2016ರಲ್ಲೇ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬ್ಯಾನ್ ಜಾರಿಗೆ ಬಂದಿದ್ದರೂ, ಈಗಲೂ ಈ ಪ್ಲಾಸ್ಟಿಕ್ ಭೂತ ಬೆಂಗಳೂರನ್ನು ಬೆಂಬಿಡದೆ ಕಾಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಬಹಳ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕಲು ಹಲವು ಯೋಜನೆಗಳನ್ನು ರೂಪಿಸಿದರೂ, ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರೂ ಅದರ ಪರಿಣಾಮ ಅಷ್ಟಕಷ್ಟೇ. ಇಂತಹ ಸಮಯದಲ್ಲಿ ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಡೆವೆಲಪ್ಮೆಂಟ್ ಅಥಾರಿಟಿ (ಎಲ್ಸಿಟಾ)ವು ಒಂದು ಪರಿಣಾಮಕಾರಿ ಯೋಜನೆಯನ್ನು ಜಾರಿಗೆ ತಂದಿದೆ.
ಎಲೆಕ್ಟ್ರಾನಿಕ್ ಸಿಟಿಯ ಆಸುಪಾಸಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಸಲುವಾಗಿ ʼಕಟ್ಲೆರಿ ಬ್ಯಾಂಕ್ʼಅನ್ನು ಎಲ್ಸಿಟಾ ವತಿಯಿಂತ ಸ್ಥಾಪಿಸಲಾಗಿದೆ. ತಿಂಡಿ ತಿನಿಸುಗಳನ್ನು ಬಡಿಸಲು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವ ಬದಲಾಗಿ ಸ್ಟೀಲ್ ಪಾತ್ರೆಗಳನ್ನು ನೀಡುವ ಯೋಜನೆಯನ್ನು ರೂಪಿಸಿದೆ. ಅದು ಕೂಡ ಉಚಿತವಾಗಿ. ಯಾವುದೇ ಸಂಸ್ಥೆಗಳು ತಮ್ಮಲ್ಲಿ ಸಭೆ ಸಮಾರಂಭಗಳು ನಡೆಯುವಾಗ ಎಲ್ಸಿಟಾ ಆಫೀಸ್ಗೆ ಭೇಟಿ ನೀಡಿ ನಿಗದಿತ ಠೇವಣಿಯನ್ನು ಪಾವತಿಸಿ ಸ್ಟೀಲ್ ಪಾತ್ರೆಗಳನ್ನು ಎರವಲು ಪಡೆಯಬಹುದು. ನಿಗದಿತ ಸಮಯದಲ್ಲಿ ಎಲ್ಲಾ ವಸ್ತುಗಳನ್ನು ಹಿಂತಿರುಗಿಸಿ ನೀಡಿದ ಠೇವಣಿಯನ್ನು ವಾಪಸ್ ಪಡೆಯಬಹುದು. ಇದರಿಂದ ಅನಗತ್ಯ ಖರ್ಚು ಉಳಿಸಬಹುದು ಅಷ್ಟೇ ಅಲ್ಲದೇ, ಸುಸ್ಥಿರ ಪರಿಸರವನ್ನು ನಿರ್ಮಿಸಲು ಕೊಡುಗೆ ನೀಡಿದಂತೆಯೂ ಆಗುತ್ತದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಭೆ ಸಮಾರಂಭಗಳು ನಡೆದರೆ ದಿನಕ್ಕೆ ಐದು ಟನ್ಗಳಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ ಹಸಿ ಕಸ ಒಣ ಕಸವನ್ನು ಬೇರ್ಪಡಿಸಿ ಅವುಗಳನ್ನು ವಿಲೇವಾರಿ ಮಾಡುವುದು ತ್ರಾಸದಾಯಕ. ಪ್ಲಾಸ್ಟಿಕ್ ಕಪ್, ಪೇಪರ್ ಗ್ಲಾಸ್ಗಳು ಕಸ ವಿಂಗಡಣೆ ಕಾರ್ಯವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತವೆ. ಹೀಗಾಗಿ ಸ್ಟೀಲ್ ಗ್ಲಾಸ್ ಹಾಗೂ ಬಟ್ಟಲುಗಳ ಬಳಕೆ ಕಸದ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೇ, ಮರುಬಳಕೆಗೂ ಯೋಗ್ಯವಾಗಿರುತ್ತವೆ. ಎಲೆಕ್ಟ್ರಾನಿಕ್ ಸಿಟಿಯ ಒಳಗೆ ನಡೆಯುವ ಕಾರ್ಯಕ್ರಮದ ಕಸ ವಿಲೇವಾರಿಯನ್ನು ಎಲ್ಸಿಟಾ ಸಂಸ್ಥೆಯು ನಿರ್ವಹಿಸುತ್ತದೆ. ಹಾಗಾಗಿ ಈ ಹೊರೆಯನ್ನು ಕಡಿತಗೊಳಿಸಲು ಎಲ್ಸಿಟಾ ಕಂಡುಕೊಂಡ ದಾರಿ ʼಕಟ್ಲೆರಿ ಬ್ಯಾಂಕ್ʼ.
ಈ ವ್ಯವಸ್ಥೆಯು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸುಮಾರು 300ಕ್ಕೂ ಹೆಚ್ಚು ಖಾಸಗಿ ಕಂಪೆನಿಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಇನ್ನಿತರರಿಗೆ ಉಪಯೋಗವಾಗಲಿದೆ. ಈ ಯೋಜನೆಯ ಉಪಯೋಗವನ್ನು ಪಡೆಯಲು ಮಾಡಬೇಕಾಗಿದ್ದು ಇಷ್ಟೇ, ಎಲ್ಸಿಟಾ ಕಛೇರಿಯಲ್ಲಿ ಸಿಗುವ ಸರಳ ಫಾರ್ಮ್ ಭರ್ತಿ ಮಾಡಿ ತಾವು ಎರವಲು ಪಡೆಯುವ ವಸ್ತುಗಳಿಗೆ ಸಮಾನಾದ ಡೆಪಾಸಿಟ್ ಹಣವನ್ನು ಪಾವತಿ ಮಾಡಬೇಕು. ಕಾರ್ಯಕ್ರಮ ಮುಗಿದ ಬಳಿಕ ವಸ್ತುಗಳನ್ನು ಹಿಂತಿರುಗಿಸಿ ತಮ್ಮ ಹಣವನ್ನು ವಾಪಾಸ್ ಪಡೆಯಬಹುದು. ಯಾವುದೇ ವಸ್ತು ಕಳೆದು ಹೋದಲ್ಲಿ ಅಥವಾ ಹಾನಿಯುಂಟಾದಲ್ಲಿ ಅದನ್ನು ಡೆಪಾಸಿಟ್ ಹಣದಿಂದ ಕಳೆಯಲಾಗುವುದು. ಎಲೆಕ್ಟ್ರಾನಿಕ್ ಸಿಟಿಯ ಹೊರಗಿನ ಸಂಸ್ಥೆಗಳು ಕೂಡಾ ಈ ಯೋಜನೆಯ ಉಪಯೋಗವನ್ನು ಪಡೆಯಬಹುದು.
ಮುಖ್ಯವಾಗಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಸಲುವಾಗಿ ಎಲ್ಸಿಟಾ ಸಂಸ್ಥೆಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಸ್ಟೀಲ್ ಬಟ್ಟಲು, ಲೋಟ, ಚಮಚ ಹಾಗೂ ಇತರ ವಸ್ತುಗಳನ್ನು ಇಲ್ಲಿ ಉಚಿತವಾಗಿ ಪಡೆಯಬಹುದು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಭೆ ಸಮಾರಂಭ ನಡೆಸುವವರಿಗೆ ಈ ಯೋಜನೆಯು ಬಹಳಷ್ಟು ಪ್ರಯೋಜನಕಾರಿಯಾಗಲಿದೆ. ಎಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಈ ಕಟ್ಲೆರಿ ಬ್ಯಾಂಕ್ ನ ವಸ್ತುಗಳನ್ನು ಉಪಯೋಗಿಸುವಂತೆ ಕೇಳಿಕೊಳ್ಳುತ್ತೇನೆಂದು ಎಲ್ಸಿಟಾ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ರಮಾ ಎನ್ ಅವರು ಹೇಳಿದ್ದಾರೆ.