ಒಕ್ಕೂಟ ವ್ಯವಸ್ಥೆಯ ಸ್ವತಂತ್ರ ಭಾರತದಲ್ಲಿ ಉತ್ತರ ಭಾರತದ ದಬ್ಬಾಳಿಕೆಯನ್ನು ಪ್ರಬಲವಾಗಿ ವಿರೋಧಿಸಿದ ರಾಜ್ಯವಿದ್ದರೆ ಅದು ತಮಿಳುನಾಡು. ಉಳಿದ ರಾಜ್ಯಗಳು ತಮ್ಮ ಅಸ್ಮಿತೆಗಾಗಿ ಹಿಂದಿ ರಾಜ್ಯಗಳ ವಿರುದ್ಧ ನಿಂತಿದ್ದರೂ, ತಮಿಳುನಾಡಿನದ್ದು ಒಂದು ಪಾಲು ಹೆಚ್ಚು. ಒಕ್ಕೂಟ ವ್ಯವಸ್ಥೆಯಲ್ಲಿ ಉತ್ತರ ಭಾರತದ ನಾಯಕರುಗಳು ದಕ್ಷಿಣ ಭಾರತದ ಕಡೆಗೆ ತೋರುವ ಅನಾದರಗಳೆದುರು ತಮಿಳರ ಭಾಷಾ ಪ್ರೇಮ, ʼತಮಿಳು ರಾಜಕೀಯ ಅಸ್ಮಿತೆʼ ಇನ್ನಷ್ಟು ತೀವ್ರಗೊಂಡಿದೆ, ಇನ್ನೂ ತೀವ್ರಗೊಳ್ಳುತ್ತಿದೆ.
ತಮಿಳುನಾಡಿನಲ್ಲಿ ರಾಜಕೀಯ ನೆಲೆಕಾಣಲು ಕಾಂಗ್ರೆಸ್ ಪ್ರಯತ್ನಪಟ್ಟು ವಿಫಲಗೊಂಡಿದೆ. ಬಿಜೆಪಿ ವಿಫಲಗೊಳ್ಳುತ್ತಿದೆ. ಅಷ್ಟರಮಟ್ಟಿಗೆ ತಮಿಳರು ರಾಷ್ಟ್ರೀಯ ಪಕ್ಷಗಳ ಅಧಿಕಾರವನ್ನು ರಾಜ್ಯದ ಗಡಿಯ ಹೊರಗಡೆ ಇಟ್ಟಿದ್ದಾರೆ. ಹಾಗಾಗಿ ತಮಿಳುನಾಡಿನಲ್ಲಿ ಯಾವ ಹಿಂದಿ ನಾಯಕನೂ ಪ್ರಭಾವಶಾಲಿಯಾಗಲು ಸಾಧ್ಯವಿಲ್ಲ, ಮೋದಿಯಾದರೂ ಸರಿ, ಅದು ರಾಹುಲ್ ಆದರೂ ಸರಿ.
ಹೀಗಿರುವ ತಮಿಳುನಾಡಿನಲ್ಲಿ ಬಿಜೆಪಿ ನೆಲೆಯೂರಲು ಕನಸು ಕಾಣುತ್ತಿದೆ. ಹಾಗಾಗಿಯೇ ತಮಿಳು ಮೂಲದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಯನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಬಿಜೆಪಿಗೆ ಸೇರಿದ ಬೆನ್ನಿಗೆ ಅಣ್ಣಾಮಲೈ ʼತಮಿಳುನಾಡಿನಲ್ಲಿ ರಾಷ್ಟ್ರೀಯತೆಯ ಮನೋಭಾವನೆಯನ್ನುʼ ಹುಟ್ಟಿಸುವುದು ನನ್ನ ಉದ್ದೇಶ ಎಂದು ಹೇಳಿದ್ದಾರೆ. ಅದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ʼತಮಿಳುನಾಡು ದೇಶದ್ರೋಹಿಗಳಿಗೆ ಆಶ್ರಯ ನೀಡುತ್ತಿದೆ‘ ಎಂದಿದ್ದಾರೆ. ಒಟ್ಟಾರೆ ಬಿಜೆಪಿ ಪ್ರಕಾರ ತಮಿಳುನಾಡಿನಲ್ಲಿ ರಾಷ್ಟ್ರೀಯ ಭಾವನೆಯ ಕೊರತೆಯಿದೆ. ಹಾಗೂ ಅಲ್ಲಿ ಬಿಜೆಪಿಯ ʼಅಣ್ಣಾಮಲೈʼ ರಾಷ್ಟ್ರೀಯ ಮನೋಭಾವನೆಯನ್ನು ಹುಟ್ಟಿಸಲು ಪ್ರಯತ್ನ ಪಡುತ್ತಾರೆ..!
ಬಿಜೆಪಿ ಅಥವಾ ಆರ್‌ಎಸ್‌ಎಸ್ ಪರಿವಾರದ ಪರಿಭಾಷೆಯಲ್ಲಿ ರಾಷ್ಟ್ರೀಯತೆ ಹಾಗೂ ಹಿಂದುತ್ವವನ್ನು ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಅಜೆಂಡಾದ ಆರ್‌ಎಸ್‌ಎಸ್ ಗೆ ತನ್ನ ಗುರಿ ಪೂರ್ತಿಗೊಳಿಸಲು ಭವಿಷ್ಯದಲ್ಲಿ ಮಹಾ ತೊಡಕಾಗಿರುವುದು ತಮಿಳುನಾಡು, ಕೇರಳ ಮುಂತಾದ ರಾಜ್ಯಗಳು. ಕೇರಳದಲ್ಲಿ ಕಮ್ಯುನಿಸಂ ವಿಚಾರಧಾರೆ ಹಾಗೂ ತಮಿಳುನಾಡಿನ ದ್ರಾವಿಡಿಯನ್ ಸಿದ್ಧಾಂತಗಳು ಆಳವಾಗಿ ಬೇರು ಬಿಟ್ಟಿದ್ದರಿಂದಲೇ ಹಿಂದುತ್ವ ನೆಲೆಯೂರಲು ಸಾಧ್ಯವಾಗುತ್ತಿಲ್ಲ. ಒಂದು ಮಟ್ಟಿಗೆ ಕೇರಳ ಹಿಂದುತ್ವದ ಎದುರು ಮಂಡಿಯೂರಿದರೂ ಊರೀತೇನೋ, ಆದರೆ ತಮಿಳರ ಮಣ್ಣಿನಲ್ಲಿ ಹಿಂದುತ್ವ ಅಷ್ಟು ಸುಲಭವಾಗಿ ತನ್ನ ಕಮಲ ಅರಳಿಸುವುದಿಲ್ಲ.
ಕೇರಳದಲ್ಲಾಗಲೀ, ತಮಿಳುನಾಡಿನಲ್ಲಾಗಲೀ ಹಿಂದುತ್ವ ಸಿದ್ದಾಂತ ಇಲ್ಲವೇ ಇಲ್ಲವೆಂದಲ್ಲ. ಆದರೆ ಪ್ರಬಲವಾಗುತ್ತಿಲ್ಲ. ಹಾಗಾಗಿಯೇ ಕೇರಳವನ್ನು ಸೊಮಾಲಿಯಾಕ್ಕೆ ನರೇಂದ್ರ ಮೋದಿ ಹೋಲಿಸಿದರೆ, ಜೆಪಿ ನಡ್ಡಾ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತಮಿಳುನಾಡನ್ನು ದೇಶದ್ರೋಹಿಗಳ ಆಶ್ರಯ ತಾಣ ಎಂದಿರುವುದು. ಬಿಜೆಪಿಯ ಮುಖ್ಯ ಅಸ್ತ್ರವಾದ ಗೋಮಾತೆ, ಹಿಂದೂ ಅಸ್ಮಿತೆ ಈ ಎರಡು ರಾಜ್ಯದಲ್ಲಿ ಮಕಾಡೆ ಮಲಗಿ ಬಿಡುತ್ತವೆ. ಕೇರಳದಲ್ಲಿ ಗೋವಿನ ಹೆಸರಲ್ಲಿ ಜನರನ್ನು ಒಡೆಯಲು ಸಾಧ್ಯವಿಲ್ಲ ಹಾಗೂ ಹಿಂದೂ ಅಸ್ಮಿತೆಯ ಹೆಸರಲ್ಲಿ ತಮಿಳುನಾಡಿನಲ್ಲಿ ಜನರನ್ನು ಒಗ್ಗೂಡಿಸುವುದು ಸಾಧ್ಯವಿಲ್ಲ. ತಮಿಳು ಅಸ್ಮಿತೆ ರಾಜಕಾರಣದೆದುರು ಎದುರು ಹಿಂದೂ ಅಸ್ಮಿತೆಯ ರಾಜಕಾರಣ ಕೆಲಸ ಮಾಡುವುದಿಲ್ಲ. ಹಾಗಾಗಿಯೇ ʼಹಿಂದಿʼಯನ್ನು ಮುನ್ನಲೆಗೆ ತಂದು ತಮಿಳನ್ನು ಛಿದ್ರಗೊಳಿಸುವ ಪ್ರಯತ್ನದಲ್ಲಿ ಬಿಜೆಪಿ ತೀವ್ರವಾಗಿ ತೊಡಗಿರುವುದು.
ಅದರಲ್ಲೂ, ದೇಶವ್ಯಾಪಿ ಹಿಂದೂ ಅಸ್ಮಿತೆಯನ್ನು ಜಾಗೃತಗೊಳಿಸಿದ ʼಶ್ರೀ ರಾಮರ್ʼ ತಮಿಳುನಾಡಿನಲ್ಲಿ ಅಷ್ಟು ಪ್ರಭಾವಶಾಲಿಯಾಗಿಲ್ಲ. ರಾವಣನನ್ನು ತಮಿಳು ರಾಜನೆಂದು ನಂಬುವ ಬಹುಪಾಲು ತಮಿಳರು, ರಾವಣ ಖಳನಾಗಿರುವ ರಾಮಾಯಣವನ್ನು ತಿರಸ್ಕರಿಸುತ್ತಾರೆ. ಹಾಗಾಗಿಯೇ ಆಗಸ್ಟ್ 5 ರಂದು ಶ್ರೀರಾಮ ಮಂದಿರದ ಭೂಮಿ ಪೂಜೆ ಸಂಧರ್ಭದಲ್ಲಿ ತಮಿಳರು ರಾವಣನನ್ನು ಸ್ತುತಿಸಿದ್ದು, ಟ್ವಿಟರಿನಲ್ಲಿ #LandofRavana #LandOfRavanan (ರಾವಣನ ಭೂಮಿ) ಹಾಗೂ #TamilPrideRavana (ರಾವಣ ತಮಿಳು ಹೆಮ್ಮೆ) ಎಂಬ ಹ್ಯಾಷ್‌ಟ್ಯಾಗನ್ನು ತಮಿಳರು ಟ್ರೆಂಡ್ ಮಾಡಿರುವುದು. ಬಹುಪಾಲು ತಮಿಳರು ರಾವಣ ತಮಿಳು ಅರಸ ಹಾಗೂ ಉತ್ತರ ಭಾರತದ ರಾಜ ರಾಮನನ್ನು ಎದುರಿಸಿದಕ್ಕಾಗಿ ʼರಾಕ್ಷಸʼ ಎನ್ನಲಾಗುತ್ತಿದೆ ಎಂದು ನಂಬಿದ್ದಾರೆ. ʼತಮಿಳ್ ಕಲಾಚಾರಂʼ ಮೆಲೆ ಭಾರೀ ಅಭಿಮಾನ ಇರುವ ತಮಿಳರು ಸಹಜವಾಗಿಯೇ ರಾವಣನನ್ನು ಪೂಜಿಸುತ್ತಾರೆ. ಶ್ರೀಲಂಕಾದಲ್ಲೂ ರಾವಣನನ್ನು ಪೂಜಿಸುವವರ ಸಂಖ್ಯೆ ಹೆಚ್ಚಿದೆ. ಅಲ್ಲಿ ರಾವಣನೇ ನಾಯಕ.
ಇನ್ನು ಉತ್ತರ ಭಾರತದ ಅಧಿಕಾರದ ಮೇಲೆ, ಕೇಂದ್ರಕ್ಕೆ ನಿಷ್ಟವಾಗಿರುವ ಸೇನೆಯ ಮೇಲೆ ತಮಿಳರಲ್ಲಿ ಅಸಹನೆ ಇರಲು ಇನ್ನೊಂದು ಕಾರಣವೂ ಇದೆ. ಅದು ರಾಜೀವ್ ಗಾಂಧಿ ಕಾಲದಲ್ಲಿ ಶ್ರೀಲಂಕನ್ ತಮಿಳರ ಮೇಲೆ ನಡೆದ ದೌರ್ಜನ್ಯ. ಶ್ರೀಲಂಕನ್ ತಮಿಳರಿಗೆ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗಿಗೆ ನಾಯಕತ್ವ ವಹಿಸಿದ ಪ್ರಭಾಕರನ್, LTTE (Liberation Tigers of Tamil Eelam) ಸಂಘಟನೆ ಹುಟ್ಟುಹಾಕಿ, ಸಶಸ್ತ್ರ ಹೋರಾಟ ನಡೆಸಿದವರು. ಭಾರತ ಸರ್ಕಾರವೇ ಆದಿಯಲ್ಲಿ ಈ ಸಂಘಟನೆಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿ, ರಣವಿದ್ಯೆ ಕಲಿಸಿ ಶ್ರೀಲಂಕನ್ ಮಣ್ಣಿನಲ್ಲಿ ಬೆಳೆಸಿದರೂ, ಕೊನೆಗೆ ಶ್ರೀಲಂಕನ್ ಸರ್ಕಾರದೊಂದಿಗೆ ಒಪ್ಪಂದ ಮಾಡಿ ತಮಿಳರ ಮೇಲೆಯೇ ಬೇಟೆ ಮಾಡಿತ್ತು. ಪ್ರಭಾಕರನ್ ಸೇರಿದಂತೆ ಸಂಘಟನೆಯ ನಾಯಕರನ್ನು ಹತ್ಯಗೈದಿತ್ತು. ತಮಿಳ್ ಹೆಣ್ಣುಮಕ್ಕಳ ಮೇಲೆ ಭಾರತದ ಸೇನೆ ಅತ್ಯಾಚಾರ ಮಾಡಿತ್ತು ಎಂಬ ಆರೋಪವೂ ಇದೆ. ಈ ಕಾರಣಕ್ಕೆ ರಾಜೀವ್ ಗಾಂಧಿ ಹತ್ಯೆ ನಡೆದರೂ, ತಮಿಳರ ನೋವು ಇನ್ನೂ ಶಮನವಾಗಲಿಲ್ಲ. ಈಗಲೂ ಭಾರತ ಸರ್ಕಾರ ತಮಿಳರ ಮೇಲೆ ತೋರಿಸಿದ ವಿಶ್ವಾಸ ದ್ರೋಹವೆಂದೇ ನಂಬಿದ್ದಾರೆ.
ಅಲ್ಲದೆ, ತಮಿಳುನಾಡಿನ ಮೀನುಗಾರರಿಗೆ ಶ್ರೀಲಂಕನ್ ನೌಕಾಸೇನೆಯಿಂದ ಸತತ ತೊಂದರೆಯಾಗುತ್ತಿದೆ. ಸಮುದ್ರ ಸೀಮಾರೇಖೆಯನ್ನು ದಾಟಿದ ನೆಪದಲ್ಲಿ ಹಲವಾರು ಮೀನುಗಾರರನ್ನು ನಡುಕಡಲಿನಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ, ಹಲವಾರು ಮಂದಿ ಶ್ರೀಲಂಕಾ ಸೇನೆಯ ಬಂಧನದಲ್ಲಿದ್ದಾರೆ. ಇದರ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ ಎಂಬುವುದು ಅವರ ಅಭಿಪ್ರಾಯ. ಜೊತೆಗೆ, ಕಾವೇರಿ ವಿಷಯದಲ್ಲಿ ಕೇಂದ್ರ ತಮಿಳರಿಗೆ ಅನ್ಯಾಯ ಎಸಗುತ್ತಿದೆ ಎಂದು ನಂಬಿದ್ದಾರೆ. ಅದೂ ಅಲ್ಲದೆ, ರಾಜ್ಯ ಸರ್ಕಾರಗಳಿಗೆ ಬರಬೇಕಾದ ತೆರಿಗೆ ಹಣದಲ್ಲೂ ತಮಿಳುನಾಡಿಗೆ ಅನ್ಯಾಯವಾಗುತ್ತಿದೆ ಎಂಬ ಆಕ್ರೋಶದಲ್ಲಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಕೇಂದ್ರದಲ್ಲಿ ಬರುವ ಯಾವುದೇ ಸರ್ಕಾರಗಳು ತಮಿಳರ ನಂಬಿಕೆಯನ್ನು ಗೆಲ್ಲುವಲ್ಲಿ ಸಫಲವಾಗುತ್ತಿಲ್ಲ.
ಹೀಗಿರುವ ತಮಿಳುನಾಡಿನಲ್ಲಿ ಕೇವಲ ಹಿಂದೂ ಅಸ್ಮಿತೆಯ ಮೂಲಕ ಬಿಜೆಪಿಗೆ ಪ್ರವೇಶ ಪಡೆಯುವುದು ಸಾಧ್ಯವಿಲ್ಲ. ಹಾಗೇನಾದರೂ ಪ್ರವೇಶಿಸಬೇಕೆಂದರೂ ಮೊದಲು ತಮಿಳರಲ್ಲಿ ಹೆಚ್ಚಾಗಿರುವ ʼದ್ರಾವಿಡʼ ಅಸ್ಮಿತೆಯನ್ನು ಒಡೆಯಬೇಕು. ದ್ರಾವಿಡ ಅಸ್ಮಿತೆಯೊಂದಿಗೆ ತಮಿಳರ ಭಾಷೆ, ನಂಬಿಕೆ, ಧರ್ಮ, ಸಂಸ್ಕೃತಿ ಒಳಗೂಡಿರುವುದರಿಂದ ಅದನ್ನು ಒಡೆಯದೆ ಬೇರೆ ವಿಧಿಯೇ ಇಲ್ಲದಂತಾಗಿದೆ ʼಏಕ ಸಂಸ್ಕೃತಿʼ ಪ್ರತಿಪಾದಕರಿಗೆ. ತಮ್ಮ ಏಕಮೇವ ನಾಯಕ ʼನರೇಂದ್ರ ಮೋದಿʼಯ ವರ್ಚಸ್ಸು ಭಾರತದಲ್ಲಿ ಹರಡಿರುವಾಗಲೂ ತಮಿಳರು ʼಮೋಡಿʼಗೆ ಒಳಗಾಗಲಿಲ್ಲ. ಬದಲಾಗಿ ಚೆನ್ನೈಗೆ ಭೇಟಿ ನೀಡಿದ ಮೋದಿಯನ್ನು ʼಗೋಬ್ಯಾಕ್ ಮೋದಿʼ ಹಾಗೂ ʼಸ್ಯಾಡಿಸ್ಟ್ ಮೋದಿʼ ಎಂಬ ಹ್ಯಾಷ್‌ಟ್ಯಾಗ್ ಮೂಲಕ ಟ್ವಿಟರ್ ಟ್ರೆಂಡ್ ಮಾಡಿದ್ದರು.
ಬಿಜೆಪಿ, ಸಂಘ ಪರಿವಾರ, ಹಿಂದುತ್ವ ತಮಿಳುನಾಡಿನಲ್ಲಿ ಪದೇ ಪದೇ ಮುಖಭಂಗಕ್ಕೆ ಒಳಗಾಗುತ್ತಿದೆ. ತಮಿಳು ಸಿನೆಮಾಗಳೂ ಕೂಡಾ ಹಿಂದುತ್ವದ ನಂಬಿಕೆಗಳನ್ನು ಬುಡಮೇಲು ಗೊಳಿಸುವ ಯಾವ ಅವಕಾಶವನ್ನು ಕೈ ಚೆಲ್ಲುವುದಿಲ್ಲ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳೂ ಹಿಂದುತ್ವಕ್ಕೆ ಸವಾಲು ಒಡ್ಡುತ್ತಿರುತ್ತವೆ. ಇಂತಿಪ್ಪ ತಮಿಳುನಾಡು ಬಿಜೆಪಿಗರಲ್ಲಿ ಅಸಹನೆ ಉಂಟು ಮಾಡುತ್ತಿದೆ. ಈ ಹತಾಷೆಯಿಂದಲೇ ಬಿಜೆಪಿ ಮತ್ತೆ ʼಹುಸಿ ದೇಶಪ್ರೇಮದʼ ಸವಕಲು ನಾಣ್ಯದೊಂದಿಗೆ ಮುಂದೆ ಬಂದಿದೆ. ಪೆರಿಯಾರ್ ಮಣ್ಣಲ್ಲಿ ದ್ರಾವಿಡಿಯನ್ ಅಸ್ಮಿತೆ ಮೀರಿ ಗೋಲ್ವಾಳ್ಕರ್ ಸಿದ್ಧಾಂತ ಹೇರಲು ಹವಣಿಸುತ್ತಿದೆ.