ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ರೈತರ ಹೋರಾಟದ ಕಿಚ್ಚು ಹೆಚ್ಚುತ್ತಿರುವಂತೆಯೇ ಪಂಜಾಬಿನ ಮಾಜಿ ಮುಖ್ಯಮಂತ್ರಿ ಹಾಗೂ ಅಕಾಲಿ ದಳ ಮುಖಂಡ ಪರಕಾಶ್ ಸಿಂಗ್ ಬಾದಲ್ ಅವರು ಪದ್ಮ ವಿಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ಮರಳಿಸಿದ್ದಾರೆ. ನಿನ್ನೆಯಷ್ಟೇ ಪಂಜಾಬಿನ ಅನೇಕ ಕ್ರೀಡಾಪಟುಗಳೂ ಕೂಡ ತಮ್ಮ ಪದಕ ಮತ್ತು ಪ್ರಶಸ್ತಿಗಳನ್ನ ಹಿಂದಿರುಗಿಸಿ ರೈತರ ಹೋರಾಟಕ್ಕೆ ಕೈ ಜೋಡಿಸುತ್ತೇವೆಂದು ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ.
ಪರಕಾಶ್ ಸಿಂಗ್ ಬಾದಲ್ ಅವರ ಅಕಾಲಿ ದಳ ಪಕ್ಷ ಕೃಷಿ ಕಾಯ್ದೆ ರೂಪುಗೊಳ್ಳುವವರೆಗೂ ಎನ್‌ಡಿಎ ಮೈತ್ರಿಕೂಟದಲ್ಲೇ ಇತ್ತು. ಪಂಜಾಬಿನಲ್ಲಿ ಕೃಷಿ ಕಾಯ್ದೆ ವಿರುದ್ಧ ಬೃಹತ್ ಹೋರಾಟ ರೂಪುಗೊಳ್ಳುತ್ತಿದ್ದಂತೆಯೇ ಅಕಾಲಿ ದಳ ಎನ್ಡಿಎಯಿಂದ ಮೈತ್ರಿ ಕಡಿದುಕೊಂಡು ರೈತರ ಜೊತೆ ಪ್ರತಿಭಟನೆಗೆ ಇಳಿದಿತ್ತು. ಕನಿಷ್ಠ ಬೆಂಬಲ ಬೆಲೆಯನ್ನು ಕಾಯ್ದೆಯಲ್ಲಿ ಸೇರಿಸಬೇಕೆಂದು ಅಕಾಲಿ ದಳದ ಬೇಡಿಕೆಗೆ ಎನ್‌ಡಿಎ ಬೆಲೆ ಕೊಡದ ಹಿನ್ನೆಲೆಯಲ್ಲಿ ಬಾದಲ್ ಈ ನಿರ್ಧಾರ ತೆಗೆದುಕೊಂಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಕೇಂದ್ರ ತಂದಿರುವ ಕೇಂದ್ರದ ಕೃಷಿ ಮಾರುಕಟ್ಟೆಯ ಕಾಯ್ದೆಗಳು ಬಹಳ ಅಪಾಯಕಾರಿಯಾಗಿದ್ದು, ಈಗಾಗಲೇ ಬಳಲಿ ಬೆಂಡಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಿರೋಮಣಿ ಅಕಾಲಿ ದಳ ಪಕ್ಷ ಬಿಜೆಪಿಯ ಅತ್ಯಂತ ಹಳೆಯ ಮಿತ್ರಪಕ್ಷವಾಗಿದ್ದರೂ ರೈತರ ಭಾವನೆಗಳಿಗೆ ಗೌರವ ನೀಡಬೇಕೆಂದು ನಾವು ಮಾಡಿಕೊಂಡ ಮನವಿಗೆ ಸರ್ಕಾರ ಕಿವಿಗೊಡಲಿಲ್ಲ” ಎಂದು ಪರಕಾಶ್ ಸಿಂಗ್ ಬಾದಲ್ ಹೇಳಿದ್ದಾರೆ.
ಹಾಗೆಯೇ, ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತರಿಗೆ ದೇಶದ್ರೋಹಿಗಳು ಮತ್ತು ಖಲಿಸ್ತಾನಿಗಳು ಎಂದು ಹಣೆಪಟ್ಟಿ ಕಟ್ಟುತ್ತಿರುವ ಬಗ್ಗೆ ಶಿರೋಮಣಿ ಅಕಾಲಿ ದಳ ಮುಖ್ಯಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಪ್ರತಿಭಟನೆಯಲ್ಲಿ ವೃದ್ಧ ಮಹಿಳೆಯರೂ ಇದ್ದಾರೆ. ಅವರು ನಿಮ್ಮ ಕಣ್ಣಿಗೆ ಖಲಿಸ್ತಾನಿಗಳಂತೆ ಕಾಣುತ್ತಾರಾ? ಇದು ರೈತರಿಗೆ ಮಾಡಿರುವ ಅಪಮಾನ ಎಂದು ಸುಖಬೀರ್ ಸಿಂಗ್ ಬಾದಲ್ ಗುಡುಗಿದ್ಧಾರೆ.
ನಿನ್ನೆ ಒಲಿಂಪಿಕ್ ಹಾಕಿ ಚಿನ್ನ ವಿಜೇತ ಆಟಗಾರ ಗುರ್ಮೇಲ್ ಸಿಂಗ್ ಸೇರಿದಂತೆ ಹಾಲಿ ಮತ್ತು ಮಾಜಿ ಕ್ರೀಡಾಪಟುಗಳು ಕೂಡ ತಮ್ಮ ಪ್ರಶಸ್ತಿಗಳನ್ನ ವಾಪಸ್ ನೀಡುವುದಾಗಿ ಹೇಳಿದ್ದಾರೆ. ಒಲಿಂಪಿಕ್ ಹಾಕಿ ಆಟಗಾರ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಸಾಜನ್ ಸಿಂಗ್ ಚೀಮಾ, ಮಾಜಿ ಕುಸ್ತಿಪಟು ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತ ಕರ್ತಾರ್ ಸಿಂಗ್, ಮಾಜಿ ಹಾಕಿ ಆಟಗಾರ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಗುರ್ಮೇಲ್ ಸಿಂಗ್, ಮಾಜಿ ಮಹಿಳಾ ಹಾಕಿ ಆಟಗಾರ್ತಿ ರಾಜಬೀರ್ ಕೌರ್ ಮೊದಲಾದವರು ರೈತರ ಹೋರಾಟಕ್ಕೆ ಬೆಂಬಲವಾಗಿ ತಮ್ಮ ಪದಕ ಮತ್ತು ಪ್ರಶಸ್ತಿಗಳನ್ನ ಸರ್ಕಾರಕ್ಕೆ ಹಿಂದಿರುಗಿಸಲಿದ್ದಾರೆ.

ಡಿಸೆಂಬರ್ 5ರಂದು ರೈತರ ಜೊತೆ ದೆಹಲಿಗೆ ಹೋಗಲಿರುವ ಈ ಕ್ರೀಡಾಪಟುಗಳು ರಾಷ್ಟ್ರಪತಿ ಭವನದ ಹೊರಗೆ ತಮ್ಮ ಪ್ರಶಸ್ತಿಗಳನ್ನ ಇಟ್ಟು ಬರಲು ಯೋಜಿಸಿದ್ದಾರೆ.
“ನಾವು ರೈತರ ಮಕ್ಕಳಾಗಿದ್ದೇವೆ. ಹಲವಾರು ತಿಂಗಳುಗಳಿಂದ ಅವರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಒಂದೇ ಒಂದು ಹಿಂಸಾಚಾರ ಪ್ರಕರಣ ಆಗಿಲ್ಲ. ಇವರು ದೆಹಲಿಗೆ ಹೋಗಲು ಯತ್ನಿಸಿದಾಗ ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗ ಮಾಡಿ ಅವರ ಮುನ್ನಡೆ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ…. ನಮ್ಮ ಹಿರಿಯರು ಮತ್ತು ಸಹೋದರರ ಮುಂಡಾಸು ನೆಲಕ್ಕೆ ಬೀಳುತ್ತಿದ್ದರೆ ನಾವು ಪ್ರಶಸ್ತಿ, ಪದಕ ಇಟ್ಟುಕೊಂಡು ಏನು ಮಾಡುವುದು? ರೈತರಿಗೆ ನಮ್ಮ ಬೆಂಬಲ ಇದೆ. ನಮಗೆ ಈ ಪ್ರಶಸ್ತಿಗಳು ಬೇಕಿಲ್ಲ. ಅದಕ್ಕೆ ಅದನ್ನ ಮರಳಿಸುತ್ತಿದ್ದೇವೆ” ಎಂದು ಹಾಕಿ ಆಟಗಾರ ಸಾಜನ್ ಸಿಂಗ್ ಚೀಮಾ ತಿಳಿಸಿದ್ಧಾರೆ.
ಸರ್ಕಾರದ ಭೋಜನ ತಿರಸ್ಕರಿಸಿದ ರೈತರು:
ಇವತ್ತು ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಮಗದೊಂದು ಸುತ್ತಿನ ಮಾತುಕತೆಯಲ್ಲಿ ರೈತರು ತಮ್ಮ ಸ್ವಾಭಿಮಾನವನ್ನು ಸ್ವಲ್ಪವೂ ಬಿಟ್ಟುಕೊಟ್ಟಿಲ್ಲ. ಔತನಕೂಟ ನೀಡುವ ಸರ್ಕಾರದ ಆಫರ್ ಅನ್ನು ರೈತರು ತಿರಸ್ಕರಿಸಿದ್ದಾರೆ. “ಸರ್ಕಾರದಿಂದ ನೀಡುವ ಆಹಾರ ಮತ್ತು ಚಹಾವನ್ನು ನಾವು ಸ್ವೀಕರಿಸುವುದಿಲ್ಲ. ನಾವೇ ಊಟ ತರಿಸಿಕೊಂಡಿದ್ದೇವೆ” ಎಂದು ಈ ರೈತರು ಹೇಳಿದ್ದಾರೆ. ಮೊನ್ನೆ ಮಂಗಳವಾರ ಕೂಡ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅವರ ಚಹಾ ಕೂಟವನ್ನೂ ರೈತರು ತಿರಸ್ಕರಿಸಿದ್ದರು.







