ಕರೋನಾ ಮಹಾಮಾರಿ ಎಲ್ಲಾ ಲೆಕ್ಕಾಚಾರಗಳನ್ನು ದಾಟಿಕೊಂಡು ಶರವೇಗದಲ್ಲಿ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ ಲಾಕ್‌ಡೌನ್ ಆದೇಶ ಏಪ್ರಿಲ್ 14ಕ್ಕೆ ಮುಕ್ತಾಯವಾಗಲಿದೆ. 21 ದಿನಗಳಲ್ಲಿ ಕೋವಿಡ್-19 ವಿರುದ್ಧದ ಯುದ್ಧವನ್ನು ಗೆದ್ದು ಭಾರತ ಜಯಶಾಲಿ ಆಗುವಂತೆ ಮಾಡೋಣ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೆ ರಾಜ್ಯ ಸರ್ಕಾರಗಳ ಒತ್ತಾಯದಂತೆ ಮುಂದಿನ 15 ದಿನಗಳ ಕಾಲ ಲಾಕ್‌ಡೌನ್ ಸಮ್ಮತಿಸಿದ್ದಾರೆ ಎನ್ನಲಾಗಿದೆ. ಅಧಿಕೃತವಾಗಿ ಘೋಷಣೆ ಆಗದಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಮುನ್ಸೂಚನೆ ಕೊಟ್ಟಿದ್ದಾರೆ. ಮುಂದಿನ 15 ದಿನ ಲಾಕ್‌ಡೌನ್ ವಿಸ್ತರಣೆ ಅನಿವಾರ್ಯ ಆಗಿದೆ. ಮುಂಬರುವ 3 ರಿಂದ 4 ವಾರ ಕರೋನಾ ತಡೆಗೆ ನಿರ್ಣಾಯಕ ಆಗಲಿದೆ. ಮುಂದಿನ ಮೂರು ವಾರ ನಾವು ಕರೋನಾ ವಿರುದ್ಧ ಯಾವ ಮಟ್ಟದಲ್ಲಿ ಗೆದ್ದಿದ್ದೇವೆ ಎಂಬುದು ಗೊತ್ತಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೀಗಾಗಿ ಏಪ್ರಿಲ್ 30 ತನಕ ಲಾಕ್‌ಡೌನ್ ಇದ್ದಿದ್ದಕ್ಕೂ ಮುಂದಿನ ದಿನಗಳಿಗೂ ವಿಭಿನ್ನವಾಗಿರಲಿದೆ ಎಂದಿದ್ದಾರೆ.
ಬೆಂಗಳೂರು ಎಂಬ ಮಾಯಾನಗರಿಯಲ್ಲಿ ವಾಸ ಮಾಡುತ್ತಿರುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಮಾತುಗಳಿವೆ. ಅದೇ ಕಾರಣದಿಂದ ಸರ್ಕಾರ, NGO ಗಳು, ದಾನಿಗಳು ಜನರಿಗೆ ಸಹಯಾ ಹಸ್ತ ಚಾಚಿದ್ದಾರೆ. ಸರ್ಕಾರ ಹಾಲು, ಅಕ್ಕಿ ಸೇರಿದಂತೆ ಊಟದ ವ್ಯವಸ್ಥೆ ಮಾಡುತ್ತಿದ್ದರೆ, ರಾಜ್ಯ ಸರ್ಕಾರವನ್ನು ಹೊರತುಪಡಿಸಿ ಹಲವಾರು ಸಂಘ ಸಂಸ್ಥೆಗಳು ಊಟೋಪಚಾರದ ವ್ಯವಸ್ಥೆ ಮಾಡಿವೆ. ಹಲವಾರು NGO ಸದಸ್ಯರು ನಿರ್ಗತಿಕರು, ಬಡುವರಿಗೆ ಅನ್ನ, ಆಹಾರ ಧಾನ್ಯ ಸೇರಿದಂತೆ ಹಲವಾರು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಸರ್ಕಾರ ಹಾಲು ಪಾಕೆಟ್ ಸೇರಿದಂತೆ ಎಲ್ಲಾ ರೀತಿಯ ಸಹಾಯಕ್ಕೆ ಟೊಂಕ ಕಟ್ಟಿ ನಿಂತಿದೆ.
ನಗರದ ಜನರಿಗೆ ಪಕ್ಕದ ಬೀದಿಗೆ ಹೋದರೆ ಅಂಗಡಿಗಳು ಸಿಗುತ್ತವೆ. ಹಸಿವು ನೀಗಿಸಲು ಬೇಕಾದ ಆಹಾರ ಪದಾರ್ಥ ಸೇರಿದಂತೆ ಎಲ್ಲವೂ ಮನೆಗೆ ಬರುತ್ತದೆ. ಆದರೆ ಹಳ್ಳಿಜನರ ಬದುಕು ಮೂರಾಬಟ್ಟೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿದ್ದ ಹಳ್ಳಿ ಜನರನ್ನು ನಗರದಿಂದ ಹೊರ ಹೋಗಲು ಅವಕಾಶ ಮಾಡಿಕೊಟ್ಟ ಸಿಎಂ ಯಡಿಯೂರಪ್ಪ ಈಗ ಸಂಕಷ್ಟದಲ್ಲಿರುವ ಹಳ್ಳಿ ಜನರ ನೆರವಿಗೆ ನಿಲ್ಲಬೇಕಿದೆ.
ಹಳ್ಳಿ ಜನರು ಜೀವನ ನಡೆಸುವ ಉದ್ದೇಶದಿಂದಲೇ ತಮ್ಮ ಹುಟ್ಟೂರು ಬಿಟ್ಟು ಪಟ್ಟಣಕ್ಕೆ ಬಂದಿರುತ್ತಾರೆ.
ಬೆಂಗಳೂರಿನಲ್ಲಿರುವ ಮುಕ್ಕಾಲು ಭಾಗ ಜನರು ಹಳ್ಳಿಗಳಿಂದ ಬರುವ ಬಡಬಗ್ಗರೆ ತುಂಬಿರುತ್ತಾರೆ. ಆದರೆ ಇದೀಗ ಎಲ್ಲರೂ ಬೆಂಗಳೂರು ತೊರೆದು ತಮ್ಮೂರಿಗೆ ಹೊರಟಿದ್ದಾರೆ. ಆದರೆ ಸರ್ಕಾರ ಈಗಲೂ ಬೆಂಗಳೂರಿನಲ್ಲಿ ಕುಬೇರರಿಗೆ ಸಹಾಯ ಮಾಡಲು ಓಡಾಡುತ್ತಿದೆ. ಆದರೆ ನಿಜವಾದ ಬಡವರು ಹಳ್ಳಿಗಳನ್ನು ಸೇರಿದ್ದಾರೆ. ಅಲ್ಲಿ ಅವರನ್ನು ಕೇಳವವರೇ ಇಲ್ಲ. ಕನಿಷ್ಟ ಪಕ್ಷ ಸರ್ಕಾರ ಘೋಷಣೆ ಮಾಡಿರುವ ಪಡಿತರ ಧಾನ್ಯವನ್ನು ಪಡೆಯುವುದಕ್ಕೂ ಸಮಸ್ಯೆ ಎದುರಾಗಿದೆ. ಹಳ್ಳಿಗಳಿಗೆ ಹೋಗುವ ಹರಿಬಿರಿಯಲ್ಲಿ ಪಡಿತರ ಕಾರ್ಡ್ ಕೂಡ ತೆಗೆದುಕೊಂಡು ಹೋಗಿಲ್ಲ. ಅಲ್ಲಿನ ಜನರು ಕರೋನಾ ಭೀತಿಯಲ್ಲಿ ಧವಸ ಧಾನ್ಯವನ್ನೂ ಮಾರಾಟ ಮಾಡಲು ಸಿದ್ಧರಿಲ್ಲ. ಅಂಗಡಿಗೆ ಬಂದು ದುಬಾರಿ ಬೆಲೆ ಕೊಟ್ಟು ಕೊಳ್ಳೋಣವೆಂದರೆ ಸಂಪಾದನೆಯಿಲ್ಲ.
ರೇಷನ್ ಕಾರ್ಡ್ ತಂದವರು ಪಡಿತರ ಪಡೆಯಲು ಮುಂದಾದರೆ ಪಡಿತರ ಅಂಗಡಿಯಾತ ಸ್ಥಳೀಯರಿಗೆ ಕೊಟ್ಟ ಬಳಿಕ (CB) ಉಳಿದರೆ ಕೊಡುತ್ತೇನೆ ಎನ್ನುತ್ತಾರೆ. ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆ. ಗೋಪಾಲಯ್ಯ ಮಾತ್ರ ಯಾವುದೇ ಜಿಲ್ಲೆ, ಯಾವುದೇ ತಾಲೂಕಿನ ವಿಳಾಸಲ್ಲಿ ಕಾರ್ಡ್ ಹೊಂದಿದ್ರೂ ಪಡಿತರ ಕೊಡಬೇಕು. ಥಂಬ್ (Thumb) ಪಡೆಯುವಂತಿಲ್ಲ, ಬೇರೆ ಕಡೆಯ ಕಾರ್ಡ್ ಗಳಾದರೆ ಒಟಿಪಿ(OTP) ಪಡೆದರೆ ಸಾಕು ಎನ್ನುತ್ತಿದ್ದಾರೆ. ಆದರೆ ರಾಜ್ಯದ ಹಲವಾರು ಹಳ್ಳಿಗಳಲ್ಲಿ ಥಂಬ್ ಪಡೆದೇ ಅಕ್ಕಿ ಕೊಡುತ್ತಿದ್ದಾರೆ. ಜೊತೆಗೆ ವಲಸಿಗರಿಗೆ ಅಕ್ಕಿ ಕೊಡಲು ಸಾಧ್ಯವಿಲ್ಲ. ಉಳಿದರೆ ನೋಡೋಣ ಎನ್ನುತ್ತಿದ್ದಾರೆ. ಆದರೆ ಬಡವರ ಅಕ್ಕಿ ದೊಡ್ಡ ದೊಡ್ಡ ಮಿಲ್ ಗಳ ಪಾಲಾಗುತ್ತಿದ್ದು ಕಾಳಸಂತೆ ಮಾರಿಕೊಳ್ಳುತ್ತಿದ್ದಾರೆ. ಜೀವನ ನಡೆಸಲು ಕಷ್ಟವಾಗಿದ್ದರಿಂದಲೇ ಕೆಟ್ಟು ಪಟ್ಟಣ ಸೇರಿದ್ದವರು ಮತ್ತೀಗ ಹುಟ್ಟೂರಿಗೆ ಬಂದಿದ್ದಾರೆ.
ಅತ್ತ ಕೆಲಸವೂ ಇಲ್ಲ. ಇತ್ತ ಕೃಷಿ ಮಾಡಿ ಶೇಖರಣೆ ಮಾಡಿರುವ ಧವಸ ಧಾನ್ಯವೂ ಇಲ್ಲ ಎನ್ನುವಂತಾಗಿದೆ. ಸರ್ಕಾರ ಮಾತ್ರ ನಗರ ಪ್ರದೇಶಗಳಲ್ಲಿ ಸಾಗುತ್ತಾ ಕ್ಯಾಮರಾಗೆ ಪೋಸ್ ಕೊಡ್ತಿದೆ. ಬಡವರು ಎಲ್ಲೇ ಇದ್ದರು ಬಡವರೆ ಎನ್ನುವುದನ್ನು ಸರ್ಕಾರಗಳು ನೆನಪಿನಲ್ಲಿಡಬೇಕು. ಸಹಾಯ ಮಾಡುವ ಮನಸ್ಸಿದ್ದರೆ, ಎದುರು ಪೋಸ್ ಕೊಡುವುದನ್ನು ಬಿಟ್ಟು ನಿಸ್ವಾರ್ಥ ಮನಸ್ಸಿಂದ ಸಹಾಯ ಮಾಡಬೇಕಿದೆ.