ಅದು 2006ರ ಸಮಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರೆ, ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ಆದರೆ, ಆಗತಾನೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ವಿಧಾಸಭೆ ಪ್ರವೇಶಿಸಿದ್ದ ಹೆಚ್.ಡಿ. ಕುಮಾರಸ್ವಾಮಿ ನಾಡಿನ ಹಿರಿಯ ರಾಜಕಾರಣಿ ಧರ್ಮಸಿಂಗ್ ಪಾಲಿಗೆ ಅಕ್ಷರಶಃ ದುಸ್ವಪ್ನದಂತೆ ಕಾಡಿದ್ದರು. ಕೊನೆಗೆ ಮೈತ್ರಿ ಸರ್ಕಾರವನ್ನೇ ಬೀಳಿಸಿ ಬಿಜೆಪಿ ಜೊತೆಗೆ ಕೈಜೋಡಿಸಿ ಅಪವಿತ್ರ ಮೈತ್ರಿಗೆ ನಾಂದಿ ಹಾಡಿದ್ದರು.
ಕರ್ನಾಟಕ ರಾಜಕಾರಣದ ಪಾಲಿಗೆ ಈಗಲೂ ಇದೊಂದು ಅಪವಿತ್ರ ಮೈತ್ರಿ ಮತ್ತು ಜೆಡಿಎಸ್ ರಾಜಕೀಯ ಹಾದಿಯ ಒಂದು ಪ್ರಮಾದ ಎಂದೇ ಬಣ್ಣಿಸಲಾಗುತ್ತದೆ. ಅಂದು ಈ ಮೈತ್ರಿಯನ್ನು ಸುಲಭಕ್ಕೆ ಮುರಿಯಬಹುದಾದ ಶಕ್ತಿ ಮಾಜಿ ಪ್ರಧಾನಿ ದೇವೇಗೌಡರಿಗೆ ಇತ್ತು. ಆದರೆ, ಪುತ್ರ ವ್ಯಾಮೋಹ ಅವರ ಕೈಯನ್ನು ಕಟ್ಟಿಹಾಕಿತ್ತು. ದಶಕದ ಹಿಂದೆ ಹೀಗೆ ನಡೆದುಹೋದ ಒಂದು ರಾಜಕೀಯ ಪ್ರಮಾದಕ್ಕೆ ಈಗಲೂ ಜೆಡಿಎಸ್ ಬೆಲೆ ತೆರುತ್ತಲೇ ಇದೆ.
ದಶಕದ ಹಿಂದಿನ ಈ ರಾಜಕೀಯ ಇತಿಹಾಸವನ್ನು ಈಗ ನೆನೆಪು ಮಾಡಿಕೊಳ್ಳುವುದಕ್ಕೂ ಒಂದು ಕಾರಣ ಇದೆ. ಅದೇನೆಂದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಗ ಸೂಪರ್ ಸಿಎಂ ಖ್ಯಾತಿಯ ಬಿ.ವೈ. ವಿಜಯೇಂದ್ರ.
ಕುಟುಂಬ ರಾಜಕಾರಣ ಮತ್ತು ಪುತ್ರ ವ್ಯಾಮೋಹ ಇಂದು ಜೆಡಿಎಸ್ ಪಕ್ಷಕ್ಕೆ ಮುಳುವಾಗಿರುವಂತೆಯೇ, ಇದೇ ಪುತ್ರ ವ್ಯಾಮೋಹ ಮತ್ತು ತನ್ನ ರಾಜಕೀಯ ಉತ್ತರಾಧಿಕಾರಿಯನ್ನು ಬಿಜೆಪಿಯಲ್ಲಿ ಉಳಿಸಿಹೋಗಬೇಕು ಎಂಬ ಯಡಿಯೂರಪ್ಪ ಅವರ ಮಹತ್ವಾಕಾಂಕ್ಷೆ ಅವರ ರಾಜಕೀಯ ಹಾದಿಗೆ ಮುಳ್ಳಾಗಲಿದೆಯೇ? ಎಂಬ ಮಹತ್ವದ ಪ್ರಶ್ನೆಗಳು ಇಂದು ರಾಜ್ಯ ರಾಜಕೀಯದಲ್ಲಿ ತಲೆ ಎತ್ತುತ್ತಿವೆ. ಇದಕ್ಕೆ ಕಾರಣಗಳೂ ಇಲ್ಲದೆ ಏನಿಲ್ಲ.
ಈತ ಶಾಸಕನೇನಲ್ಲ ಅದರೂ ಸೂಪರ್ ಸಿಎಂ ಹೆಸರು ವಿಜಯೇಂದ್ರ!
ಯಡಯೂರಪ್ಪ ನಾಲ್ಕು ಬಾರಿ ಸಿಎಂ ಆಗಿ ಆಯ್ಕೆಯಾದವರು. ಒಂದು ಬಾರಿಯೂ ಸಹ ಪೂರ್ಣ ಪ್ರಮಾಣದ ಸಿಎಂ ಆಗಿ ಅಧಿಕಾರ ನಡೆಸದಿದ್ದರೂ ಸಹ ಈಗಲೂ ಬಿಜೆಪಿಯಲ್ಲಿ ಅವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಸಹ ಸಿಎಂ ಸ್ಥಾನದಲ್ಲಿ ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಬಿಜೆಪಿಯಲ್ಲಿ 75 ವಯಸ್ಸಿನ ಮೇಲ್ಪಟ್ಟವರಿಗೆ ರಾಜಕೀಯ ನಿವೃತ್ತಿ ನೀಡಲಾಗುತ್ತಿದ್ದರೂ ಬಿಎಸ್‌ವೈ ಅವರನ್ನು ಮಾತ್ರ ಹೈಕಮಾಂಡ್ ಏನೂ ಮಾಡಲು ಸಾಧ್ಯವಾಗಿಲ್ಲ.
ಕಳೆದ ಮೂರು ಅವಧಿಯಲ್ಲೂ ಸಹ ಯಡಿಯೂರಪ್ಪನವರಿಗೆ ಮಗ ವಿಜೇಂದ್ರ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಬೆಳೆಸುವ ಯಾವುದೇ ಇರಾದೆ ಇರಲಿಲ್ಲ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಯಡಿಯೂರಪ್ಪನವರ ಹಿಂದೆ ಸಂಸದೆ ಶೋಭಾ ಕರಂದ್ಲಾಜೆ ಇದ್ದರು. ಶೋಭ ಅವರನ್ನೇ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿತ್ತು. ಆದರೆ, ಸಿಎಂ ಕುಟುಂಬದಲ್ಲಿ ನಡೆದ ಭಿಕ್ಕಟ್ಟಿನ ಕಾರಣಕ್ಕೆ ಇಂದು ಶೋಭಾ ಕರಂದ್ಲಾಜೆ ಅವರ ಜಾಗಕ್ಕೆ ಮಗ ವಿಜಯೇಂದ್ರ ಬಂದು ನಿಂತಿದ್ದಾರೆ. ಮತ್ತು ಇವರೇ ಯಡಿಯೂರಪ್ಪವರ ರಾಜಕೀಯ ಉತ್ತರಾಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಬೆಳವಣಿಗೆ ಇಷ್ಟಕ್ಕೆ ಸೀಮಿತವಾಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲವೇನೋ? ಆದರೆ, ಇದನ್ನೂ ದಾಟಿ ವಿಜಯೇಂದ್ರ ಇಂದು ಅಕ್ಷರಶಃ ಸೂಪರ್ ಸಿಎಂ ಎಂಬಂತೆ ವರ್ತಿಸುತ್ತಿದ್ದಾರೆ. ವಿಜಯೇಂದ್ರ ಮೂಲತಃ ಶಾಸಕರಲ್ಲ, ಇನ್ನೂ ಪಕ್ಷದಲ್ಲೂ ಅವರಿಗೆ ದೊಡ್ಡ ಸ್ಥಾನಮಾವೇನೂ ಇಲ್ಲ. ಕೆಆರ್.ಪೇಟೆ ಉಪ ಚುನಾವಣೆ ಗೆಲುವನ್ನು ಹೊರತುಪಡಿಸಿ ಬೇರೆ ಯಾವ ದಾಖಲೆಯೂ ಅವರ ಬೆನ್ನಿಗಿಲ್ಲ. ಆದರೂ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಬೇಕು ಎಂಬಲ್ಲಿಂದ್ದ ಸರ್ಕಾರದ ಮಹತ್ವದ ಯೋಜನೆ-ಕಾಮಗಾರಿಗಳ ವರೆಗೆ ಎಲ್ಲವೂ ವಿಜಯೇಂದ್ರ ಅವರ ಅಂಕೆಯಲ್ಲೇ ನಡೆಯುತ್ತಿದೆ ಎಂಬುದು ಇಂದು ಗುಟ್ಟಾಗೇನು ಉಳಿದಿಲ್ಲ.
ಯಡಿಯೂರಪ್ಪನವರಿಗೆ ಕಾದಿದೆಯಾ ಕಂಟಕ?
ಮೊದಲೇ ಹೇಳಿದಂತೆ ಬಿ.ಎಸ್. ಯಡಿಯೂರಪ್ಪ ನಾಲ್ಕು ಬಾರಿ ಈ ರಾಜ್ಯದ ಸಿಎಂ ಆದರೂ ಸಹ ಪೂರ್ಣ ಅವಧಿಯ ಅಧಿಕಾರವನ್ನು ಪೂರೈಸಿಲ್ಲ. ಆದರೆ, ಇದೇ ಮೊದಲ ಬಾರಿಗೆ ಅವರಿಗೆ ಮುಂದಿನ ಮೂರು ವರ್ಷ ಸಿಎಂ ಆಗಿ ಮುಂದುವರೆಯುವ ಅವಕಾಶ ಇದೆ. ಈ ನಡುವೆ ಇಂತಹ ಸವರ್ಣಾವಕಾಶವನ್ನು ಸ್ವತಃ ಅವರೇ ತಮ್ಮ ಕೈಯಾರೆ ಹಾಳು ಮಾಡಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಇದಕ್ಕೆ ಕಾರಣ ಪುತ್ರ ವ್ಯಾಮೋಹ.
ಇಂದು ರಾಜ್ಯ ಬಿಜೆಪಿಯಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಂಡುಬಂದರೂ ಸಹ ಪಕ್ಷದೊಳಗಿನ ಒಳ ಬೇಗುದಿ ಇನ್ನೂ ತಣ್ಣಗಾಗಿಲ್ಲ. ಒಂದೆದೆ ಡಿಸಿಎಂ ಸ್ಥಾನಕ್ಕೆ ಶ್ರೀರಾಮುಲು ಹಿಡಿದ ಪಟ್ಟು ಇನ್ನೂ ಸಡಿಲಿಸಿಲ್ಲ ಮತ್ತೊಂದೆಡೆ ಸಚಿವ ಸ್ಥಾನಾಕಾಂಕ್ಷಿಗಳಾದ ಉಮೇಶ್ ಕತ್ತಿ, ರೇಣುಕಾಚಾರ್ಯ, ಮುರುಗೇಶ್ ನಿರಾಣಿಯಂತಹ ಹಿರಿಯ ಶಾಸಕರು ಯಡಿಯೂರಪ್ಪ ವಿರುದ್ಧ ತೆರೆಯ ಮರೆಯಲ್ಲೇ ಕತ್ತಿ ಮಸೆಯುತ್ತಿರುವುದೇನೂ ಇಂದು ಗುಟ್ಟಾಗಿ ಉಳಿದಿಲ್ಲ. ಈ ನಡುವೆ ಯಡಿಯೂರಪ್ಪನವರ ಪುತ್ರ ವ್ಯಾಮೋಹ ಮತ್ತು ವಿಜಯೇಂದ್ರ ಅವರ ಸೂಪರ್ ಸಿಎಂ ನಡವಳಿಕೆ ಭವಿಷ್ಯದಲ್ಲಿ ಯಡಿಯೂರಪ್ಪವರಿಗೆ ದುಬಾರಿಯಾಗುವ ಎಲ್ಲಾ ಲಕ್ಷಣಗಳನ್ನೂ ಕಣ್ಣೆದುರು ತೆರೆದಿಟ್ಟಿದೆ.
ಪಕ್ಷದ ಹಿರಿಯ ಶಾಸಕರು ತಮ್ಮ ಕ್ಷೇತ್ರದ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಬಂದರೂ ಸಹ ಯಡಿಯೂರಪ್ಪ ಎಲ್ಲರಿಗೂ ವಿಜಯೇಂದ್ರ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಇದು ಸಾಮಾನ್ಯವಾಗಿ ಎಲ್ಲಾ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸದ್ದಿಲ್ಲದೆ ಸಿಎಂ ವಿರುದ್ಧ ಒಂದು ಗುಂಪು ಧೃವೀಕರಣಗೊಳ್ಳುತ್ತಿದೆ. ಮತ್ತು ಉಮೇಶ್ ಕತ್ತಿ ಇದರ ನಾಯಕ ಎನ್ನಲಾಗುತ್ತಿದೆ.
ಇದಲ್ಲದೆ ಮೊನ್ನೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ವತಃ 15ಕ್ಕೂ ಹೆಚ್ಚು ಲಿಂಗಾಯತ ಸಮುದಾಯದ ಶಾಸಕರು ಈ ವಿಚಾರವನ್ನು ಎತ್ತಿದ್ದಾರೆ, ಬಿಎಸ್‌ವೈ ನಡೆಯನ್ನು ಖಂಡಿಸಿದ್ದಾರೆ. ವಿಜಯಪುರದ ವಿವಾದಾತ್ಮಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಹ, “ನಾನು ವಾಜಪೇಯಿ ಕಾಲದಲ್ಲಿ ಕೇಂದ್ರ ಸಚಿವನಾಗಿದ್ದವನು. ನನ್ನಂತವನು ಅನುದಾಕ್ಕಾಗಿ ಕೋರಿ ಶಾಸಕನಾಗಿ ವಿಧಾನಸಭೆಯನ್ನೂ ಪ್ರವೇಶಿಸದ ವಿಜಯೇಂದ್ರನ ಎದುರು ನಿಲ್ಲಬೇಕೆ?” ಎಂದು ಕಟುವಾಗಿ ಟೀಕಿಸಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬಳಿ ರಾಜ್ಯದ ಹಿರಿಯ ಬಿಜೆಪಿ ಶಾಸಕರು ಈಗಾಗಲೇ ಈ ಕುರಿತ ದೂರನ್ನು ತಲುಪಿಸಿದ್ದಾರೆ. ಅಲ್ಲದೆ, ಬಿಎಸ್‌ವೈ ವಿರುದ್ದ ಉಮೇಶ್ ಕತ್ತಿ ನೇತೃತ್ವದಲ್ಲಿ ಸದ್ದಿಲ್ಲದೆ ಒಂದು ಬಣ ಬಂಡಾಯವೇಳಲು ಸಿದ್ಧತೆ ನಡೆಸಿದ್ದಾರೆ ಎಂಬಂತಹ ಮಾಹಿತಿಗಳು ಲಭ್ಯವಾಗುತ್ತಿವೆ. ಒಂದು ವೇಳೆ ಇದು ನಿಜವಾದರೆ ಮುಂದಿನ ಮೂರು ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದು ಖಚಿತ. ಆದರೆ, ಬಿಎಸ್‌ವೈ ಸಿಎಂ ಸ್ಥಾನ ಅನಿಶ್ಚಿತ ಎನ್ನಲಾಗುತ್ತಿದೆ.
ಒಟ್ಟಾರೆ ಪ್ರಸ್ತುತ ರಾಜ್ಯ ರಾಜಕೀಯದ ಎಲ್ಲಾ ಸನ್ನಿವೇಶಗಳನ್ನೂ ಹಿಂದಿನ ರಾಜಕೀಯ ಇತಿಹಾಸದ ಜೊತೆಗೆ ತಾಳೆ ಹಾಕಿ ನೋಡಿದರೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಜೆಡಿಎಸ್ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದ ಅದೇ ಪುತ್ರ ವ್ಯಾಮೋಹ ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಭವಿಷ್ಯಕ್ಕೂ ಮುಳ್ಳಾಗಿರುವುದು ಬಹುತೇಕ ಸ್ಪಷ್ಟವಾಗಿದೆ.