ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಹುಟ್ಟೂರಿನ ಕುರಿತ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಪುರಾತತ್ವ ಇಲಾಖೆ ಮಹತ್ವದ ನಿರ್ಣಯ ಕೈಗೊಂಡಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮ ಪಂಚಾಯ್ತಿಯ ಕೇಶವಾಪುರಕ್ಕೆ ಶೀಘ್ರವೇ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಥಳ ಸಮೀಕ್ಷೆ ನಡೆಸಲಿದೆ.
ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಾರ್ ಶೇಜೇಶ್ವರ್ ಅವರು ಈ ವಿಷಯವನ್ನು ತಿಳಿಸಿದ್ದು, ಹಂಪಿ ವಿವಿ ಸಂಶೋಧಕರು ಮತ್ತು ಇತರೆ ತಜ್ಞರನ್ನೊಳಗೊಂಡ ತಂಡ ನೀಡಿದ ಅಧ್ಯಯನ ವರದಿಯ ಆಧಾರದ ಮೇಲೆ ಇಲಾಖೆ ಸ್ಥಳ ಸಮೀಕ್ಷೆಯ ನಿರ್ಧಾರಕ್ಕೆ ಬಂದಿದ್ದು, ಒಂದೆರಡು ದಿನಗಳಲ್ಲಿ ಇಲಾಖೆಯ ಉನ್ನತಾಧಿಕಾರಿಗಳ ತಂಡ ದಾಸಶ್ರೇಷ್ಠರ ಹುಟ್ಟೂರು ಎಂದು ಪ್ರತಿಪಾದಿಸಲಾಗುತ್ತಿರುವ ಮಲೆನಾಡಿನ ಪುಟ್ಟ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಪುರಂದರ ವಿಠಲ ಕಾವ್ಯನಾಮದ ಮೂಲಕ ದಾಸ ಸಾಹಿತ್ಯ ಮತ್ತು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಬುನಾದಿ ಹಾಕಿದ ಪುರಂದರ ದಾಸರ ಮೂಲ ಹೆಸರು ಶ್ರೀನಿವಾಸ ನಾಯಕ ಎಂದಿತ್ತು ಎನ್ನಲಾಗಿದ್ದು, ಅವರ ಹುಟ್ಟೂರಿನ ಬಗ್ಗೆ ಈವರೆಗೆ ವಿದ್ವಾಂಸರ ನಡುವೆ ಗೊಂದಲವಿದೆ. ಕೆಲವರು ಅವರು ಮಹಾರಾಷ್ಟ್ರದ ಪುರಂದರಗಢದವರು ಎಂದು ಪ್ರತಿಪಾದಿಸುತ್ತಿದ್ದರೆ, ಮತ್ತೆ ಕೆಲವರು ಮಲೆನಾಡಿನ ಆರಗದ ಕೇಶವಪುರದವರು ಎನ್ನುತ್ತಿದ್ದಾರೆ. ಆರಗ ಗ್ರಾಮ ಪುರಂದರ ದಾಸರು ಬದುಕಿದ್ದ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ದೊಡ್ಡ ಪಟ್ಟಣವಾಗಿ, ವ್ಯಾಪಾರ ಕೇಂದ್ರವಾಗಿತ್ತು. ಸ್ವತಃ ಶ್ರೀನಿವಾಸ ನಾಯಕ ದೊಡ್ಡ ವ್ಯಾಪಾರಿಯಾಗಿದ್ದ. ಬಳಿಕ ಐಹಿಕ ಜೀವನದ ಬಗ್ಗೆ ಜುಗುಪ್ಸೆಗೊಂಡು ಪುರಂದರ ನಾಮಸ್ಮರಣೆಯ ಮೂಲಕ ಲೋಕಸಂಚಾರಿಯಾದರು ಎಂಬ ಐತಿಹ್ಯವಿದೆ.
ಪುರಂದರ ದಾಸರು ಮಲೆನಾಡಿನವರು ಎಂಬ ಸಂಗತಿ ಕಳೆದ ಎರಡು – ಮೂರು ದಶಕಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮುಖ್ಯವಾಗಿ ದಾಸ ಸಾಹಿತ್ಯದಲ್ಲಿ ಬರುವ ಮಲೆನಾಡಿನ ಭಾಷೆ, ಊರುಗಳು, ಸಂಪ್ರದಾಯ, ಆಚರಣೆಗಳ ಪ್ರಸ್ತಾಪದ ಹಿನ್ನೆಲೆಯಲ್ಲಿ ಅವರು ಆರಗದ ಮೂಲದವರೇ ಇರಬಹುದು ಎಂಬ ವಾದ ಮುನ್ನೆಲೆಗೆ ಬಂದಿತ್ತು. ಆ ಹಿನ್ನೆಲೆಯಲ್ಲಿ ಪ್ರಮುಖವಾಗಿ ತೀರ್ಥಹಳ್ಳಿ ಮೂಲದವರಾದ ಹಿರಿಯ ಸಹಕಾರಿ ಧುರೀಣ ಬಿ ಎಸ್ ವಿಶ್ವನಾಥ್ ಮತ್ತು ಮಾಜಿ ಶಾಸಕ ಪಟ್ಟಮಕ್ಕಿ ರತ್ನಾಕರ್ ಅವರು ಆಸಕ್ತಿ ವಹಿಸಿ ಸರ್ಕಾರದ ಗಮನ ಸೆಳೆದಿದ್ದರು. ಜೊತೆಗೆ ಪುರಂದರ ವೇದಿಕೆ ಎಂಬ ಸಂಸ್ಥೆ ಹುಟ್ಟುಹಾಕಿ ತೀರ್ಥಹಳ್ಳಿ ಭಾಗದಲ್ಲಿ ಪುರಂದರ ದಾಸರ ಹೆಗ್ಗಳಿಕೆಯ ಬಗ್ಗೆ ಅರಿವು ಮೂಡಿಸುವ ಮತ್ತು ಅದೇ ಹೊತ್ತಿಗೆ ಅವರ ಹುಟ್ಟೂರಿನ ಕುರಿತ ಸಂಶೋಧನೆಗೆ ಒತ್ತಾಯಿಸುವ ನಿಟ್ಟಿನಲ್ಲಿ ಶ್ರಮಿಸಿದ್ದರು.
ಅಂತಹ ಪ್ರಯತ್ನಗಳ ಫಲವಾಗಿ ಮೂರು ವರ್ಷಗಳ ಹಿಂದೆ ಹಂಪಿ ಕನ್ನಡ ವಿವಿಯ ಸಂಶೋಧಕ ಎ ವಿ ನಾವುಡ, ಖ್ಯಾತ ಸಂಗೀತಗಾರರಾದ ವಿದ್ವಾನ್ ಆರ್ ಕೆ ಪದ್ಮನಾಭ, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಮತ್ತಿತರ ವಿವಿಧ ಕ್ಷೇತ್ರಗಳ ತಜ್ಞರ ಸಮಿತಿ ರಚನೆಯಾಗಿತ್ತು ಮತ್ತು ಆರಗ ಸುತ್ತಮುತ್ತಲ ಊರುಗಳಲ್ಲಿ ಮಾಹಿತಿ ಕಲೆಹಾಕಲಾಗಿತ್ತು. ಇತ್ತೀಚೆಗೆ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಇದೀಗ ಪುರಾತತ್ವ ಇಲಾಖೆ ಸ್ಥಳ ಸಮೀಕ್ಷೆಗೆ ನಿರ್ಧರಿಸಿದ್ದು, ಕರ್ನಾಟಕ ಸಂಗೀತ ಪಿತಾಮಹರ ಜನ್ಮಸ್ಥಳದ ಕುರಿತ ಗೊಂದಲಗಳಿಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇದಾಗಿದೆ ಎನ್ನಲಾಗುತ್ತಿದೆ.