ಭಾನುವಾರ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆ, ಇಡೀ ದೇಶವನ್ನು ಬೆಂಗಳೂರಿನೆಡೆಗೆ ತಿರುಗಿ ನೋಡುವಂತೆ ಮಾಡಿತ್ತು. ಆಶಾ ಕಾರ್ಯಕರ್ತೆಯರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ‘ಪ್ರತಿಧ್ವನಿ’ ವಿಸ್ತೃತವಾದ ವರದಿಯನ್ನು ಪ್ರಕಟಿಸಿತ್ತು ಕೂಡಾ. ಇಂತಹ ಸಂದರ್ಭದಲ್ಲಿ ಒಂದು ಸಮುದಾಯದ ಮನ ಒಲಿಸಲು ಸಾಧ್ಯವಿರುವ ಪ್ರಬಲ ನಾಯಕರು ಮುಂದೆ ಬಂದು ಮೌನ ಮುರಿಯುವ ಅಗತ್ಯತೆಯನ್ನು ‘ಪ್ರತಿಧ್ವನಿ’ ಎತ್ತಿ ಹಿಡಿದಿತ್ತು.
ಪಾದರಾಯನಪುರದಲ್ಲಿ ನಡೆದ ಗಲಭೆ ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುವಂತದ್ದು. ಪ್ರಪಂಚದೆಲ್ಲೆಡೆ ಕೋವಿಡ್-19 ಎನ್ನುವ ಮಹಾಮಾರಿ ರುದ್ರ ತಾಂಡವವಾಡುತ್ತಿರುವ ಈ ಸಮಯದಲ್ಲಿ, ಕರೋನಾ ವಿರುದ್ದ ಹೋರಾಟಕ್ಕೆ ಇಳಿದಿರುವಂತಹ ಆರೋಗ್ಯ ವಲಯದ ಕಾರ್ಯಕರ್ತರು ಹಾಗೂ ಪೊಲೀಸ್ ಸಿಬ್ಬಂದಿಗಳ ಮೇಲೆ ನಡೆದಂತಹ ದಾಳಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಸಮಾಜಘಾತುಕ ಶಕ್ತಿಗಳಿಗೆ ಕಾನೂನಿಡಿಯಲ್ಲಿ ಶಿಕ್ಷೆ ಆಗಬೇಕಾಗಿರುವುದು ಕೂಡಾ ಈ ಕ್ಷಣದ ಅಗತ್ಯತೆ.
ಇಷ್ಟೆಲ್ಲಾ ದೊಂಬಿ ಗಲಭೆಗಳ ನಡುವೆ ಇಂತಹ ಘಟನೆಗೆ ಕುಮ್ಮಕ್ಕು ನೀಡಲು ಇರುವಂತಹ ಕಾರಣಗಳನ್ನು ಕೂಡಾ ಇಲ್ಲಿ ಅವಲೋಕಿಸುವುದು ಅನಿವಾರ್ಯವಾಗಿದೆ. ನಿಮಿಷಕ್ಕೊಂದರಂತೆ ಬ್ರೇಕಿಂಗ್ ನ್ಯೂಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಮಾಧ್ಯಮಗಳು ಇಂದು ಒಂದಿಡೀ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸಿ ದೋಷಾರೋಪಣೆಯನ್ನು ಮಾಡಿ ತೀರ್ಪು ನೀಡಿಯೂ ಆಯಿತು. ಈಗ ಪಾದರಾಯನಪುರದ ಪರಿಸ್ಥಿತಿ ಹತೋಟಿಗೆ ಬಂದಿದೆ. ಸ್ಥಳೀಯ ರಾಜಕೀಯ ನಾಯಕರ ಮನವೊಲಿಕೆಯ ನಂತರ ಕ್ವಾರಂಟೈನ್‌ಗೆ ಒಳಗಾಗಬೇಕಿದ್ದ 55 ಜನರು ಕ್ವಾರಂಟೈನ್ ಕೇಂದ್ರಗಳಿಗೆ ತೆರಳಿದರು.
ಈ ಘಟನೆಯ ಹಿನ್ನೆಲೆಯಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಬಿಬಿಎಂಪಿ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಬಂದಾಗ ಮನೆಯಿಂದ ಹೊರಬರಲು ಹಿಂದೇಟು ಹಾಕಿದ ವ್ಯಕ್ತಿಗಳು ಸ್ಥಳೀಯ ನಾಯಕರ ಮಾತುಗಳಿಂದ ಸ್ವಯಂ ಇಚ್ಚೆಯಿಂದ ಕ್ವಾರಂಟೈನ್‌ಗೆ ಒಳಪಡಲು ಏಕೆ ಒಪ್ಪಿದರು? ಬಿಬಿಎಂಪಿ ಅಧಿಕಾರಿಗಳು ಅಥವಾ ಆಶಾ ಕಾರ್ಯಕರ್ತೆಯರು, ಕ್ವಾರೈಂಟೈನ್ ಕುರಿತು ಅಲ್ಲಿನ ಜನರ ಮನಸ್ಸಿನಲ್ಲಿದ್ದ ಗೊಂದಲವನ್ನು ನಿವಾರಿಸುವಲ್ಲಿ ಯಶಸ್ವಿಯಾಗಲಿಲ್ಲವೇ? ಅಥವಾ ಕ್ವಾರೈಂಟೈನ್ ಕೇಂದ್ರಗಳ ಕುರಿತು ದೇಶದಾದ್ಯಂತ ಹಬ್ಬುತ್ತಿರುವ ಗಾಳಿಸುದ್ದಿಗಳು, ಪಾದರಾಯನಪುರದ ಸಾಮಾನ್ಯ ಜನರನ್ನು ಆತಂಕಕ್ಕೀಡು ಮಾಡಿತೇ? ಇಲ್ಲ ಒಂದಿಡೀ ಸಮುದಾಯವನ್ನು ʼಭಯೋತ್ಪಾದಕʼ(?)ರ ಸಾಲಿನಲ್ಲಿ ನಿಲ್ಲಿಸಿ ದಿನವಿಡೀ ಅರಚಾಡುವ ಮಾಧ್ಯಮದ ಸುದ್ದಿಗಳು ಜನರ ಆತಂಕಕ್ಕೆ ಕಾರಣವೇ? ಈ ಎಲ್ಲಾ ವಿಚಾರಗಳನ್ನು ವಿಶ್ಲೇಷಿಸುವ ಗೋಜಿಗೆ ಯಾರೂ ಹೋಗಲಿಲ್ಲ.
ಮೂರು ಮತ್ತು ಆರು ವರ್ಷದ ಮಗುವಿರುವ ತಾಯಿಯೊಬ್ಬರಿಗೆ ತಮ್ಮ ಮಕ್ಕಳನ್ನು ಕ್ವಾರೈಂಟೈನ್ ಸೆಂಟರ್‌ನಲ್ಲಿ ಯಾವ ರೀತಿ ಆರೈಕೆ ಮಾಡುತ್ತಾರೆ ಎನ್ನುವ ಆತಂಕ. ಈ ಆತಂಕವನ್ನು ದೂರ ಮಾಡಲು ಅಧಿಕಾರಿಗಳು ನಿಜವಾಗಿಯೂ ಪ್ರಯತ್ನಿಸಿದರೇ? ಕ್ವಾರೈಂಟೈನ್ ಸೆಂಟರ್‌ನಲ್ಲಿ ಸಣ್ಣ ಮಕ್ಕಳೊಂದಿಗೆ ತಾಯಿಯು ಇರಬಹುದೇ ಇಲ್ಲವೇ ಎನ್ನುವ ಸಾಮಾನ್ಯ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲಾಗದೇ ಹೋದರೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದು ಪಾದರಾಯನಪುರದ ಒಂದು ನಿದರ್ಶನವಷ್ಟೇ.
ಇನ್ನು ಈ ಕ್ವಾರೈಂಟೈನ್‌ಗೆ ಒಳಗಾಗಬೇಕಾದ 55 ಜನರಲ್ಲಿ ಮೂವರು ಮಕ್ಕಳಿದ್ದರು. ಇವರೊಂದಿಗೆ ಹರೆಯದ ಹೆಣ್ಣುಮಕ್ಕಳು ಸೇರಿದಂತೆ ಅನೇಕ ಮಹಿಳೆಯರೂ ಸೇರಿದ್ದರು. ರಾತ್ರಿ ಹೊತ್ತಿನಲ್ಲಿ ತಮ್ಮ ಮನೆಯ ಹುಡುಗಿಯರನ್ನು ಯಾವ ತಾಯಿ ತಾನೇ ಕಳುಹಿಸಿಕೊಡಲು ಸಾಧ್ಯ? ಇಂತಹ ಸೂಕ್ಷ್ಮವಾದಂತಹ ವಿಚಾರಗಳು ಇದ್ದಂತಹ ಸಂದರ್ಭದಲ್ಲಿ ಯಾವ ತಾಯಿ ಅಪರಿಚಿತರ ಮಾತನ್ನು ನಂಬುತ್ತಾಳೆ? ಎನ್ನುತ್ತಾರೆ ಪಾದರಾಯನಪುರದ ನಿವಾಸಿಯೊಬ್ಬರು.
ಆ ಕಾರಣಕ್ಕಾಗಿಯೇ, ಸ್ಥಳಿಯ ನಾಯಕರ ಜೊತೆಯಲ್ಲಿ ಅಧಿಕಾರಿಗಳು ಬಂದಿದ್ದರೆ, ಇಲ್ಲಿನ ನಿವಾಸಿಗಳನ್ನು ಮನವೊಲಿಸುವ ಜವಾಬ್ದಾರಿ ಅವರದಾಗಿತ್ತಿತ್ತು. ಅಷ್ಟಕ್ಕೂ ಜನರು ಅವರನ್ನು ತಮ್ಮ ಪ್ರತಿನಿಧಿಗಳೆಂದು ಆರಿಸಿ ಕಳುಹಿಸಿರುವುದು ಇಂತಹ ಸಂದರ್ಭದಲ್ಲಿ ಜನರ ಜೊತೆಗಿರಲು ಅಲ್ಲವೇ? ಒಂದು ವೇಳೆ ಸ್ಥಳೀಯ ನಾಯಕರ ಜೊತೆಗೂಡಿ ಅಧಿಕಾರಿಗಳು ಪ್ರತಿ ಮನೆಗಳಿಗೆ ಹೋಗಿದ್ದಲ್ಲಿ ಇಷ್ಟೆಲ್ಲಾ ಗಲಭೆಗಳು ನಡೆಯಲು ಆಸ್ಪದವೇ ಇರುತ್ತಿರಲಿಲ್ಲ.
ಇನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಕೋವಿಡ್ – 19ನ ಯಾವುದೇ ಪ್ರಕರಣವನ್ನು ಒಂದು ಕೋಮಿಗೆ ತಳುಕು ಹಾಕುವುದು ತಪ್ಪು ಎಂದು ಸಾರಾಸಗಟಾಗಿ ಹೇಳಿತ್ತು. ಆದರೆ, ಇಲ್ಲಿ ನಡೆಯುತ್ತಿರುವುದೇನು? ಸರ್ಕಾರದ ಮಂತ್ರಿಗಳು, ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಸಮೂಹ ಸನ್ನಿಗೆ ಒಳಗಾದಂತೆ ಒಂದು ಕೋಮಿನ ಜನರನ್ನು ಭಯೋತ್ಪಾದಕರೆಂದು ತೀರ್ಪನ್ನಿತ್ತಿರುವುದು ನಿಜಕ್ಕೂ ದುರ್ದೈವದ ವಿಚಾರ.
ಸಮಯ ಸಾಧಕ ಸಮಾಜಘಾತುಕ ಶಕ್ತಿಗಳು:
ಆಶಾ ಕಾರ್ಯಕರ್ತೆಯರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಎಲ್ಲರೂ ಕರೋನಾ ವಿರುದ್ದ ಹೋರಾಟ ನಡೆಸುತ್ತಿದ್ದರೆ, ಲಾಕ್‌ಡೌನ್ ಅಥವಾ ಸೀಲ್‌ಡೌನ್‌ನಿಂದಾಗಿ ಅಕ್ರಮ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗದೇ ಇರುವ ಗುಂಪೊಂದು, ಪಾದರಾಯನಪುರದಲ್ಲಿನ ಗೊಂದಲವನ್ನು ಬಳಸಿಕೊಂಡು ತನ್ನ ಬೇಳೆ ಬೇಯಿಸಲು ಪ್ರಯತ್ನಿಸಿದ್ದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಗಲಭೆಯೆಬ್ಬಿಸಲು ಪ್ರಮುಖ ಕಾರಣಳಾಗಿರುವ ಫರೂಝಾ ಅಲಿಯಾಸ್ ಲೇಡಿ ಡಾನ್ ಸೀಲ್‌ಡೌನ್ ವಿರುದ್ದ ಜನರನ್ನು ಎತ್ತಿಕಟ್ಟುವಂತಹ ಪ್ರಚೋದನಾಕಾರಿ ಸಂದೇಶಗಳನ್ನು ರವಾನಿಸುತ್ತಿದ್ದ ವಿಚಾರ ಈಗಾಗಲೇ ಬಯಲಾಗಿದೆ. ಕ್ವಾರೈಂಟೈನ್‌ಗೆ ಒಳಗಾಗಬೇಕಿದ್ದ ವ್ಯಕ್ತಿಗಳಲ್ಲಿ ಮೂಡಿದ್ದ ಗೊಂದಲ, ಭಯವನ್ನು ಮುನ್ನೆಲೆಯಲ್ಲಿಟ್ಟುಕೊಂಡು, ಕಳೆದ ಸುಮಾರು 30ಕ್ಕೂ ಹೆಚ್ಚು ದಿನಗಳಿಂದ ಲಾಕ್‌ಡೌನ್ ಹಾಗೂ ಸೀಲ್‌ಡೌನ್‌ನ ಕಾರಣದಿಂದ ಯಾವುದೇ ಅಕ್ರಮ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲದೇ ಇರುವಂತಹ ಸಮಾಜಘಾತುಕ ಶಕ್ತಿಗಳು ಮಾಡಿದ ಕೆಲಸಕ್ಕೆ ಇಂದು ಒಂದಿಡೀ ಸಮುದಾಯ ಬೆಲೆ ತೆರುತ್ತಿದೆ.
ಪಾದರಾಯನಪುರದ ಗಲಭೆಯನ್ನು ಕೇವಲ ಒಂದು ದೃಷ್ಟಿಕೋನದಲ್ಲಿ ನೋಡಲು ಸಾಧ್ಯವಿಲ್ಲ. ಈ ಘಟನೆಯ ಸುತ್ತಾ ಇರುವಂತಹ ಸನ್ನಿವೇಷಗಳನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ, ಯಾವ ರೀತಿ ದೇಶದ ಪ್ರತೀ ವಿಚಾರವೂ ಕೋಮುದ್ವೇಷದಲ್ಲಿ ಕೊನೆಗೊಳ್ಳುತ್ತದೆಯೋ, ಅದೇ ರೀತಿ ದೇಶವಿಡೀ ಒಗ್ಗಟ್ಟಾಗಿ ಹೋರಾಡಬೇಕಾದ ಸಂದರ್ಭವೂ ಕೋಮುದ್ವೇಷದ ರೂಪ ತಾಳುವಲ್ಲಿ ಯಾವುದೇ ಸಂದೇಹವಿಲ್ಲ.