ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ದಿನನಿತ್ಯ ಸಾವಿರಾರು ಜನರು ಪ್ರಯಾಣ ಮಾಡ್ತಾರೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ವ್ಯಾಪಾರ ವಹಿವಾಟು ನಡೆಸಲು, ಕೃಷಿಕರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು, ಸ್ನೇಹಿತರು ಸಂಬಂಧಿಕರನ್ನು ಭೇಟಿ ಮಾಡಲು, ಹೀಗೆ ಹಲವಾರು ವಿಚಾರಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಸಹಕಾರಿಯಾಗಬಲ್ಲವು. ಅದರಲ್ಲೂ ಹಳ್ಳಿಗಾಡಿನ ಜನರಿಗೆ ಬರುವ ಒಂದೊಂದೇ ಬಸ್‌ಗಳನ್ನು ಕಾದು ಕುಳಿತು ಪ್ರಯಾಣ ಮಾಡುವ ಪರಿಸ್ಥಿತಿ ಇಂದಿಗೂ ಕಾಣಸಿಗುತ್ತದೆ. ಈ ರೀತಿ ಹಳ್ಳಿಗಾಡಿನಲ್ಲಿ ಪ್ರಯಾಣ ಮಾಡುವ ಬಸ್ ಪ್ರಯಾಣಿಕರು ಶಾಕ್‌ಗೆ ಒಳಗಾಗುವಂತಹ ಸುದ್ದಿ ಅಂದರೆ ಬಸ್ ಟಿಕೆಟ್ ದರ ಏರಿಕೆ ಆಗಿರುವುದು.
ರಾಜ್ಯದ ಮೂರು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ರಾಜ್ಯ ಸರ್ಕಾರ ಏಕಾಏಕಿ ಶೇಕಡ 12ರಷ್ಟು ಏರಿಕೆ ಮಾಡಿ ಆದೇಶ ಮಾಡಿದೆ. ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದಲೇ ನೂತನ ಪರಿಷ್ಕೃತ ದರ ಜಾರಿಯಾಗಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲೇ ಶೇಕಡ 5ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾವನೆ ಚರ್ಚೆಗೆ ಬಂದಿತ್ತು. ಬಿಜೆಪಿ ನಾಯಕರು ಸರ್ಕಾರದ ಪ್ರಸ್ತಾವನೆಗೆ ಕೆಂಡ ಕಾರಿದ್ದರು. ಅಂದಿನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೂಡ ಸಾರಿಗೆ ಸಚಿವರಾಗಿದ್ದ ಡಿ ಸಿ ತಮ್ಮಣ್ಣ ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕರಿಸಿ ಬಡವರ ಮೇಲೆ ಹೊರೆ ಏರುವುದಿಲ್ಲ ಎಂದಿದ್ದರು. ಇದೀಗ ಯಾವುದೇ ಚರ್ಚೆಯೂ ಇಲ್ಲ, ವಿರೋಧ ಪಕ್ಷಗಳ ಆಕ್ರೋಶವೂ ಇಲ್ಲ. ಏಕಾಏಕಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯಾಗಿದೆ.
ನೆಮ್ಮದಿಯ ವಿಚಾರ ಎಂದರೆ ಗ್ರಾಮೀಣ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚಾರ ಮಾಡುವ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಏರಿಕೆ ಬಿಸಿ ತಟ್ಟಿಲ್ಲ. ಇದೀಗ ಶೈಕ್ಷಣಿಕ ವರ್ಷದ ಮುಕ್ತಾಯದ ಹಂತದಲ್ಲಿದ್ದು ಏರಿಕೆ ಮಾಡಿದ್ದರೂ ಜಾರಿಯಾಗುವುದು ಮುಂದಿನ ಶೈಕ್ಷಣಿಕ ವರ್ಷಾರಂಭದಿಂದ. ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಬಸ್ ಪಾಸ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎನ್ನಲಾಗಿದೆ. ಮೊದಲ ಒಂದೆರಡು ಸ್ಟಾಪ್‌ಗೆ ಇಳಿಯುವ ಬಸ್ ಟಿಕೆಟ್ ದರ ಕೂಡ ಏರಿಕೆಯಾಗಿದೆ. 15 ಕಿಲೋ ಮೀಟರ್ ತನಕ ಬಸ್ ಟಿಕೆಟ್ ದರ ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ. ಆದರೆ 15 ಕಿಲೋ ಮೀಟರ್‌ನ ಬಳಿಕ ಸಂಚಾರ ಮಾಡುವ ಪ್ರಯಾಣಿಕರಿಗೆ ಬರೆ ಎಳೆಯಲಾಗಿದೆ.
2013ರಲ್ಲಿ ಜಾರಿಗೆ ಬಂದಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೇಕಡ 15ರಷ್ಟು ಟಿಕೆಟ್ ದರ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಆ ಬಳಿಕ ಸ್ಟೇಜ್ ದರವನ್ನು 6 ರೂಪಾಯಿ ಇಂದ 5 ರೂಪಾಯಿಗೆ ಇಳಿಕೆ ಮಾಡಿತ್ತು. ಮತ್ತೆ ಲೋಕಸಭಾ ಚುನಾವಣೆ ಮುಗಿದ ಬಳಿಕ 2014ರ ಮೇ ತಿಂಗಳಲ್ಲಿ ಡೀಸೆಲ್ ದರ ಪ್ರತಿದಿನ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎನ್ನುವ ಮೂಲಕ ಮತ್ತೊಮ್ಮೆ ಶೇಕಡ 15 ರಷ್ಟು ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಇದೀಗ ಬರೋಬ್ಬರಿ 6 ವರ್ಷಗಳ ಬಳಿಕ ಟಿಕೆಟ್ ದರ ಏರಿಕೆ ಮಾಡಲಾಗಿದೆ. ಸಾರ್ವಜನಿಕರು ಸಾರಿಗೆ ಬಸ್ ಬಳಸಿ ಎಂದು ಕರೆ ಕೊಡುವ ಸರ್ಕಾರವೇ ಪದೇ ಪದೇ ಟಿಕೆಟ್ ದರ ಏರಿಕೆ ಮಾಡಿದರೆ ಜನ ಸಾರಿಗೆಗಾಗಿ ಪರ್ಯಾಯ ಮಾರ್ಗ ಬಳಸುತ್ತಾರೆ ಎನ್ನುವ ಸಣ್ಣ ಪರಿಜ್ಞಾನವೂ ಸರ್ಕಾರಕ್ಕೆ ಇದ್ದಂತಿಲ್ಲ.
ಉದಾಹರಣೆಗೆ, ತುಮಕೂರಿನಿಂದ ಬೆಂಗಳೂರಿಗೆ 70 ಕಿಲೋಮೀಟರ್ ದೂರವಿದೆ. ಒಂದು ಬಸ್ ತುಮಕೂರಿನಿಂದ ಬೆಂಗಳೂರಿಗೆ ಹೋಗಿ ಬರಲು 140 ಕಿಲೋ ಮೀಟರ್ ಸಂಚಾರ ಮಾಡಬೇಕು. ಅಂದರೆ ಒಂದು ಬಸ್ ಲೀಟರ್ ಡೀಸೆಲ್‌ಗೆ 5 ಕಿಲೋಮೀಟರ್ ಸಂಚರಿಸುವ ಸಾಮರ್ಥ್ಯವಿದೆ ಎಂದುಕೊಂಡರೂ 28 ಲೀಟರ್ ಡೀಸೆಲ್ ಬೇಕಾಗುತ್ತದೆ. 28 ಲೀಟರ್ ಡೀಸೆಲ್‌ಗೆ ಇಂದಿನ ಡೀಸೆಲ್ ದರ 66.8 ರೂಪಾಯಿಯಂತೆ 1 ಸಾವಿರದ 870 ರೂಪಾಯಿ ಆಗುತ್ತದೆ. ಒಂದು ಬಸ್‌ನ ಸೀಟ್ ಸಾಮರ್ಥ್ಯ ( ಡ್ರೈವರ್, ಕಂಡೆಕ್ಟರ್ ಹೊರತುಪಡಿಸಿ ) 47 ಸೀಟುಗಳು. ಎರಡು ಮಾರ್ಗದಿಂದ 6 ಸಾವಿರದ 110 ರೂಪಾಯಿ ಸಂಗ್ರಹ ಆಗುತ್ತದೆ. ಇದರಲ್ಲಿ ಬಸ್ ಡೀಸೆಲ್ ವೆಚ್ಚ, ಡ್ರೈವರ್, ಕಂಡೆಕ್ಟರ್ ವೆಚ್ಚ, ಬಸ್ ಮೇಂಟೈನೆನ್ಸ್ ವೆಚ್ಚ ಕಡಿತ ಮಾಡಿದರೂ ನಷ್ಟವಾಗದೆ ಸಾಕಷ್ಟು ಲಾಭವೇ ಬರುತ್ತದೆ. ಒಂದು ವೇಳೆ ಡೀಸೆಲ್ ಲೆಕ್ಕಾಚಾರಕ್ಕೆ ಡೀಸೆಲ್ ಮೈಲೇಜ್ ಬಂದಿಲ್ಲ ಎಂದರೆ ಡ್ರೈವರ್ ವೇತನದಲ್ಲಿ ಕಡಿತ ಮಾಡುವ ಪದ್ದತಿಯೂ ಜಾರಿಯಲ್ಲಿದೆ. ಅದರಲ್ಲೂ ಹಳ್ಳಿಗಾಡಿನಲ್ಲಿ ಸರ್ಕಾರಿ ಬಸ್ ಸಂಚಾರ ಮಾಡುತ್ತಿದ್ದು, ಬಸ್‌ಗೆ ಜನರು ಬರುತ್ತಿಲ್ಲ ಎಂದರೆ ನಷ್ಟದ ಕಾರಣ ನೀಡಿ ಬಸ್ ಸಂಚಾರವನ್ನೇ ನಿಲ್ಲಿಸುತ್ತಾರೆ. ಪರಿಸ್ಥಿತಿ ಹೀಗಿದ್ದ ಮೇಲೆ ನಷ್ಟ ಅನುಭವಿಸುತ್ತಿರುವ ಮಾತು ಯಾಕೆ? ಎಂದು ಸಂಸ್ಥೆಯ ನೌಕರರೇ ಪ್ರಶ್ನೆ ಮಾಡುತ್ತಾರೆ.
ಸರ್ಕಾರಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂದು ಪದೇ ಪದೇ ಹೇಳುತ್ತಲೇ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುತ್ತಿದೆ. ಆದರೆ ಸಾರಿಗೆ ಸಂಸ್ಥೆಗಳ ನಷ್ಟಕ್ಕೆ ಕಾರಣ ಏನೆಂದು ಹುಡುಕುವ ಸಣ್ಣ ಪ್ರಯತ್ನವೂ ನಡೆದಿಲ್ಲ. ಸಾರಿಗೆ ಸಂಸ್ಥೆಗಳ ನಷ್ಟಕ್ಕೆ ಪ್ರಮುಖ ಕಾರಣ ಈ ಹಿಂದೆ ದುಂದುವೆಚ್ಚ ಮಾಡಿ ಖರೀದಿಸಿದ ಬಸ್‌ಗಳು. ಬೇಕಾಬಿಟ್ಟಿಯಾಗಿ ಬಸ್ ಸಂಚರಿಸಲು ಅನುವು ಮಾಡಿಕೊಟ್ಟಿರುವುದು. ಗುಜರಿಗೆ ಹೋದ ಬಸ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಸಾವಿರಾರು ಕೋಟಿ ರೂಪಾಯಿ ದಿಕ್ಕಾಪಾಲಾಗಿ ಪೋಲು ಮಾಡುತ್ತಿರುವುದು. ಹೀಗೆ ನಾನಾ ಮಾರ್ಗದಲ್ಲಿ ಸಾರಿಗೆ ನೌಕರರು ಕಷ್ಟಪಟ್ಟು ದುಡಿಯುವ ಹಣ ಸಂಸ್ಥೆಯಲ್ಲಿರುವ ದೊಡ್ಡ ದೊಡ್ಡ ಕುಳಗಳ ಪಾಲಾಗುತ್ತದೆ. ಎಲ್ಲಾ ವಿಭಾಗಗಳನ್ನು ಒಟ್ಟಿಗೆ ಸೇರಿಸಿ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡಬಹುದು. ಇದೇ ರೀತಿಯಲ್ಲಿ ಸಂಸ್ಥೆಯಲ್ಲಿ ಸಾಕಷ್ಟು ಹಣ ಮೇಯುವ ಕುಳಗಳಿದ್ದು, ಅವುಗಳನ್ನು ಸಂಸ್ಥೆಯಿಂದ ಹೊರಹಾಕುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿಯನ್ನು ಚೆನ್ನಾಗಿ ಬಲ್ಲವರು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೇವಲ ಅಧಿಕಾರಿಗಳು ಹೇಳಿದ ಮಾತ್ರಕ್ಕೆ ಟಿಕೆಟ್ ದರ ಏರಿಸಲು ತಲೆ ಅಲ್ಲಾಡಿಸುವುದು ಬಿಟ್ಟು ಸಾರಿಗೆ ಸಂಸ್ಥೆಯಲ್ಲಿ ಲೂಟಿ ಹೊಡೆಯುತ್ತಿರುವವರನ್ನು ಪತ್ತೆ ಮಾಡಬೇಕಿದೆ. ಇದೀಗ ಟಿಕೆಟ್ ದರ ಏರಿಕೆ ಕೇವಲ ಸ್ಯಾಂಪಲ್, ಬಜೆಟ್‌ನಲ್ಲಿ ಮತ್ತಷ್ಟು ಬರೆ ಬೀಳುತ್ತದೆ ಕಾದು ನೋಡಿ ಎನ್ನುತ್ತಿದೆ ವಿಧಾನಸೌಧದ ಮೂಲಗಳು. ಮಾರ್ಚ್ 5 ರಂದು ಸಿಎಂ ಯಡಿಯೂರಪ್ಪ ಇನ್ನು ಯಾವುದರಲ್ಲಿ ಶಾಕ್ ಕೊಡ್ತಾರೋ ಕಾದು ನೋಡಬೇಕಿದೆ.