ಅಮೇರಿಕಾದಲ್ಲಿ ಕರೋನಾ ಒಂದೇ ದಿನ 2,108 ಜನರನ್ನು ಬಲಿ ತೆಗೆದುಕೊಂಡಿದೆ. ಇದು ದಿನವೊಂದರಲ್ಲಿ ದಾಖಲಾದ ಗರಿಷ್ಠ ಸಾವಿನ ಲೆಕ್ಕ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ಹೊರತಾಗಿಯೂ ಅಲ್ಲಿ ಹೀಗಾಗಿದೆ. ಯುನೈಟೆಡ್ ಕಿಂಗ್ ಡಂ ಪ್ರಧಾನಿಗಿಂತ ಐಜೆನಿಕ್ ಆಗಿರಲು ಅಥವಾ ಸೋಷಿಯಲ್ ಡಿಸ್ಟೆನ್ಸ್ ಮಾಡಲು ಸಾಧ್ಯವೇ ಆದರೂ ಬೋರಿಸ್ ಜಾನ್ಸನ್ ಅವರಿಗೆ ಕರೋನಾ ಪಾಸಿಟಿವ್ ಬಂದಿದೆ. ಭಾರತದಲ್ಲಿ ಲಾಕ್ ಡೌನ್ ಮಾಡಿ ಈಗಾಗಲೇ 19 ದಿನ ಆಗಿದೆ. ಆದರೂ ಕರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲೇ ಇದೆ.
ಇವೆಲ್ಲವೂ ಆಗುತ್ತಿರುವುದು ಆರಂಭದಲ್ಲಿ ತೋರಿದ ಉದಾಸೀನದಿಂದ. ಇವಿಷ್ಟು ಆರೋಗ್ಯದ ವಿಷಯಕ್ಕೆ ಸಂಬಂಧಿಸಿದವು. ಇಂಥ ಇತಿಹಾಸ ಹೊಂದಿರುವ ಜಗತ್ತಿನ ಆರ್ಥಿಕ ಪರಿಸ್ಥಿತಿ ಏನಾಗಬಹುದೆಂದು ‘ಆಕ್ಸ್‌ಫ್ಯಾಮ್’ ಭವಿಷ್ಯ ನುಡಿದಿದೆ. ಭಯಾನಕ ಸಂಗತಿಗೆ ಹೋಗುವ ಮುನ್ನ ಆಕ್ಸ್‌ಫ್ಯಾಮ್ ಬಗ್ಗೆ ಒಂದೇ ಒಂದು ಮಾತು: ಇದು ಬಡತನ ನಿರ್ಮೂಲನೆ, ಕ್ಷಾಮ ಪರಿಹಾರ ಮತ್ತು ವಲಸಿಗರ ಕುರಿತು ಕೆಲಸ ಮಾಡುವ 1942ರಲ್ಲೇ ಸ್ಥಾಪಿತವಾದ ಎನ್ ಜಿಓ. ಆಕ್ಸ್‌ಫ್ಯಾಮ್ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳದಿದ್ದರೆ ಬಡವರಾಗಲು ಸಿದ್ದರಾಗಬೇಕಷ್ಟೇ.
‘ಆಕ್ಸ್‌ಫ್ಯಾಮ್’ ಪ್ರಕಾರ ಕರೋನಾ ಸೃಷ್ಟಿಸಿರುವ ಈ ಸಂಚಲನದಿಂದ ವಿಶ್ವದಾದ್ಯಂತ ಅರ್ಧ ಶತಕೋಟಿ ಜನರು ಬಡವರಾಗಲಿದ್ದಾರೆ. ಅಂದರೆ ಅರ್ಥ ಈಗ ಸುಸ್ಥಿತಿಯಲ್ಲಿದ್ದವರು ಬಡವರಾಗುತ್ತಾರೆ ಎಂದು. ಈಗಾಗಲೇ ಬಡವರಾಗಿರುವವರ ಸ್ಥಿತಿ ಇನ್ನೂ ಚಿಂತಾಜನಕವಾಗಲಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ಅಷ್ಟೇ. ಜೊತೆಗೆ ಇನ್ನೂ ಒಂದು ಮಾತನ್ನು ಹೇಳಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಅರ್ಧ ಶತಕೋಟಿ ಜನ ಎಂದು. ಇದು ಸಮಸ್ಯೆಯನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯುವ ವಿಚಾರ. ಇಲ್ಲೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಬಗ್ಗೆ ಹೇಳಲಾಗಿದೆ ಎಂದರೆ ಬಡ ದೇಶಗಳ ಕತೆ ಊಹೆಗೂ ನಿಲುಕಲಾರದು ಎಂದು ಅರ್ಥ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವೈಯಕ್ತಿಕವಾಗಿ ಬಡತನ ರೇಖೆಗಿಂತ ಮೇಲಿರುವವರು, ಕೆಳ ಮಧ್ಯಮ ವರ್ಗ, ಉನ್ನತ ಮಧ್ಯಮ ವರ್ಗ, ಮಧ್ಯಮ ವರ್ಗಕ್ಕಿಂತಲೂ ತುಸು ಮೇಲಿರುವವರು ಎಲ್ಲರೂ ಅಪಾಯದ ಅಂಚಿಗೆ ತಳ್ಳಲ್ಪಡುತ್ತಾರೆ. ದೇಶವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶದ ಆರ್ಥಿಕತೆಯು ಕೂಡ ಅಧೋಗತಿಗೆ ತಳ್ಳಲ್ಪಡುತ್ತದೆ. ಆಗ ಸಹಜವಾಗಿಯೇ ಮುಂದುವರೆದ ದೇಶಗಳ ಪ್ರತ್ಯಕ್ಷ-ಪರೋಕ್ಷ ಶೋಷಣೆ ಜಾರಿಯಾಗುತ್ತದೆ. ಉದಾಹರಣೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶ ಅಥವಾ ಆರ್ಥಿಕತೆ ಅಧೋಗತಿಯತ್ತ ಸಾಗುತ್ತಿರುವ ದೇಶದಲ್ಲಿ ಹೂಡಿಕೆ ಆಗುವುದಿಲ್ಲ. ಕಡಿಮೆ ಕೂಲಿಗೆ ಕಾರ್ಮಿಕರು ಲಭ್ಯವಿದ್ದರೂ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಹೂಡಿಕೆ ಅಥವಾ ಉದ್ಯೋಗ ಸೃಷ್ಟಿಯಾದರೂ ‘ಬಾರ್ಗೇನಿಂಗ್ ಪವಾರ್’ ಜಾಸ್ತಿ ಇರುವ ಸಿರಿವಂತ ರಾಷ್ಟ್ರಗಳಿಗೆ ಹೆಚ್ಚಿನ ಲಾಭವಾಗುತ್ತದೆ. ಇದು ಬಡವ ಇನ್ನಷ್ಟು ಬಡವನಾಗುವ, ಶ್ರೀಮಂತ ಇನ್ನಷ್ಟು ಶ್ರೀಮಂತನಾಗುವ ಕಂದಕವನ್ನು ಸೃಷ್ಟಿಸುತ್ತದೆ.
ಆಕ್ಸ್‌ಫ್ಯಾಮ್ ಅಂತರರಾಷ್ಟ್ರೀಯ ಮಧ್ಯಂತರ ಕಾರ್ಯನಿರ್ವಾಹಕ ನಿರ್ದೇಶಕಿ ಜೋಸ್ ಮಾರಿಯಾ ವೆರಾ ‘ಈಗಾಗಲೇ ಬದುಕುಳಿಯಲು ಹೆಣಗಾಡುತ್ತಿರುವ ಬಡ ದೇಶಗಳಲ್ಲಿ ಸ್ಥಿತಿವಂತರು ಕೂಡ ಬಡವರಾಗುವುದನ್ನು ತಡೆಯಲು ಯಾವುದೇ ಸುರಕ್ಷತಾ ಜಾಲಗಳಿಲ್ಲ’ ಎಂದಿದ್ದಾರೆ. ಇದೇ ಹಿನ್ನೆಲೆಯಲ್ಲಿ ಆಕ್ಸ್‌ಫ್ಯಾಮ್ ‘ಮುಂದುವರೆದ ದೆಶಗಳು ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ರಾಷ್ಟ್ರಗಳ ಹಿತಕಾಯಬೇಕು’ ಎಂಬ ಸಲಹೆ ನೀಡಿದೆ. ಅಲ್ಲದೆ ಮುಂದಿನ ವಾರ ವಿಶ್ವಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಜಿ 20 ಹಣಕಾಸು ಮಂತ್ರಿಗಳ ಪ್ರಮುಖ ಸಭೆಗಳನ್ನು ಆಯೋಜಿಸುತ್ತಿದೆ. ‘ಮುಂದೆ ಬಡ ದೇಶಗಳು ಮತ್ತು ಬಡ ಸಮುದಾಯಗಳನ್ನು ಕಡೆಗಣಿಸಬೇಡಿ. ಈ ಸಂಕಷ್ಟದ ಸಂದರ್ಭವನ್ನು ಎಲ್ಲರೂ ಒಂದಾಗಿ ಎದುರಿಸುವ Economic Rescue Package for All ಘೋಷಿಸಿ’ ಎಂದು ಒತ್ತಾಯಿಸುವುದು ಸಭೆಯ ಅಜೆಂಡಾ ಆಗಿದೆ.
ಈ ಆರ್ಥಿಕ ಹೊಡೆತ ಅಥವಾ ಕರೋನ ತಂದೊಡ್ಡುವ ಕಷ್ಟ ದೊಡ್ಡ ಪ್ರಮಾಣದಲ್ಲಿ ಬಾಧಿಸುವುದು ಮಹಿಳೆಯರನ್ನು. ಏಕೆಂದರೆ ಜಾಗತಿಕವಾಗಿ ಆರೋಗ್ಯ ಕಾರ್ಯಕರ್ತರಾಗಿ ದುಡಿಯುತ್ತಿರುವರಲ್ಲಿ ಮಹಿಳೆಯರೇ ಹೆಚ್ಚು. ಅವರ ಪ್ರಮಾಣ ಶೇಕಡಾ 70 ರಷ್ಟು. ಅವರಿಗೆ ಸಿಗುವ ವೇತನ ಬೇರೆ ಉದ್ಯೋಗಿಗಳಿಗಿಂತ ಕಮ್ಮಿ. ಅವರೀಗ ಕಡಿಮೆ ಸಂಬಳಕ್ಕೆ ಹೆಚ್ಚು ಅಪಾಯ ಇರುವ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಬೇರೆ ಉದ್ಯೋಗಗಳಿಗೆ ಹೋಲಿಸಿದರೂ ಮಹಿಳೆಯರಿಗೆ ಸಿಗುವ ಸಂಬಳ ಕಮ್ಮಿ. ಕರೋನಾ ಮಹಿಳೆಯರಿಗೆ ಎಂಥ ಕಷ್ಟ ತಂದೊಡ್ಡಿದೆ ಎಂಬುದಕ್ಕೆ ಇನ್ನೊಂದು ಉದಾಹರಣೆ ಉಲ್ಲೇಖಿಸಲೇಬೇಕು. ಒಂದು ದಶಲಕ್ಷಕ್ಕೂ ಹೆಚ್ಚು ಕಾಲ ಬಾಂಗ್ಲಾದೇಶದ ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುತ್ತಿದ್ದ ಜನರನ್ನು ಈಗ ಕೆಲಸದಿಂದ ತೆಗೆಯಲಾಗಿದೆ. ಆ ಪೈಕಿ ಶೇಕಡಾ 80 ರಷ್ಟು ಮಹಿಳೆಯರು. ಪಾಶ್ಚಿಮಾತ್ಯ ದೇಶಗಳು ಬಟ್ಟೆ ಆಮದನ್ನು ರದ್ದುಗೊಳಿಸಿದ ಬಳಿಕ ಇವರನ್ನು ಕೆಲಸದಿಂದ ತೆಗೆಯಲಾಗಿದೆ.

ಇವು ಜಾಗತಿಕವಾಗಿ ನಡೆಯುತ್ತಿರುವ ಬೆಳವಣಿಗೆಗಳ ಬಗೆಗಿನ ಟಿಪ್ಪಣಿ. ಭಾರತಕ್ಕೆ ಮರಳಿದರೆ ಕೂಡ ಸಿಗುವುದು ‘ನಾವೆಲ್ಲ ಬಡವರಾಗಲು ಸಿದ್ದರಾಗಬೇಕೆಂಬ ಕಹಿಸುದ್ದಿಯೇ’! ಈಗಾಗಲೇ ಭಾರತದಲ್ಲಿ ಕರೋನ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ 1.7 ಲಕ್ಷ ಕೊಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದೆ. ಎರಡನೇ ಹಂತದ ಲಾಕ್ ಡೌನ್ ವೇಳೆ ಮತ್ತೊಂದು ಪ್ಯಾಕೇಜ್ ಘೋಷಣೆ ಆಗಲಿದೆ. ಸಂಪನ್ಮೂಲ ಸಂಗ್ರಹಕ್ಕೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಸಿಕೊಳ್ಳಲಾಗಿದೆ. ಜನಪ್ರತಿನಿಧಿಗಳ ಸಂಬಳ ಮತ್ತಿತರ ಭತ್ಯೆಯನ್ನು ಹತ್ಯೆ ಮಾಡಲಾಗುತ್ತಿದೆ. ಇಷ್ಟಾದರೂ ಸಂಪನ್ಮೂಲ ಸಂಗ್ರಹಣೆ ಕಷ್ಟ ಸಾಧ್ಯ. ಏಕೆಂದರೆ ಲಾಕ್ ಡೌನ್ ಇರುವ ಕಾರಣಕ್ಕೆ ದಿನವೊಂದಕ್ಕೆ 35 ಸಾವಿರ ಕೋಟಿ ರೂಪಾಯಿ ನಷ್ಟ ಆಗುತ್ತಿದೆ ಎಂದು ಕೇಂದ್ರ ಆರ್ಥಿಕ ಇಲಾಖೆಯ ಕಾರ್ಯಪಡೆ ಅಂದಾಜು ಮಾಡಿದೆ. ಒಂದು ತಿಂಗಳಿಗೆ ಈ ಮೊತ್ತ 1,05,000 ಕೋಟಿ ರೂಪಾಯಿ ಆಗಲಿದೆ.
ಲಾಕ್ ಡೌನ್ ತೆರವುಗೊಂಡ ಬಳಿಕ ದೇಶದ ಎಕಾನಮಿ ದಿಢೀರನೆ ಎದ್ದುಕೂರುವುದಿಲ್ಲ. ಸುಧಾರಿಸಲು ವರ್ಷಗಳು ಬೇಕು. ಹಾಗಿದ್ದರೆ ಮುಂಬರುವ ಇನ್ನೂ ಕಷ್ಟದ ಪರಿಸ್ಥಿತಿ ನಿಭಾಯಿಸಲು ಸರ್ಕಾರಗಳು ಇನ್ನೇನು ಮಾಡಬಹುದು ಎನ್ನುವುದರ ಕಡೆ ನೋಡಿದರೆ ಅವುಗಳಿಗೆ ಸುಲಭಕ್ಕೆ ಸಾಧ್ಯವಾಗುವುದು ಜನಕಲ್ಯಾಣ ಯೋಜನೆಗಳ ಮೇಲೆ ಕತ್ತರಿ ಪ್ರಯೋಗ ಮಾಡುವುದೇ ಆಗಿದೆ. ಅಂದರೆ ಮತ್ತೆ ಬಡವನ ಜೇಬಿನಿಂದ ಕಿತ್ತುಕೊಳ್ಳುವುದು ಅಂತಾ. ಅಲ್ಲದೆ ನೇರವಾಗಿ ತೆರಿಗೆ ಏರಿಸಿದರೆ ಜನ ಆಕ್ರೋಶಗೊಂಡರೆಂಬ ಕಾರಣಕ್ಕೆ ಉತ್ಪಾದಕರ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಉತ್ಪಾದಕ ತನ್ನ ಮೇಲೆ ಬಂದ ತೆರಿಗೆ ಭಾರವನ್ನು ಗ್ರಾಹಕನಾದ ಶ್ರೀಸಾಮಾನ್ಯನಿಗೆ ಹಸ್ತಾಂತರಿಸುತ್ತಾನೆ. ಮತ್ತೆ ಶಕ್ತಿಯುಳ್ಳವನು ಮಾತ್ರ ಕೊಂಡುಕೊಳ್ಳುತ್ತಾನೆ. ಅಷ್ಟೇಯಲ್ಲ ಬರಬರುತ್ತಾ ಅವನು ಕೂಡ ಕೊಳ್ಳಲಾರದವನ ಪಟ್ಟಿಗೆ ದೂಡಲ್ಪಡುತ್ತಾನೆ. ಇಂಥ ಇನ್ನೂ ಹತ್ತು ಹಲವು ಬುದ್ದಿವಂತಿಕೆಯನ್ನು ಪ್ರದರ್ಶಿಸಲಾಗುತ್ತದೆ. ಒಟ್ಟಿನಲ್ಲಿ ಕರೋನಾ ಕಾರಣಕ್ಕೆ ಬಡವರಾಗುವುದು ಶತಸಿದ್ದ. ಬಡವರು ಮತ್ತಷ್ಟು ಬಡವರಾಗುತ್ತಾರೆ. ಉಳ್ಳವರು ಬಡವರ ಸಾಲಿಗೆ ಬಂದು ನಿಲ್ಲುತ್ತಾರೆ ಅಷ್ಟೇ ವ್ಯತ್ಯಾಸ.










