ದೇಶವನ್ನು ಐಡಿಯಾಲಜಿಗಳಿಂದ ಕಟ್ಟಲಾಗುವುದಿಲ್ಲ, ಜನರಿಂದ ಕಟ್ಟಲಾಗುತ್ತದೆ. ಜನರಿಲ್ಲದ ಜನಪರವಾಗದ ಕೇವಲ ಇತಿಹಾಸ, ಭೌಗೋಳಿಕತೆ, ಜನಾಂಗೀಯ ವಿಷಯಾಧಾರಿತವಾದ ಐಡಿಯಾಲಜಿಗಳಿಂದ ವಿನಾಶ ಸೃಷ್ಟಿಸಬಹುದೇ ಪರಂತು ವಿಕಾಸ ಸಾಧ್ಯವಿಲ್ಲ.. ಅಂತಹದಕ್ಕೆ ನಿದರ್ಶನವನ್ನು ನಾವು ಇತಿಹಾಸದಲ್ಲಿ ಹುಡುಕಬೇಕಿಲ್ಲ, ವರ್ತಮಾನದ ದೇಸಿಯ ಆಳ್ವಿಕೆಕೋರರ ವರ್ತನೆಗಳನ್ನು ಗಮನಿಸಿದರೆ ಸಾಕು. ಕೆಲದಿನಗಳ ಹಿಂದೆ ಇಂತಹದೇ ಮಾತನ್ನು ಪಾಕಿಸ್ತಾನ ಭೌತ ವಿಜ್ಞಾನಿ ಪರ್ವೇಜ್ ಹೂದ್ಬೊಯ್ ಅವರು ಕೂಡ ಬಾಂಗ್ಲ ಮತ್ತು ಪಾಕಿಸ್ತಾನದ ಜೊತೆಗಿನ ಕಲಹವನ್ನು ನೆನೆದುಕೊಳ್ಳುತ್ತಾ ಚರ್ಚೆಯೊಂದರಲ್ಲಿ (ಅದಾಫ್ ಫೆಸ್ಟಿವಲ್ ) ಪ್ರಸ್ತಾಪಿಸುತ್ತಿದ್ದರು, ಪಾಕಿಸ್ತಾನದ ಅತಿಯಾದ ಇಸ್ಲಾಂ ಐಡಿಯಾಲಜಿ, ಮೇಲರಿಮೆಗಳ ಕಾರಣವಾಗಿಯೇ ಬಾಂಗ್ಲಾ ಕಳೆದುಕೊಳ್ಳಬೇಕಾಯಿತು, ಬಲೂಚಿಸ್ತಾನ್ ನಲ್ಲಿ ಪ್ರತ್ಯೇಕತೆಯ ಹೋರಾಟ ಶುರುವಾಯಿತು ಎಂಬ ಆತ್ಮ ವಿಮರ್ಶೆಯ ಮಾತನ್ನು ಕೂಡ ದಾಖಲಿಸಿದರು.
ಅದೇ ಹೊತ್ತಲ್ಲಿ ಇಲ್ಲಿ ಭಾರತ ಉಪಖಂಡದಲ್ಲಿ ರಾಜಕೀಯ ಪಕ್ಷಗಳ ಐಟಿ ಸೆಲ್ ಗಳು ಸಿದ್ದಪಡಿಸಿ ಹರಿಯಬಿಟ್ಟ ಹಿಂದುತ್ವ ಐಡಿಯಾಲಜಿಗೆ ಮುಗಿಬಿದ್ದು ದೇಶವನ್ನು ಎಲ್ಲಾ ರೀತಿಯಲ್ಲೂ ಸಂಕಷ್ಟಕ್ಕೆ ದೂಡುತ್ತಿದ್ದೇವೆ. ಸೋದರ ದೇಶಗಳಲ್ಲಿ ಒಂದು ಆತ್ಮವಿಮರ್ಶೆಗೆ ಮುಂದಾಗುವಾಗ ಮತ್ತೊಂದು ತನವರಿವಿಲ್ಲದೆ ಆತ್ಮಹತ್ಯೆಗೆ ಶರಣಾಗುತ್ತಿದೆ. ಹಿಂದುತ್ವದ ರಾಜಕೀಯ ಐಡಿಯಾಲಜಿಯು ನಮ್ಮ ಪಾಲಿಗೆ ಆತ್ಮಹತ್ಯೆಯ ಗುಳಿಗೆ. ಅದನ್ನು ಎಷ್ಟು ಹೆಚ್ಚು ತೆಗೆದುಕೊಳ್ಳುತ್ತಿವೆಯೋ ಅಷ್ಟೇ ಶೀಘ್ರವಾಗಿ ವ್ಯಾಘ್ರವಾಗಿ ಅದು ನಮ್ಮನ್ನು ಘಾಸಿಗೊಳಿಸುತ್ತದೆ. ಇಂತಹ ಘಾಸಿಯ ಪರಿಮಾಣ ಎಷ್ಟಾಗಬಹುದೆಂದು ನಾವು ಊಹಿಸುವುದು ಅಸಾಧ್ಯ! ಮತ್ತಿದು ಒಂದು ಬಾರಿಗೆ ಘಟಿಸುವ ಸಂಗತಿ ಕೂಡ ಅಲ್ಲ. ಹಂತಹಂತವಾಗಿ ವಿನಾಶವನ್ನು ತಂದು ನಮ್ಮ ಮಡಿಲಿಗೆ ಹಾಕುತ್ತದೆ. ಇಂತಹದಕ್ಕೆ ಮಧ್ಯಪ್ರಾಚ್ಯ ಮತ್ತು ಸಿರಿಯಾ ದೇಶಗಳ ಉದಾಹರಣೆಯನ್ನು ನೋಡಬಹುದು. ಆದರೆ ಈಗಾಗಲೇ ನಮ್ಮ ಆಲೋಚನಾ ವಿಧಾನಗಳು, ವಿಷಯ ತರ್ಕಗಳು, ವಾದಗಳು ವಿಪರೀತದ ಧಾವಂತಗಳಿಗೆ ಸಿಕ್ಕು ಅಮಾನತುಗೊಂಡು ಸುಳ್ಸುದ್ದಿಗಳು, ಮಾಹಿತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ನಾಗರೀಕನ ಕಿಸೆಗೆ ಬಂದು ಮೆದುಳುಹೊಕ್ಕಿ ಕೋಲಾಹಲವನ್ನುಂಟುಮಾಡುತ್ತಿವೆ.
ಇಂತಹ ಕೋಲಾಹಲದ ದನಿಯು ಇಂದು ಅಥವಾ ನೆನ್ನೆ ದಿಢಿರನೇ ಹುಟ್ಟಿಕೊಂಡಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲೇ ಇದರ ಬೀಜ ಮೊಳೆದಿದೆ.. ಅದು ಗಿಡವಾಗಿದ್ದಾಗಲೇ ‘ಗಾಂಧಿ ಹತ್ಯೆ’ಗೆ ಬೆಂಬಲವಾಗಿದೆ, ಮುಂದೆ ಆರೇಳು ದಶಕದ ಕಾಲ ದೇಶದ ಮೂಲೆ ಮೂಲೆಗೆ ತನ್ನ ಜಾತಿ ಮತ್ತು ಹಣ, ಅಧಿಕಾರದ ಪ್ರಭಾವವನ್ನು ಬಳಸಿಕೊಂಡು ಧರ್ಮದ, ಸೇವೆಯ ಮುಸುಕು ಹಾಕಿಕೊಂಡು ಕ್ರೌರ್ಯವನ್ನು ಬೃಹತ್ ಆಗಿ ಬೆಳೆಸಿದೆ. ಅಷ್ಟು ಮಾತ್ರವಲ್ಲ, ತನ್ನೊಟ್ಟಿಗೆ ರಾಜಕೀಯ ಪಕ್ಷವನ್ನು ಕೂಡ ಹುಟ್ಟಿಹಾಕಿ ಅದರ ಲಗಾಮು ಹಿಡಿದುಕೊಂಡು ಇತಿಹಾಸದಿಂದ ವರ್ತಮಾನದವರೆಗೆ ತನಗೆ ಬೇಕಾದ ಹಾಗೆ ಚರಿತ್ರೆಯನ್ನು ತಿದ್ದಿಕೊಂಡು, ಕಟ್ಟುಕಥೆಗಳ ಕಟ್ಟಿಕೊಂಡು ಹೊಸದಾದ ಚೌಕಟ್ಟು ಹಾಕಿ ಮಕ್ಕಳಿಂದ ಮುದುಕರವರೆಗೆ ಹಂಚಿ ಅವರನ್ನು ರೊಚ್ಚಿಗೆಬ್ಬಿಸಿದೆ. ಇದೇ ‘ಐಡಿಯಾಲಜಿ’ ದೇಶವನ್ನು ತನ್ನಿಂದ ಕಟ್ಟಲು ಸಾಧ್ಯವಿಲ್ಲ ಎಂಬುದನ್ನ ಅರಿತು ಕಿತ್ತುಕೊಳ್ಳಲು ಮುಂದಾಗಿದ್ದು. ಪ್ರೇತ ಕಳೆಯನ್ನು ಜನರ ಕನಸಿನ ಹೊಲಗಳಲ್ಲಿ ಬಿತ್ತಿದ ಹಿಂದುತ್ವದ ಐಡಿಯಾಲಜಿಯು ಕಡೆಗೂ ಅಧಿಕಾರವನ್ನು ಹಿಡಿಯುವುದರಲಿ ಯಶಸ್ವಿಯಾಯಿತು ಆದರೆ ಆಡಳಿತ ಮಾಡುವುದರಲ್ಲಿ ಅಲ್ಲ. ಒಂದಲ್ಲ ಎಂದು, ಎರಡನೆಯ ಬಾರಿಗೆ ಕೂಡ ಅದು ಪುನರಾಯ್ಕೆಯಾಯಿತು, ದೇಶವನ್ನು ಕಟ್ಟುವುದಕ್ಕಿಂದ ಕಳಚುವುದರಲ್ಲೇ ಕಾಲ ಕಳೆಯಿತು.
ಇಂತಹದೊಂದು ಹಿಂದುತ್ವದ ಐಡಿಯಾಲಜಿ ಹುಟ್ಟಿದಾಗಲೂ, ನಂತರ ಬೆಳೆದು ‘ಕರಸೇವೆ’ ಸೇವೆಯ ಕಲ್ಯಾಣ ಕಾರ್ಯಕ್ರಮವನ್ನು ಕೈಗೊಂಡಾಗಲೂ ಇಂತಹದೊಂದು ಅಜೆಂಡಾ ವಿರುದ್ದ ಮಾಡಬೇಕಾದ ಒಗ್ಗೂಡುವಿಕೆಯ ಕೆಲಸವನ್ನು ಯಾವ ಆಂದೋಲನಗಳು ಸಹ ಪೂರ್ಣ ಕಾಳಜಿವಹಿಸಿ ಮಾಡಲಿಲ್ಲ. ಅಲ್ಲಲಿ ಸಣ್ಣದಾಗಿ ರೂಪುಗೊಂಡ ಚಳುವಳಿಗಳು, ಅರಿವಿನ ಅಂದೋಲನಗಳು ಒಳ ಜಗಳಗಳು, ಭಿನ್ನಮತಗಳಲ್ಲಿ ಮುಳುಗಿಹೊದುವು. ಚಾರ್ವಾಕ, ಅಜೀವಿಕ, ಜೈನ, ಬೌದ್ಧ, ವೈದಿಕ, ಆದಿವಾಸಿಯಾಗಿ ನೂರಾರು ಸಂಖ್ಯೆಯ ಪುರಾತನ ಸಂವಾದ ಪರಂಪರೆಯನ್ನೇ ಹೊಂದಿದ್ದ ಉಪಖಂಡದಲ್ಲಿ ಹಿಂದುತ್ವದ ಐಡಿಯಾಲಜಿಯು ಎಲ್ಲವನ್ನು ದೂಡಿ ಮುನ್ನುಗ್ಗಿ ಅಧಿಕಾರ ದಂಡ ಹಿಡಿಯುವಂತಾಯಿತು. ಇಲ್ಲಿ ಆದ ಮೊದಲ ತಪ್ಪು, ಎಡಪಂಥಿಯ ಹಿರೀಕರು ಮತ್ತು ಗೆಳೆಯರು ‘’ಐಡಿಯಾಲಜಿಯ ವಿರುದ್ದ ಹೋರಾಡಲು ಐಡಿಯಾಲಜಿಯನ್ನೇ ಆರಿಸಿಕೊಂಡಿದ್ದು’’ ಮತ್ತು ಅದಕ್ಕೆ ಹೆಚ್ಚು ಶ್ರಮವನ್ನು ಹಾಕಿದ್ದು. ಈ ಶ್ರಮವು ಕಳೆದೊಂದು ದಶಕದಲ್ಲಿ ‘ಎಡ ಮತ್ತು ಬಲ’ ಬೈನರಿಯ ಐಡಿಯಾಲಜಿಯನ್ನು ದೇಶದ ಜನರಲ್ಲಿ ಹುಟ್ಟುಹಾಕಿತು. ನಾವಿಲ್ಲಿ ಫ್ರಾನ್ಸಿನ ಎಡ-ಬಲದ ಚರ್ಚೆಗೆ ಬರುವ ಅಗತ್ಯವಿಲ್ಲ. ಕಾರಣ ಈಗಾಗಲೇ ಹಿಂದುತ್ವ ಐಡಿಯಾಲಜಿ ಮತ್ತು ಅದರ ವಿರುದ್ದದ ಐಡಿಯಾಲಜಿ ಎಂಬ ಎರಡು ಸ್ಪಷ್ಟ ರೂಪುರೇಷೆಗಳು ಜನರಲ್ಲಿ ರೂಪುಗೊಂಡಿವೆ. ಇಲ್ಲಿ ಅರ್ಥವಾಗುವುದು ಆ ಮಟ್ಟದಲ್ಲಿ ಮಾತ್ರವೇ ಆಗಿದೆ. ಉಳಿದ ವಿವರಣೆಗಳು ನಮ್ಮ ಬೌದ್ಧಿಕ ಕಸರತ್ತು ಅಗಿಬಿಡುತ್ತವೆ. ಹೀಗೆ ಹಿಂದುತ್ವ ಐಡಿಯಾಲಜಿಯು ಬೃಹತ್ ಆಗಿ ಬೆಳೆಯುವಾಗ ಮತ್ತೊಂದನ್ನು ಬೆಳೆಸಲು ಎಡಪಂಥೀಯ ಬೌದ್ಧಿಕರು ಯಶಸ್ವಿಯಾಗಲಿಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಇದರೊಳಗೆ ಹಿಂದುತ್ವ ಐಡಿಯಾಲಜಿಯ ಸಮೂಹವು ದಿನದಿಂದ ದಿನಕ್ಕೆ ನೂರ್ಪಟ್ಟು ಬೆಳೆಯುತ್ತಲೇ ಹೋಯಿತು, ಜೊತೆಗೆ ತನ್ನ ವಿರೋಧಿಗಳನ್ನು ಮಣಿಸಲು ಬೇಕಾದ ಎಲ್ಲಾ ರೀತಿಯ ಅನೈತಿಕ ಪ್ರಚಾರಗಳನ್ನು ಹಿಂದುತ್ವ ಐಡಿಯಾಲಜಿ ಚೆನ್ನಾಗಿ ಕೆಲಸ ಮಾಡಿತು, ಮತ್ತೀಗಲೂ ಮಾಡುತ್ತಿದೆ.
ಜನಪರವಾದ ಸರ್ಕಾರ ಮತ್ತು ಆಂದೋಲನಗಳು ಹುಟ್ಟಿಕೊಳ್ಳಬೇಕಾದ ಹೊತ್ತಿನಲ್ಲಿ ನಾವು ಎರಡು ಐಡಿಯಾಲಜಿಗಳ ಬೆನ್ನಿಗೆ ಬಿದ್ದು ಸಾವಿರಾರು ಜನರ ಬಲಿದಾನದಿಂದ ಪಡೆದುಕೊಂಡ ಸ್ವಾತಂತ್ರ್ಯವನ್ನು ಬಂಡವಾಳ ಹೂಡಿಕೆ ದೇಶಗಳ, ಕಂಪನಿಗಳ ಸ್ವಾಮ್ಯಕ್ಕೆ ಒಪ್ಪಿಸಲು ಸಿದ್ದರಾಗಿ ನಿಂತಿದ್ದೇವೆ. ಬಹುತೇಕ ನಾವೆಲ್ಲಾ ವಿದ್ಯಾವಂತರು, ಆದರೆ ಸಾಮಾನ್ಯ ಜ್ಞಾನಹೀನರು! ಮುಂದಾಲೋಚಿಸುವ ಹಲವು ನಿಟ್ಟಿನ ನೋಟಗಳಲ್ಲಿ ವಸ್ತುವಿಷಯ ಸಂಗತಿಗಳನ್ನು ವಿಶ್ಲೇಷಿಸುವ ಪ್ರಜ್ಞೆಗಳನ್ನ ಕಳೆದುಕೊಂಡು ಈಗಾಗಲೇ ಒಬ್ಬರು ಅವರ ಅಜೆಂಡಾಕ್ಕೆ ಸಿದ್ದ ಮಾಡಿಟ್ಟಿರುವ ವಿಶ್ಲೇಷಣೆಗಳನ್ನೂ ಎತ್ತಿಕೊಂಡು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಕಡೆಗೆ ಹೇಗೆ ಅರ್ಧಂಬರ್ಧ ಅದನ್ನೇ ನಮ್ಮ ಬುದ್ದಿಗೆ, ಕಣ್ಣಿಗೆ ಧರಿಸಿ ಜಗತ್ತನ್ನು ನೋಡಲು ಶುರು ಮಾಡುತ್ತೇವೆ. ಅಲ್ಲಿಗೆ ನಮ್ಮ ವೈಯುಕ್ತಿಕ ಆಲೋಚನೆ, ನೋಟಗಳು ಸತ್ತು ಬೀಳುತ್ತವೆ. ಇಂತಹ ಪ್ರಕ್ರಿಯೆ ಹೆಚ್ಚು ಸಾಧ್ಯವಾಗಿದ್ದು ಸಾಮಾಜಿಕ ಜಾಲತಾಣಗಳಿಂದ. ದಿನ ೨೪ ಗಂಟೆಗಳ ಕಾಲವು ಮಾಹಿತಿಯ ಪ್ರವಾಹವೇ ಇಲ್ಲಿ ನುಗ್ಗಿ ಬರುತ್ತಿರುತ್ತದೆ. ಅದರಲ್ಲಿ ಮೂರು ಮುಕ್ಕಾಲು ಭಾಗ ಬರೀ ಸುಳ್ಸುದ್ದಿಗಳೇ! ಇವು ‘ಬೈನರಿ ನರೆಟಿವ್ ಗಳ’ ಐಡಿಯಾಲಜಿಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಲು ಸಹಾಯಕವಾಗುತ್ತಿವೆ. ಎಡ ಬಲದ ಚರ್ಚೆ ಹೆಚ್ಚಾದಷ್ಟೂ ‘ಬಲ’ದ ಪ್ರಚಾರ ಸಾವಿರ ಪಟ್ಟು ಅಧಿಕವಾಗುತ್ತಿದೆ. ಕೆಟ್ಟ ಪ್ರಚಾರ ಕೂಡ ಒಳ್ಳೆಯ ಪ್ರಸಾರ ಪಡೆದುಕೊಳ್ಳುತ್ತಿದೆ.
ಇಂತಹ ಹೊತ್ತಿನಲ್ಲಿ ನಮಗೆ ಇರುವ ದಾರಿ ಯಾವುದು ಎಂದು ಯೋಚಿಸಿದರೆ ಐಡಿಯಾಲಜಿ ಗಳಿಂದ ಸುತ್ತುವರಿದಿರುವ ಸಮಾಜವನ್ನು ನಿರಚನೆ ಮಾಡಿ ಅಲ್ಲಿಗೆ ‘ಪ್ರಜಾಪ್ರಭುತ್ವ’ದ ಹೊಸ ನರೆಟಿವ್ ಗಳನ್ನು ಸ್ಥಾಪಿಸುವುದು. ಐಡಿಯಾಲಜಿಗಳಿಂದ ತುಂಬಿರುವ ಚರ್ಚೆಗಳನ್ನು ಅರೋಗ್ಯ, ಶಿಕ್ಷಣ, ಕೃಷಿ, ಉದ್ಯೋಗ ಮೊದಲಾದ ಕ್ಷೇತ್ರಸಂವರ್ಧನೆಗಳ ವಿಚಾರದತ್ತ ತಿರುಗಿಸುವುದು. ಈಗಾಗಲೇ ಈ ಕೆಲಸವನ್ನು ನಾವೆಲ್ಲಾ ಮಾಡುತ್ತಿದ್ದೇವೆ ಎಂಬ ಉತ್ತರ ಖಂಡಿತ ಸಿಗುತ್ತದೆ. ಆದರೆ ಅಂತಹ ಕೆಲಸಗಳು ಹಿಂದುತ್ವದ ಪ್ರೊಪಗಾಂಡಾದಷ್ಟು ಯಶಸ್ವಿಯಾಗುತ್ತಿಲ್ಲ ಅಂದರೆ ಅದು ಇಳಿದಿರುವ ಆಳ ಮತ್ತು ಹರವು ನಾವು ತಿಳಿದಿರುವುದಕ್ಕಿಂತ ಭಿನ್ನವಾಗಿದೆ. ಭಾರತದಂತಹ ಉಪಖಂಡದಲ್ಲಿ ಇಂತಹದ್ದು ಹೆಚ್ಚು ಕಾಲ ಬಾಳಿಕೆ ಬಾರದು ಎಂದು ಹಲವರು ಗೆಳೆಯರು ಹಲವು ಉದಾಹರಣೆಗಳನ್ನು ಕೊಡುತ್ತಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಅಂತಹ ವೇಳೆ ಬರುವ ಹೊತ್ತಿಗೆ ಈ ಐಡಿಯಾಲಜಿಗಳು ‘ಪ್ರಜಾಪ್ರಭುತ್ವ’ಕ್ಕೇ ಕೊಡಲು ಪೆಟ್ಟುಕೊಟ್ಟು ಮಲಗಿಸಿಬಿಡುವ ಸಾಧ್ಯತೆಗಳು ಈಚೆಗೆ ಹೆಚ್ಚಾಗಿ ತೋರುತ್ತಿವೆ.
ಅಂತಹ ಸಾಧ್ಯತೆ, ಸವಾಲುಗಳು ಯಾವುವು? ಜನತಂತ್ರ ವ್ಯವಸ್ತೆಯನ್ನು ಉರುಳಿಸಲು ನಡೆದಿರುವ ಪ್ರಯತ್ನಗಳು ಹೇಗಿವೆ? ಅಲ್ಲಿ ಐಡಿಯಾಲಜಿಗಳು ಹೇಗೆ ಕೆಲಸ ಮಾಡುತ್ತಿವೆ? ಸರ್ಕಾರ ಮತ್ತು ಪೋಲಿಸ್ ವ್ಯವಸ್ಥೆಗಳ ಸಂಬಂಧವು ಹೇಗೆ ಸಾರ್ವಜನಿಕರನ್ನು ಬಲಿ ತೆಗೆದುಕೊಳ್ಳುತ್ತಿವೆ? ಮತ್ತು ಇವೆಲ್ಲದರ ಜೊತೆ ಕಾರ್ಪೋರೆಟ್ ಮಾರುಕಟ್ಟೆಯು ಹೇಗೆ ತನ್ನ ಬಲೆಯನ್ನು ಹೆಣೆದುಕೊಂಡಿದೆ ಎಂಬುದನ್ನು ನನ್ನ ಓದು, ಓಡಾಟ, ಸಂಪರ್ಕ ಮತ್ತು ಅರಿವಿನ ಮಿತಿಯಲ್ಲಿ ಪ್ರತಿ ವಾರವೂ ಒಂದೊಂದು ಕಾಯಿದೆ, ನೀತಿ ನಿರೂಪಣೆ, ಸರ್ಕಾರದ ಅಧಿಸೂಚನೆ, ನಿರ್ಧಾರಗಳನ್ನು ನಿದರ್ಶನಗಳಾಗಿ ಇಟ್ಟುಕೊಂಡು ಬರೆಯಲಿದ್ದೇನೆ. ಐಡಿಯಾಲಜಿಗಳ ನಿರಚನೆ ಎಂಬುದು ನಿರಾಕರಣವಲ್ಲ ಬದಲಿಗೆ ಒಂದು ಪರ್ಯಾಯದ ಆಲೋಚನೆ. ಆ ಬದಲು ಹೇಗೆ? ಏನು? ಎಂಬದನ್ನು ನಾವು ಈ ವರ್ತಮಾನದ ಹಲವು ದುರಿತಗಳ ನಡುವೆ ಕಂಡುಕೊಳ್ಳಬೇಕಿದೆ. ಅದರಲ್ಲಿ ಬಹುಮುಖ್ಯವಾದ್ದು “ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಮಾಣಿಕ ಮತ್ತು ಪಾರದರ್ಶಕ ಮುಂದುವರಿಕೆ’’