ಭಾರತದಲ್ಲಿ 2 ತಿಂಗಳ ಬರೋಬ್ಬರಿ ಲಾಕ್ಡೌನ್ ಜಾರಿಯಲ್ಲಿದ್ದರೂ ಸಾಂಕ್ರಾಮಿಕ ರೋಗದ ಹರಡುವಿಕೆ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 6,977 ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಇದು ಸತತ ನಾಲ್ಕನೇ ದಿನ ದಾಖಲೆಯ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿರುವುದು.
ಭಾರತದಲ್ಲಿ ಒಟ್ಟು ದಾಖಲಾದ ಪ್ರಕರಣದ ಸಂಖ್ಯೆ 1,38,845 ತಲುಪಿದ್ದು ಕಳೆದ 24 ಗಂಟೆಗಳಲ್ಲಿ 154 ಮಂದಿ ಕರೋನಾದಿಂದಾಗಿ ಅಸುನೀಗಿದ್ದು, ಒಟ್ಟು ಮರಣಹೊಂದಿದವರ ಸಂಖ್ಯೆ 4,021 ತಲುಪಿದೆ.
ಸದ್ಯ ಭಾರತದಲ್ಲಿ 77,103 ಪ್ರಕರಣಗಳು ಸಕ್ರಿಯವಾಗಿದ್ದು, ಅದರಲ್ಲಿ ಅರ್ಧದಷ್ಟು ಪ್ರಕರಣ ಮಹಾರಾಷ್ಟ್ರವೊಂದರಲ್ಲೇ ಸಕ್ರಿಯವಾಗಿದೆ. ಮೇ 24 ರಂದು 3,041 ಪ್ರಕರಣ ಪತ್ತೆಯಾದ ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 50 ಸಾವಿರದ ಗಟಿ ದಾಟಿದೆ.
ಮಹಾರಾಷ್ಟ್ರ ರಾಜಧಾನಿ ಮುಂಬೈಯಲ್ಲಿ ಒಂದೇ ದಿನ 1,725 ಪ್ರಕರಣಗಳು ದಾಖಲಾಗಿದ್ದು, ಮುಂಬೈ ನಗರವೊಂದರಲ್ಲೇ 30 ಸಾವಿರ ಕರೋನಾ ಪ್ರಕರಣ ದಾಖಲಾಗಿದೆ. ಮಹಾನಗರಿಯಲ್ಲಿ ಸರಿ ಸುಮಾರು ಸಾವಿರದಷ್ಟು ಜನರು ಕರೋನಾದಿಂದಾಗಿ ಅಸುನೀಗಿದ್ದಾರೆ.
![](https://pratidhvani.in/wp-content/uploads/2021/02/pratidhvani_2020_04_e241e77c_4e48_4c8a_8518_5c7e48e673cc_Stay_Home_2-241.jpg)