ಕರೋನಾ ಹಿನ್ನೆಲೆಯಲ್ಲಿ ರಾಜ್ಯ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಆರು ತಿಂಗಳ ಕಾಲ ಮುಂದೂಡಿರುವ ಸರ್ಕಾರ, ಆರು ತಿಂಗಳ ಅವಧಿಗೆ ಹಾಲಿ ಇರುವ ಆಡಳಿತವನ್ನೇ ಮುಂದುವರಿಸುವ ಬದಲು, ಏಕಾಏಕಿ ಆಡಳಿತಾಧಿಕಾರಿ ಅಥವಾ ಆಡಳಿತ ಮಂಡಳಿ ನೇಮಕ ಮಾಡುವ ನಿರ್ಧಾರ ಕೈಗೊಂಡಿರುವುದು ವಿವಾದಕ್ಕೆ ಎಡೆಮಾಡಿದೆ.
ಇದೇ ಮೇ 25ಕ್ಕೆ ಪಂಚಾಯ್ತಿ ಚುನಾವಣೆ ನಡೆದು ಐದು ವರ್ಷಗಳು ಪೂರೈಸುತ್ತವೆ. ರಾಜ್ಯದ ಸುಮಾರು 6,024 ಪಂಚಾಯ್ತಿಗಳ ಚುನಾಯಿತ ಸದಸ್ಯರ ಆಡಳಿತಾವಧಿ ಇನ್ನು ಕೆಲವೇ ದಿನಗಳಲ್ಲಿ ಅಂತ್ಯವಾಗುವ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಸಬೇಕಿತ್ತು. ಆದರೆ ರಾಜ್ಯದಲ್ಲಿ ಕರೋನಾ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸದ್ಯದ ಸ್ಥಿತಿಯಲ್ಲಿ ಚುನಾವಣೆ ನಡೆಸಲಾಗುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ, ಆರು ತಿಂಗಳ ಅವಧಿಗೆ ಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಕೋರಿತ್ತು. ಕರೋನಾ ಸಂಕಷ್ಟ ಮುಗಿಯುವವರೆಗೆ ಚುನಾವಣೆ ಸಂಬಂಧ ಯಾವುದೇ ತೀರ್ಮನ ಕೈಗೊಳ್ಳಲಾಗದು ಎಂದು ಆಯೋಗ ತಿಳಿಸಿತ್ತು.
ಆ ಹಿನ್ನೆಲೆಯಲ್ಲಿ ಸದ್ಯಕ್ಕೆ ಆರು ತಿಂಗಳ ಒಳಗೆ ಪಂಚಾಯ್ತಿಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ಜೂನ್ ಮತ್ತು ಜುಲೈ ವೇಳೆಗೆ ಪಂಚಾಯ್ತಿ ಸದಸ್ಯರು ಅಧಿಕಾರ ಸ್ವೀಕರಿಸಿ ಐದು ವರ್ಷಗಳ ಪೂರ್ಣಗೊಳ್ಳುವುದರಿಂದ ಅವರ ಅಧಿಕಾರವಧಿ ಮುಕ್ತಾಯವಾಗುತ್ತಿದೆ. ಹಾಗಾಗಿ, ಸರ್ಕಾರ ಈಗ ಹಾಲಿ ಇರುವ ಚುನಾಯಿತ ಆಡಳಿತ ಮಂಡಳಿಯನ್ನು ಮುಂದುವರಿಸಬೇಕಿದೆ, ಇಲ್ಲವೇ ದೈನಂದಿನ ಆಡಳಿತ ನಿರ್ವಹಣೆಗೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕಿದೆ. ಅಲ್ಲದೆ, ಪ್ರತ್ಯೇಕ ಆಡಳಿತ ಸಮಿತಿ ನೇಮಕ ಮಾಡುವ ಅವಕಾಶ ಕೂಡ ಇದೆ.
ಆದರೆ, ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ, “ಪಂಚಾಯ್ತಿಗಳ ಚುನಾಯಿತ ಆಡಳಿತದ ಅವಧಿ ಮುಗಿಯುವುದರಿಂದ ಆ ಸ್ಥಾನವನ್ನು ಖಾಲಿ ಬಿಡಲಾಗದು. ಹಾಗಾಗಿ ಆ ಸ್ಥಾನಕ್ಕೆ ಪ್ರತ್ಯೇಕ ಆಡಳಿತ ಮಂಡಳಿ ನೇಮಕ ಮಾಡಲು ನಿರ್ಧರಿಸಿದ್ದೇವೆ” ಎಂದಿದ್ದಾರೆ. ಶನಿವಾರ ಸಚಿವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಗ್ರಾಮ ಪಂಚಾಯ್ತಿ ಹಾಲಿ ಆಡಳಿತ ಮಂಡಳಿಗಳು ಮತ್ತು ಪಂಚಾಯ್ತಿ ಆಡಳಿತಗಳಿಗೆ ಸಂಬಂಧಿಸಿದ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಪ್ರಮುಖವಾಗಿ ಗ್ರಾಮ ಪಂಚಾಯ್ತಿ ಹಕ್ಕೊತ್ತಾಯ ಆಂದೋಲನ(ಜಿಪಿಎಚ್ ಎ)ದಂತಹ ಸಂಘಟನೆಗಳು ಸರ್ಕಾರದ ಇಂತಹ ಕ್ರಮ ಏಕಪಕ್ಷೀಯ ನಿರ್ಧಾರ. ಜೊತೆಗೆ ಇಡೀ ಪಂಚಾಯತ್ ರಾಜ್ ವ್ಯವಸ್ಥೆಯ ಆಶಯಕ್ಕೆ ತದ್ವಿರುದ್ಧವಾಗಿ ಗ್ರಾಮ ಆಡಳಿತವನ್ನು ವಿಕೇಂದ್ರೀಕರಣದಿಂದ ಕೇಂದ್ರೀಕರಣಕ್ಕೆ ಹೊರಳಿಸುವ ಯತ್ನ ಎಂದು ಟೀಕಿಸಿವೆ. ಪಂಚಾಯತ್ ರಾಜ್ ಕಾಯ್ದೆ 1993ರ ಅಡಿಯಲ್ಲಿಯೇ ಪಂಚಾಯ್ತಿಗಳಿಗೆ ಪ್ರತ್ಯೇಕ ಆಡಳಿತ ಮಂಡಳಿ ನೇಮಕಕ್ಕೆ ಮುಂದಾಗಿರುವುದಾಗಿ ಸಚಿವರು ಹೇಳಿದ್ದರೂ, ಸರ್ಕಾರದ ಈ ನಡೆಯ ಹಿಂದೆ ಪಂಚಾಯ್ತಿ ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮತ್ತು ಪಕ್ಷ ರಾಜಕಾರಣಕ್ಕೆ ಬಳಸಿಕೊಳ್ಳುವ ಲೆಕ್ಕಾಚಾರಗಳಿವೆ ಎಂಬುದು ಜಿಪಿಎಚ್ ಎ ವಾದ.
ಕರೋನಾ ಸಂಕಷ್ಟ, ನೆರೆ-ಪ್ರವಾಹದಂತಹ ಸಂದರ್ಭದಲ್ಲಿ ಹಾಲಿ ಪಂಚಾಯ್ತಿ ಆಡಳಿತಗಳು ಜನರ ಸಾವು-ನೋವುಗಳಿಗೆ ಸ್ಪಂದಿಸಿವೆ. ಕಳೆದ ಐದು ವರ್ಷಗಳಿಂದ ಜನರ ನಡುವೆ ಇದ್ದು ಅವರ ಸಮಸ್ಯೆ- ಸವಾಲುಗಳನ್ನು ಅರಿತುಕೊಂಡಿವೆ. ಆ ಹಿನ್ನೆಲೆಯಲ್ಲಿ ಅವರ ಅನುಭವ ಕರೋನಾ ಸಂದರ್ಭದಲ್ಲಿ ಜನರ ಜೀವ ರಕ್ಷಣೆಗೆ ಪೂರಕವಾಗಿ ಬಳಸಿಕೊಳ್ಳುವುದು ಜಾಣತನ. ಆದರೆ, ಅವಧಿ ಮುಗಿದ ನೆಪವನ್ನೇ ಮುಂದಿಟ್ಟುಕೊಂಡು ಸರ್ಕಾರ, ಹಾಲಿಆಡಳಿತ ಮಂಡಳಿಗಳನ್ನು ಮುಂದುವರಿಸುವ ಬದಲು ವಜಾ ಮಾಡುವ ತೀರ್ಮಾನ ಕೈಗೊಂಡಿದೆ. ಸರ್ಕಾರದ ಈ ತೀರ್ಮಾನ ಕೂಡ ಸಂಬಂಧಪಟ್ಟ ಜನಪ್ರತಿನಿಧಿಗಳೊಂದಿಗಾಗಲೀ, ಸಂಘಟನೆಗಳೊಂದಿಗಾಗಲೀ, ಪಂಚಾಯತ್ ರಾಜ್ ವ್ಯವಸ್ಥೆಯ ತಜ್ಞರೊಂದಿಗಾಗಲೀ ಚರ್ಚಿಸಿ ತೆಗೆದುಕೊಂಡ ನಿರ್ಧಾರವಲ್ಲ. ಬದಲಾಗಿ ಏಕ ಪಕ್ಷೀಯವಾಗಿ ನಿರ್ಣಯಿಸಲಾಗಿದೆ ಎಂಬುದು ಸಂಘಟನೆಯ ವಾದ.
ಸಂಘಟನೆಯ ಸಂಚಾಲಕರಾದ ದಾಮೋದರ್ ಆಚಾರ್ಯ, “ಕರೋನಾ ಸಂದರ್ಭವನ್ನು ಮುಂದಿಟ್ಟುಕೊಂಡು ಚುನಾವಣೆ ಮುಂದೂಡಲು ಸರ್ಕಾರ ನಿರ್ಧರಿಸುವುದಕ್ಕೆ ವಾಸ್ತವಿಕವಾಗಿ ಏನು ಕಾರಣವಿದೆ. ಚುನಾವಣೆಯನ್ನು ಹಣ ಮತ್ತು ಭಾರೀ ಪ್ರಚಾರದ ಮೇಲೆ ನಡೆಸಲು ಕರೋನಾ ನಿರ್ಬಂಧಗಳು ಅವಕಾಶ ನೀಡುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆಯೇ? ಅಥವಾ ನಿಜವಾಗಿಯೂ ನೈಜ ಕಾರಣಗಳಿವೆಯೇ?” ಎಂಬುದು ಅನುಮಾನಾಸ್ಪದ ಎಂದು ಹೇಳಿದ್ದಾರೆ.
ಜೊತೆಗೆ, ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಈ ಸಂಬಂಧ ಮೇ 16ರಂದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸುದೀರ್ಘ ಪತ್ರ ಬರೆದಿದ್ದು, ಪಂಚಾಯತ್ ರಾಜ್ ವ್ಯವಸ್ಥೆ ಕರೋನಾದಂತಹ ಪರಿಸ್ಥಿತಿ ನಿಭಾಯಿಸುವಲ್ಲಿ ಎಷ್ಟು ಮಹತ್ವದ್ದು ಎಂಬುದನ್ನು ಉಲ್ಲೇಖಿಸುತ್ತಾ, ಸೋಂಕಿನ ನೆಪದಲ್ಲಿ ಚುನಾವಣೆಗಳನ್ನು ಮುಂದೂಡುತ್ತಿರುವುದು ಕಾನೂನುಬಾಹಿರ ಕ್ರಮ. ಕಾಯ್ದೆಯಲ್ಲಿ ಚುನಾವಣೆ ಮುಂದೂಡಲು ಅವಕಾಶವಿಲ್ಲ. ಜೊತೆಗೆ ಆರು ತಿಂಗಳ ಅವಧಿಗೆ ಪಂಚಾಯ್ತಿಗಳಿಗೆ ಪ್ರತ್ಯೇಕ ಆಡಳಿತ ಮಂಡಳಿ ನೇಮಕ ಮಾಡುವ ನಿರ್ಧಾರ ಸಂಪೂರ್ಣ ರಾಜಕೀಯಪ್ರೇರಿತ. ಪಕ್ಷದ ಕಾರ್ಯಕರ್ತರನ್ನು ಪಂಚಾಯ್ತಿಗಳಿಗೆ ನೇಮಿಸುವ ಮೂಲಕ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಮತ್ತು ಪಕ್ಷ ಕಟ್ಟಲು ಸರ್ಕಾರ ಈ ಉಪಾಯ ಮಾಡಿದೆ. ಇದು ಸರ್ವತಾ ಒಪ್ಪುವ ಸಂಗತಿಯಲ್ಲ. ಇಂತಹ ಕ್ರಮ ಪ್ರಜಾಪ್ರಭುತ್ವದ ಮೂಲ ಘಟಕವಾದ ಪಂಚಾಯತ್ ವ್ಯವಸ್ಥೆಯನ್ನೇ ಹಾಳುಮಾಡಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡಬಾರದು ಎಂದು ಒತ್ತಾಯಿಸಿದ್ದಾರೆ.
ಹಾಗೊಂದು ವೇಳೆ, ಚುನಾವಣೆ ಮುಂದೂಡುವುದೇ ಆದರೆ, ಈ ಹಿಂದೆ 1987ರಲ್ಲಿ ಒಂದು ಬಾರಿ ಮಾಡಿದಂತೆ, ಈಗಿರುವ ಚುನಾಯಿತ ಮಂಡಳಿಯನ್ನೇ ಮುಂದುವರಿಸಬೇಕು ಎಂದು ಹೇಳಿರುವ ಅವರು, ಅದು ಬಿಟ್ಟು ಪಕ್ಷ ಮತ್ತು ನಿರ್ದಿಷ್ಟ ಸಿದ್ಧಾಂತದ ಜನರನ್ನು, ಆಡಳಿತದ ಬಗ್ಗೆ ಯಾವುದೇ ಅನುಭವವಾಗಲೀ ಜನಪರ ಕಾಳಜಿಯಾಗಲೀ ಇಲ್ಲದೇ ಇರುವವರನ್ನು ನೇಮಕ ಮಾಡಿದಲ್ಲಿ ಗ್ರಾಮೀಣ ಕರ್ನಾಟಕಕ್ಕೆ ಅನ್ಯಾಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಈ ನಡುವೆ, ಗ್ರಾಮ ಪಂಚಾಯ್ತಿಯ ಚುನಾಯಿತ ಪ್ರತಿನಿಧಿಗಳು ಕೂಡ ಸರ್ಕಾರದ ಈ ನಡೆಯನ್ನು ಖಂಡಿಸಿದ್ದು, ಪಂಚಾಯತ್ ರಾಜ್ ಕಾಯ್ದೆಯಡಿ ಅವಕಾಶವಿದ್ದು, ಈ ಹಿಂದೆ ಒಮ್ಮೆ ಚುನಾಯಿತ ಮಂಡಳಿಯ ಅವಧಿಯನ್ನು ವಿಸ್ತರಿಸುವ ಉದಾಹರಣೆಯೂ ಇದೆ. ಹಾಗಿದ್ದರೂ ಸರ್ಕಾರ ಅಂತಹ ಅವಕಾಶದ ಬಗ್ಗೆ ಯಾವ ಸಮಾಲೋಚನೆಯನ್ನೂ ಮಾಡದೆ, ಯೋಚನೆಯನ್ನೂ ಮಾಡದೆ ಏಕಾಏಕಿ ಹೊಸ ಆಡಳಿತ ಮಂಡಳಿ ರಚಿಸುವ ನಿರ್ಧಾರ ಕೈಗೊಂಡಿರುವುದು ಕಳೆದ ಐದು ವರ್ಷಗಳಿಂದ ಗ್ರಾಮೀಣ ಜನರ ಸೇವೆ ಮಾಡಿದ ಅನುಭವಿ ಜನಪ್ರತಿನಿಧಿಗಳಿಗೆ ಮಾಡಿದ ಅವಮಾನ. ಇದು ಪಕ್ಷ- ಸಿದ್ಧಾಂತ ಮೀರಿ ಗ್ರಾಮೀಣ ನಾಯಕತ್ವದ ಸ್ವಾಭಿಮಾನದ ಪ್ರಶ್ನೆ. ಕರೋನಾ ಗ್ರಾಮೀಣ ಭಾಗದಕ್ಕೆ ಹರಡುತ್ತಿರುವ ಈ ಹೊತ್ತಲ್ಲಿ ನಮ್ಮ ಅನುಭವವನ್ನು ಬಳಸಿಕೊಂಡು , ಪರಿಣಾಮಕಾರಿಯಾಗಿ ರೋಗ ನಿಯಂತ್ರಣದ ಯೋಚನೆ ಮಾಡುವ ಬದಲು ಸರ್ಕಾರ ಪಕ್ಷದ ಲಾಭಕ್ಕಾಗಿ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಈಗಾಗಲೇ 15ನೇ ಹಣಕಾಸು ಯೋಜನೆಯ ಅನುದಾನವಾಗಿ ಭಾರೀ ಮೊತ್ತದ ಹಣ ಪಂಚಾಯ್ತಿಗಳಿಗೆ ಬರುತ್ತಿದೆ. ಆ ಹಿನ್ನೆಲೆಯಲ್ಲಿ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ. ಹಾಗಾಗಿ ಬಿಜೆಪಿ ಸರ್ಕಾರ ಪಂಚಾಯ್ತಿ ಆಡಳಿತಕ್ಕೆ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಆಡಳಿತ ಮಂಡಳಿಯ ಹೆಸರಿನಲ್ಲಿ ತಂದು ಕೂರಿಸಲು ಯತ್ನಿಸುತ್ತಿರುವುದರ ಹಿಂದೆ ಈ ಬೃಹತ್ ಮೊತ್ತವೂ ಕಾರಣವಿರಬಗುದು ಎಂಬ ಅನುಮಾನಗಳಿವೆ. ಭಾರೀ ಮೊತ್ತದ ಹಣ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಪಂಚಾಯ್ತಿ ಆಡಳಿತವನ್ನು ದಿಢೀರ್ ಬದಲಾಯಿಸುವ ತರಾತುರಿ ಮಾಡುತ್ತಿರುವುದು ಹಣಕಾಸಿನ ದುರ್ಬಳಕೆಯ, ಕಾಮಗಾರಿಗಳನ್ನು ಚುನಾವಣಾ ಉದ್ದೇಶಕ್ಕೆ ಬಳಸಿಕೊಳ್ಳುವ ಹುನ್ನಾರ ಕೂಡ ಇದ್ದಂತಿದೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.
ಕರೋನಾ ಸೋಂಕಿನ ಸಂಕಷ್ಟದ ಹೊತ್ತನ್ನೇ ಬಳಸಿಕೊಂಡು ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಕಾರ್ಪೊರೇಟ್ ಕಂಪನಿ ಮತ್ತು ಬೃಹತ್ ವ್ಯಾಪಾರಿಗಳಿಗೆ ಅನುಕೂಲ, ಕಾರ್ಮಿಕರ ಹಕ್ಕುಗಳ ರದ್ದು ಮೂಲಕ ಉದ್ದಿಮೆದಾರರಿಗೆ ಪ್ರಶ್ನಾತೀತ ಅಧಿಕಾರ, ಸಾರ್ವಜನಿಕ ವಲಯದ ಖಾಸಗೀಕರಣದ ಮೂಲಕ ಬಿಲಿಯನೇರ್ ಗಳಿಗೆ ದೇಶದ ಆಸ್ತಿ ಪರಭಾರೆಯಂತಹ ಶ್ರೀಮಂತರು ಮತ್ತು ಮೇಲ್ವರ್ಗದ ಪರ ತನ್ನ ಅಜೆಂಡಾವನ್ನು ಜಾರಿಗೊಳಿಸುತ್ತಿರುವ ಬಿಜೆಪಿ, ಇದೀಗ ಕರ್ನಾಟಕದ ಗ್ರಾಮ ಪಂಚಾಯ್ತಿಗಳಿಗೆ ಕಾಯ್ದೆ ಮೀರಿ ಚುನಾವಣೆ ಮುಂದೂಡಿ ಚುನಾಯಿತ ಪ್ರತಿನಿಧಿಗಳ ಬದಲಿಗೆ ಪಕ್ಷದ ಬೆಂಬಲಿಗರು- ಕಾರ್ಯಕರ್ತರನ್ನು ಏಕಪಕ್ಷೀಯವಾಗಿ ತಂದು ಕೂರಿಸುವ ಮೂಲಕ ಗ್ರಾಮೀಣ ಜನರ ಹಕ್ಕುಗಳನ್ನು ಕೂಡ ಮೊಟಕುಮಾಡುವ ಯತ್ನದಲ್ಲಿದೆ. ಆ ಹಿನ್ನೆಲೆಯಲ್ಲಿ ಸರ್ಕಾರದ ಪ್ರಯತ್ನ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.