ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಎಂದು ಇದ್ದರೂ ಕರೋನಾ ಸಂಕಷ್ಟ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ‘ಪಿಎಂ ಕರ‍್ಸ್ ಫಂಡ್’ ಸೃಷ್ಟಿ ಮಾಡಿದರು. ಬಳಷ್ಟು ಜನಕ್ಕೆ ಪಿಎಂ ಕೇರ್ಸ್ ಫಂಡ್ ಎಂದರೆ ‘ದಿ ಪ್ರೈಮ್ ಮಿನಿಸ್ಟರ್ಸ್ ಸಿಟಿಜನ್ ಅಸಿಸ್ಟೆನ್ಸ್ ಅಂಡ್ ರಿಲೀಫ್ ಇನ್ ಎಮೆರಜೆನ್ಸಿ ಸಿಚುಯೇಷನ್ಸ್ ಫಂಡ್’ ಎಂಬ ಫುಲ್ ಫಾರಂ ಕೂಡ ಗೊತ್ತಿಲ್ಲ. ಇದು ‘ಹೆಸರು ಬದಲಾವಣೆ ಮಾಡುವುದೇ ಇವರ ಕೆಲಸ’ ಎಂದು ಮಾಡಲಾಗುವ ತಮಾಷೆ ಅಥವಾ ಟೀಕೆಯ ಮುಂದುವರೆದ ಭಾಗವೋ ಅಥವಾ ನಿಜಕ್ಕೂ ಬೇರೆ ಘನ ಉದ್ದೇಶ ಇಟ್ಟು ಇದನ್ನು ಸ್ಥಾಪಿಸಲಾಗಿದೆಯೋ ಎಂಬ ಬಗ್ಗೆಯೂ ಗೊತ್ತಿಲ್ಲ. ಅದೇ ರೀತಿ ಪಿಎಂ ಕೇರ್ಸ್ ಫಂಡ್‌ಗೆ ಹರಿದು ಬಂದ ದೇಣಿಗೆಯ ಮೊತ್ತವೂ ಪಾರದರ್ಶಕವಾಗಿಲ್ಲ. ಇದರ ಬಗ್ಗೆ ವ್ಯಾಪಕವಾದ ಟೀಕೆ, ಚರ್ಚೆಗಳಾಗುತ್ತಿವೆ. ಅದರ ಬಗ್ಗೆಯೂ ಮೋದಿಯಾಗಲಿ ಅವರ ಸರ್ಕಾರವಾಗಲಿ ತಲೆಕೆಡಿಸಿಕೊಂಡಿಲ್ಲ. ಬಹಳಷ್ಟು ಮಂದಿ ಆರ್‌ಟಿಐ ಅರ್ಜಿಗಳನ್ನು ಹಾಕಿದ್ದಾರೆ. ಅದಕ್ಕೂ ಉತ್ತರ ಸಿಕ್ಕಿಲ್ಲ.

ಈ ಎಲ್ಲದರ ನಡುವೆ ಈಗ ಪಿಎಂ ಕೇರ್ಸ್ ಫಂಡ್ ಆರಂಭವಾದ ಮೊದಲ ನಾಲ್ಕು ದಿನಗಳಲ್ಲಿ (ಮಾರ್ಚ್ 27ರಂದು ಶುರುವಾಗಿ ಮಾರ್ಚ್ 28 ರಿಂದ ದೇಣಿಗೆ ಬರಲು ಶುರುವಾಯಿತು. ಮಾರ್ಚ್ 31 ರವರೆಗೆ) ಸಂಗ್ರಹವಾದ ದೇಣಿಗೆಯ ವಿವರಗಳು ಹೊರಬಿದ್ದಿವೆ. 2.25 ಲಕ್ಷ ರೂಪಾಯಿ ಮೌಲ್ಯದ ಕಾರ್ಪಸ್ ಫಂಡ್ ಮೂಲಕ ಆರಂಭವಾದ ಪಿಎಂ ಕರ‍್ಸ್ ಫಂಡ್‌ಗೆ ಮೊದಲ ನಾಲ್ಕು ದಿನದಲ್ಲಿ ಒಟ್ಟು 3,076 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ. ಈ ಮೊತ್ತ ಹೊರದೇಶದಿಂದ ಬಂದ ದೇಣಿಗೆಯನ್ನೂ ಒಳಗೊಂಡಿದೆ. ಆದರೆ ವಿದೇಶಗಳಿಂದ ಬಂದಿರುವುದು 39.67 ಲಕ್ಷ ರೂಪಾಯಿ ಮಾತ್ರ ಎನ್ನಲಾಗಿದೆ.
ಈಗಲೂ ಪ್ರಧಾನ ಮಂತ್ರಿಗಳ ಕಾರ್ಯಾಲಯ ಈ ಮಾಹಿತಿಯನ್ನು ನೀಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದವರಿಗಲ್ಲ. ಬದಲಿಗೆ ಅನಿವಾರ್ಯವಾಗಿ ಮಾಡಿಸಲೇಬೇಕಾದ ‘ಆಡಿಟ್’ಗೆ. ಈ ಮಾಹಿತಿಗೆ ಎಸ್‌ಎಆರ್‌ಸಿ ಅಂಡ್ ಅಸೋಸಿಯೇಟ್ಸ್ ಹಾಗೂ ಪ್ರಧಾನ ಮಂತ್ರಿಗಳ ಕಾರ್ಯಾಲಯದ ನಾಲ್ವರು ಅಧಿಕಾರಿಗಳ ಸಹಿ ಇರುವುದರಿಂದ ಅಧಿಕೃತ ಎಂದು ಪರಿಗಣಿಸಬಹುದು. ಪಿಎಂ ಕೇರ್ಸ್ ಫಂಡ್‌ನ ಮೂರು ಟ್ರಸ್ಟಿಗಳ ಹೆಸರನ್ನು ಮಾತ್ರ ಬಹಿರಂಗ ಪಡಿಸಲಾಗಿದೆ. ಮೊದಲ ಟ್ರಸ್ಟಿ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಎರಡನೆಯವರು ಗೃಹ ಸಚಿವ ಅಮಿತ್ ಶಾ ಮತ್ತು ಮೂರನೆಯವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಪದ ನಿಮಿತ್ತವಾಗಿ ಈ ಮೂವರು ಟ್ರಸ್ಟಿಗಳಾಗಿದ್ದಾರೆ. ಇದಲ್ಲದೆ ಇನ್ನೂ ಮೂರು ಮಂದಿ ಟ್ರಸ್ಟಿಗಳನ್ನು ಟ್ರಸ್ಟ್‌ನ ಅಧ್ಯಕ್ಷರಾದ ಪ್ರಧಾನ ಮಂತ್ರಿಗಳು ನೇಮಕ ಮಾಡಿಕೊಳ್ಳುವ ಅಧಿಕಾರ ಇದೆ. ಆದರೆ ನೇಮಿಸಲಾಗಿದೆಯಾ? ಇಲ್ಲವಾ? ನೇಮಿಸಿದ್ದರೆ ಯಾರು? ಎಂಬ ವಿವರಗಳನ್ನು ಕೂಡ ತೆರೆದಿಟ್ಟಿಲ್ಲ. ಮೊದಲಿದ್ದ ಪ್ರಧಾನ ಮಂತ್ರಿಗಳ ರಾಷ್ಷ್ರೀಯ ವಿಪ್ಪತ್ತು ನಿಧಿಯಲ್ಲಿ ದೇಣಿಗೆ ನೀಡುತ್ತಿರುವವರ ಹೆಸರನ್ನು ಬಹಿರಂಗಗೊಳಿಸುತ್ತಿರಲಿಲ್ಲ. ಅದಕ್ಕೆ ಪಿಎಂ ಕೇರ್ಸ್ ಫಂಡ್‌ನಲ್ಲೂ ದೇಣಿಗೆ ನೀಡಿದವರ ನಾಮಧೇಯವನ್ನು ಮುಚ್ಚಿಡಲಾಗುತ್ತದೆ ಎಂದು ಹೇಳಲಾಗಿದೆ.

ಇದು ಮಾರ್ಚ್ 31 ರವರೆಗೆ ಬಂದ ಲೆಕ್ಕವಾಯಿತು. ಏಪ್ರಿಲ್ ತಿಂಗಳು ಪೂರ್ತಿ ಹರಿದು ಬಂದ ದೇಣಿಗೆಯ ಬಗ್ಗೆ ಪ್ರಧಾನ ಮಂತ್ರಿಗಳಾಗಲಿ, ಅವರ ಕಚೇರಿಯಾಗಲಿ ಅಥವಾ ಅವರ ಸರ್ಕಾರವಾಗಲಿ ಲೆಕ್ಕ ಕೊಟ್ಟಿಲ್ಲ. ಇದಾದ ಮೇಲೆ ಮೇ 13ರಂದು ಪಿಎಂ ಕೇರ್ಸ್ ಫಂಡ್‌ನಿದ 50 ಸಾವಿರ ವೆಂಟಿಲೇಟರ್ ಖರೀದಿಗೆಂದು 3,100 ಕೋಟಿ ಬಿಡುಗಡೆ ಮಾಡಲಾಗಿದೆ. ಅಲ್ಲಿಗೆ ಮಾರ್ಚಲ್ಲಿ ಬಂದಿದ್ದ ದೇಣಿಗೆ ಖರ್ಚಾಗಿ ಏಪ್ರಿಲ್‌ನಲ್ಲಿ ಬಂದಿದ್ದ ದೇಣಿಗೆ ಹಾಗೆ ಉಳಿಯಿತು ಎಂದಾಯಿತು. ಅಷ್ಟೆಯಲ್ಲ, ಜೂನ್, ಜುಲೈ ಮತ್ತು ಆಗಸ್ಟ್ ಮಾಯೆಗಳಲ್ಲಿ ಎಷ್ಟೆಷ್ಟು ದೇಣಿಗೆ ಸಂಗ್ರಹವಾಗಿದೆ ಎನ್ನುವುದನ್ನೂ ಸಾರ್ವಜನಿಕರಿಗೆ ತಿಳಿಸಿಲ್ಲ. ಈ ನಡುವೆ ಪಿಎಂ ಕೇರ್ಸ್ ಫಂಡ್‌ನಿಂದ ಬಂದ ಹಣದಲ್ಲಿ 500 ಹಾಸಿಗೆ ಸಾಮರ್ಥ್ಯದ ಎರಡು ಕೋವಿಡ್ ಆಸ್ಪತ್ರೆಗಳನ್ನು ತೆರೆಯಲಾಗುವುದು ಎಂದು ನರೇಂದ್ರ ಮೋದಿ ಘೋಷಿಸಿದ್ದಾರೆ.
ಆ ಎರಡೂ ಆಸ್ಪತ್ರೆಗಳನ್ನು ಬಿಹಾರದಲ್ಲಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ವರ್ಷಾಂತ್ಯದಲ್ಲಿ ಬಿಹಾರದ ವಿಧಾನಸಭೆ ಚುನಾವಣೆ ನಡೆಯಲಿದೆ. ಯಾವ ಘನ ಉದ್ದೇಶಕ್ಕೆ ಬಿಹಾರದಲ್ಲಿ ಕೋವಿಡ್ ಆಸ್ಪತ್ರೆ ತೆರೆಯುತ್ತಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ವಾಸ್ತವವಾಗಿ ಕೋವಿಡ್‌ನಿಂದ ಅತಿಹೆಚ್ಚು ಕಷ್ಟಕ್ಕೆ ಸಿಲುಕಿರುವ ರಾಜ್ಯಗಳೆಂದರೆ ಮಹಾರಾಷ್ಟ ಮತ್ತು ಪಶ್ಚಿಮ ಬಂಗಾಳ. ಆ ರಾಜ್ಯಗಳಿಗೆ ಕೊಡಬಹುದಿತ್ತು. ಆ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿಲ್ಲ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಇರುವುದು ಮುಂದಿನ ವರ್ಷ. ಅಥವಾ ಉತ್ತರಕ್ಕೊಂದು ದಕ್ಷಿಣಕ್ಕೊಂದು ಕೋವಿಡ್ ಆಸ್ಪತ್ರೆಯನ್ನು ನೀಡಬಹುದಾಗಿತ್ತು.
Also Read: PM-CARESನಿಂದ 8 ಕೋಟಿ ಮುಂಗಡ ಹಣ ಪಡೆದು ಕಳಪೆ ಗುಣಮಟ್ಟದ ವೆಂಟಿಲೇಟರ್ ನೀಡಿದ ಗುಜರಾತ್ ಕಂಪೆನಿ
ಭಾರತದ ಜನರ ಧಾರಣಾಶಕ್ತಿ (ಇಮ್ಯುಡಿಟಿ ಪವರ್) ಹೆಚ್ಚಾಗಿದ್ದರೂ ದೇಶದಲ್ಲಿ ಕರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರತಿದಿನ ಈಗ 75 ಸಾವಿರಕ್ಕೂ ಹೆಚ್ಚು ಜನರು ಕರೋನಾ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದಾರೆ. ಕರೋನಾದಿಂದ ಮೃತಪಟ್ಟವರ ಸಂಖ್ಯೆ ಕೂಡ 66 ಸಾವಿರದ ಗಡಿ ದಾಟಿದೆ. ಇದಕ್ಕೆ ಕಾರಣ ನಮ್ಮ ಆರೋಗ್ಯ ಸೇವಾ ಮೂಲಸೌಕರ್ಯ ಸದೃಢವಾಗಿಲ್ಲದಿರುವುದು. ಇದಕ್ಕೆ ವ್ಯತಿರಿಕ್ತವಾಗಿ ಕೇರಳದಲ್ಲಿ ಕರೋನಾ ನಿಯಂತ್ರಣಕ್ಕೆ ಬಂದಿದ್ದು ಆ ರಾಜ್ಯದ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಸಮರ್ಪಕವಾಗಿರುವ ಕಾರಣಕ್ಕೆ. ಈ ಹಿನ್ನೆಲೆಯಲ್ಲಿ ಕೋವಿಡ್‌ನಿಂದ ಪಾಠ ಕಲಿತು ಪಿಎಂ ಕೇರ್ಸ್ ಫಂಡ್ ಹಣವನ್ನು ಬಳಸಿಕೊಂಡು ದೇಶದುದ್ದಗಲಕ್ಕೂ ಆರೋಗ್ಯ ಕ್ಷೇತ್ರವನ್ನು ಸಶಕ್ತಗೊಳಿಸುವ ಕೆಲಸವನ್ನಾದರೂ ಮಾಡಬೇಕಿದೆ. ದೇಶದ ಚೊಚ್ಚಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು ದೆಹಲಿಯಲ್ಲಿ ಎಮ್ಸ್ (ಆಲ್ ಇಂಡಿಯಾ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಆಸ್ಪತ್ರೆ ಕಟ್ಟಿಸಿದರು. ದೇಶದ ಜನ ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ. ನರೇಂದ್ರ ಮೋದಿ ಪಿಎಂ ಕೇರ್ಸ್ ಫಂಡ್ ಹಣವನ್ನು ಆ ರೀತಿ ಬಳಸಿಕೊಳ್ಳುವರೇ ಎಂಬುದನ್ನು ಕಾದುನೋಡಬೇಕು.
Also Read: PM-CARES: ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದ ಬಾಂಬೆ ಹೈಕೋರ್ಟ್