದ ಬ್ರಿಜೇಶ್ ಕಾಳಪ್ಪ ಸಾರಸಗಟಾಗಿ ನಿರಾಕರಿಸಿದ್ದಾರೆ. ಬಿಜೆಪಿಯು ರಾಹುಲ್ ಗಾಂಧಿ ಮತ್ತು ಸೋನಿಯ ಗಾಂಧಿ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಬಿಂಬಿಸಲು ಯತ್ನಿಸುತ್ತಿದೆ. ಯಾವ ಮುಖಂಡನ ಅನುಪಸ್ಥಿಯಿಂದಲೂ ಪಕ್ಷಕ್ಕೆ ಲಾಭ ಆಗುವುದಿಲ್ಲ. ರಾಹುಲ್ ಗಾಂಧಿ ಎರಡೂ ರಾಜ್ಯಗಳಲ್ಲಿ ಕೂಡ ಪ್ರಚಾರ ನಡೆಸಿದ್ದಾರೆ ಎಂದ ಮೇಲೆ ಇಂತಹ ಚರ್ಚೆ ಉದ್ಭವ ಆಗುವುದೇ ಇಲ್ಲ ಎಂದಿದ್ದಾರೆ ಕಾಳಪ್ಪ.
ಅಭಿಪ್ರಾಯಗಳು ಏನೇ ಇದ್ದರೂ ಪ್ರಾದೇಶಿಕ ಮುಖಂಡರಿಗೆ ಪೂರ್ಣ ಸ್ವಾತಂತ್ರ್ಯ, ಸಾಕಷ್ಟು ಸಮಯಾವಕಾಶ ನೀಡಿದಾಗ ಪಕ್ಷವನ್ನು ಮುನ್ನಡೆಸಿದ ಉದಾಹರಣೆಗಳು ಕಣ್ಣೆದುರಿಗೆ ಇವೆ. ಹರ್ಯಾಣದಲ್ಲಿ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಮುನ್ನಡೆ ಸಾಧಿಸಲು ಭೂಪೀಂದರ್ ಹೂಡ ಅವರ ನಾಯಕತ್ವ ಕಾರಣ ಆಗಿತ್ತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಗುಂಪುಗಾರಿಕೆ ಇಲ್ಲದೆ ಹೋಗಿದ್ದರೆ, ರಾಜ್ಯದೊಳಗೆ ಕೂಡ ಪ್ರಾದೇಶಿಕ ಮುಖಂಡರಿಗೆ ಮನ್ನಣೆ ನೀಡಿದ್ದರೆ ಫಲಿತಾಂಶ ಭಿನ್ನ ಆಗಿರುತಿತ್ತು.
ಅಧಿಕಾರ ಬರುತ್ತದೆಯೊ ಇಲ್ಲವೊ ಜನರ ಸೇವೆಯಲ್ಲಿ ಇರಬೇಕು, ತಮ್ಮತನ ತೋರಿಸಬೇಕು ಎಂಬ ಛಾತಿ ಹೊಂದಿದ ಕಾರಣ 76 ಹರೆಯದ ಶರದ್ ಪವಾರ್ ಅವರ ಪಕ್ಷ ಕಾಂಗ್ರೆಸ್ಸಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ರಾಷ್ಟ್ರೀಯ ಮುಖಂಡರಾಗಲಿ, ಪ್ರಾದೇಶಿಕ ಮುಖಂಡರಾಗಲಿ ಬಿಜೆಪಿ ವಿರುದ್ಧದ ಮತಗಳನ್ನು ಒಡೆಯುವ ಪ್ರಕಾಶ್ ಅಂಬೇಡ್ಕರ್ ಅವರಂತಹ ಹಲವು ಮುಖಂಡರ ಸಖ್ಯ ಮಾಡುತ್ತಿದ್ದರೆ ಮೈತ್ರಿ ಕೂಡ ಆಡಳಿತ ಹಿಡಿಯುತಿತ್ತು. ಇದು ರಾಷ್ಟ್ರೀಯ ಮುಖಂಡರ ವೈಫಲ್ಯ. ಇದಕ್ಕೆ ರಾಜಕೀಯ ಪ್ರಬುದ್ಧತೆ ಮತ್ತು ವಾಸ್ತವಗಳ ಅಂಕಿ ಅಂಶ ಬೇಕು.
ಸುಳ್ಳು ಅಂಕಿ ಅಂಶ ನೀಡುವ ಸಮಯ ಸಾಧಕರನ್ನು, ಸಿನಿಮಾ ನಟಿಯರ ಸೋಶಿಯಲ್ ಮಿಡಿಯಾ ನಂಬಿಕೊಂಡು ಚುನಾವಣೆ ಗೆಲ್ಲಲು ಆಗುವುದಿಲ್ಲ ಎಂಬುದು ರಾಹುಲ್ ಗಾಂಧಿಗೆ ಗೊತ್ತಾಗಿದೆ. ಕಾಂಗ್ರೆಸ್ಸಿನವರಿಗೆ ಗೊತ್ತಾಗಬೇಕಲ್ಲ.