ಕರೋನಾ ಸೋಂಕಿನಿಂದ ಬಚಾವ್ ಮಾಡುವ ಉದ್ದೇಶದಿಂದ 21 ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದ್ದ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಮುಂದಿನ ದಿನಗಳಲ್ಲಿ ದೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಭಾರತೀಯರಿಗೆ ಸಲಹೆ ಸೂಚನೆಗಳನ್ನು ನೀಡಿದ್ರು. ಕರೋನಾ ವೈರಸ್ ವಿರುದ್ಧ ಭಾರತದ ಬಲವಾದ ಹೋರಾಟ ಮಾಡುತ್ತಿದೆ. ಭಾರತೀಯರ ತ್ಯಾಗದಿಂದಾಗಿ ದೇಶದಲ್ಲಿ ನಷ್ಟ ಕಡಿಮೆ ಆಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಕೆಲವರಿಗೆ ಆಹಾರಕ್ಕೆ ಸಂಕಷ್ಟ ಒದಗಿರಬಹುದು. ಇನ್ನೂ ಕೆಲವರಿಗೆ ಓಡಾಡಲು ಸಮಸ್ಯೆ ಆಗಿರಬಹುದು. ಕೆಲವರು ಮನೆ, ಕುಟುಂಬಗಳಿಂದ ದೂರ ಇದ್ದೀರಿ. ಆದ್ರೆ ದೇಶಕ್ಕಾಗಿ ನೀವು ಯೋಧರಂತೆ ಕೆಲಸ ಮಾಡುತ್ತಿದ್ದೀರಿ. ಅದಕ್ಕಾಗಿ ನಾನು ನಿಮಗೆ ನಮಸ್ಕರಿಸುತ್ತೇನೆ ಎಂದಿದ್ದಾರೆ.
ಭಾಷಣದ ನಡುವೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಭಾರತ ಸಾಮೂಹಿಕ ಶಕ್ತಿಯ ಪ್ರದರ್ಶನ ಮಾಡುವ ಮೂಲಕ ಅಂಬೇಡ್ಕರ್‌ಗೆ ಶ್ರದ್ಧಾಂಜಲಿ ಸಮರ್ಪಿಸುತ್ತಿದೆ. ಅಂಬೇಡ್ಕರ್‌ಗೆ ದೇಶ ಅರ್ಪಿಸುತ್ತಿರುವ ನಿಜವಾದ ಶ್ರದ್ಧಾಂಜಲಿ ಇದು. ಇಡೀ ದೇಶದ ಪರವಾಗಿ ನಾನು ಅಂಬೇಡ್ಕರ್‌ಗೆ ನಮಸ್ಕರಿಸುತ್ತೇನೆ ಎಂದಿದ್ದಾರೆ. ದೇಶದ ಹಲವಾರು ಕಡೆಗಳಲ್ಲಿ ವಿವಿಧ ಹಬ್ಬಗಳನ್ನು ಆಚರಿಸುವ ಕಾಲವಿದು. ಭಾರತ ಸದಾ ಹಬ್ಬಗಳೊಂದಿಗೆ ನಳನಳಿಸುತ್ತಿರುತ್ತೆ. ಹಲವು ರಾಜ್ಯಗಳಲ್ಲಿ ನೂತನ ಸಂವತ್ಸರದ ಆರಂಭವಾಗಿದೆ. ದೇಶದ ಜನ ಸಂಯಮದಿಂದ ತಮ್ಮ ಮನೆಗಳಲ್ಲಿದ್ದೀರಿ. ಮನೆಗಳಲ್ಲೇ ಹಬ್ಬಗಳನ್ನು ಆಚರಿಸುತ್ತಿರೋದು ಪ್ರೇರಕವಾಗಿದೆ. ಇವತ್ತು ಇಡೀ ವಿಶ್ವದಲ್ಲಿ ಕರೋನಾ ವೈರಸ್ ಮಹಾಮಾರಿ ಹರಡಿರುವುದು ಗೊತ್ತಿದೆ ಎಂದಿದ್ದಾರೆ.
ಕರೋನಾ ವೈರಸ್ ವಿರುದ್ಧ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಕರೋನಾ ಸೋಂಕು ತಡೆಯಲು ಸಮರ್ಥ ಕ್ರಮಗಳನ್ನ ಕೈಗೊಂಡಿದ್ದೇವೆ. ನಮ್ಮಲ್ಲಿ ಒಂದೇ ಒಂದು ಪ್ರಕರಣ ಇಲ್ಲದೇ ಇದ್ದಾಗಲೇ ನಾವು ಕ್ರಮ ತೆಗೆದುಕೊಂಡಿದ್ದೇವೆ. ಏರ್ಪೋರ್ಟ್ಗಳಲ್ಲಿ ಸ್ಕ್ರೀನಿಂಗ್ ಆರಂಭ ಮಾಡಿದ್ದೆವು. ವಿದೇಶದಿಂದ ಬಂದವರನ್ನು ಕ್ವಾರಂಟೈನ್ನಲ್ಲಿ ಇಡಲಾಗ್ತಿತ್ತು. ನಮ್ಮಲ್ಲಿ 550 ಪ್ರಕರಣ ಇದ್ದಾಗಲೇ ನಾವು 21 ದಿನ ಕಾಲ ಲಾಕ್‌ಡೌನ್ ಘೋಷಿಸಿದ್ದೆವು. ಸಮಸ್ಯೆ ಉಲ್ಬಣಿಸುವ ತನಕ ಕಾಯುತ್ತಾ ಕೂರಲಿಲ್ಲ. ಭಾರತ ಸರ್ಕಾರ ವೇಗವಾಗಿ ಕ್ರಮ ಕೈಗೊಂಡು, ದಿಟ್ಟ ನಡೆ ಇಟ್ಟಿದೆ. ಭಾರತವನ್ನು ಬೇರೆ ಯಾವ ದೇಶದೊಂದಿಗೂ ತುಲನೆ ಮಾಡೋದು ಸೂಕ್ತವಲ್ಲ. ಬೇರೆ ದೊಡ್ಡ ದೇಶಗಳಿಗೆ ಹೋಲಿಸಿದರೆ ಭಾರತ ಸದ್ಯಕ್ಕೆ ಉತ್ತಮ ಸ್ಥಿತಿಯಲ್ಲಿದೆ. ಭಾರತಕ್ಕೆ ಹೋಲಿಸಿದೆರೆ ಬೇರೆ ದೇಶಗಳಲ್ಲಿ ಶೇಕಡ 25ರಷ್ಟು ಸೋಂಕಿತರು ಹೆಚ್ಚಿದ್ದಾರೆ. ಭಾರತದ ದಿಟ್ಟ ಕ್ರಮದಿಂದಾಗಿ ಇವತ್ತು ಸ್ಥಿತಿ ಎಷ್ಟೋ ಸುಧಾರಿಸಿದೆ ಎಂದಿದ್ದಾರೆ.

ವೇಗವಾಗಿ ಕ್ರಮ ಕೈಗೊಳ್ಳದಿದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ ಅಂತರ ಹಾಗೂ ಲಾಕ್ಡೌನ್ನಿಂದ ಲಾಭವಾಗಿದೆ. ಕೇವಲ ಆರ್ಥಿಕವಾಗಿ ನೋಡಿದ್ರೆ ದೊಡ್ಡ ನಷ್ಟ ಉಂಟಾಗಿರಬಹುದು. ಆದರೆ ಭಾರತೀಯರ ಜೀವದ ಎದುರು ಬೇರೆ ಯಾವುದೂ ದೊಡ್ಡದಲ್ಲ. ಭಾರತ ಸರ್ಕಾರದ ಕ್ರಮಗಳ ಬಗ್ಗೆ ಜಗತ್ತಿನೆಲ್ಲ ಕಡೆ ಆಗೋದು ಸಹಜ. ಎಲ್ಲಾ ರಾಜ್ಯಗಳೂ ಕೂಡ ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿವೆ. ಈ ಎಲ್ಲಾ ಪ್ರಯತ್ನಗಳ ನಡುವೆಯೂ ಕರೋನಾ ವೈರಸ್ ಹರಡುತ್ತಿದೆ. ಲಾಕ್‌ಡೌನ್ ಮುಂದುವರಿಸಲು ಎಲ್ಲರಿಂದ ಮನವಿಗಳು ಬರ್ತಿವೆ. ಭಾರತದಲ್ಲಿ ಲಾಕ್‌ಡೌನ್ ಮೇ 3ರವರೆಗೆ ವಿಸ್ತರಿಸಬೇಕು. ಮೇ 3ರ ತನಕ ಲಾಕ್‌ಡೌನ್ ಮುಂದುವರಿಸಬೇಕಿದೆ. ಮೇ 3ರವರೆಗೂ ಇದೇ ರೀತಿ ಲಾಕ್‌ಡೌನ್ ಅನುಸರಿಸಬೇಕು. ಹಾಟ್‌ಸ್ಪಾಟ್‌ಗಳಲ್ಲಿ ಇನ್ನಷ್ಟು ಬಿಗಿ ಕ್ರಮ ವಹಿಸಬೇಕು ಎಂದು ಮೋದಿ ಸೂಚಿಸಿದ್ದಾರೆ.
ದೇಶದಲ್ಲಿ ಹೊಸದಾಗಿ ಹಾಟ್ ಸ್ಪಾಟ್ಗಳು ಉದಯಿಸಬಾರದು. ಮುಂದಿನ ಒಂದು ವಾರ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಅನಿವಾರ್ಯತೆ ಇದೆ. ಪ್ರತಿ ಜಿಲ್ಲೆ, ಗಲ್ಲಿಗಲ್ಲಿಗಳಲ್ಲೂ ಹೆಚ್ಚಿನ ಗಮನ ವಹಿಸಲಾಗುವುದು. ಹಾಟ್ ಸ್ಪಾಟ್ ಆಗದಂತೆ ಕ್ರಮ ಕೈಗೊಂಡರೆ ಏಪ್ರಿಲ್ 20ರಿಂದ ಲಾಕ್‌ಡೌನ್ ಸಡಿಲಿಕೆ ಮಾಡಬಹುದು ಎಂದಿದ್ದಾರೆ ಪ್ರಧಾನಿ. ಹೊಸದಾಗಿ ಕರೋನಾ ಕೇಸ್ ದಾಖಲಾಗದಿದ್ರೆ ಷರತ್ತುಬದ್ಧವಾಗಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗುವುದು. ಆ ಬಳಿಕ ಲಾಕ್‌ಡೌನ್‌ಗೆ ಹೊಸ ಮಾರ್ಗಸೂಚಿ ನೀಡಲಾಗುವುದು. ಸಡಿಲಿಕೆ ಕುರಿತು ಕೇಂದ್ರದಿಂದ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದಿರುವ ಪ್ರಧಾನಿ ಮೋದಿ, ಸದ್ಯ ದೇಶದಲ್ಲಿ ಕಟಾವು ಕೆಲಸ ಕೂಡ ನಡೀತಿದೆ. ಹೀಗಾಗಿ ರೈತರಿಗೆ ಅತ್ಯಂತ ಕಡಿಮೆ ಕಷ್ಟ ಆಗಲು ಕ್ರಮಕೈಗೊಳ್ಳಲಾಗುವುದು. ಕೃಷಿಕರಿಗೆ ತೊಂದರೆ ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಎಲ್ಲಾ ರೀತಿಯ ಕ್ರಮ ಎಂದು ಭರವಸೆ ನೀಡಿದ್ದಾರೆ.
ದೇಶದಲ್ಲಿ ಕರೋನಾ ಸೋಂಕಿತರಿಗಾಗಿ 15 ರಿಂದ 16 ಸಾವಿರ ಆಸ್ಪತ್ರೆ ಬೆಡ್ಗಳು ಬೇಕು. ಕೋವಿಡ್ – 19 ಆಸ್ಪತ್ರೆಗಳ ನಿರ್ಮಾಣ ಕಾರ್ಯ ಇನ್ನೂ ವೇಗದಲ್ಲಿ ಆಗಬೇಕಿದೆ. ಈಗಾಗಲೇ ಕರೋನಾ ಆಸ್ಪತ್ರೆಗಳ ನಿರ್ಮಾಣ ಆಗ್ತಿದೆ. ಎಲ್ಲರೂ ಸರ್ಕಾರದ ನಿಯಮದ ಪಾಲನೆ ಮಾಡಿದ್ರೆ ಕರೋನಾ ನಿರ್ನಾಮ ಆಗುವುದರಲ್ಲಿ ಅನುಮಾನವಿಲ್ಲ. ಸೋಷಿಯಲ್ ಡಿಸ್ಟೆನ್ಸಿಂಗ್‌ನ ಸಂಪೂರ್ಣ ಪಾಲಿಸಿ. ಮನೆಯಲ್ಲೇ ತಯಾರಿಸಿದ ಫೇಸ್ ಮಾಸ್ಕ್ ಉಪಯೋಗಿಸಿ. ಬಿಸಿ ನೀರು, ಕಷಾಯ ನಿರಂತರವಾಗಿ ಸೇವಿಸಿ. ಕರೋನಾ ವೈರಸ್ ಹರಡುವಿಕೆ ತಡೆಗೆ ಆರೋಗ್ಯ ಸೇತು ಆ್ಯಪ್ ಬಳಸಿ. ನೀವು ಡೌನ್ಲೋಡ್ ಮಾಡಿಕೊಳ್ಳಿ, ಬೇರೆಯವರಿಗೆ ಮಾಡಿಕೊಳ್ಳಲು ತಿಳಿಸಿ ಎಂದಿದ್ದಾರೆ. ಇನ್ನೂ ಸಾಧ್ಯವಾದಷ್ಟು ಬಡವರಿಗೆ ಆಹಾರ ಒದಗಿಸಿ. ನಿಮ್ಮ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಡಿ ಎಂದು ಉದ್ಯಮಿಗಳಿಗೆ ಮನವಿ ಮಾಡಿದ್ದಾರೆ. ಜೊತೆಗೆ ಪೌರ ಕಾರ್ಮಿಕರು, ಪೊಲೀಸರಿಗೆ ಗೌರವಿಸೋಣ. ನೀವು ಎಲ್ಲಿದ್ದೀರೋ ಅಲ್ಲೇ ಇರಿ, ಸರ್ಕಾರದ ನಿಯಮ ಕಟ್ಟು ನಿಟ್ಟಾಗಿ ಪಾಲಿಸಿ ಎಂದು ಕರೆ ನೀಡಿದ್ದಾರೆ.
ಲಾಕ್‌ಡೌನ್ ಗೆ ಸಿಎಂ ಯಡಿಯೂರಪ್ಪ ಬೆಂಬಲ:
ಪ್ರಧಾನಿ ನರೇಂದ್ರ ಮೋದಿ ಮಹಾ ಸಂದೇಶದ ಬಳಿಕ ಮಾತನಾಡಿದ ಸಿಎಂ ಬಿ ಎಸ್ ಯಡಿಯೂರಪ್ಪ, ನಾಳೆ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ ಆಗಲಿದೆ. ನಾವು ಲಾಕ್‌ಡೌನ್ ಸಮರ್ಪಕ ಪಾಲನೆ ಮಾಡುತ್ತೇವೆ. ಇನ್ನಷ್ಟು ಸೂಕ್ಷ್ಮದಿಂದ ಪರಿಸ್ಥಿತಿ ಅವಲೋಕನೆ ಮಾಡುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ. ನಾಡಿನ ಜನತೆ ಲಾಕ್‌ಡೌನ್ ಪಾಲನೆ ಮಾಡಬೇಕು. ನಿಯಮ ಪಾಲಿಸದಿದ್ರೆ ಇನ್ನಷ್ಟ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ. ಪ್ರಧಾನಿ ಮೋದಿ ಹೇಳಿರುವ ಸಪ್ತ ಸೂತ್ರಗಳನ್ನ ಪಾಲಿಸುತ್ತೇವೆ. ಎಲ್ಲರೂ ಸಪ್ತ ಸೂತ್ರಗಳನ್ನ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.













