“ಈತನ ಬಗ್ಗೆ ಕಥೆಗಳನ್ನು ಕೇಳುತ್ತಾ, ಈತನ ಉಪದೇಶಗಳನ್ನು ಓದುತ್ತಾ ನಾವೆಲ್ಲ ಈ ಗೌತಮ ಅಥವಾ ಸಿದ್ಧಾರ್ಥ ಎಂಬ ಮನುಷ್ಯನ ಬಗ್ಗೆ ದಡ್ಡುಗಟ್ಟಿದ್ದೇವೆ. ಈತ ಇನ್ನೊಬ್ಬ ಮಹಾತ್ಮ ಎಂದು ತಿಳಿದು ನಿರ್ಲಕ್ಷಿಸಲು ಬೇಕಾದ ಗೌರವವನ್ನು ಮಾತ್ರ ಇಟ್ಟುಕೊಂಡು ಸುಮ್ಮನಾಗುತ್ತೇವೆ.”
ಇದು ಸುಮಾರು ಮೂವತ್ತು ವರ್ಷಗಳ ಹಿಂದೆ ಪಿ ಲಂಕೇಶರು ಬುದ್ಧನ ಕುರಿತ ತಮ್ಮ ಬಹಳ ಜನಪ್ರಿಯ ಟೀಕೆಟಿಪ್ಪಣಿ ‘ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ..’ ಹೇಳುವ ಮಾತು. ಲಂಕೇಶರು, ಬುದ್ಧನ ಕುರಿತ ಭಾರತೀಯರ ಮನೋಧರ್ಮ ಕುರಿತು ಆಡಿದ ಕರಾರುವಕ್ಕಾದ ಈ ಮಾತು, ಇಂದು ಬಸವ ಜಯಂತಿಯ ಹೊತ್ತಲ್ಲಿ ನೆನಪಾಗಲು ಕಾರಣವಿದೆ. ಬಸವ ಕೂಡ ಬುದ್ಧನಂತೆಯೇ ಅಧಿಕಾರದ ದಂಡ ಹಿಡಿದಿದ್ದರೂ, ಜನರ ನೋವಿಗೆ, ಸಂಕಟಕ್ಕೆ, ಶತಮಾನಗಳಿಂದ ಅನುಭವಿಸುತ್ತಿರುವ ಶೋಷಣೆಗೆ ಅದು ಪರಿವಾರ ನೀಡಲಾರದು ಎಂದೇ ನಂಬಿದ್ದರು. ಹಾಗಾಗಿಯೇ ಅವರು ಅಧಿಕಾರದ ಬಲದ ಬದಲು ಅರಿವಿನ ಬಲದ ಮೇಲೆ ಜನರ ನೋವಿಗೆ ಪರಿಹಾರ ಕಂಡುಕೊಳ್ಳಲು ಮುಂದಾದರು.
ಮೇಲು, ಕೀಳು, ಜಾತಿ, ಧರ್ಮದ ಕೋಟಲೆಯೊಳಗೆ ಸಿಲುಕಿ, ಮೌಢ್ಯ ಮತ್ತು ಶೋಷಣೆಯ ಕೂಪದಲ್ಲಿ ಬೇಯುತ್ತಿದ್ದ ಜನಸಾಮಾನ್ಯರ ಬದುಕಿಗೆ ಬಿಡುಗಡೆಯನ್ನು ಆಡಳಿತ, ಕಾನೂನು, ಕಟ್ಟಳೆಗಳ ಬದಲಾಗಿ ಮಾನವೀಯ ಮೌಲ್ಯಗಳಲ್ಲಿ ಹುಡುಕಿದರು. ದೇವರು ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ಸದಾ ಕತ್ತಲಲ್ಲಿಡುವ ಮತ್ತು ತಮ್ಮ ಅಡಿಯಾಳುಗಳನ್ನಾಗಿ ಮಾಡಿಕೊಂಡಿರುವ ವ್ಯವಸ್ಥೆಯನ್ನು ಬದಲಾಯಿಸುವುದು ಅಧಿಕಾರ ಸ್ಥಾನದಿಂದ ಅಥವಾ ರಾಜಾಜ್ಞೆಯಿಂದ ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದರು.
ದಯೆಯೇ ಧರ್ಮವಯ್ಯ ಎನ್ನುವ ಮೂಲಕ ದಯೆ ಎಂಬ ಮಾನವೀಯತೆಯ ಪರಮ ಮೌಲ್ಯದ ಮೇಲೆ, ಸಮಾನತೆ ಎಂಬ ಆದರ್ಶದ ಮೇಲೆ ಸಮ ಸಮಾಜವನ್ನು ಕಟ್ಟುವ ಕನಸು ಕಂಡರು. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ” ಎನ್ನುವ ಮೂಲಕ ಹೊಸ ಸಮಾಜ ಕಟ್ಟುವ ತಮ್ಮ ಕನಸ ಬಿತ್ತಿದ್ದರು.
ಜಾತಿ ವ್ಯಸನದಲ್ಲಿ ಕೊಳೆತು ಹೋಗಿದ್ದ ಸಮಾಜದಲ್ಲಿ, ಧರ್ಮದ ಕಂದಾಚಾರಗಳಲ್ಲಿ, ಅಂಧಾನುಕರಣೆಗಳಲ್ಲಿ ಜಡ್ಡುಗಟ್ಟಿದ ಸಮಾಜದಲ್ಲಿ ಹೊಸ ಧರ್ಮದ, ಹೊಸ ಮಾನವೀಯತೆಯ ಬಿತ್ತಿದರು. ಹುಟ್ಟಿನಿಂದಲೇ ವ್ಯಕ್ತಿಯ ವ್ಯಕ್ತಿತ್ವನ್ನು, ಭವಿಷ್ಯವನ್ನು ಮತ್ತು ಆತನ ನೆಲೆ-ಹಿನ್ನೆಲೆಯನ್ನು ಅಳೆಯುವ ಮತ್ತು ಅದರ ಮೇಲೆ ಆತನ ಸ್ಥಾನಮಾನ ನಿಗದಿ ಮಾಡುವ ಮನುವಾದಿ ವ್ಯವಸ್ಥೆಯನ್ನು ಬಲವಂತದಿಂದ, ಅಧಿಕಾರ- ಕಾನೂನಿನಿಂದ ಬದಲಾಯಿಸುವುದು ಅಸಾಧ್ಯವೆಂದರಿತಿದ್ದ ಬಸವಣ್ಣ, ಕಾಯಕವನ್ನೇ ಜಾತಿಯಾಗಿಸಿ, ವ್ಯಕ್ತಿಯ ಏಳಿಗೆಯ ಅವಕಾಶವನ್ನೇ ಆತನ ಕಾಯಕಕ್ಕೆ ನೇಣುಹಾಕುವ ವ್ಯವಸ್ಥೆಯನ್ನು ಅರಿವಿನ ಮೂಲಕ, ಕಾಯಕಶ್ರೇಷ್ಠತೆಯ ಪರಿಕಲ್ಪನೆಯ ಮೂಲಕ ಬದಲಾಯಿಸಲು ಪ್ರಯತ್ನಿಸಿದರು.
ಒಂದು ಸ್ವಸ್ಥ ಸಮಾಜ ನಿರ್ಮಾಣವಾಗಲು ವ್ಯಕ್ತಿಗತವಾಗಿ ಪ್ರತಿಯೊಬ್ಬರೂ ಅನುಸರಿಸಬೇಕಾದ ಸ್ವಯಂ ಸಂವಿಧಾನವೇನು? ಸಮಾಜವಾಗಿ ಅನುಸರಿಸಬೇಕಾದ ಆಚಾರ-ವಿಚಾರಗಳ ಸಂವಿಧಾನವೇನು? ಎಂಬುದನ್ನು ತಮ್ಮದೇ ಅರಿವಿನ ನೆಲೆಯಲ್ಲಿ ವಿವರಿಸಿದರು. ಮನುಷ್ಯನ ನೆಮ್ಮದಿಗೆ ಕಾಯಕನಿಷ್ಠೆ, ದಯೆ, ಪ್ರಾಮಾಣಿಕತೆಯಂತೆಯೇ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಮಾನವೀಯತೆಯ ಅಗತ್ಯವಿದೆಯೇ ವಿನಃ, ಧರ್ಮಶಾಸ್ತ್ರಗಳಲ್ಲ ಎಂಬುದನ್ನು ಸಾರಿದರು. ದೇವರು ಮತ್ತು ಧರ್ಮವೆಂಬುದು ಶೋಷಣೆಯ ಅಸ್ತ್ರಗಳಾಗಿ, ಅನ್ಯಾಯದ ಹತಾರಗಳಾಗಿ ಬಳಕೆಯಾಗುತ್ತಿರುವಾಗ ಶ್ರೀಸಾಮಾನ್ಯನಿಗೆ ಬಿಡುಗಡೆಯ ಅವಕಾಶವಾಗಿ, ನೆಮ್ಮದಿಯ ಬದುಕಿನ ಭರವಸೆಯಾಗಿ ಹೊಸ ಪರ್ಯಾಯವನ್ನು ಕೊಟ್ಟರು. ಮೂರ್ತಿಪೂಜೆಯನ್ನು, ಧರ್ಮಶಾಸ್ತ್ರವನ್ನು ಮೀರಿದ ದೇವರು ಮತ್ತು ಧರ್ಮದ ಆದರ್ಶವನ್ನು ಜನರ ಮುಂದಿಟ್ಟರು. ವ್ಯಕ್ತಿಯ ವೃತ್ತಿಯ ಮೇಲೆ ಜಾತಿ ನಿರ್ಧಾರ ಮಾಡಿ, ಆತನ ಇಡೀ ಬದುಕನ್ನು ನಿರ್ಧರಿಸುವ, ಆತನ ಬದುಕಿನ ಚಲನಶೀಲತೆಯನ್ನೇ ಕಟ್ಟಿಹಾಕುವ ವರ್ಣಾಶ್ರಮ ವ್ಯವಸ್ಥೆಯನ್ನು ಧಿಕ್ಕರಿಸಿ, ಅದೇ ವೃತ್ತಿಯೇ, ಅದೇ ಕಾಯಕವೇ ದೇವರು ಮತ್ತು ದೇವರನ್ನು ಕಾಣುವ ನೈಜ ಮಾರ್ಗ ಎನ್ನುವ ಮೂಲಕ, ವ್ಯಕ್ತಿಯ ಬದುಕಿನ ಮಿತಿಯಾಗಿದ್ದ ಕಸುಬಿಗೆ, ಮಹಾನ್ ಶಕ್ತಿಯಾಗುವ, ಹೊಸ ಸಾಧ್ಯತೆಯಾಗುವ ಅವಕಾಶ ಸೃಷ್ಟಿಸಿದರು. ಆ ಮೂಲಕ ವೃತ್ತಿ ಅಥವಾ ಕಸುಬಿಗೆ ಒಂದು ಪವಾಡಸದೃಶ ಸ್ಪರ್ಶ ನೀಡಿದರು. ಇದು ಬಸವಣ್ಣ ಮಾಡಿದ ಅತ್ಯಂತ ಮಹತ್ವದ ಕ್ರಾಂತಿ. ವೃತ್ತಿಗೆ ಘನತೆ ತಂದ ಕ್ರಾಂತಿ.
ಹಾಗೇ ಹಸಿವು ವ್ಯಕ್ತಿಯ ವಿಕಸನಕ್ಕೆ ಒಡ್ಡುವ ಅಡ್ಡಿಯ ಅಗಾಧತೆ ಅರಿತಿದ್ದ ಬಸವಣ್ಣ, ಹಸಿವಿನ ವಿರುದ್ಧ ಬಹುಶಃ ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಸಂಘಟಿತ ಸಮರ ಸಾರಿದ. ದಾಸೋಹದ ಕಲ್ಪನೆಯ ಮೂಲಕ ಸಮಾಜದ ಹಸಿದವರ ಹೊಟ್ಟೆ ತುಂಬಿಸುವ ಜೊತೆಗೆ, ಅವರ ರಟ್ಟೆಗೆ ಕಸುವು ಕೊಡುವ ಕಾಯಕವನ್ನೂ ಕಲ್ಪಿಸುವ ಪ್ರಯತ್ನ ಮಾಡಿದ. ಕಸುಬು ಮತ್ತು ದುಡಿಮೆ ಕೇವಲ ಹೊಟ್ಟೆ ತುಂಬಿಸುವ ಮೂಲಕ ದೈಹಿಕ ಹಸಿವನ್ನು ನೀಗಿಸುವುದು ಮಾತ್ರವಲ್ಲ; ಅದು ಅರಿವಿನ, ತಿಳಿವಿನ ಹಸಿವನ್ನೂ ನೀಗಿಸಬೇಕು ಆಶಯದಲ್ಲಿ ನೆಮ್ಮದಿಯ ಸಮಾಜವಷ್ಟೇ ಅಲ್ಲದೆ, ವಿವೇಕದ ಸಮಾಜವನ್ನೂ ಕಟ್ಟಬೇಕು ಎಂಬ ದೂರದೃಷ್ಟಿ ಇತ್ತು.
ಹಾಗಾಗಿಯೇ ಬಸವಣ್ಣ, ತನ್ನ ಕಾಲ ಮುಗಿದ ಬಳಿಕವೂ ಕಾಲಾಂತರದಲ್ಲೂ ಪ್ರಸ್ತುತನಾಗಿದ್ದಾನೆ. ತನ್ನ ಬಳಿಕ ಈ ಭೂಮಿಯ ಮೇಲೆ ಆಗಿಹೋದ ಮತ್ತು ಭವಿಷ್ಯದಲ್ಲಿ ಬಂದುಹೋಗುವವ ಎಲ್ಲಾ ಸಮಾಜಮುಖಿ, ಜನಪರ, ಜೀಪಪರರ ಪಾಲಿನ ಪರಿವರ್ತನೆಯ, ಬದಲಾವಣೆ, ಸುಧಾರಣೆಯ ಅಳತೆಗೋಲಾಗಿ ನಿಂತಿದ್ದಾನೆ. ದುಡಿಮೆಯ ಕುರಿತ ಇಡೀ ಜಗತ್ತಿನ ಗ್ರಹಿಕೆಯನ್ನೇ ಬದಲಿಸಿದ ಕಾರ್ಲ್ ಮಾರ್ಕ್ಸ್ ನಂತಹ ಮೇಧಾವಿಯಿಂದ ಹಿಡಿದು, ಸಮಾನತೆಯ ಕುರಿತ ವಿಶ್ವಮಾದರಿಯನ್ನೇ ರೂಪಿಸಿದ ಬಾಬಾ ಸಾಹೇಬರವರೆಗೆ, ಅಹಿಂಸೆ ಮತ್ತು ಸಹಜೀವನದ ಕುರಿತ ಹೊಸ ದಾರಿ ತೋರಿದ ಗಾಂಧಿಯಿಂದ ಮಂಡೇಲಾವರೆಗೆ ಬಸವಣ್ಣನ ಸಮ ಸಮಾಜನದ ಕನಸುಗಳು ಹರಡಿವೆ.
ಶತಮಾನಗಳ ಕಾಲ ಮನುಷ್ಯನ ಬದುಕನ್ನು ಇನ್ನಷ್ಟು ಸಹ್ಯಗೊಳಿಸುವ ಬದಲು ನರಕಗೊಳಿಸಿದ ನೂರಾರು ಧರ್ಮಗಳು, ಸಾವಿರಾರು ಧರ್ಮಗುರುಗಳು, ಧರ್ಮಗ್ರಂಥಗಳು ನೀಡದ ನೆಮ್ಮದಿಯನ್ನು ಬಸವಣ್ಣ ನೀಡಲೆತ್ನಿಸಿದ. ಮಾನವ ಧರ್ಮವೇ ದೊಡ್ಡದು ಎಂದ. ಆದರೆ, ಈ ಎಂಟು ನೂರು ವರ್ಷಗಳಲ್ಲಿ ನಾವು ನಿಜವಾಗಿಯೂ ಬಸವಣ್ಣನಿಂದ ಕಲಿತಿದ್ದೇವೆಯೇ? ಆತನ ಪುತ್ಥಳಿ, ಪ್ರತಿಮೆ ಸ್ಥಾಪಿಸಿ, ಫೋಟೋ ಮೆರವಣಿಗೆ ಮಾಡಿ ಹಾರ ಹಾಕಿ, ಆತನನ್ನು ದೈವತ್ವಕ್ಕೆ ಏರಿಸಿದ್ದನ್ನು ಬಿಟ್ಟು ಇನ್ನೇನನ್ನು ಮಾಡಿದ್ದೇವೆ? ಆತ ಕಟ್ಟಿದ ಮಾನವ ಧರ್ಮವನ್ನು ಕೂಡ ಮಡಿವಂತಿಕೆಯ, ಕಂದಾಚಾರದ ಮತ್ತೊಂದು ಧರ್ಮವಾಗಿ ಪರಿವರ್ತಿಸಿದ್ದೇವೆ. ಸಮಾನತೆ, ತಾರತಮ್ಯರಹಿತ ಸಮಾಜದ ಉದ್ದೇಶದ ಧರ್ಮ, ಈಗ ಸ್ವತಃ ಶ್ರೇಣೀಕೃತ ವರ್ಣಾಶ್ರಮ ಧರ್ಮದ ಮತ್ತೊಂದು ಕವಲಾಗಿದೆ. ಹಿಂಸೆ, ಶೋಷಣೆ, ದ್ವೇಷ- ಅಸೂಹೆಗಳನ್ನು ಮೀರಿದ ಮಾನವೀಯತೆ ಬದಲಿಗೆ, ಮತಾಂಧತೆ, ಕೋಮು ದ್ವೇಷ, ಹಿಂಸೆಯನ್ನೇ ಹೆಚ್ಚುಗಾರಿಕೆ ಎಂದು ಸಂಭ್ರಮಿಸುವ ವಿಕೃತಿಗೆ ಸಮಾಜ ತಲುಪಿದೆ.
ಬಸವಣ್ಣನ ಕನಸನ್ನು ಹೀಗೆ ನುಚ್ಚುನೂರು ಮಾಡಿರುವ ನಮಗೆ, ಆತನ ಜನ್ಮದಿನವನ್ನು ಆಚರಿಸುವ, ಸಂಭ್ರಮಿಸುವ ನೈತಿಕತೆ ಇದೆಯೇ? ನಿಜಕ್ಕೂ ನಾವು ಒಂದು ಸಮಾಜವಾಗಿ ಮತ್ತು ವ್ಯಕ್ತಿಗತವಾಗಿ ಈಗ ಬಸವಣ್ಣನ ಸ್ಮರಿಸುವ ಅರ್ಹತೆ ಉಳಿಸಿಕೊಂಡಿದ್ದೇವೆಯೇ? ಈ ಪ್ರಶ್ನೆಗಳನ್ನು ಕೇಳಿಕೊಂಡರೆ; ಬಸವಣ್ಣ ಪುಸ್ತಕದ ವಚನವಾಗಿ, ಭಜನೆಯ ಗೀತೆಯಾಗಿ, ಸರ್ಕಲ್ಲಿನ ಪ್ರತಿಮೆಯಾಗಿ, ಸಭಾಂಗಣದ ಪುತ್ಥಳಿಯಾಗಿ ಹೊರತು, ಎದೆಯೊಳಗೆ ಎಷ್ಟು ಉಳಿದಿದ್ದಾನೆ ಎಂಬ ಪರಾಮರ್ಶೆಯಾಗಬಹುದು. ಕನಿಷ್ಠ ಬಸವನ ಹುಟ್ಟಿದ ದಿನವಾದರೂ ಅರೆಘಳಿಗೆ ಅಂತಹ ಆತ್ಮಾವಲೋಕನ ವಾದರೆ, ಬಸವ ಜಯಂತಿ ಸಾರ್ಥಕ.
ಮತ್ತೆ ಲಂಕೇಶರ ಮಾತಿನೊಂದಿಗೇ ಈ ಬರಹವನ್ನು ಮುಗಿಸುವುದಾದರೆ, “ಸಿದ್ಧಾರ್ಥನನ್ನು ಆತನ ಕಾಣ್ಕೆಯೊಂದಿಗೇ ಹೊರಗಟ್ಟಿದ್ದ ಭಾರತೀಯ ಗಾಂಧಿಯನ್ನು ಕೂಡ ಇಟ್ಟುಕೊಳ್ಳಲಿಕ್ಕಿಲ್ಲ. ಅಂದರೆ, ಅವರ ಪ್ರೇಮವನ್ನು, ತಾಯ್ತನವನ್ನು, ಸರಳ ನೆಮ್ಮದಿಯನ್ನು.” ಹೌದು, ಗಾಂಧಿಯ ಮುನ್ನ ಈ ನೆಲದಲ್ಲಿ ಮನುಷ್ಯನ ನೆಮ್ಮದಿಗಾಗಿಯೇ ಬದುಕಿದ ಬಸವಣ್ಣನನ್ನು ಕೂಡ ನಾವು ಇಟ್ಟುಕೊಳ್ಳಬೇಕಾದ ರೀತಿಯಲ್ಲಿ ಇಟ್ಟುಕೊಂಡಿಲ್ಲ. ಬಡಿವಾರದ ಭಾಷಣಗಳಲ್ಲಿ, ಆಷಾಢಭೂತಿ ಆಚರಣೆಗಳಲ್ಲಿ, ಚೈತನ್ಯಹೀನ ಭಜನೆಗಳಲ್ಲಿ ಮಾತ್ರ ಈಗ ಬಸವಣ್ಣ ಉಳಿದಿದ್ದಾನೆ. ನಾವು ಬದಲಾಗುವುದೇ ಇಲ್ಲ!