ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಲೋಕಸಭಾ ಚುನಾವಣೆ ಸೋಲಿನ ಬಳಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಮನವೊಲಿಕೆ ಬಳಿಕವೂ ಅಧ್ಯಕ್ಷರಾಗಿ ಮುಂದುವರಿಯಲು ನಿರಾಕರಣೆ ಮಾಡಿದ್ದರಿಂದ ಮಧ್ಯಂತರ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಸೋನಿಯಾ ಅಧಿಕಾರವಧಿ ಇಂದಿಗೆ ಅಂತ್ಯವಾಗಿದೆ. ಆದರೆ ಪೂರ್ಣಾವಧಿ ಅಧ್ಯಕ್ಷರ ನೇಮಕ ಮಾಡುವ ತನಕ ಸೋನಿಯಾ ಗಾಂಧಿಯೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಪ್ರಸ್ತಾಪಕ್ಕೆ ವಿರೋಧಗಳೂ ಕೇಳಿ ಬಂದಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸೋನಿಯಾ ಗಾಂಧಿ ಮುಂದುವರಿಕೆಗೆ ಕಾಂಗ್ರೆಸ್ನ ತಿರುವನಂತಪುರಂ ಸಂಸದ ಶಶಿ ತರೂರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ ಪೂರ್ಣಾವಧಿ ಅಧ್ಯಕ್ಷರನ್ನು ಹುಡುಕಬೇಕು ಎಂದು ಸಲಹೆ ನೀಡಿದ್ದಾರೆ. ನೂತನ ಪೂರ್ಣಾವಧಿ ಅಧ್ಯಕ್ಷರನ್ನು ಹುಡುಕುವ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ನಾವೂ ಕೂಡ ಉತ್ತಮ ಅಧ್ಯಕ್ಷರನ್ನು ಆಯ್ಕೆ ಮಾಡಿ ಪ್ರಬಲ ವಿರೋಧ ಪಕ್ಷವಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಅದರೆ ಸೋನಿಯಾ ಅವರಿಂದ ಇದು ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.
ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಂಸತ್ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಕೂಡ ಸಿದ್ಧತೆ ನಡೆಸು ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಸೋನಿಯಾ ಗಾಂಧಿ ಕಳೆದ ತಿಂಗಳು ಕಾಂಗ್ರೆಸ್ ಸಂಸದರ ಸಭೆ ಕರೆದಿದ್ದರು. ಬಿಜೆಪಿ ವಿರುದ್ಧ ಹೋರಾಟ ಮಾಡುವ ಬಗ್ಗೆ ಚರ್ಚೆ ಮಾಡಲಾಯ್ತು. ಜೊತೆಗೆ ಆಗಸ್ಟ್ 10 ರಂದು ಮಧ್ಯಂತರ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರ ಅಧಿಕಾರವಧಿ ಕೂಡ ಅಂತ್ಯವಾಗುತ್ತಿರುವ ಬಗ್ಗೆ ಪ್ರಸ್ತಾಪ ಮಾಡಲಾಯ್ತು. ಈ ವೇಳೆ ಕಾಂಗ್ರೆಸ್ (Whip) ಮುಖ್ಯ ಸಚೇತಕ ಕೆ. ಸುರೇಶ್ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಬೇಕು ಎಂದು ಒತ್ತಾಯ ಮಾಡಿದರು. ಉಳಿದ ಸಂದರೂ ಸಹ ರಾಹುಲ್ ಗಾಂಧಿಯೇ ಮತ್ತೆ ಅಧ್ಯಕ್ಷರಾಗಲಿ ಎಂದು ಸಹಮತ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ನಡೆದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲೂ ರಾಹುಲ್ ಗಾಂಧಿ ಪುನಃ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವಂತೆ ಒತ್ತಡ ಹಾಕಲಾಗಿತ್ತು.
ಒಂದೇ ಕುಟುಂಬಕ್ಕೆ ಹುದ್ದೆ ಕೊಡುವುದು ಸೂಕ್ತವೇ..?
ಕಾಂಗ್ರೆಸ್ ಪಕ್ಷದ ಇತಿಹಾಸ ಕೆದಕಿದ್ರೆ ಬಹುತೇಕ ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ ಸಮಯದಿಂದಲೂ ಅವರ ಕುಟುಂಬಸ್ಥರೇ ಅಧ್ಯಕ್ಷರಾಗುವುದು. ಅವರೇ ಅಧಿಕಾರ ಅನುಭವಿಸುವುದು ನಡೆದುಕೊಂಡು ಬಂದಿರುವ ಸಂಗತಿ. ಕಾಂಗ್ರೆಸ್ ನಾಯಕರೂ ಸಹ ಅಧಿಕಾರದ ಲಾಲಸೆಯಿಂದ ಅವರ ಕುಟುಂಬದವರಿಗೆ ಜೈ ಎಂದುಕೊಂಡು ಬಂದಿರುವುದು ತಿಳಿಯಲಾರದ ಗುಟ್ಟೇನು ಅಲ್ಲ. ಗಾಂಧಿ ಕುಟುಂಬವನ್ನು ಅಧಿಕಾರದಿಂದ ದೂರ ಇಟ್ಟು ಅಧಿಕಾರ ಮಾಡಬೇಕು ಎನ್ನುವ ವಾದವೂ ಸರಿಯಲ್ಲ. ಆದರೆ ಒಂದೇರಡು ಬಾರಿ ಪ್ರಯೋಗ ಯಶಸ್ವಿಯಾಗದಿದ್ದರೆ ಬೇರೊಬ್ಬರನ್ನು ಆಯ್ಕೆ ಮಾಡಿ ಪ್ರಯೋಗ ಮಾಡುವುದು ಒಳಿತು.
ಕಾಂಗ್ರೆಸ್ನಲ್ಲೂ ಇದ್ದಾರೆ ಘಟಾನುಘಟಿ ನಾಯಕರು..!
ಕಾಂಗ್ರೆಸ್ ಪಕ್ಷದಲ್ಲಿ ಪ್ರಬಾವಿ ನಾಯಕರಿಲ್ಲದೆ ರಾಹುಲ್ ಗಾಂಧಿಯೇ ಅನಿವಾರ್ಯ ಎನ್ನುವಂತಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಸತ್ನ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ ಬಳಿಕವೇ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಮೋದಿಯೇ ಹೌಹಾರುವಂತೆ ಮಾತನಾಡಬಲ್ಲರು. ಭಾಷೆ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದಾರೆ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತಾಗಿದ್ದು. ಅದೇ ರೀತಿ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದ ಶಶಿತರೂರ್, ರಾಜಸ್ಥಾನ ಉಪಮುಖ್ಯಮಂತ್ರಿ ಸ್ಥಾನದಿಂದ ವಜಾ ಆಗಿರುವ ಸಚಿನ್ ಪೈಲಟ್ ಸೇರಿದಂತೆ ಸಾಕಷ್ಟು ನಾಯಕರಿದ್ದಾರೆ. ಕರ್ನಾಟಕದ ಸಿದ್ದರಾಮಯ್ಯ ಅವರನ್ನೇ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರೂ ರಾಷ್ಟ್ರಮಟ್ಟದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರಬಲ ಹೋರಾಟ ಮಾಡುವ ನಾಯಕರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಾಂಗ್ರೆಸ್ನಲ್ಲಿ ಬೇಕಾಗಿದೆ ಮಾರ್ಗದರ್ಶಕ ಮಂಡಳಿ
ಕಾಂಗ್ರೆಸ್ನಲ್ಲಿ ಸಾಕಷ್ಟು ಹಿರಿಯ ತಲೆಗಳು ಅಧಿಕಾರ ಅನುಭವಿಸುತ್ತಿರುವುದು ಕಾಂಗ್ರೆಸ್ ಅವನತಿಗೆ ಕಾರಣವಾಗಿದೆ. ಯಾವಾಗ ಕಿರಿಯರ ತಂಡ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ತಂದಾಗ, ಹಿರಿಯರು ಅಧಿಕಾರದ ಗದ್ದುಗೆ ಮೇಲೆ ಕೂರುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಯುವಕರೆಲ್ಲರೂ ಪಕ್ಷ ಬಿಟ್ಟು ಬೇರೆ ಕಡೆ ನೆಲೆ ಕಂಡುಕೊಳ್ಳುವ ಅನಿವಾರ್ಯ ಪರಿಸ್ಥಿತಿಗೆ ಮುಂದಾಗುತ್ತಾರೆ. ಅದೇ ಕಾರಣದಿಂದ ಹಿರಿಯ ನಾಯಕರನ್ನು ಒಂದೆಡೆ ಕೂರಿಸಿ ಮಾರ್ಗದರ್ಶಕ ಮಂಡಳಿ ರಚಿಸಿ ಒಬ್ಬೊಬ್ಬರಿಗೆ ಒಂದೊಂದು ಹುದ್ದೆ ಕೊಟ್ಟು ಕೂರಿಸಿದರೆ ಎಲ್ಲವೂ ಸರಿಯಾಗಲಿದೆ. ಆಗ ಯುವಕರ ಪಡೆಯನ್ನು ಹುರಿದುಂಬಿಸುತ್ತಾ ಪ್ರಬಲ ಪಕ್ಷವಾಗಿ ಹೊರ ಹೊಮ್ಮಬಹುದು. ಇಲ್ಲದಿದ್ದರೆ ಗಾಂಧಿ ಕುಟುಂಬಕ್ಕೆ ಸಲಾಂ ಹೇಳುತ್ತಾ, ಅವರು ಹೇಳಿದ್ದೇ ವೇದವಾಕ್ಯ ಎನ್ನುತ್ತಾ ಪಕ್ಷ ಸಂಘಟನೆಗೆ ತೊಡಕಾಗುವರು.
ಸಚಿನ್ ಪೈಲಟ್ ನಡೆಯೇನು..?
ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಒಂದು ಹೆಜ್ಜೆ ಹೊರಗಿಟ್ಟಿರುವ ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮಹತ್ವದ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ರಾಹುಲ್ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಆಗಸ್ಟ್ 14ರಿಂದ ರಾಜಸ್ಥಾನ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ಆ ಬಗ್ಗೆ ಚರ್ಚೆ ಆಗಿರಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕರು ಹೇಳಿದ್ದು, ಸಕಾರಾತ್ಮಕ ಫಲಿತಾಂಶ ಬರುವ ಸಾಧ್ಯತೆಯಿದೆ ಎಂದಿದ್ದಾರೆ. ಆದರೆ ರಾಹುಲ್ ಗಾಂಧಿ ರಾಜಸ್ಥಾನ ಬಿಕ್ಕಟ್ಟನ್ನು ಬಗಹರಿಸುವುವ ಉದ್ದೇಶದಿಂದ ಸಚಿನ್ ಪೈಲಟ್ಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಡುವ ಮೂಲಕ ಪಕ್ಷ ಸಂಘಟನೆಗೆ ಒತ್ತು ಕೊಡುತ್ತಾರೆಯೇ ಎನ್ನುವ ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ.
ಪ್ರಯೋಗ ಮಾಡುವುದರಲ್ಲಿ ತಪ್ಪೇನು ಇಲ್ಲ..!
ಮೂರು ಬಾರಿ ಗುಜರಾತ್ ಮುಖ್ಯಮಂತ್ರಿ ಆಗಿದ್ದರೂ ಪ್ರಧಾನಿ ಅಭ್ಯರ್ಥಿ ಆಗುವ ತನಕ ನರೇಂದ್ರ ಮೋದಿ ದೇಶದ ಬಹುತೇಕ ಜನರಿಗೆ ಗೊತ್ತಿರಲಿಲ್ಲ. ಅದೇ ರೀತಿ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುವ ತನಕ ಜನರಿಗೆ ಗೊತ್ತಿರಲಿಲ್ಲ. ಆದರೆ ಆ ಪ್ರಯೋಗಗಳು ಯಶಸ್ಸು ಸಾಧಿಸಲಿಲ್ಲವೇ..? ಅದೇ ರೀತಿ ಕಾಂಗ್ರೆಸ್ನಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿ, ಆ ಬಳಿಕ ಕಾಂಗ್ರೆಸ್ ಪಕ್ಷ ಸತತ ಎರಡು ಅವಧಿಗೆ ಚುನಾಯಿತ ಆಗಿರಲಿಲ್ಲವೇ..? ರಾಹುಲ್ ಗಾಂಧಿ ಪ್ರಯೋಗ ಯಶಸ್ಸು ಸಾಧಿಸಿಲ್ಲ. ಜನರು ತಿರಸ್ಕರಿಸಿದ ನಾಯಕನ್ನೇ ಕರೆತಂದು ಬಿಜೆಪಿ ಗೆಲುವಿಗೆ ಸಹಕಾರಿ ಆಗುವ ಬದಲು ಬೇರೊಬ್ಬ ನಾಯಕನ್ನು ಸಾರಥಿಯಾಗಿ ಮಾಡುವ ಮೂಲಕ ಬದಲಾವಣೆ ಮಾಡುವ ಅವಶ್ಯಕತೆ ಇದೆ. ಓಡುತ್ತಿರುವ ಬಿಜೆಪಿ ಕುದುರೆ ಎದುರು ಸೋತ ಕುದುರೆ ಬಿಡುವ ಬದಲು ಹೊಸ ಕುದುರೆಯನ್ನಾದರೂ ನಿಲ್ಲಿಸಿದರೆ ಕಾರ್ಯಕರ್ತರಲ್ಲೂ ಹುಮ್ಮಸ್ಸು ಬರುವುದು. ಹೊಸ ಕುದುರೆ ಎನ್ನುವ ಕಾರಣಕ್ಕಾದರೂ ಬಾಜಿ ಕಟ್ಟಲು ಜನ ಮುಂದೆ ಬರುತ್ತಾರೆ.