ಕಳೆದ ಡಿಸೆಂಬರ್ನಿಂದ ಭಾರತದಾದ್ಯಂತ CAA ಹಾಗೂ NRCಯ ವಿಚಾರವಾಗಿ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಎಂದೂ ಕಾಣದಷ್ಟು ಮಟ್ಟದ ಪ್ರತಿರೋಧ ಈ ಕಾಯ್ದೆಯ ವಿರುದ್ದ ವ್ಯಕ್ತವಾಗಿದೆ. ಈ ಸಮಯದಲ್ಲಿ ಬಹಳಷ್ಟು ಜನ ತಮ್ಮ ಮಾತಿನ ಕೌಶಲ್ಯದಿಂದ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕದಲ್ಲೂ ಸಾಕಷ್ಟು ಮಂದಿ ಎಲೆ ಮರೆಯ ಕಾಯಿಯಂತಿದ್ದವರು ಇಂದು celebrityಗಳಾಗಿ ಮಾರ್ಪಾಡಾಗುವ ಮಟ್ಟಿಗೆ ಬೆಳೆದು ನಿಲ್ಲಲು ಸಿಎಎ ವಿರುದ್ದದ ಪ್ರತಿಭಟನೆಗಳು ವೇದಿಕೆ ಕಲ್ಪಿಸಿಕೊಟ್ಟಿರುವುದಂತೂ ಸತ್ಯ. ಆದರೆ, ಈ ಪ್ರತಿಭಟನೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವವರು ಬೌದ್ದಿಕವಾಗಿ ಎಷ್ಟರ ಮಟ್ಟಿಗೆ ಪ್ರಬುದ್ದರಾಗಿದ್ದಾರೆ ಎನ್ನುವ ಕುರಿತು ಗಮನ ಹರಿಸದೇ ಇದ್ದದ್ದು ನಿಜಕ್ಕೂ ಬೇಸರದ ಸಂಗತಿ.
ಪ್ರತಿಭಟನೆಗಳಲ್ಲಿ ಭಾಷಣ ಮಾಡಲು ಕೇವಲ ಏರುದನಿಯೊಂದೇ ಸಾಕೇ? ಅಥವಾ ಮೋದಿ ಸರ್ಕಾರದ ವಿರುದ್ದ ಹೀಯಾಳಿಕೆಯ ನಾಲ್ಕು ಮಾತುಗಳನ್ನು ಬಳಸಿದರೆ ಅವರು ನಿಜವಾಗಿಯೂ ಉತ್ತಮ ಭಾಷಣಕಾರ ರಂದು ಎನಿಸಿಕೊಳ್ಳುತ್ತಾರೆಯೇ? ಈ ವಿಚಾರಗಳನ್ನು ಸಂಘಟಕರು ಪರಿಗಣಿಸುವುದಿಲ್ಲವೇ? ಇವೆಲ್ಲಾ ಪ್ರಶ್ನೆಗಳು ಉದ್ಬವವಾಗಲು ಕಾರಣ ನಿನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಘಟನೆ. ಈ ಬರಹ ಬರೆಯು ಹೊತ್ತಿಗೆ ದೇಶಾದ್ಯಂತ ಪ್ರತಿಯೊಬ್ಬರು ಕೂಡ ಅಮೂಲ್ಯ ಲಿಯೋನ್ ಮೇಲೆ ಕೆಂಡ ಕಾರುತ್ತಿರುತ್ತಾರೆ. ಟಿವಿ ಚಾನೆಲ್ಗಳಲ್ಲಿ ಅವಳ ಕುರಿತಾಗಿ ಗಂಟೆಗಟ್ಟಲೆ panel discussion ನಡೆದಿರುತ್ತದೆ. ಖಂಡಿತವಾಗಿಯೂ ಇದು ನಡೆಯಬೇಕಾದದ್ದೇ. ಏಕೆಂದರೆ, ಹುಟ್ಟಿ ಬೆಳೆದ ದೇಶಕ್ಕೆ ದ್ರೋಹ ಬಗೆಯುವವರ ಕುರಿತು ಎಳ್ಳಷ್ಟು ಕೂಡಾ ಕನಿಕರ ತೋರಿಸುವುದು ನಮ್ಮ ದೇಶಕ್ಕೇ ಗಂಡಾಂತರ ತಂದಿಡುತ್ತದೆ. ಯಾವುದೇ ಕಾರಣಕ್ಕೂ ದೇಶದ್ರೋಹದ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವ ಜರೂರತ್ತೂ ಇಲ್ಲ. ಅಂಥಹವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ನೀಡದೇ ಹೋದಲ್ಲಿ, ಮುಂದೆಯೂ ಇಂತಹ ಪ್ರಕರಣಗಳು ಜರುಗದೇ ಇರವುದಿಲ್ಲ.
ಇದು ಕೇವಲ ಒಬ್ಬ ಅಮೂಲ್ಯನ ಕಥೆಯಷ್ಟೇ ಅಲ್ಲ. ಅಪ್ರಬುದ್ದರಿಗೆ ಪ್ರಚಾರದ ಗೀಳು ಹತ್ತಿಕೊಂಡರೆ ಏನು ಆಗುತ್ತದೆ ಎಂಬುದಕ್ಕೆ ಈ ಹಿಂದೆ ಚೈತ್ರಾ ಕುಂದಾಪುರ ಕೂಡಾ ಒಂದು ನಿದರ್ಶವನ್ನು ಸೃಷ್ಟಿಸಿದ್ದಳು. ಪ್ರಚಾರದ ಹುಮ್ಮಸ್ಸಿಗೆ ಬಿದ್ದು ಅವಳು ಜೈಲು ಪಾಲಾದ ಘಟನೆಯನ್ನು ಕೂಡಾ ಇಲ್ಲಿ ಸ್ಮರಿಸಬಹುದು. ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠದ ವಿಚಾರದಲ್ಲಿ ಹಲ್ಲೆ ನಡೆಸಿದ ಆರೋಪ ಅವಳ ಮೇಲಿತ್ತು. ಹಲವು ಬಾರಿ ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿದ ಪ್ರಕರಣಗಳೂ ಇದ್ದವು. ಇನ್ನು ಚೈತ್ರಾ ಕುಂದಾಪುರ ದೇಶದ್ರೋಹದ ಹೇಳಿಕೆಗಳನ್ನು ನೀಡುವ ಮಟ್ಟಕ್ಕೆ ಇಳಿಯಲಿಲ್ಲ ಎನ್ನುವುದು ಅಲ್ಪ ಮಟ್ಟಿನ ಸಮಾಧಾನಕರ ಸಂಗತಿ. ಆದರೆ, ಅಮೂಲ್ಯ ಆ ಗೆರೆಯನ್ನೂ ದಾಟಿಬಿಟ್ಟಳು.
ಇದು ಪ್ರಚಾರ ಹಪಾಹಪಿಯೋ? ಇಲ್ಲ ಮನಃಶಾಸ್ತ್ರದಲ್ಲಿ ಹೇಳುವ ಹಾಗೆ attention seeking disorderನ ಲಕ್ಷಣವೋ? ಎಂಬುದು ನಂತರದ ವಿಚಾರ. ಯಾವ ವಿಚಾರಕ್ಕಾಗಿ ನಾವು ಪ್ರತಿಭಟಿಸುತ್ತದ್ದೇವೆ ಮತ್ತು ಯಾವ ರೀತಿ ಪ್ರತಿಭಟಿಸುತ್ತದ್ದೇವೆ ಎಂಬುದರ ಸಾಮಾನ್ಯ ಅರಿವು ಭಾಷಣಕಾರರಲ್ಲಿ ಇರಬೇಕಲ್ಲವೇ? ಇಲ್ಲಿ ಪ್ರತಿಭಟನೆ ನಡೆಯುತ್ತಿರುವುದು ಸಿಎಎ ಹಾಗೂ ಎನ್ಆರ್ಸಿ ದೇಶದ ಸಾಂವಿಧಾನಿಕ ಆಶಯಗಳಿಗೆ ಧಕ್ಕೆ ತರುತ್ತದೆ ಎನ್ನುವ ಕುರಿತಾಗಿ, ಆದರೆ, “ಪಾಕಿಸ್ತಾನ್ ಜಿಂದಾಬಾದ್”ನಂತಹ ಹೇಳಿಕೆಗಳು ಈ ಪ್ರತಿಭಟನೆಗಳ ಆಶಯವನ್ನೂ ಹಾಳುಗೆಡವುದಲ್ಲದೇ, ಒಂದು ದೊಡ್ಡ ಚಳವಳಿಯ ಸ್ವರೂಪವನ್ನೇ ಬದಲಾಯಿಸುತ್ತದೆ.
ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆಯುವ ಯುವ ಸಮೂಹ ಇಂದು ಅದೇ ಜ್ಞಾನವನ್ನು ಸಾರ್ವಜನಿಕವಾಗಿ ಬಳಸಿಕೊಳ್ಳುತ್ತಿರುವುದು ಆಘಾತಕಾರಿ ವಿಚಾರ. ಪ್ರಬುದ್ದ ಭಾಷಣಕಾರರು ಇಂದು ಯಾರಿಗೂ ರುಚಿಸುವುದಿಲ್ಲ. ಐಎಎಸ್ನಂತಹ ಉನ್ನತ ಹುದ್ದೆಯಲ್ಲಿದ್ದು ದೇಶವು ಕಳವಳ ಪಡುವಂತಹ ಸಮಯದಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ದೇಶಾದ್ಯಂತ ಜಾಗೃತಿ ಸೃಷ್ಟಿಸುತ್ತಿರುವ ಕಣ್ಣನ್ ಗೋಪಿನಾಥನ್ ಹಾಗೂ ಸಸಿಕಾಂತ್ ಸೆಂಥಿಲ್ರಂತಹ ವ್ಯಕ್ತಿಗಳ ಭಾಷಣಗಳು ಇಂದು ಯಾರಿಗೂ ರುಚಿಸುವುದಿಲ್ಲ. ಹಲವು ವರ್ಷಗಳಿಂದ ಹೋರಾಟಗಳಲ್ಲಿ ತೊಡಗಿಸಿಕೊಂಡು ಬಂದಿರುವಂತಹ ಶಿವ ಸುಂದರ್ ಅವರ ಭಾಷಣವನ್ನು ಕೇಳಲು ಯುವ ಜನತೆಗೆ ಇಷ್ಟವಿಲ್ಲ. ಕಾರಣ ಇಷ್ಟೇ, ಅವರ ಭಾಷಣಗಳಲ್ಲಿ ಆಕ್ರೋಶವಿಲ್ಲ. ಆದರೆ, ಆ ಭಾಷಣಗಳು ವಿಷಯಾಧಾರಿತವಾಗಿರುತ್ತವೆ. ಎಲ್ಲೂ ಪ್ರತಿಭಟನೆಯ ದಿಕ್ಕು ತಪ್ಪದಂತೆ ಸಂಯಮದಿಂದ ಮಾತನಾಡುವ ಕಲೆ ಅವರಲ್ಲದೆ. ಅಪ್ರಬುದ್ದ ಭಾಷಣಕಾರರಲ್ಲಿ ಆಕ್ರೋಶದ ಮಾತುಗಳು ಮಾತ್ರ ಕೇಳಲ್ಪಡುತ್ತವೆಯೇ ಹೊರತು, ಆ ಆಕ್ರೋಶಕ್ಕೆ ಸ್ಪಷ್ಟನೆ ಎಂದೂ ಸಿಗುವುದಿಲ್ಲ.
ಯಾವುದೇ ಕಾರಣಕ್ಕೂ ಅಮೂಲ್ಯಳಿಗೆ ತನ್ನ ತಪ್ಪಿಗೆ ಕ್ಷಮೆ ಭಾರತೀಯರು ನೀಡಲು ಸಾಧ್ಯವಿಲ್ಲ. ಇಂತಹ ದೇಶದ್ರೋಹದ ಪ್ರಕರಣಗಳಿಗೆ ಕಠಿಣ ಶಿಕ್ಷೆ ಲಭಿಸಬೇಕೆ ವಿನಃ, ಇಂತಹವರ ಮೇಲೆ ಕನಿಕರ ಸಲ್ಲದು.
ಇನ್ನು ಪ್ರತಿಭಟನೆಯನ್ನು ಆಯೋಜಿಸುವವರು ಕೂಡ ಈ ಕುರಿತಾಗಿ ಅವಲೋಕನ ಮಾಡಬೇಕಿದೆ. ವೇದಿಕೆಯಲ್ಲಿ ಕೇವಲ ಪ್ರಚಾರಪ್ರಿಯರಿಗೆ ಅವಕಾಶವನ್ನು ಕಲ್ಪಿಸುವ ಬದಲು, ವಿಷಯಾಧಾರಿತವಾಗಿ ಮಾತನಾಡುವವರಿಗೆ ಅವಕಾಶವನ್ನು ಕಲ್ಪಿಸಬೇಕಾಗಿದೆ. ಆಕ್ರೋಶದ ಮಾತುಗಳಿಂದ ನೀವು ಹೋರಾಟದ ಕಿಚ್ಚನ್ನು ಬೆಳೆಸಬಹುದು, ಆದರೆ ಆ ಕಿಚ್ಚು ಎಲ್ಲೆಂದರಲ್ಲಿ ಹಬ್ಬಿ ದೇಶ ಇನ್ನೋರ್ವ ಅಮೂಲ್ಯಳನ್ನು ನೋಡುವ ದೌರ್ಭಾಗ್ಯ ಬರದಿರಲಿ. ಅಪ್ರಬುದ್ದ ಭಾಷಣಕಾರರನ್ನು ಸಮಾಜದ ಹಿರೋಗಳಂತೆ ಬಿಂಬಿಸುವುದು ನಿಂತರೆ, ಪ್ರಚಾರದ ಗೀಳು ಕಡಿಮೆಯಾಗಬಹುದು ಹಾಗೂ ನಡೆಯುತ್ತಿರುವ ಹೋರಾಟಗಳಿಗೆ ಅರ್ಥವೂ ಸಿಗಬಹುದು.