ನೂತನ ಭೂಪಟ ಹೊಂದಿರುವ ವಿವಾದಾತ್ಮಕ ಮಸೂದೆಯನ್ನ ನೇಪಾಳ ಸರಕಾರ ಶನಿವಾರ (ಜೂನ್ 13) ತನ್ನ ಕೆಳಮನೆ ಸಂಸತ್ ನಲ್ಲಿ ಅಂಗೀಕರಿಸಿದೆ. ಇತ್ತೀಚೆಗಷ್ಟೇ ಗಡಿ ಬಗ್ಗೆ ಕ್ಯಾತೆ ತೆಗೆದಿದ್ದ ನೇಪಾಳ, ಭಾರತದ ಪ್ರದೇಶಗಳಾದ ಕಾಲಪಾನಿ, ಲಿಂಪಿಯಾಧುರ ಮತ್ತು ಲಿಪುಲೇಖ್ ಪ್ರದೇಶಗಳನ್ನ ತನ್ನದೆಂಬ ವಾದವೆತ್ತಿತ್ತು. ಮಾತ್ರವಲ್ಲದೇ ತನ್ನ ಭೂಪಟದಲ್ಲೂ ಅದನ್ನ ಸೇರಿಸುವ ಮೂಲಕ ಭಾರತದ ವಿರುದ್ಧ ತೊಡೆ ತಟ್ಟುವ ಕೆಲಸ ಮಾಡಿತ್ತು. ಅಲ್ಲದೇ ಗಡಿಯಲ್ಲೂ ಅಪ್ರಚೋದಿತ ದಾಳಿ ನಡೆಸಿದ್ದ ನೇಪಾಳಿ ಪಡೆ ಬಿಹಾರದ ಸೀತಾಮರ್ಹಿ ಜಿಲ್ಲೆಯ ವ್ಯಕ್ತಿಯನ್ನ ಕೊಂದು ಹಾಕಿತ್ತು. ಅಲ್ಲದೇ ಇಬ್ಬರು ಗಾಯಗೊಂಡರೆ, ಒಬ್ಬಾತನನ್ನು ವಶಕ್ಕೆ ಪಡೆದಿದೆ. “ಗಡಿ ಮೀರಿ ಹೋದದ್ದೇ ದಾಳಿಗೆ ಕಾರಣ” ಅಂತಾ ನೇಪಾಳಿ ಪೊಲೀಸರು ತಿಳಿಸಿದ್ದಾರೆ. ಆದರೆ ಘಟನೆಯನ್ನು ಕಣ್ಣಾರೆ ಕಂಡವರು, “ನೇಪಾಳ ಪೊಲೀಸರೇ ಗಡಿ ಉಲ್ಲಂಘಿಸಿ ಬಂದು, ದಾಳಿ ನಡೆಸಿದ್ದಾರೆ” ಅಂತಾ ಆರೋಪಿಸಿದ್ದಾರೆ.
ಈ ಮಧ್ಯೆ ಉತ್ತರಾಖಂಡ ರಾಜ್ಯಕ್ಕೆ ಸೇರುತ್ತಿದ್ದ ಮೂರು ಪ್ರಾಂತ್ಯಗಳನ್ನ ನೇಪಾಳ ತನ್ನ ಪ್ರದೇಶವೆನ್ನುತ್ತಿದ್ದು, ಅದಕ್ಕೆ ಪೂರಕವಾಗಿ ರಚಿಸಲಾದ ನೂತನ ಭೂಪಟದಲ್ಲೂ ಅದನ್ನ ಸೇರಿಸಿಕೊಂಡಿವೆ. ಅಲ್ಲದೇ ಶನಿವಾರ ಭೂಪಟವನ್ನ ಸಂಸತ್ ನಲ್ಲಿ ಮಂಡಿಸಿದ ನೇಪಾಳ ಕಾನೂನು ಸಚಿವ ಶಿವಮಾಯ ತುಂಬಾಹಂಫೆ ಇದು ನೇಪಾಳದ ನವೀಕರಿಸಿದ ಭೂಪಟವಾಗಿದೆ ಎಂದಿದ್ದಾರೆ.
ಆದರೆ ಇದನ್ನ ತೀವ್ರವಾಗಿ ಖಂಡಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯವು, “ಈ ನಡೆ ಸಮರ್ಥನೀಯವಲ್ಲ” ಎಂದಿದೆ. ಅಲ್ಲದೇ “ಇದೊಂದು ಇತಿಹಾಸ ಮರೆತ ಹಾಗೂ ದಾಖಲೆ ರಹಿತ ವಾದವಾಗಿದೆ. ಮಾತ್ರವಲ್ಲದೇ ಗಡಿ ವಿಚಾರದಲ್ಲಿ ಆಗಿರುವ ಮಾತುಕತೆಗಳ ಸ್ಪಷ್ಟ ಉಲ್ಲಂಘನೆಯೂ ಆಗಿದೆ” ಅಂತಾ ತಿಳಿಸಿದೆ.
ಈ ಹಿಂದಿನಿಂದಲೂ ನೇಪಾಳ ಲಿಪುಲೇಖ್ ಪ್ರಾಂತ್ಯವನ್ನ ಕಾಲಪಾನಿಯ ಪಶ್ಚಿಮ ತುದಿಯೆಂದು ಹಾಗೂ ತನ್ನ ರಾಜ್ಯದ ಧಾರ್ಚುಲಾ ಜಿಲ್ಲೆಗೆ ಸೇರಿದ ಪ್ರದೇಶವೆನ್ನುತ್ತಿದ್ದರೆ, ಭಾರತ ಅದನ್ನ ಉತ್ತರಾಖಂಡ ರಾಜ್ಯದ ಪಿತೋರಗಡ್ ಜಿಲ್ಲೆಗೆ ಸೇರಿದ್ದಾಗಿ ಬಲವಾಗಿ ಸಮರ್ಥಿಸುತ್ತಿತ್ತು. ಆದರೆ ಇದೀಗ ನೇಪಾಳ ತನ್ನ ಭೂಪಟದಲ್ಲಿ ಸೇರಿಸಿಕೊಂಡಿದ್ದು ಮಸೂದೆಯಾಗಿ ಅಂಗೀಕರಿಸಿದೆ. ನೇಪಾಳದ ನೂತನ ರಾಜಕೀಯ ಭೂಪಟ ತಿದ್ದುಪಡಿ ಮಸೂದೆಯನ್ನ ಕೈ ಬಿಡುವಂತೆ ಸಂಸದೆ ಸರಿತಾ ಗಿರಿ ಒತ್ತಾಯಿಸಿದ್ದರು. ಆದರೆ ನೇಪಾಳ ಸಂವಿಧಾನ ಕಾಯ್ದೆ 112 ರ ಅನ್ವಯ ನೇಪಾಳ ಸಂಸತ್ ನ ಪ್ರತಿನಿಧಿ ಅಗ್ನಿ ಪ್ರಸಾದ್ ಸಪ್ಕೋಟಾ ಅದನ್ನ ತಿರಸ್ಕರಿಸಿದ್ದರು. ಆ ನಂತರ ಈ ಮಸೂದೆಯನ್ನ ಶನಿವಾರ ತನ್ನ ಸಂಸತ್ ನಲ್ಲಿ ಅದು ಮಂಡಿಸಿದೆ.
ಅಚ್ಚರಿ ಅಂದ್ರೆ ಒಂದು ಕಡೆ ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿ ನೂರಾರು ಮಂದಿ ಕರೋನಾ ವಿರುದ್ಧ ನೇಪಾಳ ಸರಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದನ್ನ ಖಂಡಿಸಿ ಪ್ರತಿಭಟಿಸುತ್ತಿದ್ದರೆ, ಇತ್ತ ನೇಪಾಳದ ಕೆಳಮನೆ ಸಂಸತ್ ನಲ್ಲಿ ನೂತನ ಭೂಪಟ ತಿದ್ದುಪಡಿ ಮಸೂದೆಯನ್ನ ಅಂಗೀಕರಿಸಿತ್ತು. ಭಾರತ ಈ ಕುರಿತು ಮಾತುಕತೆಗೆ ಆಹ್ವಾನವಿತ್ತರೂ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ನಿರಾಕರಿಸಿದ್ದರು. ಇದು ಮಾತ್ರವಲ್ಲದೇ ನೇಪಾಳ, ಚೀನಾ ಪ್ರಚೋದನೆಯಿಂದ 12 ವರುಷಗಳ ಬಳಿಕ ನೇಪಾಳ ಚೀನಾ ಗಡಿ ಸಂಪರ್ಕಿಸುವ ಡಾರ್ಚುಲಾ-ಟಿಂಕರ್ ನ ಸುಮಾರು 83 ಕಿಲೋ ಮೀಟರ್ ಉದ್ದದ ಕಾಮಗಾರಿಗೆ ಚಾಲನೆ ನೀಡಿತ್ತು. ಆ ಮೂಲಕ ಭಾರತಕ್ಕೆ ಸವಾಲೊಡ್ಡುವ ಹಾಗೂ ಚೀನಾ ಸ್ನೇಹತ್ವವನ್ನ ಬಯಸಿತ್ತು.

ಇದೀಗ ನೂತನ ಭೂಪಟ ರಚನೆಗೆ ಮುಂದಾಗಿರುವನ ನೇಪಾಳ ಅದಕ್ಕಾಗಿ ಒಂಬತ್ತು ಮಂದಿ ತಜ್ಞರ ಸಮಿತಿಯನ್ನ ನೇಮಿಸಿದ್ದಾಗಿ ನೇಪಾಳದ ʼದಿ ಕಾಠ್ಮಂಡು ಟೈಮ್ಸ್ʼ ವರದಿ ಮಾಡಿದೆ. ಈ ತಂಡಕ್ಕೆ ನೂತನ ಭೂಪಟಕ್ಕೆ ಪೂರಕವಾದ ಐತಿಹಾಸಿಕ ಅಂಶಗಳು ಮತ್ತು ಸಾಕ್ಷ್ಯಗಳನ್ನ ಕಲೆ ಹಾಕುವ ಜವಾಬ್ದಾರಿಯನ್ನ ವಹಿಸಲಾಗಿದೆ ಎಂದು ವರದಿ ಮಾಡಿದೆ.
ಒಟ್ಟಿನಲ್ಲಿ ಅತ್ತ ಪಾಕಿಸ್ತಾನ, ಇತ್ತ ಚೀನಾ ಹಾಗೂ ನೇಪಾಳ, ಇನ್ನೊಂದೆಡೆ ಬಾಂಗ್ಲಾ ಇವುಗಳೆಲ್ಲವೂ ಭಾರತದ ಪಾಲಿಗೆ ಹಿತಶತ್ರುಗಳಾಗಿಯೇ ಉಳಿದಿದ್ದಾವೆ. ಆದರೂ ಜಾಗತಿಕ ಮಟ್ಟದಲ್ಲಿ ಭಾರತ ತನ್ನದೇ ವಿಭಿನ್ನ ನಿಲುವಿನೊಂದಿಗೆ ಹಾಗೂ ತನ್ನದೇ ಆದ ಕಾರ್ಯತಂತ್ರದ ಮೂಲಕ ಅವರನ್ನೆಲ್ಲ ಕಟ್ಟಿ ಹಾಕಬಲ್ಲ ಸಾಮರ್ಥ್ಯ ಹೊಂದಿದೆ ಅನ್ನೋದು ಮಾತ್ರ ಅಷ್ಟೇ ಸತ್ಯ.