2014ನೇ ಸಾಲಿನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧಾರಿಸುವುದಾಗಿ ಭರವಸೆ ನೀಡಿತ್ತು. ನಿಷ್ಕ್ರಿಯ ಸಾಲವನ್ನು ತಗ್ಗಿಸುವುದಲ್ಲದೇ, ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕುವುದಾಗಿಯೂ ಹೇಳಿತ್ತು. ಬಿಜೆಪಿ ಬಹುಮತಗೆದ್ದು ಬಂತು. ಐದು ವರ್ಷದ ಅವಧಿ ಪೂರೈಸಿ ಮತ್ತೆ ಚುನಾವಣೆ ಎದುರಿಸಿ, ಎರಡನೇ ಅವಧಿಗೂ ಅಧಿಕಾರ ಗ್ರಹಿಸಿದೆ. ಆದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಬ್ಯಾಂಕುಗಳಲ್ಲಿ ವಂಚನೆ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದಷ್ಟೇ ಅಲ್ಲಾ, ದೇಶದಲ್ಲಿ ಇಚ್ಛಾವರ್ತಿ ಸುಸ್ತಿದಾರರ ಸಂಖ್ಯೆಯೂ ಭಾರಿ ಹೆಚ್ಚಳವಾಗಿದೆ. ಐದು ವರ್ಷಗಳ ಅವಧಿಯಲ್ಲಿ ಇಚ್ಛಾವರ್ತಿ ಸುಸ್ತಿದಾರರ ಸಂಖ್ಯೆ ಶೇ.60ರಷ್ಟು ಹೆಚ್ಚಿದೆ. ನರೇಂದ್ರಮೋದಿ ಪ್ರಧಾನಿ ಆದ ನಂತರ ಬ್ಯಾಂಕುಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಿರುವುದಕ್ಕೂ ಇದೇ ಅವಧಿಯಲ್ಲಿ ಇಚ್ಛಾವರ್ತಿ ಸುಸ್ತಿದಾರರ ಸಂಖ್ಯೆಯೂ ಜಿಗಿದಿರುವುದಕ್ಕೂ ಸಂಬಂಧ ಇದೆಯೇ? ಖಂಡಿತಾ ಇದೆ.
ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸುವುದಾಗಿ 2014ರ ಚುನಾವಣಾ ಪ್ರಚಾರದಲ್ಲಿ ಭರವಸೆ ನೀಡಿದ್ದ ನರೇಂದ್ರ ಮೋದಿ ಪ್ರಧಾನಿ ಆದ ನಂತರ ಸುಧಾರಣೆ ಮಾಡುವ ಯಾವ ಪ್ರಯತ್ನವನ್ನೂ ಮಾಡಿಲ್ಲ ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತಿವೆ. ಆದರೆ, ಕಪ್ಪುಹಣ ನಿಯಂತ್ರಣದ ಹೆಸರಿನಲ್ಲಿ ಜಾರಿಗೆ ತಂದ ತರ್ಕರಹಿತವಾದ ಅಪನಗದೀಕರಣ ಯೋಜನೆಯಿಂದಾಗಿ ದೇಶದ ನಾಗರಿಕರಷ್ಟೇ ಸಂಕಷ್ಟಕ್ಕೆ ಈಡಾಗಿಲ್ಲ, ಇಡೀ ಬ್ಯಾಂಕಿಂಗ್ ವ್ಯವಸ್ಥೆಯೂ ಸಂಕಷ್ಟಕ್ಕೆ ಈಡಾಗಿದೆ. ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಚ್ಚಿನ ಸಂಕಷ್ಟ ಎದುರಿಸುತ್ತಿವೆ.
ಇಚ್ಚಾವರ್ತಿ ಸುಸ್ತಿದಾರ (willful defaulter) ಎಂದರೆ ಬ್ಯಾಂಕುಗಳಿಂದ ಪಡೆದ ಸಾಲವನ್ನು ತೀರಿಸುವ ಸಾಮರ್ಥ್ಯ ಇದ್ದರೂ, ತೀರಿಸಲು ಅಗತ್ಯ ಹಣಕಾಸು ಸಂಪನ್ಮೂಲ ಇದ್ದರೂ ಉದ್ದೇಶಪೂರ್ವಕವಾಗಿ ತೀರಿಸದೇ ಇರುವವರು. ನೇರವಾಗಿ ಹೇಳಬೇಕೆಂದರೆ ಬೇಕೆಂದೇ ಬ್ಯಾಂಕಿಂಗೆ ನಾಮ ಹಾಕುವವರು!
ಮೋದಿ ಸರ್ಕಾರದ ಅವಧಿಯಲ್ಲಿ ಹೀಗೇ ಬೇಕೆಂದೇ ನಾಮ ಹಾಕುವವರ ಸಂಖ್ಯೆ ಹೆಚ್ಚಳವಾಗಿದೆ. ಬ್ಯಾಂಕುಗಳಿಗೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡದೇ ವಂಚಿಸಿ ಇಚ್ಛಾವರ್ತಿ ಸುಸ್ತಿದಾರರೆಂದು ಘೋಷಣೆ ಆದವರಿಗೆ ಪರೋಕ್ಷವಾಗಿ ಮೋದಿ ಸರ್ಕಾರದ ಬೆಂಬಲ ಇದೆಯೇ ಎಂಬ ಅನುಮಾನ ಮೂಡುತ್ತದೆ.
ಅದಕ್ಕೆ ಕಾರಣ ಇಚ್ಛಾವರ್ತಿ ಸುಸ್ತಿದಾರರೆಂದು ಘೋಷಣೆ ಆದವರಾರೂ 1 ಲಕ್ಷ 10 ಲಕ್ಷ ರುಪಾಯಿ ಸಾಲ ಪಡೆದವರಲ್ಲ. ಅವರೆಲ್ಲಾ ಹತ್ತಾರು, ನೂರಾರು, ಸಾವಿರಾರು ಕೋಟಿ ಸಾಲ ಪಡೆದವರು. ಉದ್ಯಮಿಗಳು ಹಾಗೂ ಕಾರ್ಪೊರೆಟ್ ಗಳು. ಇವರೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಡಳಿತಾರೂಢ ಬಿಜೆಪಿಗೆ ದೇಣಿಗೆ ನೀಡಿದವರೇ.
ಎಲೆಕ್ಟರೋಲ್ ಬಾಂಡ್ ಯೋಜನೆ ಬಂದ ನಂತರ ಬಿಜೆಪಿ ಇಂತಹ ಉದ್ಯಮಿಗಳಿಂದ ಅಧಿಕೃತವಾಗಿ ಅದೆಷ್ಟು ವಸೂಲಿ ಮಾಡಿದೆಯೇ ಏನೋ? ಆದರೆ, ಎಲೆಕ್ಟರೋಲ್ ಬಾಂಡ್ ಮೂಲಕ ಸಂಗ್ರಹಿಸಿದ ದೇಣಿಗೆಯ ಪೈಕಿ ಶೇ.90 ರಷ್ಟು ಮೊತ್ತ ಬಿಜೆಪಿಗೆ ಸಂದಾಯವಾಗಿದೆ. ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ 4,000 ಕೋಟಿ ರುಪಾಯಿ ಸಂಗ್ರಹವಾಗಿದೆ. ಅಂದರೆ, ಬಿಜೆಪಿಯೇ ಜಾರಿಗೆ ತಂದಿರುವ ಎಲೆಕ್ಟೊರಲ್ ಬಾಂಡ್ ಯೋಜನೆಯಡಿ ನೀಡುವಾತನ ಹೆಸರನ್ನು ಗೌಪ್ಯವಾಗಿಯೇ ಇಡಲಾಗುತ್ತದೆ. ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೂ ದೇಣಿಗೆದಾರರೂ ಬರುವುದಿಲ್ಲ, ರಾಜಕೀಯ ಪಕ್ಷವೂ ಬರುವುದಿಲ್ಲ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ನೀಡಿರುವ ಮಾಹಿತಿ ಪ್ರಕಾರ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಅಂದರೆ 2014-15ನೇ ಸಾಲಿನಲ್ಲಿ ಇದ್ದ ಇಚ್ಛಾವರ್ತಿ ಸುಸ್ತಿದಾರರ ಸಂಖ್ಯೆ 5,349. ಮೋದಿಯವರ ಆಡಳಿತದ ಮೊದಲ ಒಂದೇ ವರ್ಷದಲ್ಲಿ 1,226 ಮಂದಿ ಇಚ್ಛಾವರ್ತಿ ಸುಸ್ತಿದಾರರು ಹೊಸದಾಗಿ ಸೇರ್ಪಡೆಯಾದರು.
2015-16ನೇ ಸಾಲಿನಲ್ಲಿ ಇಚ್ಛಾವರ್ತಿ ಸುಸ್ತಿದಾರರ ಸಂಖ್ಯೆ 6,575ಕ್ಕೆ ಏರಿತು. 2016-17ರಲ್ಲಿ 7,079ಕ್ಕೆ, 2017-18ರಲ್ಲಿ 7,535ಕ್ಕೆ ಜಿಗಿಯಿತು. 2018-19ರಲ್ಲಿ ಈ ಸಂಖ್ಯೆ 8,121ಕ್ಕೆ ಏರಿದೆ. ಇವೆಲ್ಲವೂ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸುಸ್ತಿದಾರರಾದವರ ಅಂಕಿ ಅಂಶಗಳು. ಖಾಸಗಿವಲಯದ ಬ್ಯಾಂಕುಗಳಿಗೆ ಸುಸ್ತಿದಾರರಾದವರ ಮಾಹಿತಿ ಇದರಲ್ಲಿ ಸೇರಿಲ್ಲ. ಸಾಮಾನ್ಯವಾಗಿ ಉದ್ಯಮಿಗಳು, ಕಾರ್ಪೊರೆಟ್ ಗಳು ವಂಚಿಸುವ ಉದ್ದೇಶ ಇದ್ದಾಗ ಅಥವಾ ಇಚ್ಛಾವರ್ತಿ ಸುಸ್ತಿದಾರರಾಗುವ ಕುತಂತ್ರ ಇದ್ದಾಗ ಸಾರ್ವಜನಿಕ ವಲಯದ ಬ್ಯಾಂಕುಗಳಿಂದಲೇ ಸಾಲ ಪಡೆಯುತ್ತಾರೆ.
ಇಚ್ಚಾವರ್ತಿ ಸುಸ್ತಿದಾರರಿಂದ 7,654 ಕೋಟಿ ರುಪಾಯಿಗಳನ್ನು ವಸೂಲು ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಇಚ್ಚಾವರ್ತಿ ಸುಸ್ತಿದಾರರಿಗೆ ಹೊಸದಾಗಿ ಸಾಲ ಮಂಜೂರು ಮಾಡದಂತೆ ಮತ್ತು ಐದು ವರ್ಷಗಳವರೆಗೆ ಹೊಸದಾಗಿ ಕಂಪನಿ ತೆಗೆದು ಸಾಲ ಪಡೆಯದಂತೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ. 50 ಕೋಟಿ ರುಪಾಯಿ ಮೀರಿದ ಇಚ್ಚಾವರ್ತಿ ಸುಸ್ತಿದಾರರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡುವ ಅಧಿಕಾರವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರಿಗೆ ನೀಡಲಾಗಿದೆ ಎಂದೂ ಸೀತಾರಾಮನ್ ತಿಳಿಸಿದ್ದಾರೆ.
ಇತ್ತೀಚೆಗೆ ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಮಾಹಿತಿ ನೀಡಿ, 34 ಮಂದಿ ವಂಚಕರು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ವಂಚಿಸಿ ದೇಶಬಿಟ್ಟು ಪರಾರಿಯಾಗಿದ್ದಾರೆ ಎಂದು ಮಾಹಿತಿ ನೀಡಿತ್ತು. ಈ 34 ಮಂದಿ ವಂಚಕರು ವಂಚಿಸಿದ ಮೊತ್ತವೇ 48,000 ಕೋಟಿ ರುಪಾಯಿಗಳಾಗಿತ್ತು. ಆ ಮೊತ್ತಕ್ಕೆ ಹೋಲಿಸಿದರೆ, ಸರ್ಕಾರ ಇಚ್ಛಾವರ್ತಿ ಸುಸ್ತಿದಾರರಿಂದ ವಸೂಲಿ ಮಾಡಿರುವ ಮೊತ್ತ ಏನೇನೂ ಅಲ್ಲ.
ಅಲ್ಲದೇ ನರೇಂದ್ರ ಮೋದಿ ಪ್ರಧಾನಿ ಆದ ನಂತರ ದೇಶದಲ್ಲಿ ಬ್ಯಾಂಕುಗಳಿಗೆ ವಂಚಿಸಿರುವ ಮೊತ್ತಕ್ಕೆ ಹೋಲಿಸಿದರೆ ಇದು ತೀರಾ ಅತ್ಯಲ್ಪ. ಆರ್ಬಿಐ ಅಂಕಿ ಅಂಶಗಳ ಪ್ರಕಾರ ಕಳೆದ ಹನ್ನೊಂದು ವಿತ್ತೀಯ ವರ್ಷಗಳಲ್ಲಿ ಬ್ಯಾಂಕುಗಳಿಗೆ ವಂಚನೆ ಮಾಡಿರುವ ಒಟ್ಟು ಮೊತ್ತ 2.05 ಲಕ್ಷ ಕೋಟಿ ರುಪಾಯಿಗಳಷ್ಟಿದೆ. ಈ ಪೈಕಿ ನರೇಂದ್ರ ಮೋದಿ ಅಧಿಕಾರದ ಮೊದಲ ಐದು ವರ್ಷಗಳಲ್ಲಿ ದೇಶದಲ್ಲಿರುವ ಬ್ಯಾಂಕುಗಳಿಗೆ ವಂಚಿಸಿರುವ ಮೊತ್ತವೇ 1.74 ಲಕ್ಷ ಕೋಟಿಗೇರಿದೆ. ಅಂದರೆ, ಕಳೆದ ಹನ್ನೊಂದು ವರ್ಷಗಳ ಪೈಕಿ ಮೊದಲ ಆರು ವರ್ಷಗಳಲ್ಲಿ ಸುಮಾರು 31,000 ಕೋಟಿ ರುಪಾಯಿಗಳನ್ನು ಬ್ಯಾಂಕುಗಳಿಗೆ ವಂಚಿಸಿದ್ದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದ ಐದು ವರ್ಷಗಳಲ್ಲಿ 1,74,797.67 ಕೋಟಿ ರುಪಾಯಿಗಳಷ್ಟು ಬ್ಯಾಂಕುಗಳಿಗೆ ವಂಚಿಸಲಾಗಿದೆ.
2008-09ರಲ್ಲಿ ದೇಶದಲ್ಲಿನ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತ 1,860.09 ಕೋಟಿ ರುಪಾಯಿಗಳು. 2018-19ರಲ್ಲಿ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತ 71,542.93 ಕೋಟಿ ರುಪಾಯಿಗಳು. ಅಂದರೆ, ಈ ಹತ್ತು ವರ್ಷಗಳಲ್ಲಿ 38 ಪಟ್ಟು ಹೆಚ್ಚಳವಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೊದಲ ವರ್ಷ ಅಂದರೆ 2014-15ರಲ್ಲಿ ದೇಶದಲ್ಲಿನ ಬ್ಯಾಂಕುಗಳಿಗೆ 19,455.07 ಕೋಟಿ ರುಪಾಯಿಗಳಷ್ಟು ವಂಚನೆಯಾಗಿದೆ. 2015-16ರಲ್ಲಿ 18,698.82 ಕೋಟಿ ರುಪಾಯಿಗಳು, 2016-17ರಲ್ಲಿ 23,933.85 ಕೋಟಿ ರುಪಾಯಿಗಳಷ್ಟು ವಂಚನೆಯಾಗಿದೆ. 2017-18ರಲ್ಲಿ ಬ್ಯಾಂಕುಗಳಿಗೆ ವಂಚಿಸಿದ ಮೊತ್ತವು 41,167 ಕೋಟಿ ರುಪಾಯಿಗೆ ಜಿಗಿದಿದೆ. 2018-19ನೇ ಸಾಲಿನಲ್ಲಿ ಈ ಮೊತ್ತ 71,542.93 ಕೋಟಿ ರುಪಾಯಿಗಳಷ್ಟಾಗಿದೆ. ಅಂದರೆ ಮೋದಿ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ ಬ್ಯಾಂಕುಗಳಿಗೆ ವಂಚಿಸಲಾಗಿರುವ ಮೊತ್ತಕ್ಕೆ ಹೋಲಿಸಿದರೆ ನಂತರದ ನಾಲ್ಕು ವರ್ಷಗಳಲ್ಲಿ ವಂಚಿಸಲಾದ ಮೊತ್ತವು ಹೆಚ್ಚು ಕಮ್ಮಿ ನಾಲ್ಕು ಪಟ್ಟು ಏರಿದೆ.
RBI ನೀಡಿರುವ ಅಂಕಿ ಅಂಶಗಳನ್ನು ಗಮನಿಸಿ, ಮೋದಿ ಅಧಿಕಾರಕ್ಕೆ ಬರುವ ಮೊದಲ ಆರು ವರ್ಷಗಳಲ್ಲಿ ಬ್ಯಾಂಕುಗಳಿಗೆ ವಂಚಿಸಲಾಗಿರುವ ಮೊತ್ತದ ವರ್ಷವಾರು ವಿವರ ಇಲ್ಲಿದೆ 2008-09ರಲ್ಲಿ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತ 1860.09 ಕೋಟಿ ರುಪಾಯಿಗಳು. 2009-10ರಲ್ಲಿ ಈ ಮೊತ್ತ 1,998.94 ಕೋಟಿ ರುಪಾಯಿಗಳಷ್ಟಿತ್ತು. 2010-11ರಲ್ಲಿ 3,815.76 ಕೋಟಿ ಮತ್ತು 2011-12ರಲ್ಲಿ 4,501.15 ಕೋಟಿ ರುಪಾಯಿ ವಂಚಿಸಲಾಗಿತ್ತು. 2012-13ರಲ್ಲಿ 8,590.86 ಕೋಟಿಗೆ ಮತ್ತು 2013-14ರಲ್ಲಿ 10,170.81 ಕೋಟಿ ರುಪಾಯಿಗೆ ಏರಿತ್ತು. ಮೋದಿ ಅಧಿಕಾರಕ್ಕೆ ಬಂದ ಮೋದಲ ವರ್ಷವೇ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತವು 19,455.07 ಕೋಟಿಗೆ ಜಿಗಿಯಿತು. ಅಂದರೆ ಒಂದೇ ವರ್ಷದಲ್ಲಿ ದುಪ್ಪಟ್ಟಾಯಿತು. ಐದು ವರ್ಷಗಳ ನಂತರ ಈ ಮೊತ್ತವು 71,542.93 ಕೋಟಿ ರುಪಾಯಿಗಳಿಗೆ ಏರಿತು. ಅಂದರೆ ಐದು ವರ್ಷಗಳಲ್ಲಿ ಏಳು ಪಟ್ಟು ಜಿಗಿದಿದೆ.