ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಹುಬ್ಬಳ್ಳಿಯ ಬಿಜೆಪಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಡಿದ ಮಾತುಗಳ ಆಡಿಯೋ ಬಹಿರಂಗವಾಗಿರುವುದು ಪ್ರತಿಪಕ್ಷಗಳಿಗೆ ಬಿಜೆಪಿ ವಿರುದ್ಧ ಹೋರಾಟ ಮಾಡಲು ಒಳ್ಳೆಯ ಅಸ್ತ್ರ ಒದಗಿಸಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ಈ ಆಡಿಯೋ ಇಟ್ಟುಕೊಂಡು ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಶಾಸಕರಿಗೆ ಆಮಿಷವೊಡ್ಡಿ ಮೈತ್ರಿ ಸರ್ಕಾರ ಬೀಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ, ಯಡಿಯೂರಪ್ಪ ಕಾರಣರಾಗಿದ್ದು ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದರ ಜತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಿಯೋವನ್ನೇ ಇಟ್ಟುಕೊಂಡು ಕೋರ್ಟ್ ಮತ್ತು ಬೀದಿ ಹೋರಾಟ ನಡೆಸುವುದಾಗಿಯೂ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ. ಇದುವರೆಗೆ ಪ್ರವಾಹ ಪರಿಹಾರದಲ್ಲಿ ಸರ್ಕಾರ ವಿಫಲ ಎಂಬ ಒಂದೇ ಮಂತ್ರ ಇಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟಕ್ಕೆ ಪರದಾಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ಪಕ್ಷದವರೇ ಹೊಸ ಅಸ್ತ್ರ ಒದಗಿಸಿದ್ದಾರೆ.
ಇದರ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲೂ ಯಡಿಯೂರಪ್ಪ ಅವರ ಆಡಿಯೋ ಬಹಿರಂಗವಾಗಿರುವುದು ಆಂತರಿಕವಾಗಿ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಅವರ ಆಪ್ತ ವಲಯದವರು ಆಡಿಯೋ ಬಹಿರಂಗಗೊಳಿಸಿದ ಆರೋಪವನ್ನು ನೇರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುಂಪಿನ ಮೇಲೆ ಹಾಕಿದ್ದಾರೆ. ಆದರೆ, ಕಾಗವಾಡ ಮತ್ತು ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತ ಗೊಂದಲವೇ ಆಡಿಯೋ ಬಹಿರಂಗಗೊಳ್ಳಲು ಕಾರಣ ಎಂಬುದು ಅದನ್ನು ಕೇಳಿದಾಗ ಸ್ಪಷ್ಟವಾಗುತ್ತದೆ. ಏಕೆಂದರೆ, ಸಭೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದೇ ಈ ಎರಡು ಕ್ಷೇತ್ರಗಳ ಬಗ್ಗೆ. ಇಲ್ಲಿ ಬಿಜೆಪಿಯ ಪರಾಜಿತ ಅಭ್ಯರ್ಥಿಗಳಿಗೆ (ಮಾಜಿ ಶಾಸಕ ರಾಜು ಕಾಗೆ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ) ಟಿಕೆಟ್ ಸಿಗುವುದು ಕಷ್ಟ ಎಂಬುದು ಸ್ಪಷ್ಟವಾದ ಬಳಿಕ ಆಡಿಯೋ ಬಹಿರಂಗಗೊಂಡಿದೆ.
ಹುಬ್ಬಳ್ಳಿ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಭಾಷಣ ಆರಂಭಿಸಿದ ತಕ್ಷಣ ಒಂದು ಮಾತು ಹೇಳಿದ್ದರು. ಈ ಸಭೆಯ ಚರ್ಚೆಗಳನ್ನು ನೀವೇ ಸುದ್ದಿ ಮಾಡ್ತೀರಿ. ಸಭೆಯಲ್ಲಿ ಚರ್ಚೆಯಾದ ವಿಷಯ ಹೊರಗೆ ಹೋಗಿಯೇ ಹೋಗುತ್ತದೆ ಎಂದು ನನಗೆ ನೂರಕ್ಕೆ ನೂರು ವಿಶ್ವಾಸವಿದೆ ಎಂದು ಹೇಳಿದ್ದರು. ಇದಾದ ಬಳಿಕ ನಿಮಗೆ ಕೈ ಮುಗಿದು ಕೇಳುತ್ತೇನೆ, ಸಭೆಯಲ್ಲಿ ಆಗುವ ಚರ್ಚೆಯ ಒಂದೇ ಒಂದು ಶಬ್ಧ ಹೊರಗೆ ಹೋಗಬಾರದು ಎಂದು ಹೇಳಿದ್ದರು. ಈ ವಿಚಾರದಲ್ಲಿ ಸಭೆಯಲ್ಲಿದ್ದವರು ಒಂದು ಶಬ್ಧ ಹೊರಹೋಗಬಾರದು ಎಂಬ ಯಡಿಯೂರಪ್ಪ ಅವರ ಮಾತನ್ನು ಉಲ್ಲಂಘಿಸಿದ್ದಾರಾದರೂ ಸಭೆಯ ವಿಷಯಗಳನ್ನು ನೀವೇ ಸುದ್ದಿ ಮಾಡುತ್ತೀರಿ ಎಂದು ಅವರಲ್ಲಿದ್ದ ವಿಶ್ವಾಸ ಉಳಿಸಿಕೊಂಡಿದ್ದಾರೆ! ಆ ಮೂಲಕ ಸರ್ಕಾರ ಉರುಳಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ತಮಗೆ ಅಧಿಕಾರ, ಅವಕಾಶ ನೀಡದವರನ್ನು ನೆಮ್ಮದಿಂಯಿಂದ ಮುಂದುವರಿಯಲು ಬಿಡುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ.
ಇನ್ನು ಕಾಂಗ್ರೆಸ್ ವಿಚಾರದಲ್ಲಿ ನೋಡುವುದಾದರೆ, ಯಡಿಯೂರಪ್ಪ ಅವರ ಆಡಿಯೋ ಹಿಡಿದುಕೊಂಡು ಸರ್ಕಾರದ ವಿರುದ್ಧ ಕಾನೂನು ಹೋರಾಟ ಮತ್ತು ಬೀದಿ ಹೋರಾಟ ನಡೆಸುವುದಾಗಿ ಆ ಪಕ್ಷದ ನಾಯಕರು ಘೋಷಿಸಿದ್ದಾರೆ. ಆದರೆ, ಅದು ಸಾಧ್ಯವೇ ಎಂಬ ಪ್ರಶ್ನೆ ಪಕ್ಷದ ವಲಯದಲ್ಲೇ ಕೇಳಿಬರುತ್ತಿದೆ. ಏಕೆಂದರೆ, ಪಕ್ಷದೊಳಗೆ ತಮಗೆ ತಾವೇ ಕಾಲೆಳೆದುಕೊಳ್ಳುತ್ತಿರುವ ನಾಯಕರು ಈ ಅಸ್ತ್ರವನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ ಎಂಬ ವಿಶ್ವಾಸ ಎರಡನೇ ಹಂತದ ಮುಖಂಡರು ಮತ್ತು ಕಾರ್ಯಕರ್ತರಿಗೆ ಇಲ್ಲ.
ಈ ಆಡಿಯೋ ಹಿಡಿದುಕೊಂಡು ಕಾನೂನು ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಹೇಳಿದ್ದರೂ ಅದರಿಂದ ಪ್ರಯೋಜನವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರ ಮಾತಿನಲ್ಲಿ ನಾವೇ ಅವರನ್ನು ರಾಜೀನಾಮೆ ಕೊಡಿಸಿ ಸರ್ಕಾರ ಉರುಳಿಸಿದೆವು ಎಂದು ಎಲ್ಲಿಯೂ ಹೇಳಿಲ್ಲ. 17 ಜನರ ವಿಚಾರದಲ್ಲಿ ಯಡಿಯೂರಪ್ಪ ಅಥವಾ ರಾಜ್ಯದ ಮುಖಂಡರು ತೀರ್ಮಾನ ತೆಗೆದುಕೊಂಡಿದ್ದಲ್ಲ. ರಾಷ್ಟ್ರೀಯ ಅಧ್ಯಕ್ಷರಿಗೆ ಎಲ್ಲವೂ ಗೊತ್ತಿತ್ತು. ಅವರನ್ನು ಎರಡು ತಿಂಗಳು ಮುಂಬೈನಲ್ಲಿ ಇಟ್ಟು ನೋಡಿಕೊಂಡಿದ್ದರು. ನಮ್ಮನ್ನು ನಂಬಿ ಅನರ್ಹ ಶಾಸಕರು ಬಂದಿದ್ದಾರೆ ಎಂಬಂತಹ ಮಾತುಗಳಿವೆಯೇ ಹೊರತು ಪಕ್ಷಾಂತರಕ್ಕೆ ಕುಮ್ಮಕ್ಕು ನೀಡಿದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಇನ್ನೊಂದೆಡೆ ಕಾಂಗ್ರೆಸ್ ಕಾನೂನು ಹೋರಾಟ ಆರಂಭಿಸುವ ಮುನ್ನ ಶಾಸಕರ ಅನರ್ಹತೆ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದಿರುತ್ತದೆ. ಒಮ್ಮೆ ಪ್ರಕರಣ ಇತ್ಯರ್ಥವಾದರೆ ಬಳಿಕ ಅದರ ವಿರುದ್ಧ ಕಾನೂನು ಹೋರಾಟ ನಡೆಸುವುದು ಸುಲಭವೇನೂ ಅಲ್ಲ. ಹೀಗಾಗಿ ಕಾನೂನು ಹೋರಾಟದಲ್ಲಿ ಕಾಂಗ್ರೆಸ್ ಲಾಭ ಪಡೆಯುವ ಸಾಧ್ಯತೆ ಕಾಣಿಸುತ್ತಿಲ್ಲ.
ಉಳಿದಿರುವುದು ಬೀದಿ ಹೋರಾಟದ ವಿಷಯ. ಗುಂಪುಗಾರಿಕೆಯಿಂದ ಬಳಲುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಈಗ ಬೀದಿ ಹೋರಾಟ ಎಂದರೆ ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಏಕಾಂಗಿ ಹೋರಾಟ ಎನ್ನುವಂತಾಗಿದೆ. ಕೆಪಿಸಿಸಿ ರಾಜ್ಯಾಧ್ಯಕ್ಷರು ಸೇರಿದಂತೆ ಪಕ್ಷದ ಪ್ರಮುಖ ಪದಾಧಿಕಾರಿಗಳು ಬೀದಿ ಹೋರಾಟದ ಮೂಲಕ ಮೈ ನೋಯಿಸಿಕೊಳ್ಳಲು ಮುಂದಾಗುತ್ತಿಲ್ಲ. ಅವರ ಹೋರಾಟ ಏನಿದ್ದರೂ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮ ಗೋಷ್ಠಿಗಳಲ್ಲಿ ಟೀಕೆ, ಆರೋಪಗಳನ್ನು ಮಾಡುತ್ತಾ ಹೋರಾಟದ ಘೋಷಣೆಗಳನ್ನು ಮಾಡುವುದಕ್ಕಷ್ಟೇ ಸೀಮಿತವಾಗಿದೆ. ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಬೀದಿ ಹೋರಾಟಕ್ಕೆ ಸಿದ್ದರಾಮಯ್ಯ ಅವರಿಗೆ ಇತರೆ ನಾಯಕರು ಕೈಜೋಡಿಸುತ್ತಾರೆ ಎಂಬ ಖಾತರಿ ಇಲ್ಲ. ಈ ರೀತಿಯಾದರೆ ಬೀದಿ ಹೋರಾಟವೂ ಠುಸ್ ಪಟಾಕಿ ಆಗಬಹುದು.
ಏಕೆಂದರೆ, ನೆರೆ ಪರಿಹಾರದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಳೆದ ತಿಂಗಳು ಕಾಂಗ್ರೆಸ್ ಬೆಳಗಾವಿಯಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿತ್ತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಕಾಂಗ್ರೆಸ್ ನ ಬಹುತೇಕ ನಾಯಕರು ಕಾಣಿಸಿಕೊಂಡಿದ್ದರು. ಪ್ರತಿಭಟನೆ ವೇಳೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪಾದಯಾತ್ರೆ ನಡೆಸುವ ಬಗ್ಗೆ ತೀರ್ಮಾನವಾಗಿತ್ತು. ಆದರೆ, ಇದುವರೆಗೆ ಸಿದ್ದರಾಮಯ್ಯ ಹೊರತಾಗಿ ಯಾವೊಬ್ಬ ನಾಯಕರೂ ಈ ಬಗ್ಗೆ ಗಂಭೀರವಾಗಿ ಯೋಚಿಸಿಲ್ಲ. ಸಿದ್ದರಾಮಯ್ಯ ಮಾತ್ರ ಪ್ರವಾಹಪೀಡಿತ ಪ್ರದೇಶಗಲಿಗೆ ತೆರಳಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಉಳಿದವರೆಲ್ಲರೂ ಸಾಮಾಜಿಕ ಜಾಲತಾಣಗಳು, ಪತ್ರಿಕಾಗೋಷ್ಠಿಗಳಿಗೆ ಸೀಮಿತರಾಗಿದ್ದಾರೆ. ಇದರ ಮಧ್ಯೆ ಆದಾಯ ತೆರಿಗೆ ದಾಳಿ ಬಳಿಕ ಡಾ.ಜಿ.ಪರಮೇಶ್ವರ್ ಹೊರಗೆ ಹೆಚ್ಚಾಗಿ ಕಾಣಿಸಿಕೊಳ್ಳದೇ ಇರುವುದು, ಜಾರಿ ನಿರ್ದೇಶನಾಯಲದಿಂದ ಬಂಧನಕ್ಕೊಳಗಾಗಿ ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಡಿ.ಕೆ.ಶಿವಕುಮಾರ್ ಅವರ ಅನಾರೋಗ್ಯ ಕೂಡ ಕಾಂಗ್ರೆಸ್ ಹೋರಾಟದ ಶಕ್ತಿ ಕ್ಷೀಣಿಸುವಂತೆ ಮಾಡಲಿದೆ. ಹೀಗಾಗಿ ಯಡಿಯೂರಪ್ಪ ಅವರ ಆಡಿಯೋ ಬಹಿರಂಗ ಪ್ರಕರಣದ ಲಾಭವನ್ನು ಕಾಂಗ್ರೆಸ್ ಹೇಗೆ ಪಡೆಯುತ್ತದೆಯೋ ಕಾದು ನೋಡಬೇಕು.