ಕರೋನಾ ಲಾಕ್‌ಡೌನ್ ಬಳಿಕ ಜೂನ್ 8ರಿಂದ ಅನ್ಲಾಕ್ ಆಗುತ್ತಿದೆ. ಮಂದಿರ ಮಸೀದಿ, ಚರ್ಚ್ ಸೇರಿದಂತೆ ಎಲ್ಲಾ ಚಟುವಟಿಕೆಗಳು ನಾಳೆಯಿಂದ ಆರಂಭವಾಗಲಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆ ಅಂಕೋಲದಲ್ಲಿ ಮಾತನಾಡಿರುವ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸತತ ಎರಡೂವರೆ ತಿಂಗಳಿನಿಂದ ಲಾಕ್‌ಡೌನ್ ಆಗಿ ದೇವಾಲಯಗಳು ಸಾರ್ವಜನಿಕರ ದರ್ಶನಕ್ಕೆ ಸಮಸ್ಯೆ ಆಗಿತ್ತು. ನಾಳೆಯಿಂದ ದೇವಸ್ಥಾನಗಳು ಭಕ್ತರಿಗೆ ತೆರೆಯುತ್ತಿದ್ದು, ದೇವರ ದರ್ಶನಕ್ಕೆ ಕಾದು ಕುಳಿತಿದ್ದ ಭಕ್ತರಿಗೆ ದರ್ಶನ ಸಿಗಲಿದೆ ಎಂದಿದ್ದಾರೆ.
ಸರ್ಕಾರದ ಮಾರ್ಗಸೂಚಿಯಂತೆ ನಾಳೆ ದೇವಸ್ಥಾನಗಳು ತೆರೆಯಲಿದ್ದು, ಒಮ್ಮೆಲೆ ದೇವಾಲಯದಲ್ಲಿ ಭಕ್ತರಿಂದ ದಟ್ಟಣೆ ಆಗುವ ಸಂಶಯದಿಂದ ಕೆಲವು ದೇವಾಲಯಗಳು ತೆರೆಯಲು ಹಿಂದೇಟು ಹಾಕಿವೆ. ಮುಂದಿನ ದಿನದಲ್ಲಿ ಪರಿಸ್ಥಿತಿ ಅವಲೋಕಿಸಿ ಎಲ್ಲಾ ದೇವಾಲಯಗಳು ತೆರೆಯಲಿವೆ. ಸರ್ಕಾರದ ಆದೇಶದ ಅನುಸಾರದಂತೆ ಆಡಳಿತ ಮಂಡಳಿಯವರು ನಡೆದುಕೊಳ್ಳಲಿದ್ದಾರೆ. ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಬಹುತೇಕ ಎಲ್ಲಾ ದೇವಾಲಯಗಳು ನಾಳೆಯೇ ತೆರೆಯಲಿವೆ. ಯಾವುದೆ ಗೊಂದಲ ಆಗದಂತೆ ದೇವಾಲಯಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ ಎಂದಿದ್ದಾರೆ.
ಈ ದೇವಸ್ಥಾನಗಳಲ್ಲಿ ಸಿಗಲ್ಲ ದೇವರ ದರ್ಶನ..!
ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಭಕ್ತರಿಗೆ ದರ್ಶನ ಸದ್ಯಕ್ಕೆ ಸಿಗಲ್ಲ. ಜೂನ್ ಬಳಿಕ ಕೃಷ್ಣಮಠಕ್ಕೆ ಭಕ್ತರ ಪ್ರವೇಶ ನೀಡುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಕೃಷ್ಣಮಠದ ಪರ್ಯಾಯ ಅದಮಾರು ಶ್ರೀ ತಿಳಿಸಿದ್ದಾರೆ. ಸದ್ಯ ಮಠದೊಳಗೆ ನಿತ್ಯದ ಪೂಜಾ ಕೈಂಕರ್ಯ ನಡೆಯುತ್ತಿದೆ. ಮಠದ ಸಿಬ್ಬಂದಿಗಷ್ಟೇ ಅವಕಾಶ ಕೊಡಲಾಗಿದೆ. ಜೂನ್ ಬಳಿಕ ಪರಿಸ್ಥಿತಿ ಗಮನಿಸಿ ನಿರ್ಧಾರ ಮಾಡಲಾಗುವುದು. ಮಠಾಧೀಶರು ಹೊರಗೆ ಹೋಗುತ್ತಿಲ್ಲ, ಹೊರಗಿದ್ದವರನ್ನು ಒಳಗೆ ಬಿಡುತ್ತಿಲ್ಲ. ಶ್ರೀಕೃಷ್ಣ ಮಠದಲ್ಲಿ ಅಷ್ಟಮಠದ ಯತಿಗಳಿಂದಲೇ ನಿತ್ಯ ಪೂಜೆ ಆಗ್ತಿದೆ.
ಜೂನ್ ಮಧ್ಯಾವಧಿಯ ಬಳಿಕ ಪರಿಸ್ಥಿತಿಯನ್ನು ಗಮನಿಸಿ ಹಾಗೂ ಅಷ್ಟ ಮಠದ ಇತರೆ ಮಠಾಧೀಶರ ಸಲಹೆ ಸೂಚನೆ ಪಡೆದು ಭಕ್ತರಿಗೆ ಅವಕಾಶ ನೀಡಲು ನಿರ್ಧಾರ ಮಾಡುತ್ತೇವೆ. ಶ್ರೀಕೃಷ್ಣ ಮಠದಲ್ಲಿ ಪೂಜೆ ಪುನಸ್ಕಾರಗಳು ಮತ್ತು ಪ್ರವಚನಗಳು ಆನ್ಲೈನಲ್ಲಿ ಲಭ್ಯ ಇವೆ. ನಾವು ಇನ್ನೂ 20 ರಿಂದ 30 ದಿನ ಕಾಯುತ್ತೇವೆ. ಒಮ್ಮೆ ದರ್ಶನ ಆರಂಭಿಸಿದರೆ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ಭಕ್ತರ ಮತ್ತು ಕೃಷ್ಣಮಠದ ಸಿಬ್ಬಂದಿ ಆರೋಗ್ಯ ನಮಗೆ ಮುಖ್ಯ ಎಂದಿದ್ದಾರೆ ಉಡುಪಿ ಕೃಷ್ಣಮಠದ ಪರ್ಯಾಯ ಅದಮಾರು ಕಿರಿಯ ಸ್ವಾಮೀಜಿ.
ಬೆಳಗಾವಿ ಜಿಲ್ಲೆ ಪ್ರಸಿದ್ಧ ತೀರ್ಥಕ್ಷೇತ್ರ ಸವದತ್ತಿ ಯಲ್ಲಮ್ಮ ದೇಗುಲ ಕೂಡ ತೆರೆಯುವುದಿಲ್ಲ. ಜೂನ್ 15ವರೆಗೆ ಭಕ್ತರಿಗೆ ದೇಗುಲ ಪ್ರವೇಶವಿಲ್ಲ ಎಂದು ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಹೇಳಿದ್ದಾರೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಸೋಂಕು ವಿಪರೀತ ಹೆಚ್ಚಳವಾಗಿದೆ. ಅಲ್ಲಿಂದ ಭಕ್ತರು ಬರುವ ಸಾಧ್ಯತೆ ಹೆಚ್ಚು. ಇಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮಕೈಗೊಂಡಿದ್ದೇವೆ. ದೇವಸ್ಥಾನದಲ್ಲಿ ಎಂದಿನಂತೆ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ದೇವಸ್ಥಾನದಲ್ಲಿ ಪೂಜೆ ನಡೆಸಲಾಗುತ್ತಿದೆ. ಆದರೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕೊಡಲ್ಲ ಎಂದಿದ್ದಾರೆ. ಇನ್ನೂ ರಾಯಬಾಗ ತಾಲೂಕಿನ ಚಿಂಚಳಿ ಮಾಯಕ್ಕಾದೇವಿ ದೇವಸ್ಥಾನ ಕೂಡ ಜೂನ್ 30 ರವರೆಗೆ ತನಕ ಯಥಾಸ್ಥಿತಿ ಮುಂದುವರಿಯಲಿದೆ.
ಇನ್ನೂ ಇತ್ತ ಮಲೆನಾಡು ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬೆ ದೇಗುಲವೂ ಸದ್ಯಕ್ಕೆ ದಶನ ಕೊಡುವುದಿಲ್ಲ. ಶೃಂಗೇರಿ ಶಾರದಾಂಬೆ ಜೊತೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಕೂಡ ನಾಳೆಯಿಂದ ತೆರೆಯುವುದಿಲ್ಲ. ಕರೋನಾ ನಿಯಂತ್ರಣಕ್ಕೆ ದೇವಾಲಯಗಳ ಆಡಳಿತ ಮಂಡಳಿ ಈ ಕ್ರಮಕೈಗೊಂಡಿದೆ. ಶೃಂಗೇರಿಗೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಿಂದಲೂ ಭಕ್ತರೂ ಬರ್ತಾರೆ. ಹೊರನಾಡಿಗೂ ರಾಜ್ಯ ಹಾಹೂ ಹೊರರಾಜ್ಯದ ಭಕ್ತರು ಬರ್ತಾರೆ. ಭಕ್ತರ ನಿಯಂತ್ರಣ ಕಷ್ಟಸಾಧ್ಯ. ಹಾಗಾಗಿ, ದೇವಾಲಯ ತೆರೆಯದಿರಲು ಆಡಳಿತ ಮಂಡಳಿ ಸಭೆ ನಿರ್ಧಾರ ಮಾಡಿದೆ.
ಇತ್ತ ಬೆಂಗಳೂರಿನ ಇಸ್ಕಾನ್ ದೇಗುಲವೂ ತೆರಯುವುದಿಲ್ಲ. ಜೂನ್ 15 ವರೆಗೆ ಭಕ್ತರಿಗೆ ದೇಗುಲ ಪ್ರವೇಶ ನೀಡದಿರಲು ನಿರ್ಧಾರ ಮಾಡಲಾಗಿದೆ. ಸರ್ಕಾರ ಅನುಮತಿ ಕೊಟ್ಟರೂ ಇನ್ನೂ ಒಂದೆರಡು ವಾರ ತಡವಾಗಿ ಸಾರ್ವಜನಿಕ ದರ್ಶನ ಆರಂಭಿಸಲು ಇಸ್ಕಾನ್ ನಿರ್ಧಾರ ಮಾಡಿದೆ. ಒಂದು ಗಂಟೆಗೆ ಕೇವಲ 100 ಭಕ್ತರ ದರ್ಶನಕ್ಕೆ ಅವಕಾಶ ಕೊಡಲು ನಿರ್ಧಾರ ಮಾಡಿದ್ದು, ಎಲ್ಲರೂ ಆನ್ ಲೈನ್ ಮೂಲಕ ದರ್ಶನಕ್ಕೆ ಮುಂಗಡ ಬುಕಿಂಗ್ ಮಾಡಬೇಕು. ಭಕ್ತರು ತಮ್ಮ ಚಪ್ಪಲಿ ತಾವೇ ಚೀಲದಲ್ಲಿ ಹಾಕಿ, ತಾವೇ ನಿಗದಿತ ಸ್ಥಳದಲ್ಲಿ ಇರಿಸಬೇಕು. ಸೋಪ್ ಬಳಸಿ ಕೈ ಮತ್ತು ಕಾಲು ತೊಳೆದು ದೇವಸ್ಥಾನದ ಒಳಗೆ ಬರಬೇಕು.
ದರ್ಶನದ ಹಾಲ್‌ನಲ್ಲೂ ಹೆಜ್ಜೆಗಳ ಮಾರ್ಕ್ ಮಾಡಲಾಗುತ್ತದೆ. ಅದರ ಮೇಲೆ ನಿಂತು ದರ್ಶನ ಪಡೆಯಬೇಕು. ಹೆಚ್ಚೆಂದರೆ 2 ನಿಮಿಷ ಮಾತ್ರ ನಿಂತು ಧ್ಯಾನಿಸಬಹುದು ಅಷ್ಟೆ. ದರ್ಶನ ಪಡೆದು ಹೊರನಡೆಯಬೇಕು. ಪಾಕೆಟ್ ಪ್ರಸಾದ ಬೇಕಿದ್ದರೆ ತೆಗೆದುಕೊಂಡು ಹೊರಡಬೇಕು. ಭೋಜನ ವ್ಯವಸ್ಥೆ ಸದ್ಯಕ್ಕೆ ಆರಂಭವಾಗಲ್ಲ. ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಹೊರಗಿನಿಂದ ಹಣ್ಣು-ಕಾಯಿ ತಂದರೆ ಅದನ್ನು ಅವರೇ ದೇವರ ಮುಂದೆ ದೂರದಲ್ಲಿರಿಸಿ ನೈವೇದ್ಯ ಮಾಡಿಕೊಳ್ಳಬೇಕು. ಪ್ರತಿದಿನ ಆರತಿ ಇರುತ್ತದೆ, ಭಕ್ತರು ಅದರಲ್ಲಿ ಮಾತ್ರ ಭಾಗವಹಿಸಬಹುದು ಎಂದು ಮುಖ್ಯ ಸಂಪರ್ಕಧಿಕಾರಿ,ನವೀನ ನೀರದ ದಾಸ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ದೇವಸ್ಥಾನಗಳಿಲ್ಲಿಯೇ ಕರೋನಾ ಹರಡುವ ಭೀತಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಗಳು ಕಠಿಣ ನಿರ್ಧಾರ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ದೇವಸ್ಥಾನ ತೆರೆಯದಿದ್ದರೆ, ಮುಜರಾಯಿ ಇಲಾಖೆ ಅಡಿಯಲ್ಲಿ ಕೆಲಸ ಮಾಡುವ ಅರ್ಚಕರಿಗೆ ಸಂಬಳ ಕೊಡಲು ಸಾಧ್ಯವಿಲ್ಲ. ಸರ್ಕಾರಕ್ಕೆ ಹೊರೆಯಾಗುತ್ತದೆ ಎನ್ನುವ ಕಾರಣಕ್ಕೆ ದೇವಸ್ಥಾನಗಳನ್ನು ತೆರೆಯುವ ನಿರ್ಧಾರ ಮಾಡಿದೆ. ಈಗಾಗಲೇ ವಲಸೆ ಕಾರ್ಮಿಕರು ಊರಿಗೆ ಹೋಗಬಹುದು ಎಂದು ಥರ್ಮಲ್ ಸ್ಕ್ರೀನಿಂಗ್ ಮಾಡಿ ಸಾಮಾಜಿಕ ಅಂತರದಲ್ಲಿ ಅವರ ಹುಟ್ಟೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ವಲಸೆ ಕಾರ್ಮಿಕರ ವಿಚಾರದಲ್ಲಿ ಅವೈಜ್ಞಾನಿಕವಾಗಿ ನಡೆದುಕೊಂಡಿದ್ದ ಪರಿಣಾಮ ಇದೀಗ ಭಾರತದಲ್ಲಿ ಕರೋನಾ ದಿನವೊಂದಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಏರುತ್ತಿರು ಸೋಂಕುಗಳೇ ಸಾಕ್ಷಿ. ಆದರೂ ಸರ್ಕಾರ ತನ್ನ ಮೊಂಡುತನದಿಂದ ದೇವಸ್ಥಾನಗಳನ್ನು ತೆರೆಯುವ ಮೂಲಕ ಜನರ ಜೀವಕ್ಕಿಂತ ಆದಾಯದ ಮೂಲವೇ ಮುಖ್ಯ ಎನ್ನುವಂತೆ ನಡೆದುಕೊಳ್ತಿದೆ.
ಭಾರತದ ಬೇರೆ ರಾಜ್ಯಗಳಲ್ಲಿ ಹೇಗಿದೆ ಪರಿಸ್ಥಿತಿ..?
ಹರಿಯಾಣ ಸರ್ಕಾರ ಗುರಂಗಾವ್ ಹಾಗೂ ಫರಿದಾಬಾದ್‌ನಲ್ಲಿ ಕರೋನಾ ಸೋಂಖು ಹೆಚ್ಚಳವಾಗಿರುವ ಕಾರಣ ಧಾರ್ಮಿಕ ಕೇಂದ್ರಗಳನ್ನು ತೆರೆಯದಿರಲು ನಿರ್ಧಾರ ಮಾಡಿದೆ. ಅದೇ ರೀತಿ ಮಹಾರಾಷ್ಟ್ರದಲ್ಲೂ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮಧ್ಯಪ್ರದೇಶದ ಭೋಪಾಲ್‌ನಲ್ಲೂ ದೇವಸ್ಥಾನ ತೆರೆಯದಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಅರುಣಾಚಲ ಪ್ರದೇಶ ಸರ್ಕಾರ ಜೂನ್ 30ರ ತನಕ ಯಾವುದೇ ಧಾರ್ಮಿಕ ಕೇಂದ್ರಗಳನ್ನು ತೆರೆಯದಂತೆ ಆದೇಶ ಮಾಡಿದೆ.
ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಮುಂಜಾಗ್ರತೆ ತೆಗೆದುಕೊಂಡು ನಾವು ದೇವಸ್ಥಾನಗಳನ್ನು ತೆರೆಯುತ್ತೇವೆ ಎಂದಿದೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಂಚಾರಕ್ಕೆ ಅವಕಾಶ ಕೊಟ್ಟಾಗಲು ಇದೇ ರೀತಿ ಹೇಳಲಾಗಿತ್ತು. ಮುಂಜಾಗ್ರತಾ ಕ್ರಮ ತೆಗೆದುಕೊಳ್ತೇವೆ. ಸಾಮಾಜಿಕ ಅಂತರದಲ್ಲೇ ಸಂಚರಿಸುತ್ತೇವೆ. ಮಾಸ್ಕ್ ಸ್ಯಾನಿಟೈಸರ್ ಕಡ್ಡಾಯ. ಥರ್ಮಲ್ ಸ್ಕ್ರೀನಿಂಗ್ ಮಾಡುತ್ತೇವೆ ಎಂದೆಲ್ಲಾ ರಾಜ್ಯ ಸರ್ಕಾರ ಬೊಗಳೆ ಬಿಟ್ಟಿತ್ತು. ಎರಡು ದಿನ ಹೇಳಿದಂತೆ ನಡೆದುಕೊಂಡಿತ್ತು. ಆ ಬಳಿಕ ನಡೆದಿದ್ದೆಲ್ಲವೂ ಸುಳ್ಳುಗಳ ಸರಮಾಲೆ. ದೇವಸ್ಥಾನಗಳಲ್ಲೂ ಅದೇ ರೀತಿಯ ಅನಾಹುತಗಳು ಸಂಭವಿಸುವುದು ಕಟ್ಟಿಟ್ಟಬುತ್ತಿ. ಕಳೆದ 3 ತಿಂಗಳಿಂದ ಮನೆಯಲ್ಲೇ ಪೂಜೆ ಮಾಡುತ್ತಿರುವ ಜನರು ಚೆನ್ನಾಗಿಲ್ಲವೇ..? ದೇವಸ್ಥಾನ ಸೇರಿದಂತೆ ಮಸೀದಿ, ಚರ್ಚ್‌ನಲ್ಲಿ ಪೂಜೆ ಪ್ರಾರ್ಥನೆ ಮಾಡಿದರೆ ಮಾತ್ರ ದೇವರು ಕರೋನಾದಿಂದ ಕಾಪಾಡಲು ಸಾಧ್ಯವೇ..? ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳೆಲ್ಲವೂ ಜನರ ಹಿತಕ್ಕಾಗಿಯೇ ಆಗಿರುತ್ತದೆ ಎನ್ನುವುದು ಶುದ್ಧ ಸುಳ್ಳು. ನಿಮ್ಮ ಜೀವ ನಿಮ್ಮ ಕೈಯ್ಯಲ್ಲಿ.. ದೇವರು ಮುಖ್ಯವೋ..? ಪ್ರಾಣ ಮುಖ್ಯವೋ ನಿರ್ಧಾರ ನಿಮ್ಮದು.