ಭಾರತ ಸಂವಿಧಾನದ ಮೂಲಭೂತ ಆಶಯಕ್ಕೆ ವಿರುದ್ಧವಾದ, ಮುಸ್ಲಿಮರನ್ನು ಗುರಿಯಾಗಿಸಿ ಜಾರಿಗೊಳಿಸಲಾಗುತ್ತಿರುವ ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತ ದಿನವೇ 21ನೇ ಶತಮಾನದ ಘೋರ ಪಾತಕ ಕೃತ್ಯಗಳಲ್ಲೊಂದಾದ, ಅದರಲ್ಲೂ ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯಗಳಲ್ಲಿ ಸದಾ ನೆನಪಿನಲ್ಲಿ ಉಳಿಯುವ, ಇಂದಿನ ಭಾರತದ ಸ್ಥಿತಿಗೆ ದಿಕ್ಸೂಚಿಯಾದ ಗುಜರಾತ್ ನರಮೇಧದಲ್ಲಿ ಅಂದಿನ ಮುಖ್ಯಮಂತ್ರಿ, ಇಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈವಾಡವಿರಲಿಲ್ಲ ಎಂದು ನಿವೃತ್ತ ನ್ಯಾ. ಜಿ. ಟಿ ನಾನಾವತಿ ಹಾಗೂ ನ್ಯಾ. ಅಕ್ಷಯ್ ಮೆಹ್ತಾ ನೇತೃತ್ವದ ಸಮಿತಿ ಸಲ್ಲಿಸಿದ್ದ 9 ಸಂಚಿಕೆಗಳ ಸುಮಾರು 1,500 ಪುಟಗಳ ವರದಿಯನ್ನು ಗುಜರಾತ್ ನ ಬಿಜೆಪಿ ಸರ್ಕಾರ ಬುಧವಾರ ಸದನದಲ್ಲಿ ಮಂಡಿಸಿದೆ.
“ಪೊಲೀಸರ ಕರ್ತವ್ಯ ಲೋಪದಿಂದ ದುರಂತ ನಡೆದು ಹೋಯಿತೇ ವಿನಾ ಹತ್ಯಾಕಾಂಡದಲ್ಲಿ ಸರ್ಕಾರದ ಕೈವಾಡವಿರಲಿಲ್ಲ” ಎಂದಿರುವ ನ್ಯಾ.ನಾನಾವತಿಯವರ ವರದಿಯು ಮಾಜಿ ಐಪಿಎಸ್ ಅಧಿಕಾರಿಗಳಾದ, ಕ್ಷುಲ್ಲಕ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸಂಜೀವ್ ಭಟ್, ಆರ್. ಬಿ. ಶ್ರೀಕುಮಾರ್ ಹಾಗೂ ರಾಹುಲ್ ಶರ್ಮಾ ಅವರು ಸಮಿತಿಗೆ ನೀಡಿರುವ “ದಾಖಲೆಗಳು ನಕಲಿ ಹಾಗೂ ದುರುದ್ದೇಶಪೂರಿತವಾಗಿದ್ದು, ಮೋದಿ ಸರ್ಕಾರಕ್ಕೆ ಮಸಿಬಳಿಯುವ ಉದ್ದೇಶ ಹೊಂದಿದ್ದವು” ಎಂದು ವರದಿಯನ್ನು ಸದನದಲ್ಲಿ ಮಂಡಿಸಿದ ರಾಜ್ಯ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ಹೇಳಿದ್ದು, ಮಾಜಿ ಅಧಿಕಾರಿಗಳು ಹಾಗೂ ಇದನ್ನು ಮುಖ್ಯವಾಗಿಟ್ಟುಕೊಂಡು ಅಂದಿನ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ ಪತ್ರಕರ್ತೆ ತೀಸ್ತಾ ಸೆಟ್ಲ್ ವಾಡ್ ನೇತೃತ್ವದ ಸಿಟಿಜನ್ ಫಾರ್ ಪೀಸ್ ಅಂಡ್ ಹಾರ್ಮೊನಿ ಸಂಸ್ಥೆಯನ್ನು ತನಿಖೆಗೆ ಒಳಪಡಿಸಲಾಗುವುದು ಎಂಬ ಸಂದೇಶವನ್ನು ಸೂಚ್ಯವಾಗಿ ರವಾನಿಸಿದ್ದಾರೆ. ಈ ಮೂಲಕ ಮೋದಿಯವರಿಗೆ ವಿರುದ್ಧವಾಗಿ ನಡೆದವರಿಗೆ ಉಳಿಗಾಲವಿಲ್ಲ ಹಾಗೂ ಬರುವ ದಿನಗಳು ಮತ್ತಷ್ಟು ಘೋರವಾಗಿರಲಿವೆ ಎಂಬ ಸುಳಿವನ್ನೂ ಗುಜರಾತ್ ಬಿಜೆಪಿ ಸರ್ಕಾರ ನೀಡಿದೆ.
ಕಿಡಿಗೇಡಿಗಳು ಸಾಬರಮತಿ ರೈಲಿಗೆ ಬೆಂಕಿ ಇಟ್ಟು 59 ಕರಸೇವಕರನ್ನು ಹತ್ಯೆಗೈದ ನಂತರ ನಡೆದ ಗುಜರಾತ್ ಹತ್ಯಾಕಾಂಡದಲ್ಲಿ ಅಧಿಕೃತವಾಗಿ ಸುಮಾರು 1,000 ಮಂದಿಯನ್ನು ಕಂಡಲ್ಲಿ, ಮನೆಗೆ ನುಗ್ಗಿ ಎಳೆದು ಹತ್ಯೆಗೈಯ್ಯಲಾಗಿತ್ತು. ಗಲಭೆಕೋರರು ಗರ್ಭಿಣಿಯರೂ ಎಂಬುದನ್ನೂ ಮರೆತು ಅವರ ಮೇಲೆ ಎರಗಿದ್ದರು. ಮೋದಿ ಹಾಗೂ ಹಿಂದೂ ಸಂಘಟನೆಗಳ ನಾಯಕರು ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸುದೀರ್ಘವಾಗಿ ಆರು ತಿಂಗಳು ಕುಟುಕು ಕಾರ್ಯಾಚರಣೆ ನಡೆಸಿ ತೆಹಲ್ಕಾ ಪತ್ರಕರ್ತ ಆಶೀಶ್ ಕೇತನ್ ಜಗತ್ತಿಗೆ ಪರಿಚಯಿಸಿದ್ದರು. ಇದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ನ ಪ್ರಮುಖ ನಾಯಕರು ಗುಪ್ತ ಕ್ಯಾಮೆರಾದಲ್ಲಿ ಹತ್ಯಾಕಾಂಡ ಪ್ರಾಯೋಜಿತ ಎಂಬುದನ್ನು ಮುಕ್ತವಾಗಿ ಒಪ್ಪಿಕೊಂಡು, ಸಂಭ್ರಮಿಸಿದ್ದರು.
ತನಿಖಾ ಪತ್ರಿಕೋದ್ಯಮದ ಮೂಲಕ ಸಂಚಲನ ಸೃಷ್ಟಿಸಿದ್ದ ತೆಹಲ್ಕಾ ಪತ್ರಿಕೆಯೂ ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ, ಹಿರಿಯ ಅಧಿಕಾರಿಗಳು, ಸಂಘ-ಪರಿವಾರದ ಮುಖಂಡರು ಹೇಗೆಲ್ಲಾ ವರ್ತಿಸಿದರು ಎಂಬುದನ್ನು ಎಳೆಎಳೆಯಾಗಿ ದಾಖಲೆ ಸಹಿತ ಸಮಾಜದ ಮುಂದಿಡುವ ಮೂಲಕ ಮೋದಿಯವರ ಬಂಡವಾಳ ಬಯಲು ಮಾಡಿತ್ತು. ಆನಂತರ ಪತ್ರಕರ್ತೆ ರಾಣಾ ಆಯೂಬ್ ಅವರು ಹಿರಿಯ ಅಧಿಕಾರಿಗಳು, ರಾಜಕಾರಣಿಗಳ ಕುಟುಕು ಕಾರ್ಯಾಚರಣೆ ನಡೆಸಿ, ಗುಜರಾತ್ ನರಮೇಧದ ಕಬಂಧಬಾಹುಗಳನ್ನು ಪರಿಚಯಿಸಿದ್ದರು. ತಮ್ಮ ಕ್ಯಾಮೆರಾದಲ್ಲಿ ಸೆರೆಯಾದ ಅಂಶಗಳನ್ನು ಆಧರಿಸಿ “ಗುಜರಾತ್ ರಾಯಿಟ್ಸ್: ಅನಾಟಮಿ ಆಫ್ ಕವರ್ ಅಪ್” (ಇದು ಕನ್ನಡದಲ್ಲೂ ಲಭ್ಯವಿದೆ) ಎಂಬ ಪುಸ್ತಕವನ್ನೂ ಪ್ರಕಟಿಸಿದ್ದಾರೆ.
ಮೋದಿ ನೇತೃತ್ವದ ಅಂದಿನ ಗುಜರಾತ್ ಸರ್ಕಾರದ ಕೃಪಾಪೋಷಿತ ಭಯೋತ್ಪಾದನೆಯೆಂದೇ ಬಿಂಬಿತವಾಗಿದ್ದ ಮಹಾಪತಕದಲ್ಲಿ ಸತ್ತವರು ಬಹುತೇಕ ಮುಸ್ಲಿಮರೇ ಆಗಿದ್ದರು ಎಂಬುದನ್ನು ಮಾಧ್ಯಮ ವರದಿಗಳು ಸಾಬೀತುಪಡಿಸಿದ್ದವು. ಕಾಂಗ್ರೆಸ್ ನ ಸಂಸದ ಎಹ್ಸಾನ್ ಜಾಫ್ರಿ ಅವರನ್ನು ಗಲಭೆಕೋರರು ಕೊಂದು ಹಾಕಿದ್ದರು.
ಈಗ ಸುದ್ದಿಯ ಕೇಂದ್ರವಾಗಿರುವ ನ್ಯಾ. ನಾನಾವತಿ ಆಯೋಗವು 12 ವರ್ಷಗಳ ಸುದೀರ್ಘ ತನಿಖೆಯ ನಂತರ ವರದಿಯನ್ನು 2014ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಗೆ ಸಲ್ಲಿಸಿತ್ತು. ಕಾರಣಾಂತರಗಳಿಂದ ಬದಿಗೆ ಸರಿಸಲಾಗಿದ್ದ ನ್ಯಾ. ನಾನಾವತಿ ಸಮಿತಿಯ ವರದಿಯನ್ನು ಈಗ ಮುನ್ನೆಲೆಗೆ ತರಲಾಗಿರುವುದೂ ಬಿಜೆಪಿಯ ತಂತ್ರಗಾರಿಕೆಯ ಭಾಗ ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯ.
ಗುಜರಾತ್ ಕೋಮು ಗಲಭೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನ್ಯಾ. ಕೆ.ಜಿ. ಶಾ ನೇತೃತ್ವದ ಸಮಿತಿಯನ್ನು ರಚಿಸಿ, ವರದಿ ನೀಡುವಂತೆ ಮೋದಿ ಸೂಚಿಸಿದ್ದರು. ಮುಖ್ಯಮಂತ್ರಿ ಮೋದಿಗೆ ಶಾ, ನಿಕಟವರ್ತಿ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಸುಪ್ರೀಂಕೋರ್ಟ್ ನ್ಯಾ. ನಾನಾವತಿಯವರಿಗೆ ಸಮಿತಿಯ ನೇತೃತ್ವ ವರ್ಗಾಯಿಸಲಾಗಿತ್ತು. ಇದೇ ಸಂದರ್ಭದಲ್ಲಿ ನ್ಯಾ. ಶಾ ನಿಧನರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಗುಜರಾತ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಕ್ಷಯ್ ಮೆಹ್ತಾ ಅವರನ್ನು ನೇಮಕ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ್ದ ಅಂದಿನ ಗುಜರಾತ್ ಸರ್ಕಾರದ ಅಡ್ವೋಕೇಟ್ ಜನರಲ್ ಅರವಿಂದ್ ಪಾಂಡ್ಯ ” ನ್ಯಾ. ಶಾ ಅವರು ನಮ್ಮ ಬಗ್ಗೆ ಮೃದುಧೋರಣೆ ಉಳ್ಳವರು, ನ್ಯಾ. ನಾನಾವತಿ ಅವರು ಧನದಾಹಿಯಾಗಿರುವುದರಿಂದ ಗಲಭೆಯಲ್ಲಿ ಭಾಗಿಯಾದ ಆರೋಪಿಗಳು ಆತಂಕಪಡುವ ಅಗತ್ಯವಿಲ್ಲ” ಎಂದು ಹೇಳಿಕೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಇನ್ನೂ ನ್ಯಾ. ಅಕ್ಷಯ್ ಮೆಹ್ತಾ ಅವರು ಗುಜರಾತ್ ಹತ್ಯಾಕಾಂಡದ ಪ್ರಮುಖ ಆರೋಪಿ ಬಾಬು ಭಜರಂಗಿಗೆ ಜಾಮೀನು ನೀಡಿದ ನ್ಯಾಯಪೀಠದ ನೇತೃತ್ಚವಹಿಸಿದ್ದ ನ್ಯಾಯಮೂರ್ತಿ ಎಂಬುದನ್ನು ನೆನೆಯಬಹುದು.
ಈ ಮಧ್ಯೆ, ಚುನಾಯಿತ ಸರ್ಕಾರವೊಂದು ಮುಂದೆ ನಿಂತು ಪ್ರಜೆಗಳನ್ನು ಕೊಲ್ಲುವಂತೆ ಆದೇಶ ನೀಡಿದ ಆರೋಪದಲ್ಲಿ ನರೇಂದ್ರ ಮೋದಿಯವರಿಗೆ ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ನಿರ್ಬಂಧ ವಿಧಿಸಿದ್ದವು. ಸ್ವತಃ ಅಂದಿನ ಪ್ರಧಾನಿ, ಬಿಜೆಪಿಯ ಅತ್ಯುನ್ನತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತಿಪಕ್ಷಗಳ ಟೀಕಾಪ್ರಹಾರ ಎದುರಿಸಲಾಗದೇ ” ರಾಜಧರ್ಮ ಪಾಲಿಸುವಂತೆ ಮೋದಿಯವರಿಗೆ ಮಾಧ್ಯಮಗಳ ಮುಂದೆ” ಖಡಕ್ ಸೂಚನೆ ನೀಡಿದ್ದರು.
ಗುಜರಾತ್ ನರಮೇಧಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳ ವಿಚಾರಣೆಯನ್ನು ಗುಜರಾತ್ ನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸುವ ಮೂಲಕ ಮೋದಿ ಸರ್ಕಾರ ವಿಶ್ವಾಸಕ್ಕೆ ಅರ್ಹವಲ್ಲ ಎಂಬ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದ್ದು ಈಗ ಇತಿಹಾಸ. ಇತ್ತೀಚೆಗೆ ಬಾಂಬೈ ಹೈಕೋರ್ಟ್ ನ ನ್ಯಾ. ತಾಹಿಲ್ ರಮಣಿ ನೇತೃತ್ವದ ಪೀಠವು ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಗರ್ಭಿಣಿ ಬಿಲ್ಕಿಸ್ ಬಾನು ಅವರ ಮೇಲಿನ ಗುಂಪು ಅತ್ಯಾಚಾರವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಲ್ಲದೇ, ನಾಲ್ವರು ಪೊಲೀಸರು ಹಾಗೂ ಇಬ್ಬರು ವೈದ್ಯರು ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಆನಂತರ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ತಾಹಿಲ್ ರಮಣಿಯವರನ್ನು 75 ನ್ಯಾಯಮೂರ್ತಿಗಳ ಕೋರ್ಟಿನಿಂದ 4 ಸದಸ್ಯ ಬಲದ ಮಿಜೊರಾಂ ಹೈಕೋರ್ಟ್ ಗೆ ವರ್ಗಾಯಿಸಿದ್ದಲ್ಲದೇ ಅವರ ಮೇಲೆ ಭ್ರಷ್ಟಾಚಾರ ತನಿಖೆಗೆ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಸಿಬಿಐ ತನಿಖೆಗೆ ಅಸ್ತು ಎಂದಿದ್ದು ಗುಜರಾತ್ ಮಾಡೆಲ್ ನ ಭಾಗ ಎನ್ನುವ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿತ್ತು.
ನ್ಯಾ. ನಾನಾವತಿ ಆಯೋಗದ ವರದಿ ಹೇಳುವಂತೆ ಅಂದಿನ ಮೋದಿ ಸರ್ಕಾರವು ಗೋಧ್ರೋತ್ತರ ರಕ್ತಕ್ರಾಂತಿಗೆ ಕಾರಣವಲ್ಲ ಎನ್ನುವುದಾದರೆ ಬಿಲ್ಕಿಸ್ ಬಾನು ಪ್ರಕರಣದಲ್ಲಿ ₹50 ಲಕ್ಷ ಪರಿಹಾರ ಹಾಗೂ ಆಕೆಗೆ ಸರ್ಕಾರಿ ಉದ್ಯೋಗ ನೀಡುವಂತೆ ತೀರ್ಪು ನೀಡಿದ ಸುಪ್ರೀಂಕೋರ್ಟ್ ಆದೇಶವನ್ನು ಹೇಗೆ ಅರ್ಥೈಸಿಕೊಳ್ಳಬೇಕು? ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಮೋದಿಯವರಿಗೆ 2014ರ ವರೆಗೂ ನಿರ್ಬಂಧ ವಿಧಿಸಿದ್ದೇಕೆ? ಮೋದಿಯನ್ನು ಪಕ್ಕದಲ್ಲೇ ಕೂಡ್ರಿಸಿಕೊಂಡು ಮಾಧ್ಯಮಗಳ ಮುಂದೆ ರಾಜಧರ್ಮ ಪಾಲಿಸುವಂತೆ ಮೋದಿಗೆ ಸೂಚಿಸಿದ್ದೇನೆ ಎಂದು ಬಿಜೆಪಿಯ ಮಹೋನ್ನತ ನಾಯಕ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದೇಕೆ? ಪತ್ರಕರ್ತ ಕರಣ್ ಥಾಪರ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ಗುಜರಾತ್ ಹತ್ಯಾಕಾಂಡದ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಸಂದರ್ಶನವನ್ನು ಅರ್ಧಕ್ಕೆ ಮೊಟಕು ಮಾಡಿ ಹೊರಟು ಬಿಟ್ಟ ಮೋದಿ ಮುಚ್ಚಿಟ್ಟಿದ್ದಾದರೂ ಏನು? ಗುಜರಾತ್ ಹತ್ಯಾಕಾಂಡದ ನಂತರ ಎದ್ದ ಇಂಥ ನೂರಾರು ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ. ಆದರೆ, ಅಲ್ಪಸಂಖ್ಯಾತರ ಮೇಲಿನ ದಾಳಿಯ ಮೂಲಕ ಉತ್ಕರ್ಷ ತಲುಪಿರುವ ನರೇಂದ್ರ ಮೋದಿಯವರು ಹಿಂದೂ ಹೃದಯ ಸಾಮ್ರಾಟನಾಗಿ ಬೆಳೆಗುತ್ತಿದ್ದಾರೆ. ದೀಪದ ಬುಡದಲ್ಲಿ ಗಾಢವಾದ ಕತ್ತಲು ಕವಿದಿದೆ.