ಹಣಕಾಸು ಮಾರುಕಟ್ಟೆ ಮತ್ತು ಷೇರುಪೇಟೆಯ ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಮೂಲ ಅಂಶಗಳಷ್ಟು ತಗ್ಗಿಸಿದೆ. ಮೂರು ದಿನಗಳ ಕಾಲ ನಡೆದ ದ್ವೈಮಾಸಿಕ ಹಣಕಾಸು ನೀತಿ ಸಮಿತಿಯ ಸುಧೀರ್ಘ ಸಭೆಯ ನಂತರ ಗವರ್ನರ್ ಶಕ್ತಿಕಾಂತದಾಸ್ ರೆಪೋ ದರ ತಗ್ಗಿಸುವ ನಿರ್ಧಾರವನ್ನು ಪ್ರಕಟಿಸಿದರು. ಜಿಡಿಪಿ ದರ ಆರುವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ಹಿನ್ನೆಲೆಯಲ್ಲಿ ಮತ್ತು ಹಣದುಬ್ಬರ ನಿಯಂತ್ರಣದಲ್ಲಿದ್ದ ಕಾರಣದಿಂದಾಗಿ ರೆಪೊದರ (ಬ್ಯಾಂಕುಗಳಿಗೆ ಆರ್ ಬಿ ಐ ನೀಡುವ ಸಾಲದ ಮೇಲಿನ ಬಡ್ಡಿದರ)ವನ್ನು 25 ಅಂಶಗಳಷ್ಟು ಕಡಿತ ಮಾಡುವ ನಿರೀಕ್ಷೆ ಎಲ್ಲರಲ್ಲಿತ್ತು.
ಆಗಸ್ಟ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ 35 ಮೂಲ ಅಂಶಗಳಷ್ಟು ಬಡ್ಡಿದರವನ್ನು ಕಡಿತ ಮಾಡಿತ್ತು. ಈಗ 25 ಮೂಲ ಅಂಶಗಳಷ್ಟು ಕಡಿತ ಮಾಡುವುದರೊಂದಿಗೆ ರೆಪೊದರ ಶೇ. 5.15ಕ್ಕೆ ತಗ್ಗಿದೆ. ಪ್ರಸಕ್ತ ವರ್ಷದಲ್ಲಿ ಇದುವರೆಗೆ ನಡೆದಿರುವ ನಾಲ್ಕು ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಒಟ್ಟಾರೆ 110 ಮೂಲ ಅಂಶಗಳಷ್ಟು ಬಡ್ಡಿದರ ದರ ಕಡಿತ ಮಾಡಿದಂತಾಗಿದೆ.
ತತ್ಪರಿಣಾಮವಾಗಿ ಬ್ಯಾಂಕುಗಳಿಂದ ಗ್ರಾಹಕರು ಪಡೆಯುವ ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ಹಾಗೆಯೇ ಗ್ರಾಹಕರು ಬ್ಯಾಂಕುಗಳಲ್ಲಿ ವಿವಿಧ ಉಳಿತಾಯ ಯೋಜನೆಗಳಡಿ ಇಟ್ಟಿರುವ ಠೇವಣಿಗಳ ಮೇಲಿನ ಬಡ್ಡಿದರವೂ ಕಡಿತವಾಗಲಿದೆ.
ಬಡ್ಡಿದರ ಕಡಿತ ಮಾಡಿರುವುದರಿಂದ ಬರಲಿರುವ ಸಾಲು ಸಾಲು ಹಬ್ಬಗಳಲ್ಲಿ ಜನರು ಉತ್ಸಾಹದಿಂದ ಖರೀದಿ ಮಾಡಿ, ಕುಸಿದಿರುವ ಆರ್ಥಿಕತೆಗೆ ಚೇತರಿಕೆ ನೀಡಬಹುದೆಂಬ ನಿರೀಕ್ಷೆ ಇದೆ. ಆದರೆ, ರೆಪೊ ದರಕ್ಕೆ ಅನುಗುಣವಾಗಿ ಬ್ಯಾಂಕುಗಳು ಎಷ್ಟು ತ್ವರಿತವಾಗಿ ಬಡ್ಡಿದರ ಕಡಿತ ಮಾಡುತ್ತವೆ ಎಂಬುದನ್ನು ಇದು ಅವಲಂಬಿಸಿದೆ. ಇದುವರೆಗೆ ರೆಪೊ ದರಕ್ಕೆ ಪೂರಕವಾಗಿ ಗ್ರಾಹಕರಿಗೆ ಕಡಿಮೆ ಬಡ್ಡಿದರದ ಲಾಭ ವರ್ಗಾಹಿಸುವಂತೆ ಆರ್ ಬಿ ಐ ಬ್ಯಾಂಕುಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರೂ ಬಹುತೇಕ ಬ್ಯಾಂಕುಗಳು ಪಾಲಿಸಿಲ್ಲ. ವಿತ್ತೀಯ ಪ್ರಸರಣವು ಬಹುತೇಕ ಸ್ಥಗಿತಗೊಂಡಿದೆ ಮತ್ತು ಅಪೂರ್ಣವಾಗಿದೆ ಎಂಬುದನ್ನು ಆರ್ ಬಿ ಐ ಗಮನಿಸಿದೆ. ಫೆಬ್ರವರಿ-ಆಗಸ್ಟ್ 2019 ರ ಅವಧಿಯಲ್ಲಿ ಒಟ್ಟಾರೆ 110 ಮೂಲ ಅಂಶಗಳಷ್ಟು ರೆಪೋ ದರ ಕಡಿತವಾಗಿದ್ದರೂ ಬ್ಯಾಂಕುಗಳ ಹೊಂದಾಣಿಕೆ ಮಾಡಲಾದ ಸಾಲಗಳ ಮೇಲಿನ ಸರಾಸರಿ ಬಡ್ಡಿದರವನ್ನು (ಡಬ್ಲ್ಯೂಎಎಲ್ಆರ್) 29 ಮೂಲ ಅಂಶಗಳಷ್ಟು ಮಾತ್ರ ತಗ್ಗಿಸಿವೆ ಎಂದೂ ಆರ್ ಬಿ ಐ ಹೇಳಿದೆ.
ಜಿಡಿಪಿ ಮುನ್ನಂದಾಜು ಗಣನೀಯ ಇಳಿಕೆ
ಬಡ್ಡಿದರ ನಿಗದಿ ಮಾಡುವಲ್ಲಿ ಹೊಂದಾಣಿಕೆಯ ನಿಲುವನ್ನು ಮುಂದುವರಿಸಲು ಆರ್ ಬಿ ಐ ನಿರ್ಧರಿಸಿದೆ. ಅಂದರೆ, ಪರಿಸ್ಥಿತಿ ಅಗತ್ಯಕ್ಕೆ ಅನುಗುಣವಾಗಿ ಭವಿಷ್ಯದಲ್ಲಿ ಬಡ್ಡಿದರ ತಗ್ಗಿಸುವ ಅಥವಾ ಹಿಗ್ಗಿಸುವ ಮುಕ್ತ ಅವಕಾಶ ಇಟ್ಟುಕೊಂಡಿದೆ. ದ್ವೈಮಾಸಿಕ ಹಣಕಾಸು ನೀತಿ ಸಭೆಯಲ್ಲಿ ಕೈಗೊಂಡ ಮತ್ತೊಂದು ಪ್ರಮುಖ ನಿರ್ಧಾರ ಎಂದರೆ ಪ್ರಸಕ್ತ ವಿತ್ತೀಯ ವರ್ಷದ (2019-20) ಅಂದಾಜು ಜಿಡಿಪಿ ದರವನ್ನು ಶೇ.6.9 ರಿಂದ ಶೇ.6.1ಕ್ಕೆ ತಗ್ಗಿಸಿದೆ. ಹಿಂದೆ ಅಂದಾಜಿಸಿದ್ದಕ್ಕಿಂತ ಶೇ.0.8ರಷ್ಟು ಪ್ರಮಾಣದಲ್ಲಿ ತಗ್ಗಿಸಿರುವುದು ಗಮನಾರ್ಹ. ಮುಂದಿನ ವಿತ್ತೀಯ ವರ್ಷದ ಅಂದರೆ 2020-21ನೇ ಸಾಲಿನ ಮೊದಲ ತ್ರೈಮಾಸಿಕದ ಜಿಡಿಪಿ ಮುನ್ನಂದಾಜನ್ನು ಶೇ. 7.2ಕ್ಕೆ ತಗ್ಗಿಸಿದೆ.
ಸರ್ಕಾರವು ಆರ್ಥಿಕತೆಗೆ ಚೇತರಿಕೆ ನೀಡಲು ಕೈಗೊಂಡಿರುವ ವಿವಿಧ ಕ್ರಮಗಳಿಂದಾಗಿ ಖಾಸಗಿ ವಲಯದಲ್ಲಿನ ಹೂಡಿಕೆ ಮತ್ತು ಖಾಸಗಿ ಬಳಕೆ ಹೆಚ್ಚಳವಾಗಬಹುದೆಂದು ನಿರೀಕ್ಷಿಸಿದ್ದರೂ, ಒಟ್ಟಾರೆ ಆರ್ಥಿಕತೆಯು ಋಣಾತ್ಮಕ ಬೆಳವಣಿಗೆ ವಿಸ್ತರಣೆಗೊಂಡಿದೆ ಎಂದು ಹಣಕಾಸು ನೀತಿ ಸಮಿತಿಯು ಅಭಿಪ್ರಾಯ ಪಟ್ಟಿದೆ.
ಪ್ರಸ್ತುತ ದೇಶದ ಆರ್ಥಿಕ ಪರಿಸ್ಥಿತಿಯ ಚೇತರಿಕೆಗೆ ಬಡ್ಡಿದರ ಕಡಿತ ಅತ್ಯಗತ್ಯವಾಗಿದ್ದರಿಂದ ಹಣಕಾಸು ಸಮಿತಿ ಸಮಿತಿಯ ಎಲ್ಲಾ ಸದಸ್ಯರು ಒಮ್ಮತದಿಂದ ಬಡ್ಡಿ ದರ ತಗ್ಗಿಸಲು ಒಪ್ಪಿದ್ದಾರೆ. ರವೀಂದ್ರ ಧಲಾಕಿಯಾ 40 ಮೂಲ ಅಂಶಗಳಷ್ಟು ಬಡ್ಡಿದರ ಕಡಿತ ಮಾಡುವ ಪರವಾಗಿದ್ದರೆ, ಉಳಿದೆಲ್ಲ ಸದಸ್ಯರು 25 ಮೂಲ ಅಂಶಗಳಷ್ಟು ಬಡ್ಡಿದರ ಕಡಿತ ಮಾಡುವುದರ ಪರವಾಗಿದ್ದರು. ಪ್ರಸಕ್ತ ವಿತ್ತೀಯ ವರ್ಷದ ದ್ವಿತೀಯ ತ್ರೈಮಾಸಿಕದ ಚಿಲ್ಲರೆ ದರ ಹಣದುಬ್ಬರವನ್ನು ಶೇ. 3.4ಕ್ಕೆ ಪರಿಷ್ಕರಿಸಲಾಗಿದ್ದು, ವರ್ಷದ ಉತ್ತರಾರ್ಧದಲ್ಲಿ ಚಿಲ್ಲರೆ ದರ ಹಣದುಬ್ಬರವು ಶೇ. 3.5-3.7 ರಷ್ಟಾಗಬಹುದು ಎಂದು ಮುನ್ನಂದಾಜು ಮಾಡಾಲಾಗಿದೆ. 2020-21ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಶೇ. 3.6ರಷ್ಟಾಗಬಹುದೆಂದು ಅಂದಾಜಿಸಲಾಗಿದೆ.
ಬಡ್ಡಿದರ ಇಳಿಕೆಗೆ ಷೇರುಪೇಟೆ ಉತ್ತಮವಾಗಿ ಸ್ಪಂದಿಸಿಲ್ಲ. ಬಡ್ಡಿದರ ಘೋಷಣೆ ಮಾಡಿರುವುದರ ಜತೆಗೆ ಜಿಡಿಪಿ ಮುನ್ನಂದಾಜು ಕಡಿತ ಮಾಡಿದ್ದರಿಂದಾಗಿ ಆರಂಭದ ಏರಿಕೆಯಿಂದ ಬಹುತೇಕ ಸೂಚ್ಯಂಕಗಳು ಕುಸಿದವು. ನಿಫ್ಟಿ, 100, ಸೆನ್ಸೆಕ್ಸ್ 300 ಮತ್ತು ಬ್ಯಾಂಕ್ ನಿಫ್ಟಿ 600 ಅಂಶಗಳಷ್ಟು ಕುಸಿತವನ್ನು ದಿನದ ವಹಿವಾಟಿನಲ್ಲಿ ದಾಖಲಿಸಿದವು. ಡಾಲರ್ ವಿರುದ್ಧ ರುಪಾಯಿ ಸಹ ಹತ್ತು ಪೈಸೆಗಳ ಕುಸಿತ ದಾಖಲಿಸಿತು.
ವಿದೇಶಿ ವಿನಿಮಯ ಮೀಸಲು ಹೆಚ್ಚಳ:
ಕಳೆದ ಆರು ತಿಂಗಳ ಅವಧಿಯಲ್ಲಿ ವಿದೇಶಿ ವಿನಿಮಯ ಮೀಸಲು 21.7 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಿದೆ. ಮಾರ್ಚ್ 31ರಂದು 412.9 ಬಿಲಿಯನ್ ಡಾಲರ್ ಇದ್ದದ್ದು, ಅಕ್ಟೋಬರ್ 1ರಂದು ಇದ್ದಕ್ಕಿದ್ದಂತೆ 434.6 ಬಿಲಿಯನ್ ಡಾಲರ್ ಗೆ ಏರಿದೆ. ಬ್ಯಾಂಕುಗಳಲ್ಲಿ ವಂಚನೆ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಪ್ರತ್ಯೇಕ ನಿಗಾ ವಿಭಾಗವನ್ನು ತೆರೆಯಲಾಗಿದೆ. ಸಹಕಾರ ಬ್ಯಾಂಕುಗಳಲ್ಲಿನ ಇದುವರೆಗೆ ವರದಿಯಾಗಿರುವ ವಂಚನೆ ಪ್ರಕರಣಗಳನ್ನು ಸಾಮಾನ್ಯಕರಿಸಬಾರದು. ಭಾರತದ ಬ್ಯಾಂಕುಗಳು ಸದೃಢವಾಗಿವೆ, ಗ್ರಾಹಕರು ವದಂತಿಗಳಿಗೆ ಕಿವಿಗೊಡಬಾರದು, ಗ್ರಾಹಕರ ಠೇವಣಿ ಸುರಕ್ಷಿತವಾಗಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಆರ್ಥಿಕತೆ ಚೇತರಿಕೆ ಮರೀಚಿಕೆಯೇ?
ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಎಂಟು ತಿಂಗಳಲ್ಲಿ 110 ಮೂಲ ಅಂಶಗಳಷ್ಟು ರೆಪೋ ದರ ತಗ್ಗಿಸಿದ್ದರೂ, ಒಟ್ಟಾರೆ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬಂದಿಲ್ಲ. ಅಲ್ಲದೇ ಇದುವರೆಗೆ ಪ್ರಕಟವಾಗಿರುವ ಅಂಕಿ ಅಂಶಗಳು ಆರ್ಥಿಕತೆ ಮತ್ತಷ್ಟು ಕುಸಿಯುವ ಮುನ್ಸೂಚನೆ ನೀಡಿವೆ. ಖುದ್ದು ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಜಿಡಿಪಿ ಮುನ್ನಂದಾಜನ್ನು ಶೇ. 6.1ಕ್ಕೆ ತಗ್ಗಿಸಿದೆ. ಎರಡು ತಿಂಗಳ ಹಿಂದೆ ಶೇ. 6.9ರಷ್ಟು ಇದ್ದ ಮುನ್ನಂದಾಜನ್ನು ಗಣನೀಯವಾಗಿ ತಗ್ಗಿಸಿರುವುದು ಆರ್ಥಿಕ ಅಭಿವೃದ್ಧಿಯ ಇಳಿಜಾರು ಹಾದಿಯಿ ಇನ್ನೂ ಮುಗಿದಿಲ್ಲ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು 18 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು, ಉತ್ಪಾದನಾ ವಲಯದಲ್ಲಿನ ಹಿಂಜರಿತ ಹಿಗ್ಗಿರುವುದು ದೇಶದ ಆರ್ಥಿಕತೆ ಮತ್ತಷ್ಟು ಕುಸಿಯುವ ಮುನ್ಸೂಚನೆಯಾಗಿವೆ. ಆರ್ಥಿಕತೆಗೆ ಚೇತರಿಕೆ ನೀಡುವ ಹೆಸರಿನಲ್ಲಿ ಕೇಂದ್ರ ಸರ್ಕಾರವು ಕಾರ್ಪೊರೆಟ್ ವಲಯಕ್ಕೆ ಕೊಡಮಾಡಿರುವ ಕಾರ್ಪೊರೆಟ್ ತೆರಿಗೆ ಕಡಿತದ ಉಡುಗೊರೆಯು ಒಟ್ಟಾರೆ ತೆರಿಗೆ ಸಂಗ್ರಹದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ವಿತ್ತೀಯ ಕೊರತೆ ಹಿಗ್ಗಲು ಕಾರಣವಾಗಬಹುದು.
ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ ಶೇ.3.3ರ ವಿತ್ತೀಯ ಕೊರತೆ ಮಿತಿ ಕಾಯ್ದುಕೊಳ್ಳುವುದಾಗಿ ಹೇಳಿರುವುದರಿಂದ ಆರ್ ಬಿ ಐ ಆ ಕುರಿತಂತೆ ಹಣಕಾಸು ನೀತಿ ಪರಾಮರ್ಶೆ ವೇಳೆ ಚರ್ಚಿಸಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಶ್ ಸ್ಪಷ್ಪಪಡಿಸಿದ್ದಾರೆ. ಆದರೆ, ಕಾರ್ಪೊರೆಟ್ ತೆರಿಗೆ ಕಡಿತದ ಹೊರೆ 1.45 ಲಕ್ಷ ಕೋಟಿ ರುಪಾಯಿಗಳ ಜತೆಗೆ ಜಿ ಎಸ್ ಟಿ ತೆರಿಗೆ ಕುಸಿತವನ್ನೂ ಕೇಂದ್ರ ಸರ್ಕಾರ ಸರಿದೂಗಿಸಬೇಕಿದೆ. ಅದಕ್ಕೆಲ್ಲ ಎಲ್ಲಿಂದ ಸಂಪನ್ಮೂಲ ಕ್ರೋಢೀಕರಿಸುತ್ತದೆ ಎಂಬುದೀಗ ಬಿಲಿಯನ್ ಡಾಲರ್ ಪ್ರಶ್ನೆ!