ಜಿಗಿಯುತ್ತಿರುವ ಕೊರೊನಾ ಸೋಂಕು ಪೀಡಿತರ ಸಂಖ್ಯೆ, ಕುದಿಯುತ್ತಿರುವ ಭಾರತ-ಚೀನಾ ಗಡಿ ತಂಟೆಗಳ ನಡುವೆಯೂ ಜನತೆ ನರೇಂದ್ರ ಮೋದಿ ಸರ್ಕಾರದ ಹೊಸದೊಂದು ದಾಖಲೆ ಬಗ್ಗೆ ಚರ್ಚಿಸುತ್ತಿದ್ದಾರೆ. ನರೇಂದ್ರ ಮೋದಿ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಸುವ ವಿಷಯದಲ್ಲಿ ಐತಿಹಾಸಿಕ ದಾಖಲೆ ಮಾಡಿದೆ. ಅದೆಂದರೆ, ಕಳೆದ 22 ದಿನಗಳಿಂದಲೂ ಪೆಟ್ರೋಲ್ ಮತ್ತು ಡಿಸೇಲ್ ದರವು ಸತತವಾಗಿ ಏರುತ್ತಲೇ ಇದೆ. ಬೆಂಗಳೂರು ದರದ ಲೆಕ್ಕದಲ್ಲಿ ಪೆಟ್ರೋಲ್ ಮತ್ತು ಡೀಸೇಲ್ ದರವು ಸರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಲು ಇನ್ನು ಎರಡು ದಿನ ಬಾಕಿ ಇದೆ.
ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದಾಖಲೆ ಮಾಡಿದರೆ, ಅವರ ಧಾರ್ಮಿಕ ಮತ್ತು ವ್ಯವಹಾರಿಕ ಗುರು ಬಾಬಾ ರಾಮ್ ದೇವ್ ಅವರು ಅತ್ಯದ್ಭುತ ದಾಖಲೆಯೊಂದನ್ನು ಮಾಡಿದ್ದಾರೆ. ಈ ದಾಖಲೆ ಧಾರ್ಮಿಕ ದಾಖಲೆಯಲ್ಲ, ವ್ಯವಹಾರಿಕ ದಾಖಲೆ!
ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಕಂಪನಿಯು ಕಳೆದ ವರ್ಷ ಖರೀದಿಸಿರುವ ರುಚಿ ಸೋಯಾ ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಅತ್ಯದ್ಭುತ ದಾಖಲೆ ಮಾಡಿದೆ. ಐದೇ ತಿಂಗಳಲ್ಲಿ ರುಚಿ ಸೋಯಾ ಕಂಪನಿಯ ಷೇರು ದರವು ಶೇ.8,800 ರಷ್ಟು ಏರಿಕೆ ದಾಖಲಿಸಿದೆ. ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ, ಐದು ತಿಂಗಳ ಹಿಂದೆ ಅಂದರೆ, 2020 ಜನವರಿ 27 ರಂದು 16.90 ರುಪಾಯಿ ಇದ್ದ ರುಚಿ ಸೋಯಾ ಕಂಪನಿಯ ಷೇರು ದರ 2020 ಜೂನ್ 26 ರಂದು 1507.30 ರುಪಾಯಿಗೆ ಏರಿದೆ. ಈ ಅವಧಿಯಲ್ಲಿ 90 ಪಟ್ಟು ಏರಿಕೆಯಾಗಿದೆ. ಅಂದರೆ, ಜನವರಿ 27 ರಂದು 1 ಲಕ್ಷ ರುಪಾಯಿ ಹೂಡಿಕೆ ಮಾಡಿದ್ದರೆ, ಅದು ಈ ಐದು ತಿಂಗಳಲ್ಲಿ 90 ಲಕ್ಷ ರುಪಾಯಿಗಳಾಗಿದೆ.
ನಷ್ಟದಲ್ಲಿದ್ದ ರುಚಿ ಸೋಯಾ ಕಂಪನಿಯನ್ನು ಪತಂಜಲಿ ಖರೀದಿ ಮಾಡಿತ್ತು. ಖರೀದಿ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೇತೃತ್ವದ ಬ್ಯಾಂಕುಗಳ ಸಮೂಹವು 3,200 ಕೋಟಿ ರುಪಾಯಿ ಸಾಲ ನೀಡಿದ್ದವು. ಈ ಪೈಕಿ ಪಂಜಾಬ್ ನ್ಯಾಷನಲ್ ಬ್ಯಾಂಕ್ 700 ಕೋಟಿ ರುಪಾಯಿ ಸಾಲವನ್ನು ಒದಗಿಸಿತ್ತು.
ಪರಿಸ್ಥಿತಿ ಹೇಗಾಗಿದೆ ಎಂದರೆ, ಪತಂಜಲಿ ಕಂಪನಿಯು ರುಚಿ ಸೋಯಾ ಕಂಪನಿ ಖರೀದಿಸಲು 700 ರುಪಾಯಿ ಸಾಲ ನೀಡಿದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾರುಕಟ್ಟೆ ಬಂಡವಾಳವನ್ನು ಮೀರಿ ರುಚಿ ಸೋಯಾ ಮಾರುಕಟ್ಟೆ ಬಂಡವಾಳ ವೃದ್ಧಿಸಿದೆ. ಜನವರಿಯಲ್ಲಿ 70 ರುಪಾಯಿ ಇದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಷೇರು ದರ ಈಗ 36 ರುಪಾಯಿಗೆ ಕುಸಿದಿದೆ. ಅದೇ ರುಚಿಸೋಯಾ ಕಂಪನಿ ಷೇರು ದರವು 90 ಪಟ್ಟು ಹೆಚ್ಚಳವಾಗಿದೆ. ಸದ್ಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾರುಕಟ್ಟೆ ಬಂಡವಾಳ 34,442.90 ಕೋಟಿ ರುಪಾಯಿಗಳು. ರುಚಿಸೋಯಾ ಮಾರುಕಟ್ಟೆ ಬಂಡವಾಳವು 44,957.48 ಕೋಟಿ ರುಪಾಯಿಗಳಾಗಿದೆ.

ರುಚಿ ಸೋಯಾ ಕಂಪನಿಯ ಶೇ.98.87 ರಷ್ಟು ಪಾಲನ್ನು ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಖರೀದಿಸಿದೆ. ಹೀಗಾಗಿ ರುಚಿಸೋಯಾ ಕಂಪನಿ ಷೇರುಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವುದು ಅತ್ಯಲ್ಪ. ಹೀಗಾಗಿ ನಿತ್ಯವೂ ಶೇ.5ರಷ್ಟು ಏರಿಕೆಯಾಗುತ್ತಲೇ ಇದೆ.
ಷೇರುಪೇಟೆಯಲ್ಲಿ ಕೆಲವು ವಹಿವಾಟುದಾರರು, ಆಯ್ದ ಕಂಪನಿಗಳ ಷೇರುಗಳನ್ನು ಗರಿಷ್ಠ ಪ್ರಮಾಣದಲ್ಲಿ ಖರೀದಿಸಿ, ‘ಅಪ್ಪರ್ ಸರ್ಕ್ಯೂಟ್’ ಮುಟ್ಟುವಂತೆ ನೋಡಿಕೊಂಡು ಸತತವಾಗಿ ಷೇರು ಬೆಲೆ ಏರಿಸುವುದು, ಗರಿಷ್ಠ ಲಾಭ ಮಾಡಿಕೊಳ್ಳುತ್ತಾರೆ. ನಂತರ ಹೆಚ್ಚಿನ ಪ್ರಮಾಣದಲ್ಲಿ ಷೇರು ಮಾರಾಟ ಮಾಡಿ ‘ಲೊಯರ್ ಸರ್ಕ್ಯೂಟ್’ ಮಟ್ಟಕ್ಕೆ ಇಳಿಯುವಂತೆ ನೋಡಿಕೊಂಡು ತ್ವರಿತವಾಗಿ ಷೇರು ದರ ಕುಸಿಯುವಂತೆ ಮಾಡುತ್ತಾರೆ. ರುಚಿ ಸೋಯಾ ಷೇರು ವಿಷಯದಲ್ಲೂ ಇದೇ ತಂತ್ರ ಬಳಸಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಷೇರು ಪ್ರಮಾಣ ಕಡಮೆ ಇರುವುದನ್ನು ಬಾಬಾ ರಾಮ್ ದೇವ್ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಕಂಪನಿಯ ಮಾರುಕಟ್ಟೆ ಬಂಡವಾಳ ತ್ವರಿತವಾಗಿ ಜಿಗಿಯುವಂತೆ ನೋಡಿಕೊಳ್ಳುತ್ತಿದ್ದಾರೆ.
ಸಾಮಾನ್ಯವಾಗಿ ಬ್ಯಾಂಕುಗಳು ನಷ್ಟದಲ್ಲಿರುವ ಕಂಪನಿಗಳನ್ನು ಖರೀದಿಸಲು ಸಾಲ ನೀಡುವುದಿಲ್ಲ. ಆದರೆ, ಪತಂಜಲಿ ಕಂಪನಿಗೆ ಎಸ್ಬಿಐ ನೇತೃತ್ವದ ಬ್ಯಾಂಕುಗಳ ಸಮೂಹವು 3,200 ಕೋಟಿ ಸಾಲ ನೀಡಿದೆ. ಪತಂಜಲಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಐಬಿಸಿ (ದಿವಾಳಿ ಸಂಹಿತೆ) ನಿಯಮಗಳು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳನ್ನು ಸಡಿಲಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅಲ್ಲದೇ ರುಚಿ ಸೋಯಾ ಕಂಪನಿ ಮಾಡಿದ್ದ ಸಾಲದಲ್ಲಿನ ಭಾಗಷಃ ಮೊತ್ತವನ್ನು ದಿವಾಳಿ ಸಂಹಿತೆಯಡಿ ಪುನಶ್ಚೇತನ ಯೋಜನೆ ಪೂರ್ಣಗೊಂಡ ನಂತರ ಎಸ್ಬಿಐ ನೇತೃತ್ವದ ಬ್ಯಾಂಕುಗಳ ಸಮೂಹವು ರೈಟ್ ಆಫ್ ಮಾಡುವ ಸಾಧ್ಯತೆ ಇದೆ.
ರೈಟ್ ಆಫ್ ಮಾಡುವುದು ಎಂದರೆ, ಬ್ಯಾಂಕಿನ ಬ್ಯಾಲೆನ್ಸ್ ಷೀಟ್ ನಿಂದ ಸಾಲವನ್ನು ಹೊರಕ್ಕೆ ಇಡುವುದು ಎಂದರ್ಥ. ಬಹುತೇಕ ವಸೂಲು ಮಾಡಲು ಸಾಧ್ಯವೇ ಇಲ್ಲದ ಮತ್ತು ವಾಪಸು ಬರುವ ಸಾಧ್ಯತೆಯೇ ಇಲ್ಲದ ಸಾಲವನ್ನು ಹೀಗೆ ರೈಟ್ ಆಫ್ ಮಾಡಲಾಗುತ್ತದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕ ವಲಯದ ಬ್ಯಾಂಕುಗಳು ಕಾರ್ಪೊರೆಟ್ ವಲಯದ ಸಾಲಗಳನ್ನು ರೈಟ್ ಆಫ್ ಮಾಡುವ ಪ್ರವೃತ್ತಿ ಹೆಚ್ಚಿದೆ. ಆರ್ಬಿಐ ಅಂಕಿ ಅಂಶಗಳ ಪ್ರಕಾರ ಮೋದಿ ಸರ್ಕಾರದ ಅವಧಿಯಲ್ಲಿ ಕಳೆದ ಐದು ವರ್ಷದಲ್ಲಿ ಸುಮಾರು 5.6 ಲಕ್ಷ ಕೋಟಿ ರುಪಾಯಿಗಳನ್ನು ‘ರೈಟ್ ಆಫ್’ ಮಾಡಲಾಗಿದೆ.