ಕಳೆದೆರಡು ವಾರಗಳಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಸೈಬರ್ ಕ್ರೈಮ್ ನಲ್ಲಿ ಸಲ್ಲಿಸಿದ ದೂರು ಹಾಗೂ FIR ಸುದ್ದಿಯಲ್ಲಿತ್ತು. ನೋಂದಣಿ ಪ್ರಕ್ರಿಯೆಯಲ್ಲಿ ದತ್ತಾಂಶ (application) ದುರ್ಬಳಕೆ ಮಾಡಿಕೊಂಡು ನಡೆಸಿದೆ ಎನ್ನಲಾದ ಹ್ಯಾಕಿಂಗ್ ನಿಂದ ರಾಜಸ್ವಕ್ಕೆ ಬಹು ದೊಡ್ಡ ನಷ್ಟ ಉಂಟಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ IT Act ಹಾಗೂ ಐಪಿಸಿ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸಬೇಕೆಂದು ಇಲಾಖೆಯ ಆಯುಕ್ತ ಡಾ. ಕೆ ವಿ ತ್ರಿಲೋಕಚಂದ್ರ ಬೆಂಗಳೂರು ನಗರ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದರು.
ಆದರೆ, ಇಡೀ ಪ್ರಕರಣದಲ್ಲಿ ಕಳೆದ ಕೆಲವು ದಿನಗಳಿಂದ ಬಹಳಷ್ಟು ಗಂಭೀರ ವಿಚಾರಗಳು ಬೆಳಕಿಗೆ ಬಂದಿವೆ. ತ್ರಿಲೋಕಚಂದ್ರ ಅವರ ದೂರಿನ ಪ್ರಕಾರ 07-12-2018 ರಿಂದ 18-12-2018 ರವರೆಗೆ ನಡೆದ ಒಟ್ಟು ನೋಂದಣಿಗಳ ಪೈಕಿ ಸರಿ ಸುಮಾರು 300 ದಸ್ತಾವೇಜುಗಳಲ್ಲಿ ಅನಧಿಕೃತ ತಿದ್ದುಪಡಿ ಮಾಡಲಾಗಿದೆ. ಈ ಅನಧಿಕೃತ ತಿದ್ದುಪಡಿಗಳನ್ನು ದತ್ತಾಂಶದ ದುರ್ಬಳಕೆ ಮಾಡುವುದರ ಮೂಲಕ ಮಾಡಲಾಗಿದ್ದು, ಇದರಿಂದ ರಾಜಸ್ವಕ್ಕೆ ಬಹು ದೊಡ್ಡ ನಷ್ಟವಾಗಿದೆ ಎಂದು ಇಲಾಖೆಯ ಆಯುಕ್ತರ ದೂರಿನಲ್ಲಿ ಹೇಳಲಾಗಿದೆ.
ಈ ಬಗ್ಗೆ ಈಗಾಗಲೇ ಬಂದಿರುವ ಪತ್ರಿಕಾ ವರದಿಗಳ ಪ್ರಕಾರ ಈ ಹ್ಯಾಕಿಂಗ್ ಹಾಗೂ ಅನಧಿಕೃತ ತಿದ್ದುಪಡಿಗಳ ಹಿಂದೆ ಇಲಾಖೆಯ `ಹೆಸರಿಸದ’ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಇದ್ದಾರೆ. ಆದರೆ, ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕೇಳಿದಾಗ ತಿಳಿದು ಬಂದಿದ್ದು ಇಷ್ಟು: ಈ ಬಗ್ಗೆ ದೂರುಗಳು ಕೇಳಿ ಬಂದಾಗ ಇಲಾಖೆಯ ಆಯುಕ್ತರು ತಮ್ಮ ಹಂತದಲ್ಲಿಯೇ ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿ ವರದಿ ಸಲ್ಲಿಸಲು ಆದೇಶಿಸಿದ್ದರು. ಈ ವರದಿಯ ಪ್ರಕಾರ, ಇಲಾಖೆಯ ಸಿಬ್ಬಂದಿಗಳು, ಉಪನೋಂದಣಾಧಿಕಾರಿಗಳು, ಜಿಲ್ಲಾ ನೋಂದಣಾಧಿಕಾರಿಗಳು ದತ್ತಾಂಶದ ಪರಿಣತಿ ಹೊಂದಿರುವುದಿಲ್ಲ. ಬದಲಿಗೆ, ಇಲಾಖೆ ಬಳಸುವ ಎರಡು ದತ್ತಾಂಶಗಳಾದ – ಕಾವೇರಿ ಹಾಗೂ ಇ-ಸ್ವತ್ತು (Kaveri and E-Swathu) ಗಳನ್ನು ನಿರ್ವಹಿಸುವ C-DAC (ಇದು ಸರ್ಕಾರ ಸ್ವಾಮ್ಯದ ಸಂಸ್ಥೆ) ಹಾಗೂ HCL ಸಂಸ್ಥೆಗಳ ಇಂಜಿನಿಯರ್ ಗಳೇ ಕಾರಣಕರ್ತರಾಗಿರಬಹುದು ಎಂದು ವರದಿಯಲ್ಲಿ ಹೇಳಲಾಗಿತ್ತು. ಇದಲ್ಲದೇ, ಈ ವರದಿಯ ಪ್ರಕಾರ ಇಲಾಖೆಯ ಸಿಬ್ಬಂದಿಯ ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ಕೂಡ ಇದೇ ಇಂಜಿನಿಯರ್ ಗಳ ಬಳಿ ಇರುತ್ತದೆ.
ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಈ ಎಲ್ಲಾ ಇಂಜಿನಿಯರ್ ಗಳು ಕಾರ್ಯ ನಿರ್ವಹಿಸುವುದು ಆಯುಕ್ತರ ಕಚೇರಿಯಲ್ಲಿ. “ತಮ್ಮ ದೂರಿನಲ್ಲಾಗಲೀ, ನಂತರದ ಪತ್ರಿಕಾ ಹೇಳಿಕೆಗಳಲ್ಲಾಗಲೀ ಆಯುಕ್ತರು ರಾಜಸ್ವ ನಷ್ಟ ಎಷ್ಟು ಎಂಬುದನ್ನು ಉಲ್ಲೇಖಿಸಿಲ್ಲ. ಸಣ್ಣ ಪುಟ್ಟ ಮಾನವ ಸಹಜ ದೋಷಗಳನ್ನು ಕಾಯ್ದೆಯ ಪ್ರಕಾರದಂತೆ ಟೋಕನ್ ಗಳನ್ನು ಸೃಷ್ಟಿಸಿ ದತ್ತಾಂಶ ನಿರ್ವಹಿಸುವ ಇಂಜಿನಿಯರ್ ಗಳೇ ಸರಿಪಡಿಸಿರುವುದೂ ಕಂಡುಬಂದಿದೆ. ಇದಲ್ಲದೇ, ತಿದ್ದುಪಡಿ ಮಾಡಬಹುದಾದ ಪ್ರಕರಣಗಳಿಗೆ ಸಬ್ ರಿಜಿಸ್ಟ್ರಾರ್ ಗಳಿಂದ ಪ್ರಸ್ತಾವನೆಗಳು ಬಂದಂತೆ, ನೋಂದಣಿ ಕಾಯ್ದೆ 1908ರಂತೆ ಜಿಲ್ಲಾ ರಿಜಿಸ್ಟ್ರಾರ್ ಗಳು ಆದೇಶ ಮಾಡಿ ದತ್ತಾಂಶಗಳಲ್ಲಿ ತಿದ್ದಪಡಿ ಮಾಡಿರುವ ಪ್ರಕರಣಗಳೂ ಈ 300 ಪ್ರಕರಣಗಳಲ್ಲಿ ಸೇರಿವೆ,’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಗೊಂದಲದ ಹಿಂದಿದೆ ದತ್ತಾಂಶ ಸಂಯೋಜನೆ:
ಹಿರಿಯ ಅಧಿಕಾರಿಗಳ ಪ್ರಕಾರ ದತ್ತಾಂಶದ ನಡುವಿನ ಸಂಯೋಜನೆ ಹಲವಾರು ಗೊಂದಲಗಳಿಗೆ ಎಡೆ ಮಾಡಿ ಕೊಟ್ಟಿದೆ. ಇಲಾಖೆಯು 2004ರಲ್ಲಿ ಕಾವೇರಿ ದತ್ತಾಂಶವನ್ನು ನೋಂದಣಿ ಪ್ರಕ್ರಿಯೆಗಾಗಿ ಅಳವಡಿಸಿತ್ತು. ಈ ದತ್ತಾಂಶದಲ್ಲಿ ನ್ಯೂನತೆಗಳಿದ್ದರೂ ಹಲವು ಕಾಲದವರೆಗೆ ಅವನ್ನು ಸರಿಪಡಿಸದೇ, 2014ರಲ್ಲಿ ಇ-ಸ್ವತ್ತು (ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಭಿವೃದ್ಧಿಪಡಿಸಿದ ದತ್ತಾಂಶ) ದತ್ತಾಂಶವನ್ನು ಕಾವೇರಿ ದತ್ತಾಂಶದ ಜೊತೆ ಸಂಯೋಜಿಸಲಾಯಿತು.
ಇದರಿಂದ ದಸ್ತಾವೇಜು ನೋಂದಣಿ ಮಾಡುವ ಗ್ರಾಹಕರಿಗೆ ಹಲವಾರು ಅಡೆ ತಡೆಗಳು ಉಂಟಾಗಿದ್ದರಿಂದ, ಕೆಲವು ಗ್ರಾಹಕರು ಈ ಸಂಯೋಜನೆಯನ್ನು ಪ್ರಶ್ನಿಸಿ ಕರ್ನಾಟಕ ಹೈ ಕೋರ್ಟ್ ಮೊರೆ ಹೋಗಿದ್ದರು. ಒಂದು ಪ್ರಕರಣದಲ್ಲಿ ಹೈ ಕೋರ್ಟ್ ದತ್ತಾಂಶ ಸಂಯೋಜನೆ, ನೋಂದಣಿ ಕಾಯ್ದೆ 1908 ಆಶಯಗಳಿಗೆ ವಿರುದ್ಧವಾಗಿದೆ ಎಂದು ಆದೇಶಿಸಿತು. ಆದರೂ, ಇಲಾಖೆ ಸಂಯೋಜನೆಯನ್ನು ಬೇರ್ಪಡಿಸದೇ, ಮುಂದುವರಿಸಿತು. ಇದರಿಂದ, ನ್ಯಾಯಾಲಯದ ಆದೇಶ ಪಾಲಿಸದ ಬಗ್ಗೆ ನ್ಯಾಯಾಂಗ ನಿಂದನೆ (Contempt of Court) ಅರ್ಜಿ ಸಲ್ಲಿಸಲಾಯಿತು. ಆಗ, ಸರ್ಕಾರದ ಪರವಾಗಿ ಪ್ರಧಾನ ಕಾರ್ಯದರ್ಶಿ ಹಾಜರಾಗಿ ಜನವರಿ 2020 ರ ಮೊದಲು ಈ ಸಂಯೋಜನೆಯನ್ನು ಕಿತ್ತು ಹಾಕುವುದಾಗಿ ಆಶ್ವಾಸನೆ ನೀಡಿದ್ದರು.
“ವಾಸ್ತವವಾಗಿ, ನೋಂದಣಿ ಕಾಯ್ದೆ ಹಾಗೂ ಮುದ್ರಾಂಕ ಕಾಯ್ದೆಗಳ ವಿರುದ್ಧವಾಗಿ ಇಲಾಖೆ ಹಲವಷ್ಟು ಪ್ಯಾಚ್ ಗಳನ್ನು ದತ್ತಾಂಶಗಳ ನಡುವೆ ಸಂಯೋಜಿಸಿದೆ. ಇದರಿಂದ ದಸ್ತಾವೇಜು ನೋಂದಣಿಯಲ್ಲಿ ತೊಡಕುಂಟಾಗುತ್ತಿದೆ. ದತ್ತಾಂಶಗಳು ಜನಸಾಮಾನ್ಯರ ಸಮಯ ಉಳಿಸುವಂತಿರದೇ, ಇನ್ನಷ್ಟು ಹಂತಗಳನ್ನು ಸೃಷ್ಟಿಸುವುದರಿಂದ ದಸ್ತಾವೇಜು ಪ್ರಕ್ರಿಯೆ ವಿಳಂಬವಾಗುತ್ತಿದೆ,’’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಈ ಬಗ್ಗೆ ಪ್ರತಿಧ್ವನಿ ಆಯುಕ್ತ ತ್ರಿಲೋಕಚಂದ್ರ ಅವರನ್ನು ಸಂಪರ್ಕಿಸಿತಾದರೂ, ಅವರು ಕರೆಯನ್ನು ಸ್ವೀಕರಿಸಲಿಲ್ಲ. ಅವರ ಪ್ರತಿಕ್ರಿಯೆ ಬಂದೊಡನೆ ವರದಿ ನವೀಕರಿಸಲಾಗುವುದು.