ದೇಶದ ಆರ್ಥಿಕತೆ ಹಿಂಜರಿತದತ್ತ ದಾಪುಗಾಲು ಹಾಕುತ್ತಿರುವಾಗ ಮತ್ತು ನಿರುದ್ಯೋಗ ಸಮಸ್ಯೆ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿದಿರುವಾಗ ಈ ಉಭಯ ಸಂಗತಿಗಳ ಬಗ್ಗೆ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ತರಾತುರಿಯಲ್ಲಿ ಜಾರಿಗೆ ತಂದಿರುವ ಪೌರತ್ವ (ತಿದ್ದುಪತಿ) ಕಾಯ್ದೆ ದೇಶದ ಆರ್ಥಿಕತೆಯನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಲಿದೆಯೇ? ದೇಶದ ನಾಗರಿಕರ ಸಂಕಷ್ಟಗಳನ್ನು ದುಪ್ಪಟ್ಟುಗೊಳಿಸಲಿದೆಯೇ?
ದೇಶದಲ್ಲಿನ ಪ್ರಸಕ್ತ ಪರಿಸ್ಥಿತಿ ಗಮನಿಸಿದರೆ ಮೇಲಿನ ಎರಡೂ ಪ್ರಶ್ನೆಗಳಿಗೆ ಉತ್ತರ ಹೌದು ಎಂದೇ ಹೇಳಬೇಕು. ಏಕೆಂದರೆ ನರೇಂದ್ರ ಮೋದಿ ತಮ್ಮ ಮೊದಲ ಅಧಿಕಾರದ ಅವಧಿಯಲ್ಲಿ ಕೈಗೊಂಡ ದುಸ್ಸಾಹಸದ ಅಪನಗದೀಕರಣ ಜಾರಿಯಿಂದ ದೇಶದ ಆರ್ಥಿಕತೆಗೆ ಸುಮಾರು 2.8 ಲಕ್ಷ ಕೋಟಿ ರುಪಾಯಿಗಳಷ್ಟು ನಷ್ಟವಾಯಿತು. ಆ ನಷ್ಟವನ್ನು ತುಂಬಿಕೊಳ್ಳಲು ಇನ್ನೆಷ್ಟು ವರ್ಷಗಳು ಬೇಕಾಗುತ್ತದೋ ಗೊತ್ತಿಲ್ಲ. ಆದರೆ, ಅಪನಗದೀಕರಣ ಜಾರಿಯಿಂದ ನಮ್ಮ ದೇಶದ ಜಿಡಿಪಿ ಶೇ.2-3ರಷ್ಟು ಕುಸಿದಿದೆ. ದುರಾದೃಷ್ಟವಶಾತ್ ಕುಸಿಯುತ್ತಲೇ ಇದೆ. ಮತ್ತು ಆಗ ಉದ್ಯೋಗ ಕಳೆದುಕೊಂಡ ಅಸಂಘಟಿತ ವಲಯದ ಕೋಟ್ಯಂತರ ಜನರು ಈಗಲೂ ನಿರುದ್ಯೋಗದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಅದರ ಪ್ರತಿಫಲವಾಗಿ ಆರ್ಥಿಕತೆಯ ಜೀವನಾಡಿಯಾದ ಜನರ ಉಪಭೋಗ ತೀವ್ರವಾಗಿ ಕುಸಿದಿದೆ. ಜನರ ಖರೀದಿ ಶಕ್ತಿಯನ್ನೇ ಕಸಿದುಕೊಂಡ ಅಪನಗದೀಕರಣದ ಬಗ್ಗೆ ಚರ್ಚೆ ಮಾಡಲು ನರೇಂದ್ರಮೋದಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳಿಗೆ ಇಷ್ಟವಿಲ್ಲ. ಮತ್ತು ಬೇರೆಯವರು ಆ ಬಗ್ಗೆ ದನಿಎತ್ತಲೂ ಬಿಡುತ್ತಿಲ್ಲ.
ಪ್ರಸ್ತುತ ಶೇ.5ಕ್ಕಿಂತ ಕೆಳಕ್ಕೆ ಜಿಡಿಪಿ ಕುಸಿದಿದ್ದು, ಇದು ನೆರೆಯ ಬಡರಾಷ್ಟ್ರಗಳಿಗಿಂತಲೂ ಕಳಪೆ ಸಾಧನೆಯಾಗಿದೆ. ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸೇರಿದಂತೆ ವಿತ್ತೀಯ ಸಂಸ್ಥೆಗಳು ಭಾರತದ ಆರ್ಥಿಕ ಬೆಳವಣಿಗೆ ಮುನ್ನಂದಾಜನ್ನು ಗಣನೀಯವಾಗಿ ತಗ್ಗಿಸಿವೆ.
ಈಗ ದೇಶದ ಮುಂದೆ ಹೊಸದೊಂದು ಸಮಸ್ಯೆ ಎದುರಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿದೆ. ಅದನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಅಪನಗದೀಕರಣದ ದುಷ್ಪರಿಣಾಮಗಳನ್ನು ಹೇಗೆ ಅಂದಾಜು ಮಾಡಲು ನರೇಂದ್ರಮೋದಿ ವಿಫಲರಾದರೋ ಹಾಗೆಯೇ ಈಗ ನಡೆಯುತ್ತಿರುವ ಪ್ರತಿಭಟನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆಯೂ ಅಂದಾಜು ಮಾಡುವಲ್ಲಿ ವಿಫಲರಾದಂತಿದೆ.
ಮೇಲ್ನೋಟಕ್ಕೆ ಇದು ಸಾಮಾಜಿಕ ಸಮಸ್ಯೆ ಆದರೂ, ಆಳದಲ್ಲಿ ಇದು ಆರ್ಥಿಕ ಸಮಸ್ಯೆಯೂ ಹೌದು. ಈಗಾಗಲೇ ನಲುಗಿರುವ ಆರ್ಥಿಕತೆಯು ಮತ್ತಷ್ಟು ನಲುಗಲಿದೆ. ಪ್ರತಿಭಟನೆಯ ವಿಷವರ್ತುಲವನ್ನು ಪ್ರಧಾನಿ ನರೇಂದ್ರ ಮೋದಿಯಾಗಲೀ, ಗೃಹ ಸಚಿವ ಅಮಿತ್ ಷಾ ಆಗಲೀ ಅರಿತಂತಿಲ್ಲ. ಲೋಕಸಭೆಯಲ್ಲಿ ಬಹುಮತ ಪಡೆದಿರುವ ಅಹಂಕಾರದಿಂದ ಹೂಂಕರಿಸುತ್ತಿರುವ ಈ ನಾಯಕರಿಗೆ ದೇಶದ ಸಾಮಾಜಿಕ ಸಂರಚನೆ ಹಾಳಾಗುತ್ತಿರುವಂತೆಯೇ ಆರ್ಥಿಕ ವ್ಯವಸ್ಥೆ ಮತ್ತಷ್ಟು ಹದಗೆಡುತ್ತಿದೆ ಎಂಬುದನ್ನು ತಿಳಿ ಹೇಳುವ ಸಲಹೆಗಾರರಾರೂ ಇಲ್ಲದಂತಾಗಿದೆ.
ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ ಷಾ ಪ್ರತಿಭಟನೆಯ ವಿಷವರ್ತುಲವನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿರುವುದು ಗುರುವಾರದ ಬೆಳವಣಿಗೆಯಿಂದ ಸ್ಪಷ್ಟವಾಗಿದೆ. ಜನರು ಪ್ರತಿಭಟನೆ ಮಾಡಲು ಸೇರುತ್ತಾರೆಂಬ ಕಾರಣಕ್ಕೆ ದೆಹಲಿಯ 19 ಮೆಟ್ರೋನಿಲ್ದಾಣಗಳನ್ನು ಬಂದ್ ಮಾಡಲಾಯಿತು. ಮೆಟ್ರೋ ಬಂದ್ ಮಾಡಿದ ಪರಿಣಾಮ ಜನರು ಗ್ಯಾರೆಜ್ ಗಳಲ್ಲಿದ್ದ ಕಾರುಗಳನ್ನು ಈಚೆಗೆ ತಂದರು, ಟ್ಯಾಕ್ಸಿಗಳನ್ನು ಬುಕ್ ಮಾಡಿದರು, ರಸ್ತೆಗೆ ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚಿನ ವಾಹನಗಳು ಇಳಿದವು. ಮೊದಲೇ ತೀವ್ರವಾಹನ ಸಾಂದ್ರತೆ ಇರುವ ದೆಹಲಿ ಮುಖ್ಯರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತು. ತತ್ಪರಿಣಾಮ ವಿಮಾನ ನಿಲ್ದಾಣಕ್ಕೆ ಪೈಲಟ್ ಗಳು ಮತ್ತಿತರ ಸಿಬ್ಬಂದಿ ಸಕಾಲದಲ್ಲಿ ತಲುಪಲು ಸಾಧ್ಯವಾಗದೇ ಸುಮಾರು 20ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು ಮಾಡಲಾಯಿತು. ಹತ್ತಾರು ವಿಮಾನಗಳ ಹಾರಾಟ ವಿಳಂಬವಾಯಿತು. ವಿಮಾನ ಹಾರಾಟ ರದ್ದಾದರೆ ಅದು ಬರೀ ರದ್ದಾಯಿತು ಎಂದಷ್ಟೇ ಪರಿಗಣಿಸುವಂತಿಲ್ಲ. ವಿಮಾನದಲ್ಲಿ ಹಾರಬೇಕಿದ್ದ ಸಾವಿರಾರು ಜನರ ವಹಿವಾಟುಗಳು ರದ್ದಾಗುತ್ತವೆ. ಅದರಿಂದಾಗುವ ಅನನಕೂಲಗಳು ಮೇಲ್ನೋಟದ ವಾಸ್ತವಿಕ ವೆಚ್ಚಕ್ಕಿಂತ ದೊಡ್ಡ ಪ್ರಮಾಣದಲ್ಲಿ ನಷ್ಟಕ್ಕೆ ಕಾರಣವಾಗಿರುತ್ತವೆ.
ಹಾಗೆಯೇ ದೆಹಲಿಯ ಹಲವು ಭಾಗಗಳಲ್ಲಿ ಇಂಟರ್ ನೆಟ್ ಸೇವೆಯಷ್ಟೇ ಅಲ್ಲಾ ಮೊಬೈಲ್ ಸೇವೆಯನ್ನೂ ರದ್ದು ಮಾಡಲಾಯಿತು. ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ತರಾತುರಿಯಲ್ಲಿ ಜಾರಿಗೆ ತಂದು ಹೀಗೆ ಏಕಾಏಕಿ ಇಂಟರ್ ನೆಟ್ ಮತ್ತು ಮೊಬೈಲ್ ಸೇವೆ ರದ್ದು ಮಾಡಿದರೆ, ಆರ್ಥಿಕ ವಹಿವಾಟಿಗೆ ಅಡಚಣೆ ಆಗುವುದಿಲ್ಲವೇ? ಏಕಾಏಕಿ ಇಂಟರ್ ನೆಟ್ ಮತ್ತು ಮೊಬೈಲ್ ಸ್ಥಗಿತಗೊಳಿಸಿದ್ದಿರಂದಾಗಿ ಆ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇರಿದಂತೆ ಆನ್ ಲೈನ್ ಮೂಲಕ ನಡೆಯುವ ಬಹುತೇಕ ವಹಿವಾಟು ಸ್ಥಗಿತವಾಗಿತ್ತು. ನಗರ ಪ್ರದೇಶದ ಜನರು ಬಹುತೇಕ ಆರ್ಥಿಕ ವಹಿವಾಟುಗಳನ್ನು ಮೊಬೈಲ್ ಮತ್ತು ಇಂಟರ್ ನೆಟ್ ಮೂಲಕವೇ ನಡೆಸುವುದರಿಂದಾಗಿ ಬೇರೆ ಉದ್ದೇಶಕ್ಕೆ ಮೊಬೈಲ್ ಮತ್ತು ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಿದರೆ ಇಡೀ ಆರ್ಥಿಕ ಚಟುವಟಿಕೆಯೇ ಸ್ಥಗಿತಗೊಳ್ಳುತ್ತದೆ. ಅದರಿಂದಾಗುವ ನಷ್ಟವನ್ನು ತಕ್ಷಣವೇ ಅಂದಾಜು ಮಾಡಲು ಸಾಧ್ಯವಿಲ್ಲ. ಆದರೆ, ಆದ ನಷ್ಟವು ಮೊಬೈಲ್ ಮತ್ತು ಇಂಟರ್ ನೆಟ್ ಸೇವೆ ಪ್ರಾರಂಭವಾದ ಕೂಡಲೇ ಸರಿಹೋಗಿಬಿಡುತ್ತದೆ ಎಂದುಕೊಳ್ಳುವಂತಿಲ್ಲ.
ಪ್ರತಿಭಟನೆ ವ್ಯಾಪಕವಾಗಿ ರಸ್ತೆ ಸಾರಿಗೆ ಸಂಚಾರ ಸ್ಥಗಿತಗೊಂಡರೆ ಅದರಿಂದಾಗುವ ನಷ್ಟವು ಬೃಹತ್ ಪ್ರಮಾಣದಲ್ಲಿರುತ್ತದೆ. ಈ ನಷ್ಟದಿಂದಾಗುವ ಸಂಕಷ್ಟಗಳು ಅಧಿಕಾರರಸ್ಥರಿಗೆ ಜನಪ್ರತಿನಿಧಿಗಳಿಗೆ ತಟ್ಟದೇ ಹೋಗಬಹುದು. ಆದರೆ ಸಾಮಾನ್ಯ ಮತದಾರರಿಗೆ ಖಂಡಿತಾ ತಟ್ಟುತ್ತದೆ. ಈಗ ಮುಖ್ಯ ಪ್ರಶ್ನೆ ಎಂದರೆ ಈಗಾಗಲೇ ಆರ್ಥಿಕ ಹಿಂಜರಿತದತ್ತ ದೇಶ ದಾಪುಗಾಲು ಹಾಕುತ್ತಿರುವಾಗ ಮತ್ತಷ್ಟು ಆರ್ಥಿಕ ಸಂಕಷ್ಟಗಳನ್ನು ಎದುರಿಸಲು ಜನರಿಗೆ ಶಕ್ತಿ ಇದೆಯೇ? ಎಂಬುದು.
ಯಾವ ದೇಶದಲ್ಲಿ ಪದೇ ಪದೇ ಇಂಟರ್ ನೆಟ್ ಮತ್ತು ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೋ ಅಂತಹ ದೇಶಗಳಲ್ಲಿ ವಿದೇಶಿಯರು ಬಂಡವಾಳ ಹೂಡಿಕೆ ಮಾಡಲು ಯಾರೂ ಮುಂದಾಗುವುದಿಲ್ಲ. ಅಷ್ಟೇ ಅಲ್ಲಾ, ಈಗಾಗಲೇ ಹೂಡಿಕೆ ಮಾಡಿರುವ ಬಂಡವಾಳವನ್ನು ವಾಪಾಸು ಪಡೆಯುತ್ತಾರೆ. ದೇಶದ ಆರ್ಥಿಕತೆ ಪಾತಾಳಕ್ಕೆ ಇಳಿದಿದ್ದರೂ ಹೇಗೋ ಏನೋ ಷೇರುಪೇಟೆ ಜಿಗಿಯುತ್ತಿದೆ. ಒಂದು ಬಾರಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂದಕ್ಕೆ ಪಡೆಯಲಾರಂಭಿಸಿದರೆ, ಷೇರುಪೇಟೆ ಪಾತಾಳಕ್ಕೆ ಇಳಿಯಲು ತಿಂಗಳುಗಳೇನೂ ಬೇಕಾಗಿಲ್ಲ. ದಿನಗಳೇ ಸಾಕು.
ಅಪನಗದೀಕರಣ ಹಾದಿ ತಪ್ಪಿದಾಗ ತಮ್ಮ ತಪ್ಪು ಮುಚ್ಚಿಕೊಳ್ಳಲು ಜಾರಿಗೆ ಡಿಜಿಟಲ್ ಇಂಡಿಯಾ, ಕ್ಯಾಶ್ಲೆಸ್ ಎಕಾನಮಿ ಮತ್ತಿತರ ಪರಿಕಲ್ಪನೆಗಳ ಜಾರಿಗೆ ತಂದವರೇ ಆರ್ಥ ಮಾಡಿಕೊಳ್ಳಬೇಕು. ಮೆಟ್ರೋ ಸೇವೆ ಸ್ಥಗಿತಗೊಳಿಸಿದರೆ ವಿಮಾನ ಹಾರಾಟ ರದ್ದಾಗುತ್ತದೆ, ಇಂಟರ್ ನೆಟ್ ಸ್ಥಗಿತಗೊಳಿಸಿದರೆ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುತ್ತದೆ ಎಂಬುದರ ಅರಿವು ಇರಬೇಕು. ಆಗ ಮಾತ್ರವೇ ‘ಬಹುಮತ’ ಕೊಟ್ಟ ಬಡಪಾಯಿ ಮತದಾರರಿಗೆ ಸಂಕಷ್ಟ ನೀಡದೇ ಅಧಿಕಾರ ನಡೆಸಲು ಸಾಧ್ಯ!