ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಮತದಾನಕ್ಕೂ ಮುನ್ನ ನಡೆದ ಮಾತಿನ ಯುದ್ಧಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಅದೇ ರೀತಿ ಅಭ್ಯರ್ಥಿಗಳ ಭವಿಷ್ಯ ಇವಿಎಂ ಎಂದು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ನಲ್ಲಿ ಭದ್ರವಾಗಿದೆ. ಈ ನಡುವೆ ಚುನಾವಣೆ ಬೆನ್ನಲ್ಲೇ ಪ್ರಕಟಗೊಳ್ಳಲು ಶುರುವಾದ ಚುನಾವಣೋತ್ತರ ಸಮೀಕ್ಷೆಗಳು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಜಯಭೇರಿ ಬಾರಿಸಲಿದೆ ಎನ್ನುತ್ತಿದೆ. ಆದರೆ ಈ ಬಾರಿ ನಡೆದಿರುವ ಶೇಕಡವಾರು ಮತದಾನ. ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರ, ಚುನಾವಣಾ ಫಲಿತಾಂಶ ಏರುಪಾರು ಆಗಲಿದೆಯಾ ಎನ್ನುವ ಅನುಮಾನ ದಟ್ಟವಾಗಿದೆ. 2015ರಲ್ಲಿ ನಡೆದಿದ್ದ ಮತದಾನಕ್ಕೂ ಈ ಬಾರಿ ಚಲಾವಣೆ ಆಗಿರುವ ಮತದಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಮತದಾನ ಕುಸಿತದಿಂದ ಯಾರಿಗೆ ಲಾಭ..? ಯಾರಿಗೆ ನಷ್ಟ ಎನ್ನುವ ಲೆಕ್ಕಾಚಾರಗಳು ಶುರುವಾಗಿದೆ.
ಈಗಾಗಲೇ ಬಿಜೆಪಿ ನಾಯಕರು ಸಮೀಕ್ಷೆಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಮೀಕ್ಷೆಗಳೆಲ್ಲವೂ ಸುಳ್ಳಾಗಲಿವೆ. ಬಿಜೆಪಿ ಸರಳ ಬಹುಮತ ಪಡೆದು ಅಧಿಕಾರಕ್ಕೆ ಏರಲಿದೆ ಎಂದು ಮನೋಜ್ ತಿವಾರಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಈ ಟ್ವೀಟ್ ಬೇಕಿದ್ದರೆ ಎತ್ತಿಟ್ಟುಕೊಂಡಿರಿ ಫಲಿತಾಂಶದ ದಿನ ಬೇಕಾಗುತ್ತೆ ಎಂದು ಸವಾಲು ಹಾಕಿದ್ದಾರೆ.
2020 ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡ 61.46ರಷ್ಟು ಮತದಾನವಾಗಿದೆ ಎನ್ನುವ ವರದಿ ಬಂದಿದೆ. 2015ರಲ್ಲಿ 67.12ರಷ್ಟು ಮತದಾನವಾಗಿತ್ತು. ಆಮ್ ಆದ್ಮಿ ಪಾರ್ಟಿ ಬರೋಬ್ಬರಿ 67 ಸ್ಥಾನಗಳಲ್ಲಿ ಗೆದ್ದು ಕೇಕೆ ಹಾಕಿತ್ತು. ಈ ಬಾರಿ ಶೇಕಡವಾರು ಮತದಾನ 61ಕ್ಕೆ ಕುಸಿದಿದೆ. ಬರೋಬ್ಬರಿ 6ರಷ್ಟು ಮತದಾನ ಕಡಿಮೆಯಾಗಿದೆ. ಈ ಶೇಕಡವಾರು ಮತದಾನ ಕಡಿಮೆ ಆಗಿರುವುದು ಯಾರ ಮೇಲೆ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. 2003ರಲ್ಲಿ 53.42 ರಷ್ಟು, 2008ರಲ್ಲಿ 57.58ರಷ್ಟು, 2013ರಲ್ಲಿ 65.63, 2015ರಲ್ಲಿ ಬರೋಬ್ಬರಿ 67.12ರಷ್ಟು ಮತದಾನ ಆಗಿತ್ತು.
2003ರಿಂದಲೂ ಏರಿಕೆ ಪ್ರಮಾಣದಲ್ಲಿ ಹೋಗಿದ್ದ ಶೇಕಡವಾರು ಮತದಾನ ಈ ಬಾರಿ ಕಡಿಮೆಯಾಗಿದೆ. 2013 ಹಾಗು 2015ರಲ್ಲಿ ಭಾರೀ ಪ್ರಮಾಣದಲ್ಲಿ ಮತದಾನ ಆಗಿದ್ದಾಗಲೂ ಆಮ್ ಆದ್ಮಿ ಪಾರ್ಟಿ ರಾಜಕೀಯ ಪ್ರವೇಶ ಮಾಡಿತ್ತು. ಜನರನ್ನು ಆಕರ್ಷಣೆ ಮಾಡಿತ್ತು. ಈ ಬಾರಿ ಆಪ್ ಜನರ ನಂಬಿಕೆ ಕಳೆದುಕೊಂಡಿದ್ಯಾ ಎನ್ನುವ ಬಗ್ಗೆಯೂ ಮಾತು ಕೇಳಿಬಂದಿವೆ.
ಆಮ್ ಆದ್ಮಿ ಪಾರ್ಟಿ ರಾಜಕೀಯ ಪ್ರಪಂಚಕ್ಕೆ ಹೊಸತನವನ್ನು ಹೊತ್ತು ದೆಹಲಿ ಅಖಾಡ ಪ್ರವೇಶ ಮಾಡಿದಾಗ, ಯಾವುದೇ ಹಿಂದೂ, ಮುಸಲ್ಮಾನ ಎಂಬ ಬೇಧವಿಲ್ಲದೆ ಜನ ಬೆಂಬಲ ಗಳಿಸಿತ್ತು. ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಿದ್ದರಿಂದ ಮತದಾನ ಶೇಕಡವಾರು ಪ್ರಮಾಣ ದಾಖಲೆಯ ಪ್ರಮಾಣದಲ್ಲೇ ಏರಿಕೆಯಾಗಿತ್ತು.. ಆದರೆ ಈ ಬಾರಿ ಪೌರತ್ವ ತಿದ್ದುಪಡಿ ಕಾಯ್ದೆ, ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ಸೇರಿದಂತೆ ಸಾಕಷ್ಟು ವಿಚಾರಗಳು ವಿವಾದದ ಸ್ವರೂಪ ಪಡೆದುಕೊಂಡವು. ಅದರೊಳಗೆ ಅಭಿವೃದ್ಧಿ ಎಂಬ ಅಜೆಂಡ ಹಿಡಿದು ಬಂದ ಅರವಿಂದ್ ಕೇಜ್ರಿವಾಲ್ ವಿರೋಧಕ್ಕೂ ಒಪ್ಪದ ಮತದಾನ ಮೌನಕ್ಕೆ ಶರಣಾಗಿದ್ದಾನೆ. ಮತದಾನ ಮಾಡುವ ಮೂಲಕ ಯಾವುದೇ ಇಕ್ಕಟ್ಟಿಗೆ ಸಿಲುಕುವ ಗೋಜಿಗೆ ಮನಸ್ಸು ಮಾಡಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಇದು ಆಮ್ ಆದ್ಮಿ ಪಾರ್ಟಿಯ ಮತಗಳಿಕೆ ಪ್ರಮಾಣವನ್ನು ಕುಸಿಯುವಂತೆ ಮಾಡಿದೆ ಎನ್ನಲಾಗ್ತಿದೆ. ಆದರೆ ಗೆಲುವಿನ ಅಂತರ ಕಡಿಮೆಯಾಗಬಹುದು, ಗೆಲುವಿಗೆ ಅಡ್ಡಿಯಾಗಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಮುಸಲ್ಮಾನ ಮತದಾರರು ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಮತದಾನ ಆಗಿದ್ದು, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಿಗೆ ಸಂಪೂರ್ಣ ಮತಗಳು ಚಲಾವಣೆ ಆಗಿವೆ ಎನ್ನಲಾಗ್ತಿದೆ. ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಹೇಳಿಕೊಳ್ಳುವಷ್ಟರ ಮಟ್ಟಿಗೆ ಜನ ಬೆಂಬಲ ಗಳಿಸಲು ಸಾಧ್ಯವಾಗದೆ ಇರುವುದು ಆಮ್ ಆದ್ಮಿ ಪಾರ್ಟಿ ಗೆಲುವಿನ ಸಂಖ್ಯೆ ಹೆಚ್ಚುವಂತೆ ಮಾಡುತ್ತಿದೆ ಎನ್ನಲಾಗಿದೆ. ಇದು ಚುನಾವಣೋತ್ತರ ಸಮೀಕ್ಷೆಗಳಲ್ಲೂ ಪ್ರತಿಬಿಂಬದಂತೆ ಪ್ರತಿಫಲನಗೊಂಡಿದೆ.
ಮಾಟಿಯ ಮಹಲ್ ಕ್ಷೇತ್ರದಲ್ಲಿ ಶೇಕಡ 68.36ರಷ್ಟು ಮತದಾನ, ಮುಷ್ತಾಫಬಾದ್‌ನಲ್ಲಿ 66.29 ರಷ್ಟು ಮತದಾನ, ಬಾಬರ್‌ಪುರದಲ್ಲಿ 65.4ರಷ್ಟು ಹಾಗು ಸೀಮಾಪುರಿಯಲ್ಲಿ ಶೇಕಡ 63ರಷ್ಟು ಮತದಾನವಾಗಿದೆ. ಈ ನಡುವೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಗ್ಗೆ ಎದ್ದಿರುವ ಆಕ್ರೋಶ ಮತದಾನದ ಮೂಲಕ ಹೊರಹೊಮ್ಮಿದೆ ಎನ್ನಲಾಗುತ್ತಿದೆ. ಇನ್ನು ಬಿಜೆಪಿ ನಾಯಕರು ಮಾಡಿದ ಪ್ರಯತ್ನಗಳು ಕೈಗೂಡುವಲ್ಲಿ ಸೋಲುಂಡಿದ್ದು, ಅರವಿಂದ್ ಕೇಜ್ರಿವಾಲ್ ಹೇಳಿದಂತೆ ಯಾವುದೇ ವಿವಾದ ಚುನಾವಣಾ ಅಜೆಂಡ ಆಗುವುದಿಲ್ಲ. ಅಭಿವೇದ್ಧಿ ನೋಡಿಕೊಂಡು ಜನರು ಮತ ನೀಡಲಿದ್ದಾರೆ ಎನ್ನುವ ವಿಶ್ವಾಸಕ್ಕೆ ಗೆಲುವು ದಕ್ಕಲಿದೆ ಎನ್ನಲಾಗಿದೆ.