ರಾಜ್ಯದ ಪುಟ್ಟ ಜಿಲ್ಲೆ ಕೊಡಗು ತನ್ನ ಹಚ್ಚ ಹಸಿರಿನ ಪ್ರಕೃತಿ ಸೌದರ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಮಾನವನ ಸ್ವಾರ್ಥ ಹೆಚ್ಚುತ್ತ ಹೋದಂತೆ ಕಳೆದ ಎರಡು ವರ್ಷಗಳಲ್ಲಿ ಕೊಡಗಿನ ಅರಣ್ಯ ನಾಶವೂ ಹೆಚ್ಚಾಗುತ್ತಿದೆ. ಅದರಲ್ಲ ಜಿಲ್ಲೆಯು ಪ್ರವಾಸೋದ್ಯಮದ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದ್ದು ಎಲ್ಲೆಡೆ ರೆಸಾರ್ಟ್, ಹೋಂ ಸ್ಟೇ ಗಳು ತಲೆ ಎತ್ತುತ್ತಿವೆ. ಗುಡ್ಡ ಕೊರೆದು ಭೂ ಪರಿವರ್ತನೆ ಮಾಡಿಸಿ ಹೋಂ ಸ್ಟೇ ಗಳನ್ನು ಮಾಡಿದ ಕಾರಣಕ್ಕಾಗಿ ಭೂ ಕುಸಿತವೂ ಸಂಭವಿಸಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ನೂರಾರು ಜನರು ಭೂ ಕುಸಿತ ಹಾಗೂ ಭೀಕರ ಮಳೆಗೆ ಮನೆ ಮಠ ಕಳೆದುಕೊಂಡಿದ್ದಾರೆ. ಸಾವಿರಾರು ಜನ ಕೃಷಿಕರು ಬೆಳೆ ನಷ್ಟ ಅನುಭವಿಸಿ ಸೋತಿದ್ದಾರೆ. ಒಂದೆಡೆ ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲದಾಗಿದ್ದು ಹವಾಮಾನ ವೈಪರೀತ್ಯದಿಂದಾಗಿ ಫಸಲೂ ಕೂಡ ಕಡಿಮೆ ಆಗಿದೆ.
ಈ ನಡುವೆ ಇಡೀ ವಿಶ್ವವನ್ನೇ ಭಾಧಿಸುತ್ತಿರುವ ಕೋವಿಡ್ 19 ಹೆಮ್ಮಾರಿ ಕೊಡಗಿನಲ್ಲೂ ತನ್ನ ಆರ್ಭಟ ಮುಂದುವರಿಸಿದೆ. ಇದು ಜನತೆಯನ್ನು ಇನ್ನಷ್ಟು ಅಧೀರರನ್ನಾಗಿ ಮಾಡಿದೆ. ಬುಧವಾರ ಸಂಜೆಯ ವೇಳೆಗೆ ಕೊಡಗಿನಲ್ಲಿ ಒಟ್ಟು 135 ಇವೆ. ಒಟ್ಟು ಜಿಲ್ಲೆಯಲ್ಲಿ ಈವರೆಗೆ ವರದಿ ಅಗಿರುವ ಪ್ರಕರಣಗಳು 225 ಆಗಿದ್ದು ಇದರಲ್ಲಿ 87 ಸೋಂಕಿತರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಈತನಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೂರು ಸಾವುಗಳು ಸಂಭವಿಸಿದ್ದು ನೂರಕ್ಕೂ ಹೆಚ್ಚು ಪ್ರದೇಶಗಳನ್ನು ನಿಯಂತ್ರಿತ ಎಂದು ಘೋಷಿಸಲಾಗಿದೆ. ಅದರೆ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳ ಕಂಡು ಬರುತ್ತಿರುವುದು ಜನತೆಯನ್ನು ಆತಂಕಕ್ಕೆ ದೂಡಿದೆ.
ಈಗಾಗಲೇ ಜಿಲ್ಲಾಡಳಿತ ಮಡಿಕೇರಿಯ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಕೇರ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಅಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಿಯ ವಿಶ್ವ ಹಿಂದೂ ಪರಿಷದ್ ಅಧೀನದಲ್ಲಿರುವ ಆಶ್ವಿನಿ ಅಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮಾಡಿ ಅಲ್ಲಿಯೇ ಇತರ ಎಲ್ಲ ರೋಗಿಗಳಿಗೆ ಚಿಕಿತ್ಸೆ ತಪಾಸಣೆ ಮಾಡಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಸೋಂಕು ಪೀಡಿತರ ಸಂಖ್ಯೆಯನ್ನು ಯಾರೂ ಊಹಿಸಲು ಅಥವಾ ಅಂದಾಜಿಸಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಮುಂಜಾಗರೂಕತೆಯಾಗಿ ಜಿಲ್ಲಾಡಳಿತ ರೋಗಿಗಳ ಚಿಕಿತ್ಸೆಗೆ ಬೆಡ್ ಗಳ ಸಂಖ್ಯೆಯನ್ನು ಹೆಚ್ಚು ಮಾಡಲೇಬೇಕಿದೆ.

ಈಗ ಜಿಲ್ಲೆಯಲ್ಲಿ ಏಕೈಕ ಕೋವಿಡ್ ಅಸ್ಪತ್ರೆ ಇದ್ದು ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ವೀರಾಜಪೇಟೆ ಮತ್ತು ಸೋಮವಾರಪೇಟೆಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ವಾರ್ಡ್ ಗಳನ್ನು ಮೀಸಲಿರಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಈ ರೀತಿ ಸೋಂಕಿತರ ಚಿಕಿತ್ಸೆ ನೀಡುವುದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಆಗಲಿರುವುದಂತೂ ಖಚಿತ ಆಗಿದೆ. ಉದಾಹರಣೆಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ತಾಲ್ಲೂಕು ಕೇಂದ್ರದ ಏಕೈಕ ಆಸ್ಪತ್ರೆ ಆಗಿದ್ದು ಇಲ್ಲಿ ಯಾವುದೇ ಖಾಸಗೀ ಅಸ್ಪತ್ರೆಗಳಿಲ್ಲ. ಇಲ್ಲಿನ ಗ್ರಾಮೀಣ ಭಾಗದಿಂದ ಬರುವ ರೋಗಿಗಳಿಗೆ ಇದು ಏಕೈಕ ಆಶಾಕಿರಣ ಅಗಿದ್ದು ಇಲ್ಲಿ ಡಯಾಲಿಸಿಸ್ ಕೇಂದ್ರ ಜತೆಗೇ ಸುಸಜ್ಜಿತ ಪ್ರಯೋಗ ಶಾಲೆಯೂ ಇದೆ. ಇಲ್ಲಿ ಒಂದು ವರ‍್ಡ್ ನನ್ನು ಸೋಂಕಿತರ ಚಿಕಿತ್ಸೆಗೆ ಬಳಸಿದ್ಲಲ್ಲಿ ಸೋಂಕು ಇತರರಿಗೆ ತಗುಲಿದರೆ ಇಡೀ ಆಸ್ಪತ್ರೆಯೇ ಸೀಲ್ ಡೌನ್ ಅಗಲಿದೆ. ಆಗ ಜನರು ಚಿಕ್ಕ ಪುಟ್ಟ ಖಾಯಿಲೆಗಳಿಗೂ ಮಡಿಕೇರಿ, ಹಾಸನ, ಮೈಸೂರಿಗೆ ತೆರಳಬೇಕಾಗುತ್ತದೆ. ಆಡಳಿತವು ಸೋಂಕಿತರಿಗೆ ವಿದ್ಯಾರ್ಥಿಗಳ ಹಾಸ್ಟೆಲ್ ನಲ್ಲೂ ಚಿಕಿತ್ಸೆಗೆ ಏರ್ಪಾಡು ಮಾಡಿದೆ ಎನ್ನಲಾಗಿದೆ. ಅದರೆ ಬೆಡ್ ಗಳ ಸಂಖ್ಯೆ ತೀರಾ ಕಡಿಮೆ ಇದ್ದು ವಿವಿದೆಡೆ ಸೋಂಕಿತರನ್ನು ಹಾಕಿದರೆ ಸೂಕ್ತ ವೈದ್ಯೋಪಚಾರ ಒದಗಿಸುವುದು ಸಾದ್ಯವಾಗದು.
ಅದರ ಬದಲಿಗೆ ಜಿಲ್ಲಾಡಳಿತ ಸೋಮವಾರಪೇಟೆ ಮತ್ತು ವೀರಾಜಪೇಟೆಯಲ್ಲಿ ದೊಡ್ಡ ಕಲ್ಯಾಣ ಮಂಟಪಗಳ, ಅಥವಾ ವಿಶಾಲವಾಗಿರುವ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರ ಮನವೊಲಿಸಿ ತಲಾ ನೂರು ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಯನ್ನು ತೆರೆಯಬಹುದಾಗಿದೆ. ಇದರಿಂದ ಬಡ ರೋಗಿಗಳಿಗೆ ತಾಲ್ಲೂಕಿನ ಅಸ್ಪತ್ರೆಯಲ್ಲಿ ನಿರಾತಂಕವಾಗಿ ಚಿಕಿತ್ಸೆ ದೊರೆಯಲಿದ್ದು, ತಾತ್ಕಾಲಿಕ ಆಸ್ಪತ್ರೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗಲಿದೆ. ಈಗಾಗಲೇ ಬೆಂಗಳೂರು ಹೊರವಲಯದ ತುಮಕೂರು ರಸ್ತೆಯಲ್ಲಿ ರಾಜ್ಯ ಸರ್ಕಾರ 10 ಸಾವಿರ ಬೆಡ್ ಗಳ ಕೋವಿಡ್ ಸೆಂಟರ್ ತೆರೆದಿರುವುದು, ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಸಾವಿರ ಹಾಸಿಗೆಗಳ ಕೋವಿಡ್ ಸೆಂಟರ್ ತೆರೆದಿರುವುದು ನಮಗೆ ಪ್ರೇರಣೆ ಆಗಬೇಕಿದೆ. ಸೋಂಕಿತರ ಸಂಖ್ಯೆ ಹೆಚ್ಚಾದರೆ ಮನೆಯಲ್ಲೇ ಚಿಕಿತ್ಸೆಗೊಳಪಡಿಸುವುದು ಮತ್ತೊಂದು ಅಪಾಯಕಾರಿ ಯೋಚನೆ ಅಗಿದೆ.

ಏಕೆಂದರೆ ಕೋವಿಡ್ ಪೀಡಿತರ ಹತ್ತಿರ ಹೋಗುವಾಗ ಪ್ರತೀ ಬಾರಿ ಪಿಪಿಇ ಕಿಟ್ ಧರಿಸಬೇಕಿದೆ ಅಷ್ಟೇ ಅಲ್ಲ ಅದನ್ನು ಒಂದು ಬಾರಿ ಬಳಸಿದ ನಂತರ ನಾಶ ಮಾಡಬೇಕಿದೆ. ಮನೆಯವರು ಇದನ್ನೆಲ್ಲ ಮಾಡಲು ಸಾಧ್ಯವೇ? ಇದರಿಂದಾಗಿ ಮನೆಯವರಿಗೆಲ್ಲ ಸೋಂಕು ಬರುವುದು ನಿಶ್ಚಿತವೇ ಅಗಿದೆ. ಇದರ ಜತೆಗೇ ಮೊದಲಿನಂತೆ ಇಡೀ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಬೇಕಿದೆ. ಗಡಿಗಳಲ್ಲೂ ಮೊದಲಿನಂತೆ ಚೆಕ್ ಪೋಸ್ಟ್ ಅಗತ್ಯವಿದೆ. ಅಲ್ಲದೆ ಹೊರ ಜಿಲ್ಲೆಗಳಿಂದ ಇಲ್ಲಿಗೆ ಬರುವವರ ಕೈಗೆ ಕಡ್ಡಾಯ ಕ್ವಾರಂಟೈನ್ ಸೀಲ್ ಹಾಕಿ 7 ದಿನ ತಡೆಯಲ್ಲಿ ಇರಿಸಬೇಕಿದೆ. ಏಕೆಂದರೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಲು ಹೊರಗಿನಿಂದ ಬಂದವರೇ ಮತ್ತು ಹೊರ ಜಿಲ್ಲೆಗೆ ಹೋಗಿ ಬಂದವರೆ ಕಾರಣ ಎನ್ನುವುದನ್ನು ಮರೆಯಬಾರದು. ಜಿಲ್ಲಾಡಳಿತ ಕೂಡಲೇ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಬೇಕಿದೆ.
ಸಾಮಾಜಿಕ ಕಾರ್ಯಕರ್ತ ವಸಂತ್ ಕೊಡಗು ಅವರನ್ನು ʼಪ್ರತಿಧ್ವನಿʼ ಮಾತಾಡಿಸಿದಾಗ ಅವರು ಮುಂದಿನ ದಿನಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕನಿಷ್ಟ ಒಂದು ಸಾವಿರ ಹಾಸಿಗೆಗಳ ಕೋವಿಡ್ ಸೆಂಟರ್‌ನ್ನು ಸುಸಜ್ಜಿತವಾಗಿ ಇರಿಸಬೇಕಾಗುತ್ತದೆ. ಕೊಡಗಿನಲ್ಲಿ ಈಗಿರುವ ಮೂರೂ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಸೂಕ್ತ ಸಾರ್ವಜನಿಕ ಸಮುದಾಯ ಭವನ, ಕಲ್ಯಾಣ ಮಂಟಪ ಅಥವಾ 50 ರೂಮುಗಳನ್ನು ಹೊಂದಿರುವ ರೆಸಾರ್ಟ್‌ಗಳನ್ನೂ ಬಳಸಿಕೊಳ್ಳಬಹುದಾಗಿದೆ. ಮುಂದೆ ಎದುರಾಗಬಹುದಾದ ಮೆಡಿಕಲ್ ಎಮರ್ಜೆನ್ಸಿಗೆ ಈಗಿನಿಂದಲೇ ಸಜ್ಜಾಗುವುದು ಸೂಕ್ತ, ಈ ದಿಸೆಯಲ್ಲಿ ಸರ್ಕಾರ ಮತ್ತು ಜನ ಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕಿದೆ ಎಂದರು.
ಕೊಡಗಿನ ವಿದ್ಯಾವಂತ ಯುವ ಯುವತಿಯರೆಲ್ಲರೂ ಉದ್ಯೋಗ ನಿಮಿತ್ತ ಬೆಂಗಳುರಿಗೆ ವಲಸೆ ಹೋಗಿದ್ದಾರೆ ಅಷ್ಟೇ ಅಲ್ಲ ವರ್ಷದಿಂದ ವರ್ಷಕ್ಕೆ ಈ ವಲಸೆ ಜಾಸ್ತಿಯಾಗುತ್ತಲೇ ಸಾಗಿದೆ. ಸಾವಿರಾರು ಜನರು ಅಲ್ಲೇ ಬದುಕು ಕಟ್ಟಿಕೊಂಡು ಮನೆ ಮಠ ಮಾಡಿಕೊಂಡಿದ್ದಾರೆ. ಇನ್ನು ಬೆರಳೆಣಿಕೆಯಷ್ಟು ಶ್ರೀಮಂತ ವರ್ಗ ಕೊಡಗಿನಲ್ಲಿ ತೋಟ ಮನೆ ಹೊಂದಿದ್ದು ಬೆಂಗಳೂರಿನಲ್ಲೂ ಮನೆ ಹೊಂದಿದೆ. ಇವರು ವರ್ಷದ ಅರ್ಧ ಸಮಯ ಬೆಂಗಳೂರಿನಲ್ಲೇ ಇರುತ್ತಾರೆ. ಅದರೆ ಈಗ ಬೆಂಗಳೂರಿನಿಂದ ಕೊಡಗಿಗೆ ತದ್ವಿರುದ್ದ ವಲಸೆ ಪರ್ವ ಆರಂಬಗೊಂಡಿದೆ. ಈ ರೀತಿ ಬರುತ್ತಿರುವವರು ತಮ್ಮ ಜತೆಗೇ ಭೀಕರ ಸೋಂಕನ್ನೂ ಹೊತ್ತು ತರುತಿದ್ದಾರೆ. ಇದರಿಂದಾಗಿ ಕೊಡಗಿನಲ್ಲಿ ಸೋಂಕಿತ ಸಂಖ್ಯೆ ಏರಿಕೆಗೆ ಮುಖ್ಯ ಕಾರಣವಾಗಿದೆ.











