ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ) ಹಗರಣ ನಾಲ್ಕನೆಯ ಜೀವಬಲಿ ಪಡೆದಿದೆ. ಎಂಬತ್ತು ವರ್ಷ ವಯಸ್ಸಿನ ಮುರಳೀಧರ ದರ್ರಾ, ಬೈಪಾಸ್ ಸರ್ಜರಿಗೆ ಹಣವಿಲ್ಲದೆ ಶುಕ್ರವಾರ ಮುಂಬಯಿಯಲ್ಲಿ ಮರಣ ಹೊಂದಿದರು. ದರ್ರಾ ಕುಟುಂಬದ ಪಿಎಂಸಿ ಖಾತೆಗಳಲ್ಲಿ ಸುಮಾರು 80 ಲಕ್ಷ ರುಪಾಯಿಯಷ್ಟು ಠೇವಣಿ ಇತ್ತು. ಹೃದಯ ಬೇನೆಯಿಂದ ಬಳಲಿದ್ದ ದರ್ರಾ ಅವರನ್ನು ಇದೇ 11ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಬೈಪಾಸ್ ಸರ್ಜರಿ ಆಗಬೇಕೆಂದರು ವೈದ್ಯರು. ಹಣಕ್ಕಾಗಿ ಅರ್ಜಿ ಸಲ್ಲಿಸಿದರೆ ಅದನ್ನು ಭಾರತೀಯ ರಿಸರ್ವ್ ಬ್ಯಾಂಕಿಗೆ ರವಾನಿಸಿ ಕುಳಿತಿತು ಪಿ. ಎಂ. ಸಿ. ಬ್ಯಾಂಕು.
ದರ್ರಾ ಕುಟುಂಬ ನೆರೆಹೊರೆಯವರ ಬಳಿ ಹಣ ಬೇಡಿತು. ಆದರೆ ಅವರ ಹಣವೂ ಪಿ.ಎಂ.ಸಿ. ಬ್ಯಾಂಕಿನ ಖಾತೆಗಳಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ತಮ್ಮ ಬೈಪಾಸ್ ಸರ್ಜರಿಗೆ ಬ್ಯಾಂಕಿನಿಂದ ಹಣ ಒದಗಲಿಲ್ಲ ಎಂಬ ಕಟು ವಾಸ್ತವ ಆಸ್ಪತ್ರೆಯಲ್ಲಿ ಮಲಗಿದ್ದ ಮುರಳೀಧರ ಅವರಿಗೆ ತಿಳಿಯಿತು. ಕುಟುಂಬದ ನಿರ್ವಹಣೆ ಹೇಗೆ ಮಾಡಲಿದ್ದೀ ಎಂದು ಮಗನನ್ನು ಕೇಳಿದರು. ನಿಧನರಾದರು. ಕಳೆದ ವಾರ ನಿಧನರಾದ ಐವತ್ತೊಂಬತ್ತು ವಯಸ್ಸಿನ ಫಟ್ಟೋಮಲ್ ಪಂಜಾಬಿ ಕೂಡ ಪಿ. ಎಂ. ಸಿ. ಯಲ್ಲಿ ಹಣ ಇಟ್ಟವರೇ. ದರ್ರಾ ಕುಟುಂಬದ ನೆರೆಹೊರೆಯಲ್ಲಿ ವಾಸವಾಗಿದ್ದವರು. ತಮ್ಮ ಹಣ ಮುಳುಗಿತೆಂದು ತೀವ್ರ ಖಿನ್ನತೆಗೆ ಈಡಾಗಿದ್ದ 39ರ ಹರೆಯದ ಡಾ. ನಿವೇದಿತಾ ಬಿಜಲಾನಿ ನಿದ್ದೆ ಗುಳಿಗೆ ನುಂಗಿ ಆತ್ಮಹತ್ಯೆ ಮಾಡಿಕೊಂಡರು. ತೆರಿಗೆ ಪಾವತಿ ಮಾಡುವ ಕಾನೂನು ಪರಿಪಾಲಿಸುವ ಸಂಬಳದಾರರು, ಕೂಲಿಕಾರರು, ಬೀದಿ ಬದಿಯ ವ್ಯಾಪಾರಸ್ಥರು ಬೆವರು ಸುರಿಸಿ ಗಳಿಸಿ ಇರಿಸಿದ ಠೇವಣಿಯಿದು.
ಮುಚ್ಚಿ ಹೋದ ವಾಯು ಸಾರಿಗೆ ಸಂಸ್ಥೆಯೊಂದರ ಉದ್ಯೋಗಿ 51 ವರ್ಷ ವಯಸ್ಸಿನ ಸಂಜಯ ಗುಲಾಟಿ ಪಿ.ಎಂ.ಸಿ.ಯಲ್ಲಿ 90 ಲಕ್ಷ ರುಪಾಯಿ ಠೇವಣಿ ಇಟ್ಟಿದ್ದರು. ಬ್ಯಾಂಕ್ ವಿರುದ್ಧ ನಿತ್ಯ ಜರುಗುತ್ತಿದ್ದ ಪ್ರದರ್ಶನಗಳಲ್ಲಿ ಎಂಬತ್ತು ವಯಸ್ಸಿನ ತಂದೆಯೊಡನೆ ಭಾಗವಹಿಸುತ್ತಿದ್ದರು ಗುಲಾಟಿ. ಪ್ರದರ್ಶನ ನಡೆಸಿ ಮನೆಗೆ ಮರಳಿದ್ದ ಗುಲಾಟಿ ರಾತ್ರಿ ಊಟದ ಹೊತ್ತಿಗೆ ಹೃದಯಾಘಾತದಿಂದ ನಿಧನರಾದರು. ಅಂಗ ಊನತೆಯಿಂದ ಬಳಲಿರುವ ಮಗುವಿನ ತಾಯಿ, ವಿವಾಹದ ಕನಸು ಕಾಣುತ್ತಿದ್ದ ಯುವಕ, ಮನೆಗೆಲಸ ಮಾಡುತ್ತ ಮಗಳನ್ನು ಕಾಲೇಜಿಗೆ ಕಳಿಸಲು ಹಣ ಕೂಡಿಡುತ್ತಿದ್ದ ಅಮ್ಮ, ತಲೆಯ ಮೇಲೊಂದು ಸೂರಿನ ಆಸೆ ಹೊತ್ತಿದ್ದ ಟ್ರ್ಯಾವೆಲ್ ಆಪರೇಟರ್…….. ಇಂತಹ ಸಾವಿರಾರು ಮಂದಿಯ ಕನಸುಗಳನ್ನು, ನಿರೀಕ್ಷೆ ನಂಬಿಕೆಗಳನ್ನು ನೆಲಕ್ಕೆ ಅಪ್ಪಳಿಸಿದ ಹಗರಣವಿದು.
ದಿವಾಳಿ ಎದ್ದಿರುವ ವಸತಿ ಅಭಿವೃದ್ಧಿ ಮತ್ತು ಮೂಲಸೌಲಭ್ಯ ಲಿಮಿಟೆಡ್ ಎಂಬ ಸಂಸ್ಥೆಗೆ ನೀಡಿದ್ದ ಮರಳಿ ಬಾರದ ಸಾಲವನ್ನು ಮುಚ್ಚಿಡಲು 21 ಸಾವಿರ ನಕಲಿ ಖಾತೆಗಳನ್ನು ತೆರೆಯಲಾಗಿತ್ತು. ಈ ಹಗರಣದ ಸೂತ್ರಧಾರಿಯಾದ ಪಿ.ಎಂ.ಸಿ. ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಜಾಯ್ ಥಾಮಸ್ ಜೈಲು ಪಾಲಾಗಿದ್ದಾನೆ. ಸಾಲ ಪಡೆದ ಎಚ್.ಡಿ.ಐ.ಎಲ್. ನ ಹಿರಿಯ ಕಾರ್ಯನಿರ್ವಾಹಕರಾದ ಸಾರಂಗ ವಾಧ್ವಾ, ರಾಕೇಶ್ ವಾಧ್ವಾ ಹಾಗೂ ಅಧ್ಯಕ್ಷ ವರಯಮ್ ಸಿಂಗ್ ಅವರನ್ನು ಬಂಧಿಸಲಾಗಿದೆ.
ಪಿ.ಎಂ.ಸಿ. ಬಿಕ್ಕಟ್ಟು ಸಾಂಕ್ರಾಮಿಕ ರೂಪ ತಳೆದು ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ ಹಬ್ಬುವ ಅಪಾಯ ಇದೆಯೇ….ಬ್ಯಾಂಕುಗಳಲ್ಲಿನ ತಮ್ಮ ಠೇವಣಿಗಳೂ ಮುಳುಗಲಿವೆಯೇ ಎಂಬ ಕಳವಳ ಖಾತೆದಾರರನ್ನು ಕಾಡತೊಡಗಿದೆ. ಬ್ಯಾಂಕ್ ಖಾತೆಗಳಿಂದ ಹಣ ವಾಪಸು ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
4,355 ಕೋಟಿ ರುಪಾಯಿ ಹಗರಣವಿದು. ಪಿ.ಎಂ.ಸಿ. ಬ್ಯಾಂಕು ಮರಳಿ ಬಾರದ ತನ್ನ ಸಾಲಗಳ ವಿವರಗಳನ್ನು ಬಚ್ಚಿಟ್ಟಿತ್ತು. ಭಾರೀ ಪ್ರಮಾಣದ ಈ ಅವ್ಯವಹಾರ ಕಂಡು ಬಂದ ನಂತರ, ಈ ಬ್ಯಾಂಕಿನಿಂದ ಹಣ ವಾಪಸು ಪಡೆಯುವುದರ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಿದ ರಿಸರ್ವ್ ಬ್ಯಾಂಕ್ ಕ್ರಮ ಆತಂಕ, ಹತಾಶೆ ಹಾಗೂ ಆಕ್ರೋಶದ ಅಲೆಗಳನ್ನೇ ಎಬ್ಬಿಸಿತು. ಆರು ತಿಂಗಳಿಗೊಮ್ಮೆ ಒಂದು ಸಾವಿರ ರುಪಾಯಿಯನ್ನು ಮಾತ್ರವೇ ವಾಪಸು ಪಡೆಯಬಹುದೆಂಬ ನಿರ್ಬಂಧ ಬ್ಯಾಂಕಿನ ಗ್ರಾಹಕರಲ್ಲಿ ಹಾಹಾಕಾರ ಮೂಡಿಸಿತು. ಆನಂತರ ಈ ಮಿತಿಯನ್ನು ಇದೇ ಅಕ್ಟೋಬರ್ 14ರಂದು 40 ಸಾವಿರ ರುಪಾಯಿಗೆ ಹೆಚ್ಚಿಸಲಾಯಿತು. ಇಬ್ಬರು ಠೇವಣಿದಾರರು ಹಣ ಸಿಗುವುದಿಲ್ಲವೆಂಬ ಆತಂಕದ ಒತ್ತಡದ ಕಾರಣ ಹೃದಯಾಘಾತಕ್ಕೆ ತುತ್ತಾದರು. ಮೂರನೆಯ ಠೇವಣಿದಾರ ಆತ್ಮಹತ್ಯೆ ಮಾಡಿಕೊಂಡರು. ನಾಲ್ಕನೆಯವರಾದ ಮುರಳೀಧರ ದರ್ರಾ ಬೈಪಾಸ್ ಸರ್ಜರಿಗೆ ಹಣವಿಲ್ಲದೆ ನಿಧನರಾದರು.
ಪಿ.ಎಂ.ಸಿ. ಬ್ಯಾಂಕಿಗೆ ಆರ್.ಬಿ.ಐ. ಆಡಳಿತಾಧಿಕಾರಿಯನ್ನು ನೇಮಿಸಿದೆ. ಈತ ಬ್ಯಾಂಕನ್ನು ದಡ ಮುಟ್ಟಿಸದೆ ಹೋದರೆ ಮತ್ತೊಂದು ಬ್ಯಾಂಕಿನೊಂದಿಗೆ ಪಿ.ಎಂ.ಸಿ.ಯನ್ನು ವಿಲೀನಗೊಳಿಸಬೇಕಿದೆ. 2004-2018ರ ನಡುವೆ ಮಹಾರಾಷ್ಟ್ರವೊಂದರಲ್ಲೇ 72 ಸಹಕಾರಿ ಬ್ಯಾಂಕುಗಳನ್ನು ಹೀಗೆ ವಿಲೀನಗೊಳಿಸಲಾಗಿದೆ.
ಬ್ಯಾಂಕು ಪರಿಸಮಾಪ್ತಿಯಾದಲ್ಲಿ (ಲಿಕ್ವಿಡೇಷನ್), ತಾವು ಇರಿಸಿದ್ದ ಠೇವಣಿಯ ಮೊತ್ತ ಎಷ್ಟೇ ಇದ್ದರೂ, ಠೇವಣಿದಾರರಿಗೆ ತಲಾ ಒಂದು ಲಕ್ಷ ರುಪಾಯಿ ನೀಡಲಾಗುತ್ತದೆ. ಭಾರತೀಯ ಬ್ಯಾಂಕ್ ವ್ಯವಸ್ಥೆಗೆ ಹಿಡಿದಿರುವ ಆಳದ ಗೆದ್ದಲಿನ ಪ್ರತೀಕಗಳ ಪೈಕಿ ಪಿ.ಎಂ.ಸಿ. ಹಗರಣವೂ ಒಂದು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಐ.ಎಲ್ ಅಂಡ್ ಎಫ್.ಎಸ್., ಲಕ್ಷ್ಮೀವಿಲಾಸ ಬ್ಯಾಂಕ್ ಮತ್ತಿತರೆ ಖಾಸಗಿ ಬ್ಯಾಂಕುಗಳ ಹಗರಣಗಳ ನಂತರ ಇದೀಗ ಪಿ.ಎಂ.ಸಿ. ಸರದಿ. ಈ ಎಲ್ಲ ಹಗರಣಗಳ ಸಮಾನ ಎಳೆ ಪರಿಣಾಮಕಾರಿ ಉಸ್ತುವಾರಿಯ ಕೊರತೆ ಅರ್ಥಾತ್ ಭಾರತೀಯ ರಿಸರ್ವ್ ಬ್ಯಾಂಕಿನ ಉಸ್ತುವಾರಿ ವೈಫಲ್ಯ. ಸತತ ನಿಗಾ ಇರಿಸಿದ್ದರೆ ಈ ಹಗರಣಗಳನ್ನು ತಪ್ಪಿಸಬಹುದಿತ್ತು ಎನ್ನುತ್ತಾರೆ ಹಣಕಾಸು ತಜ್ಞರು. ವಿಶೇಷವಾಗಿ ಸಹಕಾರಿ ಬ್ಯಾಂಕುಗಳು ಆಯಾ ರಾಜ್ಯ ಸರ್ಕಾರಗಳು ಮತ್ತು ರಿಸರ್ವ್ ಬ್ಯಾಂಕ್ ನ ಜಂಟಿ ಉಸ್ತುವಾರಿಯಲ್ಲಿ ಕೆಲಸ ಮಾಡುತ್ತವೆ. ರಿಸರ್ವ್ ಬ್ಯಾಂಕ್ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯದ ತಪ್ಪಿಗೆ ಬರೆ ಎಳೆಸಿಕೊಳ್ಳುತ್ತಿರುವವರು ಅಮಾಯಕರಾದ ಸಾಮಾನ್ಯ ಠೇವಣಿದಾರರು.
ಅಸಂಘಟಿತ ವಲಯಕ್ಕೆ ಹಣಕಾಸಿನ ನೆರವಿನ ಬಹುದೊಡ್ಡ ಮೂಲ ಸಹಕಾರಿ ಬ್ಯಾಂಕುಗಳು. ದೊಡ್ಡ ವಾಣಿಜ್ಯ ಬ್ಯಾಂಕುಗಳು ಮೂಸಿಯೂ ನೋಡದ ವಲಯವಿದು.
ಎ.ಟಿ.ಎಂ.ಗಳಲ್ಲಿ ಈ ಮೊದಲಿನಂತೆ ಹಣ ದೊರೆಯುತ್ತಿಲ್ಲ. ಲಕ್ಷಾಂತರ ಎಟಿಎಂ ಗಳು ಮುಚ್ಚಿ ಹೋಗಿವೆ. ಉಳಿದವುಗಳಲ್ಲಿ ಬಯಸಿದಷ್ಟು ಹಣ ಸಿಗುತ್ತಿಲ್ಲವೆಂಬ ದೂರುಗಳಿವೆ. ಬ್ಯಾಂಕುಗಳ ಮೇಲಿನ ಅದರಲ್ಲೂ ವಿಶೇಷವಾಗಿ ಸಹಕಾರಿ ಬ್ಯಾಂಕಗಳ ಕುರಿತ ಸಾರ್ವಜನಿಕ ಭರವಸೆ ಆವಿಯಾಗತೊಡಗಿದೆ. ವಾಟ್ಸ್ಯಾಪ್ ನಂತಹ ಅಂತರ್ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಹೆದರಿದವರ ಮೈಮೇಲೆ ಹಾವು ಎಸೆದಂತಾಗಿದೆ.
8,383 ಕೋಟಿ ರುಪಾಯಿಗಳ ಠೇವಣಿ ಹೊಂದಿದ್ದ ಪಿ.ಎಂ.ಸಿ. ಬ್ಯಾಂಕು, ಈ ಪೈಕಿ 6,500 ಕೋಟಿ ರುಪಾಯಿಗಳನ್ನು ಎಚ್.ಡಿ.ಐ.ಎಲ್.ಗೆ ಸಾಲವಾಗಿ ನೀಡಿತ್ತು. ಎಚ್.ಡಿ.ಐ.ಎಲ್. ನಿರ್ದೇಶಕರು ಮತ್ತು ಪ್ರವರ್ತಕರ ಒಡೆತನದ ಎರಡು ಖಾಸಗಿ ಜೆಟ್ ವಿಮಾನಗಳು, ಹಲವಾರು ವಿಲಾಸೀ ಕಾರುಗಳು, ವಿಹಾರಿ ನಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುರುತಿಸಿರುವ ಮತ್ತು ವಶಕ್ಕೆ ಪಡೆಯಲಾಗಿರುವ ಇಂತಹ ಆಸ್ತಿಪಾಸ್ತಿಗಳ ಮೌಲ್ಯ 3,830 ಕೋಟಿ ಎನ್ನಲಾಗಿದೆ.
ಬ್ಯಾಂಕ್ ಲೈಸೆನ್ಸ್ ರದ್ದು ಅಥವಾ ಬ್ಯಾಂಕಿನ ಪರಿಸಮಾಪ್ತಿಯಾಗುವ ಸನ್ನಿವೇಶಗಳಲ್ಲಿ ಠೇವಣಿದಾರರ ಹಿತ ಕಾಯಲು ಠೇವಣಿ ವಿಮೆ ಯೋಜನೆಯನ್ನು ಕೇಂದ್ರ ಸರ್ಕಾರ 1962ರಲ್ಲಿ ಜಾರಿ ಮಾಡಿತ್ತು. ಆರಂಭದಲ್ಲಿ 1,500ರೂಪಾಯಿವರೆಗಿನ ಠೇವಣಿಗೆ ವಿಮೆ ಸೌಲಭ್ಯ ಒದಗಿಸಲಾಗಿತ್ತು. ಕಾಲ ಕಾಲಕ್ಕೆ ಈ ಮೊತ್ತವನ್ನು ಮರುವಿಮರ್ಶೆ ಮಾಡಿ ನಿಗದಿ ಮಾಡಲಾಗುತ್ತಿತ್ತು. 1993ರಲ್ಲಿ ಈ ಮೊತ್ತ ಒಂದು ಲಕ್ಷಕ್ಕೆ ಏರಿತು. ಆನಂತರ ಮರುವಿಮರ್ಶೆ ನಡೆದೇ ಇಲ್ಲ. ಬೆಲೆ ಏರಿಕೆ ಮತ್ತು ಹಣದುಬ್ಬರ ದರಗಳ ಪ್ರಕಾರ ವಿಮಾ ಮೊತ್ತವನ್ನು ಈಗ ಐದು ಲಕ್ಷ ರುಪಾಯಿಗಳಿಗೆ ಏರಿಸಬೇಕಿದೆ.
ಠೇವಣಿದಾರರನ್ನು ಈ ಹಗರಣ ತೀವ್ರ ಸಂಕಟಕ್ಕೆ ತಳ್ಳಿದೆ. ವ್ಯಾಪಕ ಪ್ರತಿಭಟನೆಗಳು ಜರುಗಿವೆ. ಆದರೆ ಪರಿಹಾರ ಈವರೆಗೆ ಮರೀಚಿಕೆಯಾಗಿಯೇ ಉಳಿದಿದೆ. ಜನಸಾಮಾನ್ಯರ ಉಳಿತಾಯದ ಹಣವನ್ನು ಕಾಪಾಡದೆ ಹೋದ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಆಕ್ರೋಶ ನಿರಾಧಾರ ಅಲ್ಲ.