ಅಧಿಕಾರಕ್ಕೆ ಏರಲೇಬೇಕು ಎಂಬ ತಮ್ಮ ಛಲವನ್ನು ಸಾಧಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೂರು ದಿನ ತುಂಬಿದೆ. ಪ್ರವಾಹ ಪರಿಸ್ಥಿತಿಯ ನಡುವೆಯೇ ಈ ನೂರು ದಿನಗಳನ್ನು ಕಳೆದ ಸರ್ಕಾರ ಉಳಿದಂತೆ ಬೇರೆ ವಿಚಾರಗಳ ಬಗ್ಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಸಚಿವ ಸಂಪುಟ ರಚನೆ, ಉಪಮುಖ್ಯಮಂತ್ರಿ ನೇಮಕದ ಬಗ್ಗೆ ಗೊಂದಲ, ಅಸಮಾಧಾನಗಳು ತೀವ್ರವಾಗಿ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಬಗೆಹರಿಯಲೇ ಇಲ್ಲ. ಹೀಗಾಗಿ ಪ್ರವಾಹ ಮತ್ತು ಗೊಂದಲಗಳಲ್ಲಿ ಮುಳುಗೆದ್ದಿದ್ದಷ್ಟೇ ಸರ್ಕಾರ ನೂರು ದಿನಗಳ ಸಾಧನೆ ಎಂದು ಹೇಳಬಹುದು.
ಜುಲೈ 26ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪ್ರದಾಯದಂತೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಲು ಕೂಡ ಪುರುಸೊತ್ತು ನೀಡದೆ ನೆರೆ ಹಾವಳಿ ಅವರನ್ನು ಕಾಡಿತ್ತು. ಸಚಿವ ಸಂಪುಟ ವಿಸ್ತರಣೆಗೂ ಅವಕಾಶ ಮಾಡಿಕೊಡಲಿಲ್ಲ. ಇದರ ಪರಿಣಾಮ ಆರಂಭದಲ್ಲೇ ಪ್ರತಿಪಕ್ಷಗಳಿಂದ ಟೀಕೆಗೂ ಒಳಗಾಗಬೇಕಾಯಿತು. ಆದರೆ, ಅದಕ್ಕೆ ಏಕಾಂಗಿಯಾಗಿಯೇ ತಮ್ಮ ಕೆಲಸಗಳ ಮೂಲಕ ಉತ್ತರ ನೀಡಿದ ಯಡಿಯೂರಪ್ಪ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನು ಸಮಾಧಾನಪಡಿಸುವ ಕೆಲಸ ಮಾಡಿದರು. ತಮ್ಮ ವಯಸ್ಸನ್ನೂ ಲೆಕ್ಕಿಸದೆ ಸತತ ಒಂದು ವಾರ ಕಾಲ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಓಡಾಡಿದರು. ಬಳಿಕವೇ ಅವರು ವರಿಷ್ಠರನ್ನು ಭೇಟಿ ಮಾಡಿದ್ದು ಹಾಗೂ ಸಚಿವ ಸಂಪುಟ ರಚನೆ ಮಾಡಿದ್ದು. ಇದಕ್ಕೆ ಬರೋಬ್ಬರಿ ಒಂದು ತಿಂಗಳು ತೆಗೆದುಕೊಂಡರು.
ಸಚಿವ ಸಂಪುಟ ರಚನೆಯಾಗಿ ಇನ್ನೇನು ಕೆಲಸ ಆರಂಭಿಸಬೇಕು ಎನ್ನುವಷ್ಟರಲ್ಲಿ ಮತ್ತೊಮ್ಮೆ ಪ್ರವಾಹದ ಹಾವಳಿ ಕಾಣಿಸಿಕೊಂಡಿತು. ಯಡಿಯೂರಪ್ಪ ಅವರಂತೆ ಸಚಿವರು ಕೂಡ ತಾವು ವಿಧಾನಸೌಧದಲ್ಲಿ ಕಚೇರಿ ಆರಂಭಿಸಿ ಅದನ್ನು ಪ್ರವೇಶಿಸುವ ಮುನ್ನವೇ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡುವಂತಾಯಿತು. ಈ ಮಧ್ಯೆ ಸಚಿವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಮೂಡಿದ ಅಸಮಾಧಾನ, ಉಪಮುಖ್ಯಮಂತ್ರಿ ನೇಮಕ ವಿಚಾರದಲ್ಲಿ ಹೊರಹೊಮ್ಮಿದ ಆಕ್ರೋಶ, ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ ಸವದಿ ಅವರನ್ನು ಸಚಿವರಾಗಿ ನೇಮಕ ಮಾಡಿದ್ದಲ್ಲದೆ ಉಪಮುಖ್ಯಮಂತ್ರಿ ಸ್ಥಾನವನ್ನೂ ನೀಡಿದ್ದು ಸರ್ಕಾರದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಮಾಡಿತು.
ನೆರೆ ಪರಿಹಾರದಲ್ಲಿ ಸಚಿವರಿಂದ ಸಿಗದ ಸಹಕಾರ
ಆದರೆ, ಯಡಿಯೂರಪ್ಪ ಅವರು ಈ ವಿಚಾರದಲ್ಲಿ ಎಷ್ಟು ವೇಗವಾಗಿದ್ದರೋ, ಅವರಂತೆ ಕೆಲಸ ಮಾಡುವಲ್ಲಿ ಸಚಿವ ಸಂಪುಟದ ಬಹುತೇಕ ಸದಸ್ಯರು ವಿಫಲರಾದರು. ಅದರಲ್ಲೂ ಮುಖ್ಯವಾಗಿ ಕಂದಾಯ ಸಚಿವರಾಗಿರುವ ಆರ್. ಅಶೋಕ್ ಅವರ ಕಾರ್ಯವೈಖರಿ ಯಡಿಯೂರಪ್ಪ ಅವರಿಗೆ ಮಾತ್ರವಲ್ಲ, ಸಚಿವ ಸಂಪುಟದ ಕೆಲವು ಸದಸ್ಯರಿಗೂ ಬೇಸರ ತರಿಸಿತ್ತು. ನೆರೆ ಪರಿಹಾರ ನೇರವಾಗಿ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ನೆರೆ ಬಂದಾಗ ಕಂದಾಯ ಸಚಿವರು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಆದರೆ, ಉಪಮುಖ್ಯಮಂತ್ರಿ ಸ್ಥಾನ ಸಿಗದ ಬೇಸರ, ಅಸಮಾಧಾನವನ್ನು ಕಂದಾಯ ಸಚಿವರಾಗಿ ಮಾಡಬೇಕಾದ ಕೆಲಸಗಳನ್ನು ಸರಿಯಾಗಿ ನಿರ್ವಹಿಸದೆ ಅಶೋಕ್ ಅವರು ತೋರಿಸಿಕೊಟ್ಟರು. ಇದರಿಂದ ನಿಜವಾಗಿಯೂ ಸಂಕಷ್ಟಕ್ಕೆ ಒಳಗಾಗಿದ್ದು ಸಂತ್ರಸ್ತರು. ಕೇವಲ ಕಂದಾಯ ಸಚಿವರು ಮಾತ್ರವಲ್ಲ, ಸಿ. ಟಿ. ರವಿ, ಕೆ. ಎಸ್. ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ ಹೀಗೆ ನಾಲ್ಕೈದು ಸಚಿವರನ್ನು ಹೊರತುಪಡಿಸಿ ಇನ್ನುಳಿದವರೆಲ್ಲರೂ ನಾಮ್ ಕೆ ವಾಸ್ತೆ ಎಂಬಂತೆ ಕೆಲಸ ಮಾಡಿದರು.
ಇಷ್ಟೆಲ್ಲದರ ನಡುವೆ ಪ್ರವಾಹ ಪರಿಹಾರದ ವಿಚಾರದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಸಿಕ್ಕಿದ ಸಹಕಾರವೇ ಸರ್ಕಾರದ ಮಾನ ಕಾಪಾಡಿದ್ದು. ಸಚಿವರೊಂದಿಗೆ ನಡೆಸಿದ ಖಾಸಗಿ ಮಾತುಕತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಇದನ್ನು ಹೇಳಿದ್ದರು. ನೀವಂತೂ ಸಂಪೂರ್ಣ ಸಹಕಾರ ನೀಡಲಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ನನ್ನೊಂದಿಗೆ ಕೈಜೋಡಿಸದಿದ್ದಲ್ಲಿ ಸಂತ್ರಸ್ತರ ಆಕ್ರೋಶ ಹೆಚ್ಚಾಗಿ ಇವತ್ತು ಈ ಸರ್ಕಾರ ಉಳಿಯುತ್ತಿರಲಿಲ್ಲ ಎಂಬರ್ಥದಲ್ಲಿ ಯಡಿಯೂರಪ್ಪ ಅವರು ಸಚಿವರಿಗೆ ಬಿಸಿ ಮುಟ್ಟಿಸಿದ್ದರು. ಇದಾದ ಬಳಿಕವೇ ಸಚಿವರು ಸ್ವಲ್ಪ ಮಟ್ಟಿಗೆ ಪರಿಹಾರ ಕಾರ್ಯಗಳತ್ತ ಗಮನಹರಿಸಿದ್ದು. ಈ ಮಧ್ಯೆ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ನೆರವು ಸಿಗದಿರುವುದು ಕೂಡ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು.
ಗೊಂದಲಗಳ ಸರಮಾಲೆ
ಎಲ್ಲಾ ಬಣ್ಣ ಮಸಿ ನುಂಗಿತು ಎಂಬಂತೆ ನೆರೆ ಪರಿಹಾರ, ಆಡಳಿತದ ವಿಚಾರದಲ್ಲಿ ಸರ್ಕಾರ ಸ್ವಲ್ಪ ಮಟ್ಟಿಗೆ ಸಾಧನೆ ಮಾಡಿದೆ ಎನ್ನಬಹುದಾದರೂ ಸಚಿವ ಸಂಪುಟ ರಚನೆ, ಉಪಮುಖ್ಯಮಂತ್ರಿಗಳ ನೇಮಕ ಕುರಿತ ಅಸಮಾಧಾನ, ಅನರ್ಹ ಶಾಸಕರ ವಿಚಾರದಲ್ಲಿ ಗೊಂದಲಗಳು ಇವೆಲ್ಲವನ್ನೂ ಮರೆಮಾಚಿ ಬರೇ ಗೊಂದಲವಷ್ಟೇ ಕಣ್ಣಿಗೆ ಕಾಣುವಂತಾಯಿತು. ಸಚಿವ ಸಂಪುಟ ರಚನೆ ವೇಳೆ ಪ್ರಭಾವಿ ಶಾಸಕರಾದ ಉಮೇಶ್ ಕತ್ತಿ, ಎಸ್. ಎ. ರಾಮದಾಸ್, ಹಿರಿಯ ಶಾಸಕ ಅಂಗಾರ ಮುಂತಾದವರನ್ನು ಕೈಬಿಟ್ಟ ವಿಚಾರ ಅಸಮಾಧಾನಕ್ಕೆ ಕಾರಣವಾದರೆ, ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿದ್ದಲ್ಲದೆ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿದ್ದು, ಈ ಅಸಮಾಧಾನದ ಬೆಂಕಿಗೆ ತುಪ್ಪ ಸುರಿಯಿತು.
ಇನ್ನೊಂದೆಡೆ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವ ಕುರಿತಂತೆ ಶಾಸಕರ ನಡುವಿನ ಅಸಮಾಧಾನ ಆಕ್ರೋಶದ ರೂಪ ಪಡೆಯುವಂತಾಯಿತು. ಸಚಿವರು, ಶಾಸಕರು ಮನಬಂದಂತೆ ಹೇಳಿಕೆ ನೀಡುತ್ತಿರುವುದರಿಂದ ಬೇಸತ್ತ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನೀವು ಮಾತನಾಡಿದ ಧಾಟಿ ನೋಡಿದರೆ ಸರ್ಕಾರ ಉಳಿಸುವಂತೆ ಇದೆ ಅಂತ ಅನ್ನಿಸುತ್ತಿಲ್ಲ. 17 ಶಾಸಕರ ರಾಜಿನಾಮೆ ತೀರ್ಮಾನ ನಾನು ತೆಗೆದುಕೊಂಡಿದ್ದಲ್ಲ. ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿದ್ದೇ ಎರಡೂವರೆ ತಿಂಗಳು ಶಾಸಕರನ್ನು ಮುಂಬೈಯಲ್ಲಿ ಇಟ್ಟಿದ್ದು ನಿಮಗೆಲ್ಲ ಗೊತ್ತಿದೆಯಲ್ಲವೆ. ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ. 3–4 ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಉತ್ತಮ ಕೆಲಸ ಮಾಡಬೇಕು ಎಂಬುದಷ್ಟೇ ನನ್ನ ಅಪೇಕ್ಷೆ ಆಗಿತ್ತು. ದೊಡ್ಡತನ, ಧಾರಾಳತನ ನಿಮಗೆ ಇಲ್ಲವಲ್ಲ. ವಾಸ್ತವಿಕ ಸ್ಥಿತಿಯನ್ನು ತಿಳಿದುಕೊಳ್ಳದೇ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತೀರಿ. ಅವರಿಂದಾಗಿ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂಬ ಕನಿಷ್ಠ ನೆನಪೂ ನಿಮಗೆ ಬರಲಿಲ್ಲವಲ್ಲ ಎಂದು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಇಷ್ಟೆಲ್ಲಾ ಆದ ಬಳಿಕ ಅಸಮಾಧಾನಿತರು ಮೌನವಾಗಿದ್ದಾರಾದರೂ ಈ ಕುದಿ ಮೌನ ಯಾವತ್ತು ಸ್ಫೋಟಗೊಳ್ಳುತ್ತದೆಯೋ ಎಂಬ ಆತಂಕ ಉಳಿದುಕೊಂಡಿದೆ.
ಬಿಜೆಪಿ ಸರ್ಕಾರದ 100 ದಿನಗಳ ಆಡಳಿತದಲ್ಲಿ ಈ ಗೊಂದಲಗಳ ಮಧ್ಯೆಯೂ ಕಂದಾಯ, ಆರೋಗ್ಯ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಮತ್ತಿತರ ಇಲಾಖೆಗಳಲ್ಲಿ ಸಾಕಷ್ಟು ಹೊಸ ಕಾರ್ಯಕ್ರಮಗಳು ಆರಂಭವಾಗಿವೆ. ಆದರೆ, ಭೀಕರ ಪ್ರವಾಹ, ಪರಿಹಾರ ಕಲ್ಪಿಸುವ ವಿಚಾರದಲ್ಲಿ ಸಚಿವರ ಅಸಹಾಕಾರ, ಸಚಿವ ಸಂಪುಟ ರಚನೆ ಮತ್ತು ಉಪಮುಖ್ಯಮಂತ್ರಿಗಳ ನೇಮಕದ ವಿಚಾರದಲ್ಲಿ ಅಸಮಾಧಾನ, ಅನರ್ಹ ಶಾಸಕರ ವಿಚಾರದಲ್ಲಿ ಗೊಂದಲಗಳೇ ಪ್ರಾಮುಖ್ಯತೆ ಪಡೆದು ಆಗಿರುವ ಪ್ರಗತಿ ಕಾರ್ಯಗಳೇನು ಎಂಬುದು ಮೂಲೆ ಸೇರುವಂತಾಯಿತು.