ಪ್ರಧಾನಿ ನರೇಂದ್ರಮೋದಿ ಸರ್ಕಾರವು ‘ಕಾರ್ಪೊರೆಟ್ ಸ್ನೇಹಿ’ ಎಂಬುದು ಮೋದಿ ಅಧಿಕಾರಕ್ಕೆ ಬಂದ ದಿನದಿಂದಲೂ ಸಾಬೀತಾಗುತ್ತಲೇ ಬಂದಿದೆ. ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡುವ ಮೂಲಕ ‘ಜನವಿರೋಧಿ’ ಎಂಬ ‘ಹೆಗ್ಗಳಿಕೆ’ಯನ್ನು ಮೋದಿ ಸರ್ಕಾರ ಪಡೆದುಕೊಂಡಿದೆ. ಕಾರ್ಪೊರೆಟ್ ಗಳಿಗೆ ಅನುಕೂಲ ಮಾಡಿಕೊಡುವ ಯಾವ ಅವಕಾಶವನ್ನೂ ಮೋದಿ ಸರ್ಕಾರ ತಪ್ಪಿಸಿಕೊಂಡಿಲ್ಲ. ಅದಕ್ಕೆ, 2014 ಮತ್ತು 2019ರ ಲೋಕಸಭಾ ಚುನಾವಣೆಗೆ ಕಾರ್ಪೊರೆಟ್ ಗಳು ಬಿಜೆಪಿಗೆ ನೀಡಿದ ಚುನಾವಣಾ ದೇಣಿಗೆಯೂ ಕಾರಣ ಇರಬಹುದು!
ಅಮೆರಿಕದ ಹ್ಯೂಸ್ಟನ್ ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದ ಎರಡು ದಿನ ಮುಂಚೆ ಮೋದಿ ಸರ್ಕಾರವು ಕಾರ್ಪೊರೆಟ್ ತೆರಿಕೆಯನ್ನು ಶೇ.10ರಷ್ಟು ತಗ್ಗಿಸಿತು. ಗರಿಷ್ಠ ಶೇ.36ರಷ್ಟಿದ್ದ ತೆರಿಗೆಯು ಶೇ.25-26ರ ಆಜುಬಾಜಿಗೆ ಇಳಿಯಿತು. ಹಾಗೆಯೇ ಶೇ.25ರಷ್ಟಿದ್ದ ತೆರಿಗೆಯು ಶೇ.15ರ ಆಜುಬಾಜಿಗೆ ಇಳಿಯಿತು. ಮೋದಿ ಸರ್ಕಾರ ಕಾರ್ಪೊರೆಟ್ ತೆರಿಗೆ ಇಳಿಕೆ ಮಾಡಿದ್ದರಿಂದ ದೇಶದ ಬೊಕ್ಕಸಕ್ಕಾಗಾತ್ತಿರುವ ನಷ್ಟ 1.40 ಲಕ್ಷ ಕೋಟಿ ರುಪಾಯಿಗಳು. ಅಂದ ಹಾಗೆ ಇದು ಒಂದು ಬಾರಿಗೆ ಆಗುತ್ತಿರುವ ನಷ್ಟವಲ್ಲ. ಪ್ರತಿ ವರ್ಷವೂ ಸರ್ಕಾರದ ಬೊಕ್ಕಸಕ್ಕೆ 1.40 ಲಕ್ಷ ಕೋಟಿ ರುಪಾಯಿಗಳಷ್ಟು ನಷ್ಟವಾಗುತ್ತಿದೆ.
ಆರು ತಿಂಗಳ ಹಿಂದೆ ನಡೆದ ‘ಹೌಡಿ ಮೋದಿ’ ಪುರಾಣ ಈಗ ಯಾಕೆ ಎಂದು ಪ್ರಶ್ನಿಸುತ್ತೀರಾ? ತನ್ನ ತರ್ಕರಹಿತ ಆರ್ಥಿಕ ನೀತಿಗಳು ಮತ್ತು ಅಕಾಲಿಕ ತೆರಿಗೆ ಕಡಿತಗಳಿಂದಾಗಿ ಬೊಕ್ಕಸ ಬರಿದು ಮಾಡಿಕೊಂಡಿರುವ ಮೋದಿ ಸರ್ಕಾರ ಇಡೀ ಜಗತ್ತಿಗೆ ಸವಾಲಾಗಿರುವ ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡಲು ಸಂಪನ್ಮೂಲ ಕೊರತೆಯಿಂದ ಬಳಲುತ್ತಿದೆ. ಪ್ರತಿಷ್ಠಿತ ಏಮ್ಸ್ (ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ) ಗಳೂ ಸೇರಿದಂತೆ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಬಳಸಲು ವೈಯಕ್ತಿಕ ಸುರಕ್ಷತಾ ಪರಿಕರ (ಪಿಪಿಇ)ಗಳಿಲ್ಲ. ಭಾರತ್ ಡೈನಾಮಿಕ್ಸ್ ಲಿಮಿಡೆಟ್ ಏಮ್ಸ್ ಗೆ ನೀಡಿದ್ದ 50 ಲಕ್ಷ ರುಪಾಯಿಗಳನ್ನೂ ‘ಪಿಎಂ ಕೇರ್ಸ್’ ಗೆ ವರ್ಗಾಹಿಸಲಾಗಿದೆ.
ಅದೆಲ್ಲ ಹಾಗೆ ಇರಲಿ ಪ್ರದಾನಿ ನರೇಂದ್ರ ಮೋದಿ ತಮ್ಮದೇ ಅಧ್ಯಕ್ಷತೆಯಲ್ಲಿ ರಚಿಸಿಕೊಂಡಿರುವ ‘ಪಿಎಂ-ಕೇರ್ಸ್’ ದೇಣಿಗೆ ಎತ್ತಲು ಆರಂಭಿಸಿ ವಾರ ಕಳೆದಿದೆ. ಇದುವರೆಗೆ ‘ಪಿಎಂ- ಕೇರ್ಸ್’ಗೆ ಸಂದಾಯವಾಗಿರುವ ಮೊತ್ತವು 6,500 ಕೋಟಿ ರುಪಾಯಿಗಳು ಮಾತ್ರ. ಈ ಮೊತ್ತದಲ್ಲಿ ಬಹುತೇಕ ಸಲಬ್ರಿಟಿಗಳು ಮತ್ತು ಕಾರ್ಪೊರೆಟ್ ಕುಳಗಳ ಕೊಡುಗೆಯೇ ಹೆಚ್ಚಿದೆ. ಒಂದೇ ವಾರದಲ್ಲಿ 20,000 ಕೋಟಿ ಮೀರಿ ಸಂಗ್ರಹಿಸುವ ಮಹಾತ್ವಾಕಾಂಕ್ಷೆ ಹೊಂದಿದ್ದ ಮೋದಿ ಅವರನ್ನು ಭಾರತೀಯ ಕಾರ್ಪೊರೆಟ್ ವಲಯ ನಿಜಕ್ಕೂ ನಿರಾಶೆಗೊಳಿಸಿದೆ.
ನರೇಂದ್ರ ಮೋದಿ ಕಾರ್ಪೊರೆಟ್ ತೆರಿಗೆ ಕಡಿತ ಮಾಡುವ ಮೂಲಕ ಕಾರ್ಪೊರೆಟ್ ವಲಯಕ್ಕೆ 1.40 ಲಕ್ಷ ಕೋಟಿ ರುಪಾಯಿ ನೀಡಿದ್ದಾರೆ. ಇದು ಪ್ರತಿ ವರ್ಷದ ಕೊಡುಗೆ. ಅಂದರೆ ಮುಂದಿನ ಹತ್ತು ವರ್ಷಗಳಲ್ಲಿ ಕಾರ್ಪೊರೆಟ್ ವಲಯವೂ ಮೋದಿ ಸರ್ಕಾರದ ಉದಾರತೆಯಿಂದಾಗಿ ಗಳಿಸಿಕೊಳ್ಳಲಿರುವ ತೆರಿಗೆ ಕಡಿತದ ಲಾಭವು 14 ಲಕ್ಷ ಕೋಟಿ ರುಪಾಯಿಗಳಾಗುತ್ತದೆ. ಇಷ್ಟೊಂದು ಬೃಹತ್ ಮೊತ್ತವನ್ನು ತೆರಿಗೆ ಕಡಿತ ಮೂಲಕ ಉಡುಗೊರೆಯಾಗಿ ಪಡೆದ ಕಾರ್ಪೊರೆಟ್ ವಲಯದಿಂದ ಮೋದಿ ಅವರು ‘ಪಿಎಂ-ಕೇರ್ಸ್’ಗೆ ಭಾರಿ ಪ್ರಮಾಣದಲ್ಲಿ ಸಂಪನ್ಮೂಲ ಹರಿವಿನ ನಿರೀಕ್ಷೆ ಇಟ್ಟುಕೊಂಡಿದ್ದರೆ ಅವರ ತಪ್ಪಲ್ಲ.
6,500 ಕೋಟಿ ರುಪಾಯಿಗಳ ಪೈಕಿ ಸೆಲಬ್ರಿಟಿ ಇತ್ಯಾದಿಗಳು ನೀಡಿದ 1,500 ಕೋಟಿ ರುಪಾಯಿ ಹೊರತು ಪಡಿಸಿದರೆ, ಕಾರ್ಪೊರೆಟ್ ವಲಯದಿಂದ ಬಂದಿರುವ ಕೊಡುಗೆಯು 5,000 ಕೋಟಿ ರುಪಾಯಿಗಲು. ಅಂದರೆ ಮೋದಿ ಕಾರ್ಪೊರೆಟ್ ತೆರಿಗೆ ಕಡಿತ ಮಾಡುವ ಮೂಲಕ ನೀಡಿದ 1.40 ಲಕ್ಷ ಕೋಟಿ ರುಪಾಯಿ ಉಡುಗೊರೆಯ ಮೊತ್ತಕ್ಕೆ ಹೋಲಿಸಿದರೆ ಇದು ಶೇ.10ರಷ್ಟೂ ಇಲ್ಲ. ಸರಿಯಾಗಿ ಲೆಕ್ಕ ಹಾಕಿದರೆ ಶೇ.3.2ರಷ್ಟು. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಮೋದಿ ಅವರು ಕಾರ್ಪೊರೆಟ್ ತೆರಿಗೆ ಕಡಿತದ ರೂಪದಲ್ಲಿ 100 ರುಪಾಯಿ ಕೊಟ್ಟಿದ್ದರೆ, ಕಾರ್ಪೊರೆಟ್ ವಲಯವು ಮೋದಿ ಅವರ ‘ಪಿಎಂ-ಕೇರ್ಸ್’ಗೆ ನೀಡಿದ್ದು 3 ರುಪಾಯಿ 20 ಪೈಸೆ ಮಾತ್ರ.
ಮೋದಿ ಅವರ ಆಪ್ತ ಬಳಗದ ಅದಾನಿ ಸಮೂಹ 100 ಕೋಟಿ, ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ 500 ಕೋಟಿ, ಡಿಮಾರ್ಟ್ ನ ರಾಮಕೃಷ್ಣ ದಮಾನಿ 100 ಕೋಟಿ, ಆದಿತ್ಯ ಬಿರ್ಲಾ ಸಮೂಹದ ಕುಮಾರ ಮಂಗಳಂ ಬಿರ್ಲಾ 400 ಕೋಟಿ, ಟಾಟಾ ಸಮೂಹ 1,500 ಕೋಟಿ, ಕೋಟಕ್ ಮಹಿಂದ್ರ ಬ್ಯಾಂಕ್ 25 ಕೋಟಿ, ಜೆಎಸ್ ಡಬ್ಲ್ಯೂ ಗ್ರೂಪ್ ಸಜ್ಜನ್ ಜಿಂದಾಲ್ 100 ಕೋಟಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಪುತ್ರ ಜಯ್ ಷಾ ಮುಖ್ಯಸ್ಥರಾರಿಗುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 51 ಕೋಟಿ ರುಪಾಯಿ ನೀಡಿದೆ. ಹಾಗೆಯೇ ವಿವಿಧ ಕಂಪನಿಗಳು 1ರಿಂದ 50 ಕೋಟಿ ವರೆಗೂ ದೇಣಿಗೆ ನೀಡಿವೆ.
ಪ್ರಧಾನಿ ಮೋದಿ ‘ಪಿಎಂ- ಕೇರ್ಸ್’ ಘೋಷಣೆ ಮಾಡಿದಾಗ ಒಂದು ವಾರದಲ್ಲಿ ಕನಿಷ್ಠ 20,000 ಕೋಟಿ ರುಪಾಯಿ ಸಂಗ್ರಹವಾಗುವ ಭಾರಿ ಉತ್ಸಾಹದಲ್ಲಿದ್ದರು. ಆದರೆ, ಮೋದಿ ಅವರಿಂದ 1.40 ಲಕ್ಷ ಕೋಟಿ ರುಪಾಯಿ ತೆರಿಗೆ ಕಡಿತದ ರೂಪದಲ್ಲಿ ಉಡುಗೊರೆ ಪಡೆದಿರುವ ಕಾರ್ಪೊರೆಟ್ ಕುಳಗಳು ಮೋದಿ ಅವರ ನಿರೀಕ್ಷೆಯನ್ನು ಹುಸಿಗೊಳಿಸಿ ಬಿಟ್ಟಿವೆ. ಮೋದಿ ನಿರೀಕ್ಷೆಗೆ ತಕ್ಕಂತೆ ದೇಣಿಗೆ ನೀಡಿಲ್ಲ. ಈ ನಡುವೆ ಪಿಎಂ- ಕೇರ್ಸ್ ಗೆ ಒಂದು ವಾರವಿಡೀ ಸಂಗ್ರಹವಾದ 6,500 ಕೋಟಿ ರುಪಾಯಿ ಮೊತ್ತಕ್ಕಿಂತ ಹೆಚ್ಚು ಮೊತ್ತವು ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಸ್ಥಗಿತಗೊಳಿಸಿದ್ದರಿಂದಲೇ ಸುಮಾರು 7.600 ರುಪಾಯಿ ಲಭ್ಯವಾಗುತ್ತಿದೆ.
ಹಾಗಂತ ಕಾರ್ಪೊರೆಟ್ ಗಳು ದೇಶ ಸಂಕಷ್ಟದಲ್ಲಿದ್ದಾಗ ದೇಣಿಗೆ ನೀಡುತ್ತಿಲ್ಲ ಎಂದಲ್ಲ. ಪ್ರಧಾನ ಮಂತ್ರಿ ಪ್ರಕೃತಿ ಪ್ರಕೋಪ ನಿಧಿ ಈಗಾಗಲೇ ಇರುವಾಗ ನರೇಂದ್ರ ಮೋದಿ ಅವರು ತಾರಾತುರಿಯಲ್ಲಿ ಸ್ಥಾಪಿಸಿರುವ ‘ಪಿಎಂ- ಕೇರ್ಸ್’ ಬಗ್ಗೆ ಹಲವು ಪ್ರಶ್ನೆಗಳೆದ್ದಿವೆ. ಅಜೀಮ್ ಪ್ರೇಮ್ ಜಿ ಪ್ರತಿಷ್ಠಾನ, ಇನ್ಫೊಸಿಸ್ ಪ್ರತಿಷ್ಠಾನ ಸೇರಿದಂತೆ ವಿವಿಧ ಕಾರ್ಪೊರೆಟ್ ಪ್ರತಿಷ್ಠಾನಗಳು ಬೇರೆ ಬೇರೆ ರೂಪದಲ್ಲಿ ಸದಾ ನೆರವಿನ ಹಸ್ತ ನೀಡುತ್ತಿವೆ. ಎಲ್ಲದೂ ತನ್ನ ಹೆಸರಿನಲ್ಲೇ ತನ್ನ ಮೂಗಿನ ನೇರದಲ್ಲೇ ಆಗಬೇಕೆಂಬ ಪ್ರಧಾನಿ ಮೋದಿ ಅವರ ಉಮೇದಿನಿಂದಾಗಿ ಪಿಎಂ-ಕೇರ್ಸ್ ಉದ್ಭವಿಸಿದೆ. ಹೀಗಾಗಿ ಮೋದಿ ಅವರ ನಿರೀಕ್ಷೆಗೆ ತಕ್ಕಂತೆ ಕಾರ್ಪೊರೆಟ್ ವಲಯ ಸ್ಪಂದಿಸಿಲ್ಲ.