ಕಳೆದ ವರ್ಷ ಜೂನ್, ಜುಲೈನಲ್ಲಿ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯೇ ಬೀಸುತ್ತಿತ್ತು. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಉಮೇದಿನಲ್ಲಿದ್ದರು. ಆಪರೇಷನ್ ಕಮಲ ಮೂಲಕ ಕಾಂಗ್ರೆಸ್, ಜೆಡಿಎಸ್‌ನಿಂದ ಬಂದವರಿಗೆಲ್ಲಾ ಸಚಿವ ಸ್ಥಾನದ ಭರವಸೆ ನೀಡಿ ಮುಂಬೈಗೆ ವಿಶೇಷ ವಿಮಾನ ಹತ್ತಿಸುತ್ತಿದ್ದರು. ಇದೀಗ ಬಿ ಎಸ್ ಯಡಿಯೂರಪ್ಪ ಒಂದು ವರ್ಷದ ಅಧಿಕಾರ ಅನುಭವಿಸಿದ್ದಾರೆ ಎನ್ನುವುದಕ್ಕಿಂತ ಒಂದು ವರ್ಷ ಸಿಎಂ ಆಗಿ ಸಾಕಷ್ಟು ಹಿಂಸೆ ಅನುಭವಿಸಿದ್ದಾರೆ ಎಂದರೂ ತಪ್ಪಾಗುವುದಿಲ್ಲ. ಕೇಂದ್ರದ ಅಸಹಕಾರ, ರಾಜ್ಯದಲ್ಲಿ ಪ್ರವಾಹ, ಸಚಿವ ಸಂಪುಟ ವಿಸ್ತರಣೆ ಸಂಕಷ್ಟ, ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಸೇರ್ಪಡೆಯಾದವರನ್ನು ಗೆಲ್ಲಿಸುವ ಹೊಣೆಗಾರಿಕೆ ಇದೆಲ್ಲವನ್ನು ಮಾಡಿ ಮುಗಿಸುವ ವೇಳೆಗೆ, ಕೊಟ್ಟ ಮಾತಿನಂತೆ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ್ದ ನಾಯಕರನ್ನು ಮಂತ್ರಿ ಮಾಡುವ ಮೂಲಕ ಕೊಟ್ಟ ಮಾತು ಉಳಿಸಿಕೊಳ್ಳುವ ಒತ್ತಡಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ಸಿಲುಕಿದ್ದಾರೆ.
ಪಕ್ಷಾಂತರಿಗಳಿಗೆ ಟಿಕೆಟ್ ಕೊಡಲ್ಲ ಯಾಕೆ..?
ಕಾಂಗ್ರೆಸ್, ಜೆಡಿಎಸ್‌ನಿಂದ ಗೆಲುವು ಸಾಧಿಸಿ ಆಪರೇಷನ್ ಕಮಲಕ್ಕೆ ತುತ್ತಾಗಿದ್ದ ಶಾಸಕರಲ್ಲಿ ಬಹುತೇಕರು ಗೆಲುವು ಸಾಧಿಸಿ ತಮ್ಮಿಚ್ಚೆಯಂತೆ ಸಚಿವರೂ ಆದರು. ಆದರೆ ಗ್ರಹಚಾರ ಕೆಟ್ಟಿದ್ದ ನಾಯಕರು ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಾಗದೆ ಸೋಲುಂಡು ಇದೀಗ ಪರಿಷತ್ ಸ್ಥಾನ ಸಿಗುತ್ತೋ ಇಲ್ಲವೋ ಎನ್ನುವ ಅಡಕತ್ತರಿಗೆ ಸಿಲುಕಿದ್ದಾರೆ. ಇದೇ ಕಾರಣದಿಂದ ಎಂಟಿಬಿ ನಾಗರಾಜ್ ಹಾಗೂ ಹೆಚ್ ವಿಶ್ವನಾಥ್ ದಿನಬಿಟ್ಟು ದಿನ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ. ಆದರೆ, ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗ್ತಿದೆ.
ಒಂದು ವೇಳೆ ಸಿಎಂ ಯಡಿಯೂರಪ್ಪ ಹಠ ಹಿಡಿದು ರಾಜ್ಯ ಕೋರ್ ಕಮಿಟಿಯಲ್ಲಿ ಟಿಕೆಟ್ ನೀಡುವಂತೆ ಪಟ್ಟಿ ಮಾಡಿ ಕಳುಹಿಸಿದರೂ ಕೇಂದ್ರ ಕೋರ್ ಕಮಿಟಿಯಿಂದ ತಿರಸ್ಕೃತವಾಗುವ ಎಲ್ಲಾ ಸಾಧ್ಯತೆಗಳು ಇದೆ ಎನ್ನುವ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದು ಬರುತ್ತಿದೆ. ಇದಕ್ಕೆ ಕೊಟ್ಟಿರುವ ಕಾರಣ ತುಂಬಾ ಬಲವಾಗಿದೆ.
ವಿಧಾನಸಭಾ ಉಪಚುನಾವಣೆಯೇ ಮುಳುವು..!
ಆಪರೇಷನ್ ಕಮಲ ಸಮಯದಲ್ಲಿ ಸಚಿವರನ್ನಾಗಿ ಮಾಡುವ ಭರವಸೆಯನ್ನು ಸಿಎಂ ಬಿ ಎಸ್ ಯಡಿಯೂರಪ್ಪ ಕೊಟ್ಟಿದ್ದರು. ಆದರೆ ವಿಧಾನಸಭಾ ಉಪ ಚುನಾವಣೆಯಲ್ಲಿ ಸೋಲುವ ಬಗ್ಗೆ ವರದಿ ಬಂದಿದ್ದರಿಂದ ಹೆಚ್ ವಿಶ್ವನಾಥ್ ಸೇರಿದಂತೆ ಆರ್ ಶಂಕರ್ ಹಾಗೂ ಕೆಲವು ನಾಯಕರಿಗೆ ಸ್ಪರ್ಧೆ ಮಾಡುವುದು ಬೇಡ, ಪರಿಷತ್‌ನಲ್ಲಿ ಅವಕಾಶ ಕೊಟ್ಟು ಸಚಿವರನ್ನಾಗಿ ಮಾಡುತ್ತೇವೆ ಎಂದಿದ್ದರು. ಎಂಟಿಬಿ ನಾಗರಾಜ್ ಕೂಡ ಹೊಸಕೋಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಶರತ್ ಬಚ್ಚೇಗೌಡ ವಿರುದ್ಧ ಸೋಲುಂಡಿದ್ದರು. ಆದರೆ ವಿಧಾನಸಭಾ ಉಪಚುನಾವಣೆ ವೇಳೆ ಪಟ್ಟು ಬಿಡದೆ ಸ್ಪರ್ಧೆ ಮಾಡಿದ್ದರು. ಆದರೆ, ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಇದೀಗ ಎರಡನೇ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಬಿಜೆಪಿಯಲ್ಲಿ ಮೂಲ ಕಾರ್ಯಕರ್ತರಿಗೆ ಮಣೆ ಹಾಕುವ ಎಲ್ಲಾ ಸಾಧ್ಯತೆಗಳಿದ್ದು, ಸೋತವರಿಗೆ ಮತ್ತೆ ಮಣೆ ಹಾಕಲು ವಿರೋಧ ವ್ಯಕ್ತವಾಗ್ತಿದೆ ಎನ್ನಲಾಗಿದೆ. ಇದರ ಬಗ್ಗೆ ಸುಳಿವು ಬಿಟ್ಟು ಕೊಟ್ಟಿರುವ ಡಿಸಿಎಂ ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಟಿಕೆಟ್‌ಗಾಗಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಅದರಲ್ಲಿ ಆರ್. ಶಂಕರ್ ಉಪ ಚುನಾವಣೆಗೆ ನಿಂತಿರಲಿಲ್ಲ. ಆರ್ ಶಂಕರ್ ಅವರಿಗೆ ಮಾತು ಕೊಟ್ಟಿದ್ದೇವೆ ಎನ್ನುವ ಮೂಲಕ ಮಾಜಿ ಸಚಿವ ಆರ್ ಶಂಕರ್‌ಗೆ ಪರಿಷತ್ ಟಿಕೆಟ್ ಖಚಿತ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಉಳಿದ ಮೂರು ಸ್ಥಾನಕ್ಕಾಗಿ ಎಂ.ಟಿ.ಬಿ.ನಾಗರಾಜ್, ಹೆಚ್. ವಿಶ್ವನಾಥ್ ಹಾಗೂ ಸಿಪಿ ಯೋಗೇಶ್ವರ್ ಸೇರಿದಂತೆ ಹಲವರು ಆಕ್ಷಾಂಕ್ಷಿಗಳಿದ್ದಾರೆ. ಪಕ್ಷದ ನಾಯಕರು ಈ ಬಗ್ಗೆ ತೀರ್ಮಾನ ಮಾಡ್ತಾರೆ. ಇವರೆಲ್ಲರೂ ಚುನಾವಣೆಯಲ್ಲಿ ಸೋತಿರುವ ಕಾರಣಕ್ಕೆ ಈಗ ಪರಿಷತ್ ಟಿಕೆಟ್ ಕೇಳ್ತಿದ್ದಾರೆ. ಅವರ ಬಗ್ಗೆ ಅನುಕಂಪ ಇದೆ ಎನ್ನುವ ಮೂಲಕ ಟಿಕೆಟ್ ಸಿಗುವುದು ಅನುಮಾನ ಎನ್ನುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ.
ಟಿಕೆಟ್ ಸಿಗುವುದು ಕಷ್ಟ ಎನ್ನುವ ಸಂದೇಶಕ್ಕೆ ಕಂಗಾಲು..!
ವಿಧಾನಪರಿಷತ್ ಟಿಕೆಟ್ ಸಿಗುವುದು ಅನುಮಾನ ಎನ್ನುವುದು ಗೊತ್ತಾಗ್ತಿದ್ದಂತೆ ಸಹೋದ್ಯೋಗಿಗಳ ಪರವಾಗಿ ಸಚಿವ ಎಸ್ ಟಿ ಸೋಮಶೇಖರ್ ಬ್ಯಾಟಿಂಗ್ ಮಾಡಿದ್ದಾರೆ. ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವರನ್ನಾಗಿ ಮಾಡುವುದಾಗಿ ಈ ಹಿಂದೆ ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದರು. ಬಿಜೆಪಿ ಸರ್ಕಾರ ಬರಲು ಕಾರಣರಾದವರನ್ನ MLC ಮಾಡಬೇಕು. ಎಂಟಿಬಿ ನಾಗರಾಜ್, ಹೆಚ್ ವಿಶ್ವನಾಥ್, ಆರ್ ಶಂಕರ್ ಹಾಗೂ ರೋಷನ್ ಬೇಗ್ ಅವರನ್ನು ಪರಿಷತ್‌ಗೆ ಆಯ್ಕೆ ಮಾಡಿ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ಪರಿಷತ್‌ಗೆ ಆಯ್ಕೆ ಮಾಡುವ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಜೊತೆ ಮಾತನಾಡಿದ್ದೇವೆ. ಸೋಮವಾರ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.
ಈಗಾಗಲೇ ಹೆಚ್ ವಿಶ್ವನಾಥ್, ಈ ವರ್ಷಾಂತ್ಯಕ್ಕೆ ರಾಜಕೀಯ ಧ್ರುವೀಕರಣ ಆಗಲಿದೆ ಎಂದಿದ್ದಾರೆ. ಅಂದರೆ ವಿಧಾನಪರಿಷತ್ ಟಿಕೆಟ್ ಸಿಗದಿದ್ದರೆ ಬಂಡಾಯ ಏಳುವ ಸಾಧ್ಯತೆ ಹೆಚ್ಚಾಗಿದೆ. ಎಂಟಿಬಿ ನಾಗರಾಜ್ ಕೂಡ ಭಾರೀ ಪೈಪೋಟಿ ನಡೆಸುತ್ತಿದ್ದು, ಟಿಕೆಟ್ ಸಿಗದಿದ್ದರೆ ಒಂದೇ ಪಕ್ಷದಲ್ಲಿ ಇದ್ದುಕೊಂಡು ಬಚ್ಚೇಗೌಡ ಜೊತೆಗೆ ಪೈಪೋಟಿ ನಡೆಸಬೇಕಾಗುತ್ತದೆ. ಆದರೆ ಅಧಿಕಾರದಲ್ಲಿ ಇರುವ ಬಚ್ಚೇಗೌಡ ಹಾಗೂ ಶರತ್ ಬಚ್ಚೇಗೌಡ ಮೇಲುಗೈ ಸಾಧಿಸುವ ಭೀತಿಯಲ್ಲಿದ್ದಾರೆ.
ಒಟ್ಟಾರೆ ಪರಿಷತ್‌ನಲ್ಲಿ ಟಿಕೆಟ್ ಕೊಡಿಸಿದರೂ ದೆಹಲಿಯಲ್ಲಿ ಸಂತೋಷ್ ಬದಲಾವಣೆ ಮಾಡಿಸುತ್ತಾರೆ, ಟಿಕೆಟ್ ಕೊಡಿಸದಿದ್ದರೆ ಮಾತಿಗೆ ತಪ್ಪಿದಂತಾಗುತ್ತದೆ ಎನ್ನುವ ಇಕ್ಕಟ್ಟಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಸಿಲುಕಿದ್ದಾರೆ. ಆದರೂ ಏನೂ ಮಾಡಲು ಸಾಧ್ಯವಿಲ್ಲ. ಪಕ್ಷ ನಿಷ್ಠರಿಗೆ ಮಣೆ ಹಾಕುವ ಶತಸಿದ್ಧ ಎನ್ನಲಾಗ್ತಿದೆ. ರಾಜಕೀಯ ಸಂಧ್ಯಕಾಲದಲ್ಲಿರುವ ಬಿ ಎಸ್ ಯಡಿಯೂರಪ್ಪ ಊಹೆಗೂ ನಿಲುಕದಂತೆ ಹಿಂಸೆ ಅನುಭವಿಸುವುದು ಶತಸಿದ್ಧ ಎನ್ನುವಂತಾಗಿದೆ.